ಮೈಸೂರು: ನಗರದ ಲಲಿತಮಹಲ್ ಹೆಲಿಪ್ಯಾಡ್ ಅಂಗಳದಲ್ಲಿ ಭಾನುವಾರ ಹಾರಾಡಿದ ಕಿರು ವಿಮಾನಗಳು ನೋಡುಗರ ಮನತಣಿಸಿತು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಮೈಸೂರು ಪೈಯಿಂಗ್ ಅಸೋಸಿಯೇಷನ್‌ನಿಂದ ಆಯೋಜಿಸಿದ್ದ ಪ್ರದರ್ಶನದಲ್ಲಿ ಬಣ್ಣಬಣ್ಣದ ರಿಮೋಟ್ ಕಂಟ್ರೋಲ್ ಚಾಲಿತ ಕಿರು ವಿಮಾನಗಳ ಹಾರಾಟ ಎಲ್ಲರನ್ನೂ ಆಕರ್ಷಿಸಿದವು.
ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಅರುಣ್ ಕುಮಾರ್ ನೇತೃತ್ವದಲ್ಲಿ ನಡೆದ ಮಾದರಿ ವಿಮಾನಗಳ ಪ್ರದರ್ಶನದಲ್ಲಿ 20ಕ್ಕೂ ಹೆಚ್ಚು ರಿಮೋಟ್ ಚಾಲಿತ ಹೆಲಿಕಾಪ್ಟರ್‌ಗಳು ಆಗಸದಲ್ಲಿ ಮಿಂಚಿನ ಹಾರಾಟ ನಡೆಸಿದವು. ನಗರದ ವಿವಿಧ ಕಡೆಗಳಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಕಿರು ವಿಮಾಗಳ ಹಾರಾಟ ಕಂಡು ಮನಸೋತರು.
ಮಾದರಿ ವಿಮಾನಗಳು: ಪ್ರದರ್ಶನದಲ್ಲಿ ಪ್ರಮುಖವಾಗಿ ಬೂಮರಿಂಗ್ ಜೆಟ್, ಟರ್ಬೆನ್ ಜೆಟ್, ಎಕ್ಸ್‌ಟ್ರಾ-300, ಕಾರ್ವೋಸ್ ರೇಸರ್-540, 3ಡಿ ಏರೋಬ್ಯಾಟಿಕ್ ಪ್ಲೇನ್ಸ್, ಟೂಕಾನೋ-90 ಹಾಗೂ ಸ್ಕ್ಯಾನರ್ ಮಾದರಿ ವಿಮಾನಗಳು ಹಾರಾಟ ನಡೆಸಿದವು.
ಇವುಗಳೊಂದಿಗೆ ಹೆಕ್ಸಾ ಕಾಪ್ಟರ್, ಓಕ್ಟಾ ಕಾಪ್ಟರ್, ಕ್ವಾಡ್ ಕಾಪ್ಟರ್‌ಗಳು ಹಾಗೂ ಎಲೆಕ್ಟ್ರಿಕ್ ಮತ್ತು ನೈಟ್ರೋ ಪವರ್ ಹೆಲಿಕಾಪ್ಟರ್‌ಗಳ ಹಾರಾಟ ವಿಶೇಷವಾಗಿತ್ತು. 2 ಗಂಟೆಗಳ ಕಾಲ ಹೆಲಿಪ್ಯಾಡ್ ಅಂಗಳದಲ್ಲಿ ಆಗಸದಲ್ಲಿ ಹಾರಾಟ ನಡೆಸಿದ ರಿಮೋಟ್ ಚಾಲಿತ ಏರ್‌ಕ್ರಾಪ್ಟ್ಗಳು ನೋಡುಗರನ್ನು ರಂಜಿಸಿದವು.
ಗಮನ ಸೆಳೆದ 9ರ ಪೋರ: ತಮಿಳುನಾಡು, ಆಂಧ್ರಪ್ರದೇಶಗಳಿಂದ ಪೈಲೆಟ್‌ಗಳು ಆಗಮಿಸಿದ್ದರು. ಈ ಪೈಕಿ ತಮಿಳುನಾಡಿದ ತ್ರಿಪುರಾ ಮೂಲದ 9 ವರ್ಷದ 5ನೇ ತರಗತಿ ವಿದ್ಯಾರ್ಥಿ ಶಿವಮಿತ್ರನ್ ರಿಮೋಟ್ ಚಾಲಿತ ಏರ್‌ಕ್ರಾಪ್ಟ್ಗಳ ಹಾರಾಟ ನಡೆಸಿ ಎಲ್ಲರ ಗಮನ ಸೆಳೆದ.
ಪ್ರದರ್ಶನಕ್ಕೆ ಚಾಲನೆ: ಇದಕ್ಕೂ ಮುನ್ನ ಜಿಲ್ಲಾಧಿಕಾರಿ ರಂದೀಪ್ ಕಿರು ವಿಮಾನ ಹಾರಾಟ ಪ್ರದರ್ಶನಕ್ಕೆ ಚಾಲನೆ ನೀಡಿದರು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಚ್.ಪಿ.ಜನಾರ್ದನ್, ಸೆಸ್ಕ್ ವ್ಯವಸ್ಥಾಪಕ ಸತೀಶ್ ಮತ್ತಿತರರಿದ್ದರು.