Advertisement

ಭಾರತದಲ್ಲಿ ಭರ್ಜರಿ ಜನಪ್ರಿಯವಾಗುತ್ತಿದೆ ಶಾರ್ಟ್ ವಿಡಿಯೋ ಆ್ಯಪ್ ಗಳು !

11:16 AM Dec 09, 2020 | Mithun PG |

ಭಾರತ ಸೇರಿದಂತೆ ಪ್ರಪಂಚದಾದ್ಯಂತ ಕೋವಿಡ್-19 ನಿಂದ ಡಿಜಿಟಲ್ ಮಾಧ್ಯಮಗಳು ಉನ್ನತಿಕರಣಗೊಂಡಿವೆ. ಲಾಕ್ ಡೌನ್ ಸಮಯದಲ್ಲಂತೂ ಮನರಂಜನೆಗಾಗಿ, ಸುದ್ದಿಗಾಗಿ ಹಲವರು ಆನ್ ಲೈನ್ ಮಾಧ್ಯಮಗಳ ಮೊರೆಹೋಗಿದ್ದರು.

Advertisement

ಏತನ್ಮಧ್ಯೆ ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆಯ ಕಾರಣವೊಡ್ಡಿ ಹಲವು ಚೀನಾ ಮೂಲದ ಅಪ್ಲಿಕೇಶನ್ ಗಳಿಗೆ ನಿಷೇಧ ಹೇರಿತ್ತು. ಇದರಲ್ಲಿ ಮಿಲಿಯನ್ ಗಟ್ಟಲೇ  ಬಳಕೆದಾರರನ್ನು ಹೊಂದಿದ್ದ ಟಿಕ್ ಟಾಕ್, ಪಬ್ ಜೀ ಮುಂತಾದ ಆ್ಯಪ್ ಗಳು ಸೇರಿದ್ದು ವಿಶೇಷ. ಬ್ಯಾನ್ ಆದ ಬೆನ್ನಲ್ಲೇ  ಹಲವು ಬಳಕೆದಾರರು ಇತರ ಆ್ಯಪ್ ಗಳ ಮೊರೆ ಹೋದರು. ಶಾರ್ಟ್ ವಿಡಿಯೋ (ಕಿರು ವಿಡಿಯೋ) ಆ್ಯಪ್ ಗಳಿಗಂತೂ ಬೇಡಿಕೆ ಹೆಚ್ಚಾದವು.

ಇದನ್ನೇ ಬಂಡವಾಳ ಮಾಡಿಕೊಂಡು ಹಲವು ಭಾರತೀಯ ಮೂಲದ ಶಾರ್ಟ್ ವಿಡಿಯೋ ಆ್ಯಪ್ ಗಳು ಜನ್ಮತಳೆದವು. ಮಾತ್ರವಲ್ಲದೆ ಕೆಲವೇ ದಿನಗಳಲ್ಲಿ ಜನಮೆಚ್ಚುಗೆಯನ್ನು ಪಡೆದುಕೊಂಡವು. ಆ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಶಾರ್ಟ್ ವಿಡಿಯೋ ಆ್ಯಪ್ ಗಳು ಹೊಸ ಶಕೆಯನ್ನು ಆರಂಭಿಸಿದವು.

ಶಾರ್ಟ್ ವಿಡಿಯೋ ಆ್ಯಪ್ ಗಳಲ್ಲಿ ಒಂದಾಗಿರುವ ‘ರೋಪೋಸೋ’,  ಗೂಗಲ್ ಪ್ಲೇ ಮೂಲಕ 100 ಮಿಲಿಯನ್ ಡೌನ್ ಲೋಡ್ ದಾಟಿರುವುದಾಗಿ ಘೋಷಿಸಿಕೊಂಡಿದೆ. ಏತನ್ಮಧ್ಯೆ ಡೈಲಿಹಂಟ್ ಸಂಸ್ಥೆಯ ಕಿರುವಿಡಿಯೋ ಆ್ಯಪ್ ‘ಜೋಶ್’ ಬಿಡುಗಡೆಯಾದ ಕೇವಲ 45 ದಿನಗಳಲ್ಲಿ 50 ಮಿಲಿಯನ್ ಡೌನ್ ಲೋಡ್ ಕಂಡಿದೆ.

Advertisement

ರಾಷ್ಟ್ರೀಯ ಮಟ್ಟದಲ್ಲಿ ಲಾಕ್ ಡೌನ್ ಘೋಷಣೆಯಾದಾಗ ಬೆಳಕಿಗೆ ಬಂದ ಆ್ಯಪ್ ಗಳಲ್ಲಿ ಒಂದಾದ ‘ಮಿತ್ರನ್ ಟಿವಿ’  40 ಮಿಲಿಯನ್ ಬಳಕೆದಾರರನ್ನು ಗಳಿಸಿದೆ. ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿದರೇ ಭಾರತೀಯ ಮಾರುಕಟ್ಟೆಯಲ್ಲಿ ಕಿರುವಿಡಿಯೋ ಆ್ಯಪ್ ಗಳು ಸಂಚಲನ ಸೃಷ್ಟಿಸುತ್ತಿವೆ ಎಂಬ ಮಾತು  ಸುಳ್ಳಲ್ಲ.

ಪ್ರಮುಖವಾಗಿ ಡ್ಯಾನ್ಸ್, ಆಡುಗೆ, ನಟನೆ, ಪೇಂಟಿಂಗ್, ಮಾನವೀಯತೆ, ಮಿಮಿಕ್ರಿ ಮುಂತಾದ ಅಂಶಗಳನ್ನೊಳಗೊಂಡ 10 ರಿಂದ 16 ಸೆಕೆಂಡುಗಳ ವಿಡಿಯೋಗಳು ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ.  ಗಮನಾರ್ಹ ಸಂಗತಿಯೆಂದರೇ 16ನೇ ಹಣಕಾಸಿನ ವರ್ಷದಲ್ಲಿ(FY16) ಕಿರು ವಿಡಿಯೋ ಆ್ಯಪ್ ಗಳನ್ನು ಕೇವಲ 20 ಮಿಲಿಯನ್ ಜನರು ಬಳಕೆಮಾಡುತ್ತಿದ್ದರು. ಆದರೇ FY20 ರಲ್ಲಿ ಇದನ್ನು ದುಪ್ಪಟ್ಟು ಜನರು ಅಂದರೆ 180 ಮಿಲಿಯನ್ ಜನರು ಬಳಕೆ ಮಾಡಲಾರಂಭಿಸಿದ್ದಾರೆ.

ಟಿಕ್ ಟಾಕ್ ಬ್ಯಾನ್ ಆದ ಬೆನ್ನಲ್ಲೆ ಭಾರತೀಯ ಮೂಲದ ಆ್ಯಪ್ ಗಳಾದ ಜೋಶ್, ರೋಪೋಸೋ, ಎಂಎಕ್ಸ್ ಟಕಾಟಕ್, ಮೋಜ್, ಬೋಲೋ ಇಂಡ್ಯಾ, ಚಿಂಗಾರಿ ಮತ್ತು ಟ್ರೆಲ್ ಆ್ಯಪ್ ಗಳು ಟಿಕ್ ಟಾಕ್ ಸ್ಥಾನವನ್ನು ತುಂಬಿವೆ ಎಂದು ರೆಡ್ ಸೀರ್ ಕನ್ಸಲ್ಟಿಂಗ್ ವರದಿ ಮಾಡಿದೆ.

ಪ್ರಸ್ತುತ 560 ಮಿಲಿಯನ್ ಜನರು ಭಾರತದಲ್ಲಿಇಂಟರ್ ನೆಟ್ ಬಳಸುತ್ತಿದ್ದಾರೆ. ವರದಿಗಳ ಪ್ರಕಾರ ಮುಂದಿನ 5 ವರ್ಷಗಳಲ್ಲಿ 970 ಮಿಲಿಯನ್  ಜನರು ಇಂಟರ್ ನೆಟ್ ಬಳಸಲು ಆರಂಭಿಸುತ್ತಾರೆ. ಪರಿಣಾಮವೆಂಬಂತೆ ಶಾರ್ಟ್ ವಿಡಿಯೋ ಬಳಕೆದಾರರ ಸಂಖ್ಯೆ ಈಗಿರುವ  4 ಪಟ್ಟು ಹೆಚ್ಚಾಗಲಿದೆ. ಅಂದರೆ ಇದೀಗ 119 ಬಿಲಿಯನ್ ಮಿನಿಟ್ ಗಳನ್ನು ಬಳಕೆದಾರರು ಶಾರ್ಟ್ ವಿಡಿಯೋ ನೋಡಲೆಂದೇ ಮೀಸಲಿಟ್ಟಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಇದರ 4 ಪಟ್ಟು ಅಂದರೆ 400 ರಿಂದ 450 ಬಿಲಿಯನ್ ಮಿನಿಟ್ ಗಳನ್ನು  ಕಿರು ವಿಡಿಯೋ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಜನರು ವ್ಯಯಿಸುತ್ತಾರೆ.

100 ಮಿಲಿಯನ್ ಬಳಕೆದಾರರನ್ನು ಗಳಿಸಿದ ಮೊದಲ ಭಾರತೀಯ ಆ್ಯಪ್ ನಮ್ಮದು ಎಂಬ ಹೆಮ್ಮೆ ಇದೆ ಎಂದು ಇನ್ ಮೋಬಿ ಗ್ರೂಪ್ ನ (ರೋಪೋಸೋ) ಸಂಸ್ಥಾಪಕ ಮತ್ತು ಸಿಇಓ ನವೀನ್ ತೇವಾರಿ ತಿಳಿಸಿದ್ದಾರೆ. ಪ್ರಸ್ತುತ ರೋಫೋಸೋ 12 ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ಪ್ರತಿನಿತ್ಯ 2 ಬಿಲಿಯನ್ ವಿಡಿಯೋ ವಿವ್ಸ್ ಗಳನ್ನು ಪಡೆಯುತ್ತಿದೆ.

ಸ್ಥಳೀಯ ಭಾಷೆಗಳಲ್ಲಿ ಶಾರ್ಟ್ ವಿಡಿಯೋಗಳನ್ನು ಇಷ್ಟ ಪಡುವವರ ಸಂಖ್ಯೆ ಹೆಚ್ಚಿದೆ ಎಂದು ಬೋಲೋ ಇಂಡ್ಯಾದ ಸಂಸ್ಥಾಪಕ ವರುಣ್ ಸಕ್ಸೇನಾ ತಿಳಿಸಿದ್ದಾರೆ. ಡ್ಯಾನ್ಸಿಂಗ್ ಮತ್ತು ಮ್ಯೂಸಿಕ್ ಗೆ ಸಂಬಂಧಿಸಿದ 25 ಸೆಕೆಂಡ್ ಗಳಿರುವ ವಿಡಿಯೋಗಳು ಮಿತ್ರಾನ್ ಟಿವಿಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ ಎಂದು ಅದರ ಸಂಸ್ಥಾಪಕ ಶಿವಾಂಕ್ ಅಗರವಾಲ್ ತಿಳಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೇ ಭಾರತದಲ್ಲಿ ಹಲವು ಮಂದಿ 5 ಗಂಟೆ/ದಿನ ಶಾರ್ಟ್ ವಿಡಿಯೋ ಆ್ಯಪ್ ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಚೀನಾ ಆ್ಯಪ್ ಗಳಿದ್ದಾಗ ಅದರಲ್ಲೇ 4.5 ಗಂಟೆ/ ದಿನ ಕಳೆಯುತ್ತಿದ್ದರು ಎನ್ನಲಾಗಿದೆ.

ಕಿರು ವಿಡಿಯೋ ಆ್ಯಪ್ ಗಳ ಜನಪ್ರಿಯತೆಯಿಂದ ಹೂಡಿಕೆದಾರರು ಕೂಡ ಅದರತ್ತ ಆಕರ್ಷಿತರಾಗುತ್ತಿದ್ದಾರೆ.  ಮಾತ್ರವಲ್ಲದೆ ಅಪಾರ ಪ್ರಮಾಣದಲ್ಲಿ ಹೂಡಿಕೆಯಲ್ಲಿ ತೊಡಗಿದ್ದಾರೆ. ಒಟ್ಟಿನಲ್ಲಿ ಕಿರು ವಿಡಿಯೋ ಆ್ಯಪ್ ಗಳು ಪ್ರಸ್ತುತ ದಿನಗಳಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಸೆಳೆಯುತ್ತಿದ್ದು, ಮುಂದಿನ 5 ವರ್ಷಗಲ್ಲಿ ಶಾರ್ಟ್ ವಿಡಿಯೋ  ಮಾರುಕಟ್ಟೆಯಲ್ಲಿ ಹೊಸ ಶಕೆ ಆರಂಭವಾಗುವುದಂತೂ ಸುಳ್ಳಲ್ಲ.

-ಮಿಥುನ್ ಮೊಗೇರ

Advertisement

Udayavani is now on Telegram. Click here to join our channel and stay updated with the latest news.

Next