ಆಕೆ ಸಿನೆಮಾ ತಾರೆ. ಸುಂದರವಾದ ಮುಖ- ಮೈಕಟ್ಟು, ಮೊಗ್ಗು ಬಿರಿದಂಥ ನಗುವಿನ, ಬೊಗಸೆ ಕಂಗಳ ಚೆಲುವೆ. ಅದೆಷ್ಟೋ ಸೂಪರ್ ಹಿಟ್ ಸಿನೆಮಾಗಳಲ್ಲಿ ಅಭಿನಯಿಸಿ, ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡವಳು. ಆಕೆಯ ಸೌಂದರ್ಯಕ್ಕೆ ಮಾರುಹೋದ ಯುವಕರು ಅವಳನ್ನು “ಕನಸಿನ ರಾಣಿ’ ಎಂದೇ ಕರೆಯುತ್ತಿದ್ದರು. ತನ್ನ ಮನೋಜ್ಞ ಅಭಿನಯಕ್ಕಾಗಿ ಸಾಲು- ಸಾಲಾಗಿ ಪ್ರಶಸ್ತಿಗಳನ್ನು ಪಡೆದಿದ್ದಳು. ದೊಡ್ಡದಾದ ಬಂಗಲೆಯಲ್ಲಿ ವಾಸ. ಮನೆಯಲ್ಲಿನ ಕಣ್ಣು ಕೋರೈಸುವಂಥ ದೀಪಗಳು, ನೆಲಕ್ಕೆ ಹಾಸಿದ ರತ್ನಗಂಬಳಿ, ದೇಶ- ವಿದೇಶಗಳಿಂದ ಸಂಗ್ರಹಿಸಿದ ಬೆಲೆಬಾಳುವ ವಸ್ತುಗಳು ಅವಳ ಶ್ರೀಮಂತಿಕೆಯನ್ನು ಸಾರಿ ಹೇಳುತ್ತಿದ್ದವು. ಕರುಣೆ- ಅನುಕಂಪ, ಸೇವಾ ಮನೋಭಾವವೇ ತನ್ನ ಜೀವಾಳ ಎಂದು ಎಲ್ಲೆಡೆ ಹೇಳಿಕೊಂಡು ಬರುತ್ತಿದ್ದಳಲ್ಲದೇ, ಸ್ಲಂ ಏರಿಯಾದ ಬಡಮಕ್ಕಳನ್ನು ಎತ್ತಿಕೊಂಡು ನಿಂತು ವಿಧ-ವಿಧವಾಗಿ ಕ್ಲಿಕ್ಕಿಸಿಕೊಂಡ ಫೋಟೋಗಳು ಬಿಲ್ ಬೋರ್ಡಗಳಲ್ಲಿ ರಾರಾಜಿಸುತ್ತಿದ್ದವು.
ಈಕೆ ಮನೆಗೆಲಸದ ಹೆಂಗಸು. ಕಡುಗಪ್ಪು ಮೈಬಣ್ಣದ, ಸಾಧಾರಣ ಮೈಕಟ್ಟು, ಎಣ್ಣೆ ಸುರಿಯುವ ಮುಖ. ಮಾಸಿದ ಸೀರೆಯನ್ನುಟ್ಟು, ಕೈಯಲ್ಲಿ ಚೀಲವೊಂದನ್ನು ಹಿಡಿದುಕೊಂಡು, ಮನೆ-ಮನೆಗೆ ತಿರುಗಿ ಕೆಲಸ ಮಾಡಿಕೊಂಡಿದ್ದವಳು. ಪುಟ್ಟ ವಠಾರವೊಂದರ ಒಂದು ರೂಮ್‌ನಲ್ಲಿ ವಾಸ. ಗುಡಿಸಲೆನ್ನಬಹುದಾದ ಮನೆಯಲ್ಲಿ ಒಂದು ಮಿಣುಕು ದೀಪ, ನೆಲಕ್ಕೆ ಹಾಸಿದ ಹರಕಲು ಚಾಪೆ, ಅವರಿವರಿಂದ ಬೇಡಿ ತಂದ ಹಳೆಯ ಸಾಮಾನುಗಳು ಇವಳ ಬಡತನವನ್ನು ಪರಿಚಯಿಸುತ್ತಿದ್ದವು. ಬದುಕಿನ ಸಂಕಷ್ಟಗಳಿಂದ ರೋಸಿ ಹೋಗಿದ್ದ ಇವಳಲ್ಲಿ ಒರಟುತನ ಮನೆ ಮಾಡಿತ್ತು. ಹಾದಿ-ಬೀದಿಗಳಲ್ಲಿ ಓಡಾಡುವಾಗಲೂ ತನ್ನಷ್ಟಕ್ಕೇ ಬೈದುಕೊಂಡಿರುತ್ತಿದ್ದಳು. ಇವಳನ್ನು ನೋಡಿದರೆ ಅಕ್ಕ-ಪಕ್ಕದ ಮನೆಯ ಮಕ್ಕಳಿಗೆಲ್ಲ ಭಯ ಹುಟ್ಟಿಕೊಳ್ಳುತ್ತಿತ್ತು.
ಆ ದಿನ ಹೈ ಸ್ಪೀಡ್‌ನಿಂದ ಬಂದ ಕಾರೊಂದು ರಸ್ತೆಯ ಪಕ್ಕದಲ್ಲಿ ಆಡಿಕೊಂಡಿದ್ದ ಪುಟ್ಟ- ಪುಟ್ಟ ಮಕ್ಕಳನ್ನು ಲೆಕ್ಕಿಸದೇ ಅವರೆಲ್ಲರನ್ನು ಗುದ್ದಿ, ನಿಲ್ಲಿಸದೇ ಅದೇ ಸ್ಪೀಡಿನಲ್ಲಿ ಮುಂದೆ ಹೋಯಿತು. ಪೆಟ್ಟು ಮಾಡಿಕೊಂಡು ರಕ್ತಸಿಕ್ತವಾಗಿದ್ದ ಮಕ್ಕಳು ರಸ್ತೆಯಲ್ಲಿ ಚೆದುರಿ ಬಿದ್ದರು. ಮನೆಗೆಲಸಕ್ಕೆ ಹೋಗುವುದು ತಡವಾಗಿ ಇನ್ನು ಮಾಲಕರ ಬೈಗುಳ ಕೇಳಬೇಕಲ್ಲ ಎಂದು ಯೋಚಿಸುತ್ತ ಅವಸರದಿಂದ ಹೋಗುತ್ತಿದ್ದ ಈಕೆಯ ಕಣ್ಣ ಮುಂದೆಯೇ ಆದ ಅಪಘಾತ ಕಂಡು ಗಾಬರಿಗೊಂಡರೂ, ಸುತ್ತ-ಮುತ್ತ ನೆರೆದಿದ್ದ ಜನಸಮೂಹವನ್ನು ಬೇಡಿಕೊಂಡು ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಯಶಸ್ವಿಯಾದಳು. ನೋವಿನಿಂದ ಒದ್ದಾಡುತ್ತಿದ್ದ ಮಕ್ಕಳನ್ನು ಎದೆಗೊತ್ತಿಕೊಂಡು ಸಮಾಧಾನಿಸಿದಳು. ಮಕ್ಕಳನ್ನು ಗುದ್ದಿ ಹೋದ ಕಾರಿನಲ್ಲಿ ಕುಳಿತಿದ್ದ ಚೆಲುವೆ, ಕನಸಿನ ರಾಣಿ ತನ್ನ ಗುರುತು ಸಿಗದಂತೆ ಮುಖಮುಚ್ಚಿಕೊಂಡಿದ್ದು ಕಾಣಿಸಿತು. ಅವಳ ಸುಂದರವಾದ ರೂಪ ಮನಸ್ಸಿನ ವಿರೂಪವನ್ನು ಪರಿಚಯಿಸಿತ್ತು!
-ಸರಿತಾ ನವಲಿ,ನ್ಯೂಜೆರ್ಸಿ