Advertisement

ನೇಕಾರರಿಗೆ ನೆರವಾದೀತೇ ಅಲ್ಪ ಪರಿಹಾರ?

11:58 AM Jun 19, 2020 | Suhan S |

ಬೆಳಗಾವಿ: ಮಾರುಕಟ್ಟೆ ಸಮಸ್ಯೆ, ಪ್ರಕೃತಿ ವಿಕೋಪ ಹಾಗೂ ಪ್ರವಾಹದ ಸುಳಿಗೆ ಸಿಲುಕಿ ನಲುಗಿದ್ದ ನೇಕಾರ ಸಮುದಾಯಕ್ಕೆ ಈಗ ಕೋವಿಡ್ ಸಂಕಷ್ಟ ತಂದೊಡ್ಡಿದೆ. ಸರ್ಕಾರ ಘೋಷಿಸಿರುವ 2000 ರೂ. ಪರಿಹಾರ ಸಕಾಲಕ್ಕೆ ನಿಜವಾದ ನೇಕಾರರಿಗೆ ತಲುಪಲಿದೆಯೇ ಎಂಬ ಅನುಮಾನ ಕಾಡುತ್ತಿದೆ.

Advertisement

ಪರಿಹಾರ ಘೋಷಣೆ ಮಾಡಿದ ನಂತರ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಸರ್ಕಾರದ ನಿರ್ದೇಶನದಂತೆ ನೇಕಾರರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭ ಮಾಡಿದೆ. ಆದರೆ ಅರ್ಜಿ ಸಲ್ಲಿಸಿದ ನೇಕಾರರು ಈ ಎರಡು ಸಾವಿರ ರೂ. ಪರಿಹಾರ ಹಣ ಪಡೆಯುವ ಮಾರ್ಗ ಸರಳವಾಗಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅದರ ಪರಿಶೀಲನೆಗಾಗಿ ಬೆಂಗಳೂರಿಗೆ ಹೋಗಬೇಕು. ಅಲ್ಲಿ ಮತ್ತೆ ಪರಿಶೀಲನೆಯಾಗಿ ಹಣ ಬಿಡುಗಡೆಯಾಗುತ್ತದೆ. ಇಷ್ಟೆಲ್ಲಾ ಪ್ರಕ್ರಿಯೆಗೆ ನೇಕಾರರು ಹರಸಾಹಸ ಪಡಬೇಕು. ಅಂದರೆ ಹಣ ಖಾತೆಗೆ ಜಮಾ ಆಗಲು ಸಾಕಷ್ಟು ಸಮಯ ಬೇಕು. ಅಲ್ಲದೇ ಸರ್ಕಾರ ಕೊಡುವ ಎರಡು ಸಾವಿರ ಹಣ ಒಂದು ತಿಂಗಳೂ ಸಾಲುವುದಿಲ್ಲ ಎಂಬುದು ನೇಕಾರರ ಆತಂಕ.

ಕ್ಷೌರಿಕರಿಗೆ ಹಾಗೂ ಅಟೋ ರಿಕ್ಷಾ ಚಾಲಕರಿಗೆ ಪರಿಹಾರವಾಗಿ ಐದು ಸಾವಿರ ಘೋಷಣೆ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ನೇಕಾರರಿಗೆ ಕೇವಲ ಎರಡು ಸಾವಿರ ಪರಿಹಾರ ಘೋಷಿಸಲಾಗಿದೆ. ಏಕೆ ತಾರತಮ್ಯ ಎಂಬುದು ರಾಜ್ಯದ ನೇಕಾರರ ಪ್ರಶ್ನೆ. ರಾಜ್ಯದಲ್ಲಿ ಸುಮಾರು 1.25 ಲಕ್ಷ ವಿದ್ಯುತ್‌ ಮಗ್ಗಗಳಿವೆ. ಇದರ ಮೇಲೆ ಅವಲಂಬಿತರಾದ ಐದು ಲಕ್ಷಕ್ಕೂ ಹೆಚ್ಚು ನೇಕಾರರ ಕುಟುಂಬಗಳಿವೆ. ಆದರೆ ಸರ್ಕಾರ ಕೇವಲ ಮಗ್ಗಗಳನ್ನು ಹೊಂದಿರುವ ಅಂದರೆ 1.25 ಲಕ್ಷ ನೇಕಾರರನ್ನು ಮಾತ್ರ ಪರಿಹಾರಕ್ಕೆ ಪರಿಗಣಿಸಿದೆ ಎಂಬುದು ನೇಕಾರರ ಅಸಮಾಧಾನ.

ಬೆಳಗಾವಿ ಜಿಲ್ಲೆಯಲ್ಲಿ ಜವಳಿ ಇಲಾಖೆ ಈಗಾಗಲೇ 5550 ಕೈ ಮಗ್ಗಗಳ ನೇಕಾರರ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಇದರಲ್ಲಿ ಸವದತ್ತಿ, ರಾಮದುರ್ಗ ತಾಲೂಕುಗಳಲ್ಲಿ ಕಂಬಳಿ ನೇಯುವ ಮೂರು ಸಾವಿರ ಕುರುಬ ಸಮಾಜದ ನೇಕಾರರೂ ಸೇರಿದ್ದಾರೆ. ಖಾದಿ ಗ್ರಾಮೋದ್ಯೋಗದಡಿ ಎರಡು ಸಾವಿರ ಕೈ ಮಗ್ಗಗಳಿವೆ. ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದಡಿಯಲ್ಲಿ 550 ಮಗ್ಗಗಳಿವೆ. ಕೈ ಮಗ್ಗಗಳ ನೇಕಾರರಿಂದ ಪರಿಹಾರ ಕೋರಿ ಇದುವರೆಗೆ ಬಂದ 3000ಕ್ಕೂ ಹೆಚ್ಚು ಅರ್ಜಿಗಳನ್ನು ಜವಳಿ ಇಲಾಖೆ ಬೆಂಗಳೂರಿಗೆ ಕಳಿಸಿಕೊಟ್ಟಿದೆ. ಪರಿಸ್ಥಿತಿ ಗಂಭೀರ: ನೇಕಾರಿಕೆ ಉದ್ಯೋಗದಲ್ಲಿ ತೊಡಗಿರುವ ರಾಜ್ಯದ ಲಕ್ಷಾಂತರ ಜನರ ಸ್ಥಿತಿ ಗಂಭೀರವಾಗಿದೆ. ಲಾಕ್‌ಡೌನ್‌ ಕಾರಣ ಕಳೆದ ಮೂರು ತಿಂಗಳಿನಿಂದ ಲಕ್ಷಾಂತರ ನೇಕಾರರು ಉಪವಾಸದ ದಿನಗಳನ್ನು ಕಳೆಯುತ್ತಿದ್ದಾರೆ. ವಿದ್ಯುತ್‌ ಮಗ್ಗಗಳಲ್ಲಿ ತಯಾರಾಗಿ ಮಾರಾಟವಾಗದೇ ಉಳಿದಿರುವ ಲಕ್ಷ ಲಕ್ಷ ಸೀರೆಗಳು ಅವಲಂಬಿತರನ್ನು ದಿಕ್ಕೆಡಿಸಿವೆ.

ಸರ್ಕಾರ ಸೀರೆ ಖರೀದಿಸಲು ಸಾಧ್ಯವೇ? :  ಅಂಕಿ-ಅಂಶಗಳ ಪ್ರಕಾರ ರಾಜ್ಯದ ವಿದ್ಯುತ್‌ ಮಗ್ಗಗಳ ಮಾಲಿಕರು ಉತ್ಪಾದಿಸಿದ ಸುಮಾರು 50 ಲಕ್ಷ ಸೀರೆ ಸರ್ಕಾರ ಖರೀದಿಸಿದರೆ ಮಾತ್ರ ಈ ನೇಕಾರರ ಬದುಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ. ಸೀರೆಗಳು ಮಾರಾಟವಾಗದ ಕಾರಣ ಮಾಲೀಕರು ಕಾರ್ಮಿಕರಿಗೆ ಹಣ ಕೊಡುತ್ತಿಲ್ಲ. ಇದು ಕಾರ್ಮಿಕರು-ಮಾಲೀಕರ ನಡುವೆ ಸಂಘರ್ಷ ಉಂಟಾಗುವ ಆತಂಕ ಸೃಷ್ಟಿಸಿದೆ.

Advertisement

ಅನಾಹುತಕ್ಕೆ ಹಾದಿ :  ಸಾಮಾನ್ಯವಾಗಿ ಫೆಬ್ರವರಿಯಿಂದ ಮೇವರೆಗೆ ಸೀರೆಗಳ ವ್ಯಾಪಾರ ಬಹಳ ಜೋರು. ಆಗ ಯಾವ ನೇಕಾರರ ಬಳಿಯೂ ಸೀರೆ ಉಳಿಯುವದಿಲ್ಲ. ಆದರೆ ಈ ವರ್ಷ ಲಾಕ್‌ಡೌನ್‌ ಕಾರಣ ಎಲ್ಲ ಸೀರೆ ಹಾಗೇ ಉಳಿದಿವೆ. ಮದುವೆ ದಿನಗಳು ಸಹ ಮುಗಿದು ಹೋದವು. ಈಗ ನವೆಂಬರ್‌ ತಿಂಗಳವರೆಗೆ ಕಾಯಬೇಕು. ಸೀರೆಗಳು ಮಾರಾಟವಾಗದೆ ಸಾಲದ ಒತ್ತಡದಿಂದ ಅನೇಕರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ ಎಂಬುದು ನೇಕಾರರ ನೋವು.

ಪರಿಹಾರಕ್ಕಾಗಿ ಈಗ ಕೈಮಗ್ಗ ನೇಕಾರರ ಅರ್ಜಿ ಪಡೆಯಲಾಗುತ್ತಿದೆ. ನಂತರ ಜಿಲ್ಲೆಯಲ್ಲಿರುವ ಒಟ್ಟು 25270 ವಿದ್ಯುತ್‌ ಮಗ್ಗಗಳ ನೇಕಾರರ ಸಮೀಕ್ಷೆ ಕೆಲಸ ಆರಂಭವಾಗಲಿದೆ. ಪರಿಹಾರ ಪಡೆಯಲು ಆನ್‌ಲೈನ್‌ ಮೂಲಕವೇ ಅರ್ಜಿ ಹಾಕಬೇಕು. ನೇಕಾರರಿಗೆ ನೆರವಾಗಲು ಜಿಲ್ಲೆಯ ವಿವಿಧ ಕಡೆಗಳಲ್ಲಿ 40 ಆನ್‌ಲೈನ್‌ ಕೇಂದ್ರಗಳನ್ನು ತೆರೆಯಲಾಗುತ್ತಿದೆ. -ಕೀರ್ತೆಪ್ಪ ಗೋಟೂರ, ಜವಳಿ ಇಲಾಖೆ ಉಪನಿರ್ದೇಶಕ

ಸರ್ಕಾರ ನೀಡುವ 2000 ರೂ. ಪರಿಹಾರ ಯಾವುದಕ್ಕೂ ಸಾಲದು. ಇದೂ ಸಹ ಸರಳವಾಗಿ ಬರುವದಿಲ್ಲ. ಅದರ ಬದಲು ನೇಕಾರರಲ್ಲಿರುವ ಸೀರೆಗಳನ್ನು ಖರೀದಿ ಮಾಡಬೇಕು. ಇದರಿಂದ ಮಗ್ಗಗಳು ಮತ್ತೆ ಆರಂಭವಾಗುತ್ತವೆ. ನೇಕಾರರ ಜೀವನ ನಡೆಯುತ್ತದೆ. -ಪ್ರಭಾಕರ ಬಲಕುಂದಿ, ನೇಕಾರ ಮುಖಂಡ, ರಾಮದುರ್ಗ

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಾರಾಟವಾಗದೆ ಉಳಿದಿರುವ 50 ಲಕ್ಷಕ್ಕೂ ಅಧಿಕ ಸೀರೆಗಳನ್ನು ಸರ್ಕಾರ ಜವಳಿ ಇಲಾಖೆ ಮೂಲಕ ಖರೀದಿಸಬೇಕು. ಇಲ್ಲವೇ ಸೀರೆಗಳ ದಾಸ್ತಾನಿನ ಮೇಲೆ ಬಡ್ಡಿ ರಹಿತ ಸಾಲವನ್ನಾದರೂ ಕೊಡಬೇಕು. ಇಂತಹ ಕ್ರಮಗಳು ಮಾತ್ರ ನೇಕಾರರನ್ನು ಬದುಕಿಸಬಲ್ಲವೇ ಹೊರತು ತಾತ್ಕಾಲಿಕವಾದ ಪರಿಹಾರ ನೆರವಿಗೆ ಬರಲಾರದು. -ಅಶೋಕ ಚಂದರಗಿ, ಸಮಾಜ ಸೇವಕ

 

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next