Advertisement

ಸಸ್ಯ ಕಾಶಿಯಲ್ಲೊಂದು ಕಳ್ಳದಾರಿ!

10:00 AM Sep 13, 2019 | Suhan S |

ಬೆಂಗಳೂರು: ಸಸ್ಯಕಾಶಿಗೆ ಭೇಟಿ ನೀಡುವವರ ಅನುಕೂಲಕ್ಕೆ ತೋಟಗಾರಿಕೆ ಇಲಾಖೆ ಡಾಂಬರು ರಸ್ತೆ ನಿರ್ಮಿಸುತ್ತಿದೆ. ಇದರಿಂದ ರಸ್ತೆಗಳೂ ಲಕ ಲಕ ಎನ್ನುತ್ತಿವೆ. ಆದರೆ, ಉದ್ಯಾನದ ಸುತ್ತ ಸಮರ್ಪಕವಾದ ಕಾಂಪೌಂಡ್‌ ನಿರ್ಮಿಸುವುದನ್ನು ಮರೆತಿದೆ. ಪರಿಣಾಮ ಅಕ್ರಮ ಚಟುವಟಿಕೆಗಳಿಗೆ ಇದು ಅನುಕೂಲ ಮಾಡಿಕೊಟ್ಟಂತಾಗಿದೆ.

Advertisement

ಪೂರ್ವ ಗೇಟ್ನಿಂದ ಡಬಲ್ ರಸ್ತೆ ಕಡೆಗೆ ಹೋಗುವ ಮಾರ್ಗದಲ್ಲಿ ನಿರ್ಮಿಸಿರುವ ತಡೆಗೋಡೆ ಎತ್ತರ ತುಂಬಾ ಕಡಿಮೆ ಇದೆ. ಅಲ್ಲದೆ, ಗೋಡೆ ಮೇಲೆ ತಂತಿ ಬಿಗಿದಲ್ಲ. ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಕೂಡ ಅಳವಡಿಸಿಲ್ಲ. ಇದರಿಂದ ಅನಾಯಾಸವಾಗಿ ಯಾರು ಬೇಕಾದರೂ ಗೋಡೆಯ ಹೊರಗಿನಿಂದ ಒಂದೇ ಜಿಗಿತದಲ್ಲಿ ಲಾಲ್ಬಾಗ್‌ಗೆ ಹಾರಬಹುದು. ಇದರಿಂದ ಸಂಜೆಯಾಗುತ್ತಿದ್ದಂತೆ ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ವಾಯುವಿಹಾರಿಗಳು ಹಾಗೂ ಸ್ಥಳೀಯರು ಆರೋಪಿಸುತ್ತಾರೆ.

ನಗರದ ಹೃದಯ ಭಾಗದಲ್ಲಿರುವ ಲಾಲ್ಬಾಗ್‌ ಒಟ್ಟಾರೆ 240 ಎಕರೆ ವಿಸ್ತೀರ್ಣದಲ್ಲಿದೆ. ನಿತ್ಯ ಐದು ಸಾವಿರಕ್ಕೂ ಅಧಿಕ ಜನ ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ 9 ಸಾವಿರ ದಾಟುತ್ತದೆ. ಗಾಜಿನಮನೆ, ಕೆರೆ, ಹೂದೋಟ, ನಾಡಪ್ರಭು ಕೆಂಪೇಗೌಡ ನಿರ್ಮಿಸಿದ ಗೋಪುರ ಸೇರಿ 20ಕ್ಕೂ ಅಧಿಕ ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ. ಅವೆಲ್ಲವುಗಳಿಗೆ ಭದ್ರಕೋಟೆ ಈ ಕಾಂಪೌಂಡ್‌ ಗೋಡೆಗಳು. ಅದೇ ಗಟ್ಟಿಮುಟ್ಟಾಗಿ ಇಲ್ಲ ಎಂದು ಜನ ಬೇಸರ ವ್ಯಕ್ತಪಡಿಸುತ್ತಾರೆ. ನಾಡಪ್ರಭು ಕೆಂಪೇಗೌಡ ಅವರು ನಿರ್ಮಿಸಿದ್ದ ಗೋಪುರದ ಹಿಂಭಾಗದಲ್ಲಿ ಹುಲ್ಲು, ಗಿಡ- ಗಂಟೆ ಬೆಳೆದಿದ್ದು, ಸ್ಥಳೀಯರು ಕಾಲುದಾರಿ ನಿರ್ಮಿಸಿದ್ದಾರೆ. ಎಲ್ಲೆಂದರಲ್ಲಿ ವಾಟರ್‌ ಬಾಟಲಿ, ಪ್ಲಾಸ್ಟಿಕ್‌ ವಸ್ತುಗಳನ್ನು ಬಿಸಾಡಲಾಗಿದೆ. ಗೋಪುರ ಬಳಿ ಸಿಸಿ ಕ್ಯಾಮೆರಾ ಇದ್ದು, ಡಬಲ್ ರಸ್ತೆವರೆಗೆ ಕಾಣುವುದಿಲ್ಲ. ಆದ್ದರಿಂದ ಸುಲಭವಾಗಿ ಸಿದ್ದ್ದಾಪುರ, ಕನಕನಪಾಳ್ಯ ಸೇರಿ ಸುತ್ತಲಿನ ಕೆಲ ಕಿಡಿಗೇಡಿಗಳು ಗೋಡೆ ಜಿಗಿದು ಒಳ ನುಗ್ಗುವುದು ಸಾಮಾನ್ಯವಾಗಿದೆ.

ಐದಾರು ವರ್ಷಗಳ ಹಿಂದೆ ಗೋಡೆ ಜಿಗಿದು ಕಿಡಿಗೇಡಿಗಳು ಒಳಬರುತ್ತಿದ್ದರು. ಆದರೆ ಈಗ ಸಿದ್ದಾಪುರ ಪೊಲೀಸ್‌ ಠಾಣೆಯ ಇಬ್ಬರು ಪೇದೆ, ತೋಟಗಾರಿಕೆ ಇಲಾಖೆಯ ಒಬ್ಬ ಸಿಬ್ಬಂದಿ ಕಾವಲು ಕಾಯುವುದರಿಂದ ಇದರ ಹಾವಳಿ ಬಹುತೇಕ ಕಡಿಮೆಯಾಗಿದೆ. ಲಾಲ್ಬಾಗ್‌ ಭದ್ರತೆಗೆ ಆರು ಜನ ಸೂಪರ್‌ವೈಸರ್‌, 25 ಜನ ಸೆಕ್ಯುರಿಟಿ ಸೇರಿ ಇಬ್ಬರು ಪೇದೆ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಆದರೆ, ಡಬಲ್ ರಸ್ತೆ ಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಅವಶ್ಯಕತೆ ಇದೆ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು. ಲಾಲ್ಬಾಗ್‌ಗೆ ಕುಟುಂಬಸಹಿತ ಬರುತ್ತೇವೆ. ಎಲ್ಲಾ ಭಾಗದಲ್ಲಿ ತೆರಳಲು ವಾಹನ ವ್ಯವಸ್ಥೆ ಇದೆ. ಆದರೆ, ಗೋಪುರದ ಹಿಂಭಾಗದ ರಸ್ತೆಯಲ್ಲಿ ಒಬ್ಬರೇ ಓಡಾಡಲು ಭಯವಾಗುತ್ತದೆ. ಪಕ್ಕದಲ್ಲಿಯೇ ರಸ್ತೆಯಿದ್ದು, ಕೆಲ ಕಿಡಿಗೇಡಿಗಳು ಒಳ ನುಗ್ಗುತ್ತಾರೆ. ತೋಟಗಾರಿಕೆ ಇಲಾಖೆ ಸ್ವಚ್ಛಗೊಳಿಸಬೇಕು. ಭದ್ರತೆಗೆ ಆದ್ಯತೆ ನೀಡಬೇಕು ಎನ್ನುತ್ತಾರೆ ಬೆಂಗಳೂರು ನಿವಾಸಿ ಬಸವರಾಜ.

ಲಾಲ್ಬಾಗ್‌ನಲ್ಲಿ ಬೆಳಿಗ್ಗೆ 5.30ರಿಂದ 8.30ರವರೆಗೆ ನಡಿಗೆದಾರರಿಗೆ ಉಚಿತ ಪ್ರವೇಶ ವಿದ್ದು, ಬೆಳಗ್ಗೆ 8.30ರಿಂದ ಸಂಜೆ 6ರವರೆಗೆ ಪ್ರವೇಶ ಶುಲ್ಕ ಪಾವತಿಸಬೇಕು. 12 ವರ್ಷದ ಮೇಲ್ಪಟ್ಟವರು 25 ರೂ. ಶುಲ್ಕವಿದ್ದು, ಸಂಜೆ 7 ಗಂಟೆಗೆ ಎಲ್ಲಾ ಗೇಟ್‌ಗಳು ಬಂದ್‌ ಆಗಲಿದೆ. ಆದರೆ ಗೋಪುರದ ಹಿಂಭಾಗದಲ್ಲಿ ಎತ್ತರದ ಗಿಡಗಳಿದ್ದು, ಯಾರೂ ಅಡಗಿಕೊಂಡರೂ ಕಾಣುವುದಿಲ್ಲ. ಆದ್ದರಿಂದ ಈ ಭಾಗದಲ್ಲಿ ವಿದ್ಯುತ್‌ ಕಂಬಗಳು, ಕ್ಯಾಮೆರಾ ಅಳವಡಿಸಬೇಕಿದೆ.

ಅನಧಿಕೃತ ಅಂಗಡಿಗಳ ಹಾವಳಿ:
ಲಾಲ್ಬಾಗ್‌ ಒಳಗೆ ಪ್ಲಾಸ್ಟಿಕ್‌ ವಸ್ತುಗಳನ್ನು ನಿಷೇಧಿಸಿದ್ದರೂ, ಪೂರ್ವ, ಪಶ್ಚಿಮ ಸೇರಿ ಎಲ್ಲ ದ್ವಾರಗಳ ಹೊರಗೆ, ಪೂರ್ವ ಗೇಟ್‌ನ ಒಳಗೆ ಮತ್ತು ಗೋಪುರದ ಬಳಿ ಅನಧಿಕೃತ ಅಂಗಡಿಗಳ ಹಾವಳಿ ಹೆಚ್ಚಿದೆ. ಜತೆಗೆ ಅವು ಬಳಕೆ ಮಾಡುತ್ತಿರುವುದು ನಿಷೇಧಿಸಲ್ಪಟ್ಟ ಪ್ಲಾಸ್ಟಿಕ್‌ ವಸ್ತುಗಳನ್ನು. ಇದು ಮಾಲಿನ್ಯಕ್ಕೆ ಇಂಬು ಮಾಡಿಕೊಟ್ಟಂತಾಗಿದೆ. ಭದ್ರತಾ ಸಿಬ್ಬಂದಿ ಇದ್ದರೂ, ಎಲ್ಲೆಂದರಲ್ಲಿ ವಾಟರ್‌ ಬಾಟಲಿಗಳು ಬಿದ್ದಿವೆ. ಕುಡಿಯುವ ನೀರಿನ ನಲ್ಲಿಯಿಂದ ನೀರು ವ್ಯಯವಾಗುತ್ತಿದ್ದರೂ, ಸಿಬ್ಬಂದಿ ಕಂಡು ಕಾಣದಂತಿದ್ದಾರೆ. ಕಾಂಕ್ರೀಟ್ ರಸ್ತೆ, ಲಾಲ್ಬಾಗ್‌ ಸೌಂದರೀಕರಣಕ್ಕೆ ಕೋಟ್ಯಂತರ ಹಣ ಖರ್ಚು ಮಾಡುವ ತೋಟಗಾರಿಕೆ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಿಡಿಗೇಡಿಗಳಿಂದ ವಸ್ತುಗಳು ಚಲ್ಲಾಪಿಲ್ಲಿ?:

ಮೂರ್‍ನಾಲ್ಕು ತಿಂಗಳ ಹಿಂದೆ ಲಾಲ್ಬಾಗ್‌ ಒಳಗೆ ಅನಧಿಕೃತ ಅಂಗಡಿಗಳಲ್ಲಿನ ವಸ್ತುಗಳು ಚಲ್ಲಾಪಿಲ್ಲಿಯಾಗಿದ್ದವು. ಈ ಘಟನೆ ರಾತ್ರಿ ವೇಳೆ ನಡೆದಿದ್ದು, ಯಾರೆಂಬುದು ಇಂದಿಗೂ ನಿಗೂಢವಾಗಿದೆ. ಗೋಡೆ ಜಿಗಿದು ಕೆಲ ಕಿಡಿಗೇಡಿಗಳೇ ಈ ಕೆಲಸ ಮಾಡಿರಬಹುದು ಎಂದು ವ್ಯಾಪಾರಸ್ಥರು ಅನುಮಾನ ವ್ಯಕ್ತಪಡಿಸಿದರು.
.ಮಂಜುನಾಥ ಗಂಗಾವತಿ
Advertisement
Advertisement

Udayavani is now on Telegram. Click here to join our channel and stay updated with the latest news.

Next