Advertisement

ಕಾಪು: ಕಿರುಚಿತ್ರದ ಮೂಲಕ ರಕ್ತದಾನ ಜಾಗೃತಿ

02:20 AM Jun 27, 2018 | Team Udayavani |

ಕಾಪು: ಕಾಪು ತಾಲೂಕಿನ ಸುಭಾಸ್‌ ನಗರದ ಸಮಾನ ಮನಸ್ಕ ಯುವ ಹುಡುಗರು ನಟಿಸಿ, ನಿರ್ದೇಶಿಸಿ, ನಿರ್ಮಿಸಿದ ಕಿರುಚಿತ್ರವೊಂದು ಸದ್ದಿಲ್ಲದೆ ಸುದ್ಧಿ ಮಾಡುತ್ತಿದೆ. ರಕ್ತದಾನದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ನಿರ್ಮಿಸಿದ ‘ರಕ್ತದ ಅನಿರೀಕ್ಷಿತ ತಿರುವು’ ಎಂಬ ಕಿರುಚಿತ್ರ ಸಾಮಾಜಿಕ ಜಾಲತಾಣದಲ್ಲಿಯೂ ಪ್ರಸಿದ್ಧಿ ಪಡೆದಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ. ಕುರ್ಕಾಲಿನ ಮೂವರು ಯುವಕರು ನಿರ್ಮಿಸಿದ ಕಿರುಚಿತ್ರ ವಿಶ್ವ ರಕ್ತದಾನ ದಿನಾಚರಣೆಯ ನಿಮಿತ್ತ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಪಡೆದುಕೊಂಡಿದೆ. ಮಾತ್ರವಲ್ಲದೇ ಉಡುಪಿಯ ಖಾಸಗಿ ವಾಹಿನಿಯಲ್ಲಿ ಬಿಡುಗಡೆಗೊಂಡಿದ್ದು, ಯೂಟ್ಯೂಬ್‌ ನಲ್ಲಿಯೂ ಸದ್ದು ಮಾಡುತ್ತಿದೆ.

Advertisement

ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಫ್ರಾಗ್ರೆನ್ಸ್‌ ಆಫ್‌ ಹ್ಯುಮಾನಿಟಿ ತಂಡ ಕಟ್ಟಿ ಮೆಹೆಕ್‌ ಎನ್ನುವ ಮಗುವಿಗೆ ಸಾಮಾಜಿಕ ಜಾಲತಾಣದ ಮೂಲಕವೇ ಸಹಾಯ ಮಾಡಿ ಜನಮನ ಗೆದ್ದ ತಂಡದ ಸದಸ್ಯರಾದ ರಾಯನ್‌ ಫೆರ್ನಾಂಡಿಸ್‌, ಸುಚಿತ್‌ ಕೋಟ್ಯಾನ್‌ ಮತ್ತು ರಾಯನ್‌ ಮಥಾಯಸ್‌ ಅವರು ಅದೇ ಹೆಸರನ್ನು ಉಳಿಸಿಕೊಂಡು ಈ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ರಕ್ತದಾನದ ಕುರಿತಾಗಿ ಜಾಗೃತಿ ಮೂಡಿಸಲು ನಿರ್ಮಿಸಿರುವ ಈ ಕಿರುಚಿತ್ರ ವೀಕ್ಷಿಸಿ ಹಲವರು ಸಾಮಾಜಿಕ ಜಾಲತಾಣದಲ್ಲಿ ಮೊದಲ ಬಾರಿ ರಕ್ತದಾನ ಮಾಡಿರುವ ಕುರಿತಾಗಿ ಬರೆದುಕೊಂಡಿರುವುದು ಇದರ ಯಶಸ್ಸಿಗೆ ಸಾಕ್ಷಿಯಾಗಿದೆ. ಈ ಮೂಲಕ ರಕ್ತದಾನ ಕುರಿತಾಗಿ ಸಾವಿರಾರು ಮಂದಿಯಲ್ಲಿದ್ದ ಅಸಮಾಧಾನ, ಅಪನಂಬಿಕೆ ಮತ್ತು ಅನಗತ್ಯ ಭಯವನ್ನು ದೂರ ಮಾಡಿದಂತಾಗಿದೆ.

ರಕ್ತದಾನ ಮಾಡಲು ಪ್ರೇರಣೆ: ಸುಚಿತ್‌ ಕೋಟ್ಯಾನ್‌
ಸಮಾಜದ ಒಳಿತಿಗಾಗಿ ದುಡಿಯಬೇಕು, ಕಿರುಚಿತ್ರಗಳ ಮೂಲಕ ಜನರೆಲ್ಲಾ ಒಂದಾಗಿ ಬಾಳುವ ಸಂದೇಶ ಸಾರಬೇಕು ಎಂಬ ಕನಸು ನಮ್ಮದಾಗಿತ್ತು. ಯುವ ಮನಸ್ಸುಗಳೆಲ್ಲಾ ಈ ರೀತಿ ಸ್ವಸ್ಥ ಸಮಾಜ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಲ್ಲಿ ನಾವು ನೆಮ್ಮದಿಯ ಭವಿಷ್ಯ ಕಾಣಲು ಸಾಧ್ಯವಿದೆ. ಇಂತಹುದೇ ಮಾದರಿಯ ಸೇವೆಯನ್ನು ಹಿಂದೆಯೂ ನಡೆಸಿದ್ದು, ಇದನ್ನು ಮುಂದುವರಿಸಿಕೊಂಡು ಹೋಗುವ ಆಲೋಚನೆಯೂ ಇದೆ ಎಂದು ತಂಡದ ಸದಸ್ಯ ಸುಚಿತ್‌ ಕೋಟ್ಯಾನ್‌ ಅವರು ತಿಳಿಸಿದ್ದಾರೆ.

ಮೂವರದ್ದೇ ನಟನೆ 
ವಿದ್ಯಾರ್ಥಿ, ಉಪನ್ಯಾಸಕ‌, ವಿಭಾಗ ಮುಖ್ಯಸ್ಥ : ಸದಾ ಸಮಾಜಮುಖಿ ಕೆಲಸಗಳತ್ತ ಆಲೋಚಿಸುವ ಪೂರ್ಣಪ್ರಜ್ಞ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿ ರಾಯನ್‌ ಫೆರ್ನಾಂಡಿಸ್‌ ಕಿರುಚಿತ್ರಕ್ಕೆ ಕತೆ ಬರೆದು ನಿರ್ದೇಶಿಸಿದ್ದರೆ, ಎಂ.ಜಿ.ಎಂ. ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಸುಚಿತ್‌ ಕೋಟ್ಯಾನ್‌ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು. ಮಿಲಾಗ್ರಿಸ್‌ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ರಾಯನ್‌ ಮಥಾಯಸ್‌ ಚಿತ್ರಕತೆ ಬರೆದಿದ್ದು, ಕಿರುಚಿತ್ರದಲ್ಲಿ ಈ ಮೂವರದ್ದೇ ನಟನೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next