Advertisement

ಊರು ಬೆಳಗಲು ಗುಡ್ಡದ ನೀರು ಆಧಾರ!

12:14 AM Sep 20, 2019 | Sriram |

ಸುಬ್ರಹ್ಮಣ್ಯ: ಹಣ ಕೊಟ್ಟರೂ ದಿನದ 24 ತಾಸು ವಿದ್ಯುತ್‌ ಸಿಗುವುದು ಕಷ್ಟ. ಆದರೆ ಮಡಪ್ಪಾಡಿ ಗ್ರಾಮದ ಕಡ್ಯ ಭಾಗದ ಕೆಲವು ಕೃಷಿಕರು ಗುಡ್ಡದಿಂದ ನೈಸರ್ಗಿಕವಾಗಿ ಹರಿದು ಬರುವ ನೀರನ್ನು ಬಳಸಿ ವಿದ್ಯುತ್‌ ಉತ್ಪತ್ತಿ ಮಾಡುತ್ತ ಸ್ವಾವಲಂಬಿಗಳಾಗಿದ್ದಾರೆ.

Advertisement

ಗ್ರಾಮೀಣ ಭಾಗವಾದ ಮಡ ಪ್ಪಾಡಿಯ ಕಡ್ಯ, ದೇರಮಜಲ್‌ ಪರಿಸರದ ಹತ್ತಕ್ಕೂ ಅಧಿಕ ಕುಟುಂಬ ಗಳು ಇತ್ತೀಚೆಗಿನ ತನಕ ವಿದ್ಯುತ್‌ ಸೌಕರ್ಯದಿಂದ ವಂಚಿತವಾಗಿದ್ದವು. ಕಾಡಿ ನೊಳಗೆ ತಂತಿ ಹಾದು ಹೋಗಬೇಕಾದ ಕಾರಣ ಸಮಸ್ಯೆಯಾಗಿತ್ತು.

ಈ ಕುಟುಂಬದವರು ಗುಡ್ಡದಿಂದ ಹರಿದುಬರುವ ನೀರನ್ನು ಕೃಷಿ ಮತ್ತು ದೈನಂದಿನ ಚಟುವಟಿಕೆಗಳಿಗೆ ಬಳಸುತ್ತಿದ್ದರು. ಆದರೆ ರಾತ್ರಿ ಬೆಳಕಿನದೇ ಸಮಸ್ಯೆಯಾಗಿತ್ತು. ಇದೇ ವೇಳೆ ಅವರ ಕೈ ಹಿಡಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಅದರಿಂದ ಹಣಕಾಸಿನ ನೆರವು ಪಡೆದುಕೊಂಡು ಮನೆಗಳಲ್ಲೇ ಕಿರು ವಿದ್ಯುತ್‌ ಘಟಕ ಸ್ಥಾಪಿಸಿಕೊಂಡರು.

ಆರಂಭಿಕವಾಗಿ 15 ಸಾವಿರ ರೂ. ಸಾಲ ಪಡೆದು ಸ್ಥಾಪಿಸಲಾದ ಘಟಕದಲ್ಲಿ ಸಣ್ಣ ಮೋಟರ್‌ ಅಳವಡಿಸಿ ಬ್ಯಾಟರಿ ಚಾರ್ಜ್‌ ಮಾಡಿಕೊಂಡು ದಿನವಿಡೀ ಮನೆ ಬೆಳಗುವಂತೆ ಮಾಡಿದರು. ಇದರಿಂದ 6 ಸಿಎಫ್ಎಲ್‌ ಬಲುºಗಳು ಉರಿಯುತ್ತವೆ. ಟಿವಿಯನ್ನೂ ಚಾಲೂ ಮಾಡಬಹುದು. ಯೋಜನೆಯಿಂದ 5 ಸಾವಿರ ರೂ. ಸಬ್ಸಿಡಿಯೂ ಲಭಿಸಿದೆ.

ಕಾರ್ಯಾಚರಣೆ ಹೇಗೆ?
ಗುಡ್ಡದಿಂದ ಬರುವ ನೀರನ್ನು ಟ್ಯಾಂಕಿನಲ್ಲಿ ಸಂಗ್ರಹಿಸಿ ಪೈಪ್‌ ಮೂಲಕ ಜಲವಿದ್ಯುತ್‌ ಘಟಕಕ್ಕೆ ಹರಿಸಲಾಗುತ್ತದೆ. ಪ್ರವಹಿಸುವ ವೇಗ ಮತ್ತು ಎಂಜಿನ್‌ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯುತ್‌ ಉತ್ಪತ್ತಿಯಾಗುತ್ತದೆ. 10 ವರ್ಷಗಳ ಹಿಂದೆಯೇ ಕೆಲವರು ಅಳವಡಿಸಿದ್ದು, ಈಗಲೂ ಬಳಸುತ್ತಿದ್ದಾರೆ. ಆರ್ಥಿಕ ಸಾಮರ್ಥ್ಯ ಮತ್ತು ನೀರು ಲಭ್ಯತೆಗೆ ಅನು ಗುಣವಾಗಿ ಘಟಕ ಸ್ಥಾಪಿಸಿಕೊಂಡಿದ್ದಾರೆ. 1 ಲಕ್ಷ ರೂ.ಗೂ ಅಧಿಕ ಬಂಡವಾಳ ಹಾಕಿ ದೊಡ್ಡ ಘಟಕ ಸ್ಥಾಪಿಸಿದವರೂ ಇದ್ದಾರೆ.

Advertisement

ನೀರಿಲ್ಲದಾಗ ಸೋಲಾರ್‌; ವಿದ್ಯುತ್‌ ನಿರಂತರ!
ವರ್ಷ ಹೆಚ್ಚಿನ ಅವಧಿಯಲ್ಲಿ ಹರಿಯುವ ನೀರು ಇರುತ್ತದೆ. ನಡು ಬೇಸಗೆಯಲ್ಲಿ ಸೋಲಾರ್‌ ಬಳಸುತ್ತೇವೆ. ಈಗ ಮೆಸ್ಕಾಂ ವಿದ್ಯುತ್‌ ಸಂಪರ್ಕ ಆಗಿದೆ. ನಮ್ಮದೇ ವಿದ್ಯುತ್‌ ಇರುವುದರಿಂದ ಮೆಸ್ಕಾಂ ಬಿಲ್‌ ಶೇ. 40ರಷ್ಟು ಕಡಿಮೆ ಆಗುತ್ತದೆ ಎನ್ನುತ್ತಾರೆ ಈ ಮನೆಯವರು. ಅರಣ್ಯದ ಮೂಲಕ ತಂತಿ ಹಾದು ಹೋಗಿರುವ ಕಾರಣ ಮಳೆಗಾಲದಲ್ಲಿ ಆಗಾಗ ವಿದ್ಯುತ್‌ ವ್ಯತ್ಯಯಗೊಳ್ಳುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಕತ್ತಲರಾತ್ರಿ ಸಾಮಾನ್ಯ. ಸ್ವಾವಲಂಬಿಗಳಾಗಿರುವ ನಮಗೆ ಕತ್ತಲಿನ ಭೀತಿ ಇಲ್ಲ ಎಂದು ಕಿರುಜಲ ಘಟಕ ಅಳವಡಿಸಿಕೊಂಡವರು ಹೆಮ್ಮೆಯಿಂದ ಹೇಳುತ್ತಾರೆ.

ಕತ್ತಲೆಯ ಭೀತಿ ನಮಗಿಲ್ಲ
ಏಳು ವರ್ಷಗಳ ಹಿಂದೆ ಧರ್ಮಸ್ಥಳ ಯೋಜನೆಯ ಸಹಕಾರ ಪಡೆದು ಜಲವಿದ್ಯುತ್‌ ಘಟಕ ಅಳವಡಿಕೊಂಡಿದ್ದೇನೆ. ಇಂದಿಗೂ ಬಳಸುತ್ತಿದ್ದೇನೆ. ಮಿಕ್ಸಿ-ಗೆùಂಡರ್‌ ಹೊರತುಪಡಿಸಿ ಎಲ್ಲ ಗೃಹಬಳಕೆಗೆ ನಮ್ಮ ವಿದ್ಯುತ್‌ ಬಳಸುತ್ತಿದ್ದೇವೆ. ಮಳೆಗಾಲದಲ್ಲಿ ಕತ್ತಲೆಯಲ್ಲಿ ರಾತ್ರಿ ಕಳೆಯುವ ಭೀತಿ ನಮಗಿಲ್ಲ.
– ಕುಸುಮಾಧರ ನಾರ್ಣಕಜೆ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next