Advertisement

ದೂರದರ್ಶನ ಕಿರುಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ

07:20 PM Feb 22, 2021 | Team Udayavani |

ಶಿವಮೊಗ್ಗ: ಶಿವಮೊಗ್ಗ ಬೆಳ್ಳಿಮಂಡಲ,ಯುಗಧರ್ಮ ಜಾನಪದ ಸಮಿತಿ,ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಂಬೆಗಾಲು-4 ಕಿರುಚಿತ್ರ ಸ್ಪರ್ಧೆಯಲ್ಲಿ ಶಿವು ಅಮೀನ್‌ ನಿರ್ದೇಶನದ ದೂರದರ್ಶನ ಕಿರುಚಿತ್ರ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗೂ 25 ಸಾವಿರ ನಗದು ಪುರಸ್ಕಾರಕ್ಕೆ ಭಾಜನವಾಗಿದೆ.

Advertisement

ಜನಾರ್ಧನ ಮೌರ್ಯ ಅವರ ಕಥೆ- ಸಂಭಾಷಣೆ-ನಿರ್ದೇಶನದ “ದ ಬ್ಲೌಸ್‌’ ಕಿರುಚಿತ್ರ 15 ಸಾವಿರ  ರೂಪಾಯಿಗಳ ದ್ವಿತೀಯ ಅತ್ಯುತ್ತಮ ಚಿತ್ರ, ಮಧು ಶಿವಮೊಗ್ಗ ಅವರ ನಿರ್ದೇಶನದ ನೊಂದ ಯುವಕರ ಸಂಘ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಯೊಂದಿಗೆ 10 ಸಾವಿರ ರೂಪಾಯಿಗಳ ನಗದು ಪುರಸ್ಕಾರ, ಹಾಗೂ ವಿನಯ್‌ ಶಿವಗಂಗೆ ಅವರ ಸೌಮ್ಯ ಕಿರುಚಿತ್ರವು ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಪಾತ್ರವಾಗಿದೆ. ಕುವೆಂಪು ರಂಗಮಂದಿರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ. ಎಚ್‌. ಶಂಕರಮೂರ್ತಿ, ಶಿವಮೊಗ್ಗ ಮಹಾನಗರ ಪಾಲಿಕೆಯ  ಮೇಯರ್‌ ಸುವರ್ಣ ಶಂಕರ್‌, ಉಪಮೇಯರ್‌ ಸುರೇಖಾ ಮುರಳೀಧರ್‌, ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್‌. ದತ್ತಾತ್ರಿ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಸಹಾಯಕ ನಿರ್ದೇಶಕ ಎಚ್‌. ಉಮೇಶ್‌, ಡಾ| ರಜನಿ ಪೈ, ಡಾ| ಪ್ರೀತಿ ಪೈ, ಡಾ| ಶಾನಭಾಗ್‌, ಡಾ| ಕೆ.ಆರ್‌. ಶ್ರೀಧರ್‌, ವಿಜಯಾ ಶ್ರೀಧರ್‌ ಅವರು ಪ್ರದಾನ ಮಾಡಿದರು.

ಸಮಾರಂಭದಲ್ಲಿ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಂಚಾಲಕರಾದ ಡಿ. ಎಸ್‌. ಅರುಣ್‌, ವೈದ್ಯ ಸೇರಿದಂತೆ ಶಿವಮೊಗ್ಗ ಬೆಳ್ಳಿಮಂಡಲ ಹಾಗೂ ಅಂಬೆಗಾಲು ತಂಡದ ಎಲ್ಲ ಸದಸ್ಯರು ಇದ್ದರು. ಇನ್ನು  ವೈಯಕ್ತಿಕ ವಿಭಾಗದಲ್ಲಿ ಶಿವು ಅಮೀನ್‌ (ಶ್ರೇಷ್ಟ ನಿರ್ದೇಶನ- ದೂರದರ್ಶನ), ಆದಿತ್ಯ ( ಶ್ರೇಷ್ಟ ಹಿನ್ನೆಲೆ ಸಂಗೀತ- ಆತಂಕ), ಕಾರ್ತಿಕ್‌ ಕಾಟು (ಶ್ರೇಷ್ಟ ಸಂಕಲನ- ಪ್ರಣಶ್ಯತಿ), ಗಣೇಶ್‌ ವಶಿಷ್ಟ (ಶ್ರೇಷ್ಟ ಚಿತ್ರಕಥೆ – ಬ್ಲೌಸ್‌), ಪೃಥ್ವಿ ಗೌಡ (ಅತ್ಯುತ್ತಮ ನಟ- ಪ್ರಣಶ್ಯತಿ ), ನಮಿತಾ ಕಿರಣ್‌ (ಅತ್ಯುತ್ತಮ ನಟಿ-ದೂರದರ್ಶನ), ಸುಮಿತ್‌ (ಅತ್ಯುತ್ತಮ ಬಾಲ ನಟ -ಸಿಂಡ್ರೆಲಾ), ವಿನಯ್‌ (ಅತ್ಯುತ್ತಮ ಪೋಷಕ ನಟ – ಆಪರೇಷನ್‌ ಅಂತಃಕರಣ), ಜಯಮ್ಮ (ಅತ್ಯುತ್ತಮ ಪೋಷಕ ನಟಿಃ ತುಂಗಜ್ಜಿ), ಸುಮಂತ್‌ ಗೌಡ (ಅತ್ಯುತ್ತಮ ಛಾಯಾಗ್ರಹಣ -ಸಾಲು ಮರದ ತಿಮ್ಮಕ್ಕ) ಅವರು ಪ್ರಶಸ್ತಿಗಳಿಗೆ ಪಾತ್ರರಾದರು.

ಈ ಬಾರಿಯ ಕಿರುಚಿತ್ರ ಸ್ಪರ್ಧೆಯಲ್ಲಿ ಒಟ್ಟು 35 ಕಿರುಚಿತ್ರಗಳು ಸ್ಪರ್ಧೆಯಲ್ಲಿದ್ದು, ಅಂತಿಮ ಸುತ್ತಿನಲ್ಲಿ 13 ಚಿತ್ರಗಳು ಆಯ್ಕೆಯಾಗಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next