ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಲವು ಆಟೋಗಳು ಪ್ರಯಾಣಿಕರಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಕನ್ನಡ ಪುಸ್ತಕಗಳಿರುವ ಚೀಲಗಳನ್ನು ಹೊತ್ತು ಸಾಗುತ್ತಿವೆ. ಆಟೋಗಳಲ್ಲಿ ಸಂಚರಿಸುವ ಅಲ್ಪ ಸಮಯದಲ್ಲಿ ಓದಬಹುದಾದಂತಹ ಕವನ, ಗಾದೆ, ಒಗಟು, ಸಣ್ಣ ಕಥೆ, ನೀತಿ ಕಥೆಗಳ ಪುಸ್ತಕಗಳು, ಕನ್ನಡ ಕವಿಗಳ ಕಿರು ಪರಿಚಯದ ಪುಸ್ತಕಗಳ ಜತೆಗೆ ನಾಡಿನ ಐತಿಹಾಸಿಕ ಸ್ಥಳಗಳಾದ ಹಂಪಿ, ಬದಾಮಿ, ಐಹೊಳೆ, ನಾಡನ್ನು ಆಳಿದ ರಾಜ ವಂಶಸ್ಥರ ಮಾಹಿತಿ
ನೀಡುವ ಕಿರು ಪುಸ್ತಕಗಳು ಇಲ್ಲಿವೆ.
ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯು ಈ ಪ್ರಯೋಗ ಮಾಡುತ್ತಿದ್ದು, ಕಳೆದ ನವೆಂಬರ್‌ನಲ್ಲಿ “ಕನ್ನಡ ಪುಸ್ತಗಳು ಗಾಲಿಗಳ ಮೇಲೆ’ ಎಂಬ ಅಭಿಯಾನ ಪ್ರಾರಂಭಿಸಿದೆ. ಸುಮಾರು ನಗರದ 300 ಆಟೋಗಳಲ್ಲಿ ಹಾಗೂ ಕೆಲವು ಟ್ಯಾಕ್ಸಿಗಳಲ್ಲಿ ಕನ್ನಡ ಪುಸ್ತಕಗಳನ್ನು ಇಡಲಾಗಿದೆ. ಹೊಸ ಲೇಖಕರ ಕವನಗಳನ್ನು ಓದಿದಾಗ, ಓದು ಗರಿಗೆ ಇಷ್ಟವಾದರೆ, ಪುಸ್ತಕವನ್ನು ಕೊಂಡು ಕೊಳ್ಳಬೇಕು ಎಂದೆನಿಸಿದಾಗ ಅದಕ್ಕೂ ಅವಕಾಶ ಕಲ್ಪಿಸಲಾಗಿದೆ. ಅಲ್ಲಿಯೇ ಸಂಸ್ಥೆ
ಯ ಸಂಪರ್ಕ ಸಂಖ್ಯೆಯನ್ನು ಹಾಕಲಾಗಿದ್ದು, ಅದರಿಂದ ಸಂಪರ್ಕಿಸಿದಾಗ ಮನೆಯನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಎಲ್ಲೆಲ್ಲಿ ಪುಸ್ತಕ ಲಭ್ಯ: ಮೆಜೆಸ್ಟಿಕ್ ರೈಲ್ವೆ ನಿಲ್ದಾಣ, ದಂಡು ರೈಲ್ವೆ ನಿಲ್ದಾಣ, ಹೆಬ್ಟಾಳ ಫ್ಲೈ ಓವರ್ ಕೆಳಗಿನ ಆಟೋ ನಿಲ್ದಾಣ, ಮಲ್ಲೇಶ್ವರಂ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳಲ್ಲಿ ಸಂಚರಿಸುವ ಕೆಲವು ಆಟೋಗಳಲ್ಲಿ ಕನ್ನಡ ಪುಸ್ತಕಗಳನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ನಗರಾದ್ಯಂತ ಆಟೋ, ಟ್ಯಾಕ್ಸಿ, ಬಿಎಂಟಿಸಿ ಬಸ್, ರೈಲುಗಳಲ್ಲಿ ಕನ್ನಡ ಪುಸ್ತಕಗಳನ್ನು ಇರಿಸುವ ಯೋಜನೆ ಕೂಡ ಸಂಸ್ಥೆಗೆ ಇದೆ.
ನಿತ್ಯ ಒಂದು ಆಟೋದಲ್ಲಿ 15ರಿಂದ 20 ಟ್ರಿಪ್ ಗಳಲ್ಲಿ 30ರಿಂದ 40 ಜನ ಪ್ರಯಾಣಿಸುತ್ತಾರೆ. ಕೆಲವರು ಆಸಕ್ತಿಯಿಂದ ಪುಸ್ತಕ ತೆಗೆದು ಓದುತ್ತಾರೆ. ಅನ್ಯ ಭಾಷಿಕರು ಸಹ ಕನ್ನಡ ಕಲಿಯುವ ಆಸಕ್ತಿ ತೋರಿಸುತ್ತಿದ್ದಾರೆ. ಉತ್ತಮ ಪ್ರತಿಕ್ರಿಯೆ ಬರುತ್ತಿದೆ.
●ಅನಿಲ್, ಆಟೋ ಚಾಲಕ
ಅರ್ಧ ಗಂಟೆಗಳ ಕಾಲ ಸಂಚರಿಸುವವರು ನಮ್ಮ ಆಟೋಗಳನ್ನು ಹುಡುಕಿಕೊಂಡು ಬರುತ್ತಾರೆ. ಅದರಲ್ಲೂ ಕೆಲವರು ಪುಸ್ತಕವನ್ನು ಪೂರ್ತಿ ಓದಿ ಮುಗಿಸಿದವರು ಇದ್ದಾರೆ. ಇದರಿಂದಾಗಿ ತಿಂಗಳಿಗೊಮ್ಮೆ ಪುಸ್ತಕ ಬದಲಾಯಿಸಲಾಗುವುದು.
●ರೇವಣ್ಣ, ಮಲ್ಲೇಶ್ವರದ ಚಾಲಕ
ಕನ್ನಡ ಭಾಷೆ ಬಗ್ಗೆ ಜಾಗೃತಿ ಮೂಡಿಸಲು, ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಗರಾದ್ಯಂತ ಮಾಡುವ ಯೋಚನೆ ಹೊಂದಿದ್ದೇವೆ.
●ಮಧುಶ್ರೀ, ಸಂಸ್ಥಾಪಕ ಅಧ್ಯಕ್ಷೆ, ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ
ಭಾರತಿ ಸಜ್ಜನ್