Advertisement
ಬೆಳಗಾವಿ ಜಿಲ್ಲೆಯ ಆಡಳಿತ ಹಾಗೂ ರಾಜಕಾರಣ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಜಾರಕಿಹೊಳಿ ಸಹೋದರರ ಎದುರು ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್ ಶಕ್ತಿ ಪ್ರದರ್ಶನ ಮಾಡಿ ಮೇಲ್ನೋಟಕ್ಕೆ ಮೇಲುಗೈ ಸಾಧಿಸಿದ್ದಾರೆ. ಆದರೆ, ಎರಡೂ ಬಣಗಳಲ್ಲಿ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವ ಸಮಯದಲ್ಲಾದರೂ ಮತ್ತೆ ಸ್ಫೋಟವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
Related Articles
Advertisement
ಖಂಡ್ರೆ ಸಂಧಾನ ಕಸರತ್ತು:ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿ ಗುರುವಾರ ರಾತ್ರಿಯವರೆಗಿನ ವಿದ್ಯಮಾನ ಸಮ್ಮಿಶ್ರ ಸರ್ಕಾರಕ್ಕೆ ಆಪತ್ತು ತರುವಂತಿತ್ತು. ಲಕ್ಷ್ಮೀ ಹೆಬ್ಟಾಳ್ಕರ್ ಹಾಗೂ ಜಾರಕಿಹೊಳಿ ಕುಟುಂಬ ಈ ವಿಚಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿತ್ತು. ಈ ಹಂತದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಕ್ಷಣ ಸತೀಶ್ ಜಾರಕಿಹೊಳಿ ಹಾಗೂ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಸಂಧಾನ ಸೂತ್ರದಡಿ ಹೊಂದಾಣಿಕೆ ಮಾಡಿಕೊಳ್ಳಲು ಸೂಚನೆ ನೀಡಿದರು. ಜತೆಗೆ, ಬಿಕ್ಕಟ್ಟಿಗೆ ಪ್ರಮುಖ ಕಾರಣೀಕರ್ತರು ಎನ್ನಲಾದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರೊಂದಿಗೂ ವೇಣುಗೋಪಾಲ್ ದೂರವಾಣಿ ಮೂಲಕ ಮಾತುಕತೆ ನಡೆಸಿ, ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ತಲೆ ಹಾಕದಂತೆ ಸೂಚಿಸಿದ್ದಾರೆ. ಅಲ್ಲದೆ, ಲಕ್ಷ್ಮೀ ಹೆಬ್ಟಾಳ್ಕರ್‌ಗೆ ಪಕ್ಷದ ಚೌಕಟ್ಟು ಮೀರದಂತೆ ಎಚ್ಚರಿಸಿ, ಸಂಧಾನ ಸೂತ್ರಕ್ಕೆ ಒಪ್ಪಿಕೊಳ್ಳುವಂತೆ ತಾಕೀತು ಮಾಡಿದ್ದರು ಎನ್ನಲಾಗಿದೆ. ಪಕ್ಷದ ಹೈ ಕಮಾಂಡ್ ಸೂಚನೆ ಮೇರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಂಧಾನ ಸೂತ್ರದಂತೆ ಮಾತುಕತೆ ನಡೆಸಿ ಎರಡೂ ಬಣದವರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರು. ಮರಾಠಾ ಬಣಕ್ಕೆ ಚಾನ್ಸ್:
ಅಂತಿಮವಾಗಿ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನ ಮರಡಿ ಕ್ಷೇತ್ರದ ನಿರ್ದೇಶಕ ಲಿಂಗಾಯತ ಸಮುದಾಯದ ಬಾಪುಗೌಡ ಅಥವಾ ಮಹಾಂತೇಶ್ ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್ ಮುಂದಾಗಿದ್ದರು. ಆದರೆ, ಲಿಂಗಾಯತ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡದಂತೆ ಜಾರಕಿಹೊಳಿ ಸಹೋದರರು ಪಟ್ಟು ಹಿಡಿದಿದ್ದರು. ಸರ್ವಸಮ್ಮತ ಅಭ್ಯರ್ಥಿಯಾಗಿ ಲಕ್ಷ್ಮೀ ಹೆಬ್ಟಾಳ್ಕರ್ ಬಣದಲ್ಲಿ ಗುರುತಿಸಿಕೊಂಡಿದ್ದರೂ, ಮರಾಠಾ ಸಮುದಾಯಕ್ಕೆ ಸೇರಿರುವ ಮಹದೇವ ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಜಾರಕಿಹೊಳಿ ಸಹೋದರರು ಸೂಚಿಸಿದ್ದರು. ಸಂಪುಟದಲ್ಲಿ ಸ್ಥಾನ ಬೇಡ:
ಈ ಮಧ್ಯೆ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡದಂತೆ ಸತೀಶ್ ಜಾರಕಿಹೊಳಿ ಷರತ್ತು ವಿಧಿಸಿದ್ದಾರೆ. ಅಲ್ಲದೇ ಲೋಕಸಭೆ ಚುನಾವಣೆಯಲ್ಲಿ ತಾವು ಹೇಳಿದವರಿಗೆ ಬೆಳಗಾವಿ ಕ್ಷೇತ್ರದ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಹೈ ಕಮಾಂಡ್ ಈಶ್ವರ್ ಖಂಡ್ರೆ ಮೂಲಕ ನೀಡಿದೆ ಎಂದು ಹೇಳಲಾಗುತ್ತಿದೆ. ತಾರಕಕ್ಕೇರಿದ್ದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕರ ಬಿಕ್ಕಟ್ಟನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೈ ಕಮಾಂಡ್ ಸೂಚನೆಯಂತೆ ಸಂಧಾನ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ್ಮೀಗೆ ಲಖನ್ ಸ್ಪರ್ಧಿ ?
ಸಣ್ಣ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ತಮ್ಮ ವಿರುದ್ಧ ಪಡೆ ಕಟ್ಟಿರುವ ಲಕ್ಷ್ಮೀ ಹೆಬ್ಟಾಳ್ಕರ್ ಅವರನ್ನು ರಾಜಕೀಯವಾಗಿ ಎದುರಿಸಲು ಜಾರಕಿಹೊಳಿ ಸಹೋದರರು ಈಗಾಗಲೇ ಕಾರ್ಯತಂತ್ರ ರೂಪಿಸಿದಾರೆ. ಮುಂದಿನ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಟಾಳ್ಕರ್ ವಿರುದ್ಧ ತಮ್ಮ ಕಿರಿಯ ಸಹೋದರ ಲಖನ್ ಜಾರಕಿಹೊಳಿಯನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ. ಲಖನ್ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೂ ಪಕ್ಷೇತರರಾಗಿಯಾದರೂ ಅವರ ಎದುರು ಸ್ಪರ್ಧೆಗಿಳಿಸಲು ಜಾರಕಿಹೊಳಿ ಸಹೋದರರು ಆಲೋಚಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜಾರಕಿಹೊಳಿ ಸಹೋದರರಿಗೆ ಬಿಜೆಪಿ ಗಾಳ
ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ ವಿಚಾರದಲ್ಲಿ ಹಿನ್ನಡೆ ಅನುಭವಿಸಿರುವ ಜಾರಕಿಹೊಳಿ ಕುಟುಂಬ ಸೆಳೆಯಲು ಬಿಜೆಪಿ ಮತ್ತೂಮ್ಮೆ ಗಂಭೀರ ಪ್ರಯತ್ನ ನಡೆಸಿದೆ. ಈಗಾಗಲೇ ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದು, ಸತೀಶ್ ಹಾಗೂ ರಮೇಶ್ ಜಾರಕಿಹೊಳಿ ಬಂದರೆ ಪಕ್ಷಕ್ಕೆ ಬೆಳಗಾವಿಯಷ್ಟೇ ಅಲ್ಲದೆ ರಾಜ್ಯಾದ್ಯಂತ ಮತ್ತಷ್ಟು ಶಕ್ತಿ ವೃದ್ಧಿ ಸಾಧ್ಯ ಎಂಬುದು ಬಿಜೆಪಿ ಲೆಕ್ಕಾಚಾರ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿರುವ ಬಿ.ಎಸ್.ಯಡಿಯೂರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆ ಜಾರಕಿಹೊಳಿ ಸಹೋದರರನ್ನು ಬಿಜೆಪಿಗೆ ಸೆಳೆಯುವ ಸಂಬಂಧ ಮಾತುಕತೆ ನಡೆಸಲು ಒಪ್ಪಿಗೆ ಪಡೆಯಲಿದ್ದಾರೆ. ನಾಯಕ ಸಮುದಾಯದ ಶ್ರೀರಾಮುಲು ಬಿಜೆಪಿಯಲ್ಲಿರುವುದರಿಂದ ಆ ಸಮುದಾಯದ ಪ್ರಭಾವಿ ನಾಯಕರಾದ ಜಾರಕಿಹೊಳಿ ಸಹೋದರರನ್ನು ಸೆಳೆದು ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿರುವ ಆ ಸಮುದಾಯದ ಶಾಸಕರನ್ನು ಸೆಳೆಯುವುದು ಬಿಜೆಪಿ ಕಾರ್ಯತಂತ್ರ. ಬಿಜೆಪಿಗೆ ಬಂದರೆ ಸತೀಶ್ ಜಾರಕಿಹೊಳಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಭರವಸೆ ಸಹ ನೀಡಲಾಗಿದೆ. ರಮೇಶ್ ಜಾರಕಿಹೊಳಿ ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಜೆಡಿಎಸ್ ಮೌನ
ಬೆಳಗಾವಿ ಕಾಂಗ್ರೆಸ್‌ನಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನಿಂದ ಸದ್ಯ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂಬ ಸ್ಪಷ್ಟ ಭರವಸೆ ದೊರೆತಿರುವ ಹಿನ್ನೆಲೆಯಲ್ಲಿ ಈ ಕುರಿತು ಎಚ್ಚರಿಕೆ ಹೆಜ್ಜೆ ಇಟ್ಟಿರುವ ಜೆಡಿಎಸ್, ಈ ವಿಚಾರದಲ್ಲಿ ಮಧ್ಯಪ್ರವೇಶಿಸದೇ ಮೌನಕ್ಕೆ ಶರಣಾಗಲು ನಿರ್ಧರಿಸಿದೆ. ಪ್ರಸ್ತುತ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಸಮಸ್ಯೆಯಿಲ್ಲದೆ ಮುನ್ನಡೆಸುವ ವಿಚಾರದಲ್ಲಿ ಡಿಕೆಶಿ ಪ್ರಮುಖ ಪಾತ್ರ ವಹಿಸಿದ್ದು, ಬೆಳಗಾವಿ ವಿಚಾರದಲ್ಲಿ ಮಧ್ಯಪ್ರವೇಶಿಸಿದರೆ ಅವರಿಗೆ ಮುಜುಗರ ಉಂಟು ಮಾಡಿದಂತಾಗುತ್ತದೆ. ಹೀಗಾಗಿ ವಿವಾದದಲ್ಲಿ ಮಧ್ಯಪ್ರವೇಶಿಸದೆ, ಕಾದು ನೋಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಳಗಾವಿ ವಿವಾದಕ್ಕೆ ಸಂಬಂಧಿಸಿದಂತೆ ಜಾರಕಿಹೊಳಿ ಸಹೋದರರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪರ್ಕಿಸಿದಾಗ ಸರ್ಕಾರಕ್ಕೆ ನಮ್ಮಿಂದ ಯಾವುದೇ ಅಪಾಯ ಉಂಟಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ವಿವಾದವನ್ನು ಕಾಂಗ್ರೆಸ್‌ನವರೇ ಬಗೆಹರಿಸಿಕೊಳ್ಳಲಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.