Advertisement

ಶಾರ್ಟ್‌ ಆ್ಯಂಡ್‌ ಸ್ವೀಟ್‌

04:53 AM Jan 09, 2019 | |

2019ರಲ್ಲಿ ಟ್ರೆಂಡ್‌ ಆಗುತ್ತಿರುವ ದಿರಿಸುಗಳಲ್ಲಿ “ನೀ ಲೆಂಥ್‌ ಶಾರ್ಟ್ಸ್’ ಕೂಡಾ ಒಂದು. ಮೊಣಕಾಲು ಉದ್ದದ ಚಡ್ಡಿ(ತ್ರೀ ಫೋರ್ತ್‌) ಪುರುಷರಿಗೆ ಮಾತ್ರ ಸೀಮಿತವಲ್ಲ! ಜೀನ್ಸ್‌, ಹತ್ತಿ,  ಸ್ಯಾಟಿನ್‌, ಪಾಲಿಸ್ಟಾರ್‌, ನೈಲಾನ್‌ ಮುಂತಾದ  ಬಟ್ಟೆಗಳಲ್ಲಿ ಇವು ಲಭ್ಯ. ಪ್ಯಾಂಟ್‌ನಂತೆಯೇ ಇದನ್ನು ಅಂಗಿ ಜೊತೆ ತೊಡಬಹುದು. ಶರ್ಟ್‌ ಮತ್ತು ಟೀ ಶರ್ಟ್‌ ಜೊತೆ ತೊಟ್ಟಾಗ ಸೊಂಟಕ್ಕೆ ಬೆಲ್ಟ್ ಹಾಕಿಕೊಳ್ಳಬಹುದು. ಇದರ ಜೊತೆ ಸೊಂಟದಷ್ಟು ಉದ್ದದ ಕೋಟ್‌ ಅಥವಾ ಜಾಕೆಟ್‌ ಕೂಡಾ ಹಾಕಿಕೊಳ್ಳಬಹುದು. 

Advertisement

ಶಾರ್ಟ್ಸ್ ಜೊತೆ ಶೂ
ಮೊಣಕಾಲು ಉದ್ದದ ಶಾರ್ಟ್ಸ್ ಜೊತೆ ಉದ್ದ ತೋಳಿನ ಅಂಗಿ, ಸ್ವೆಟರ್‌ ಅಥವಾ ಕೋಟುಗಳು ಚೆನ್ನಾಗಿ ಕಾಣುತ್ತವೆ. ಜೇಬು ಇರುವ ಅಂಗಿಯ ತೋಳನ್ನು ಅರ್ಧದಷ್ಟು ಮಡಚಿ ಇದರ ಜೊತೆ ತೊಡಬಹುದು. ಇನ್ನು ಇದರ ಜೊತೆ ಚಪ್ಪಲಿ ಅಷ್ಟೇನೂ ಚೆನ್ನಾಗಿ ಕಾಣುವುದಿಲ್ಲವಾದ್ದರಿಂದ ಶೂ, ಬೂಟ್ಸ್‌ ಅಥವಾ ಸ್ನೀಕರ್ಸ್‌ ಚೆನ್ನಾಗಿ ಒಪ್ಪುತ್ತದೆ. ಅದರಲ್ಲೂ ಸಂಪೂರ್ಣ ಬಿಳಿ ಬಣ್ಣದ ಸ್ನೀಕರ್ಸ್‌ ತೊಡುವುದು ಸೂಕ್ತ. ಈ ಶೈಲಿ ಟ್ರೆಂಡ್‌ ಆಗಿರುವುದರಿಂದ ಫ್ಯಾಶನ್‌ ಪ್ರಿಯರು ಇದನ್ನು ಅನುಕರಿಸಲು ಶುರು ಮಾಡಿಯೇಬಿಟ್ಟಿದ್ದಾರೆ.
 
ಚೆಕ್ಸ್‌ ಮತ್ತು ಚುಕ್ಕಿಗಳು
ಕೇವಲ ತಿಳಿ ಅಥವಾ ಗಾಢವಾದ ಬಣ್ಣಗಳು ಅಲ್ಲದೆ ಬಗೆಬಗೆಯ ಬಣ್ಣ, ಆಕೃತಿ, ವಿನ್ಯಾಸ, ಚಿಹ್ನೆ ಹಾಗೂ ಮುದ್ರೆಗಳಿರುವ ಆಯ್ಕೆಗಳೂ ಸಿಗುತ್ತವೆ. ಕಪ್ಪು, ಬಿಳಿ, ಕೆಂಪು, ನೀಲಿ ಹೀಗೆ ಇತರ ಸಾಲಿಡ್‌ ಕಲರ್ಡ್‌ ಶಾರ್ಟ್ಸ್ ಟ್ರೈ ಮಾಡಬಹುದು. ಇಲ್ಲವೇ ಚೆಕ್ಸ್‌, ಪೋಲ್ಕಾ ಡಾಟ್ಸ್‌, ರೈನ್‌ಬೋ, ಸ್ಟ್ರೈಪ್ಸ್‌, ಜಿಯೊಮೆಟ್ರಿಕ್‌, ಡಿಜೈನ್ಸ್‌, ಇಂಡಿಯನ್‌ ಪ್ರಿಂಟ್‌, ಆ್ಯನಿಮಲ್‌ ಪ್ರಿಂಟ್‌, ಫ್ಲೋರಲ್‌ ಪ್ರಿಂಟ್‌, ಲೇಸ್‌ ವರ್ಕ್‌, ಕಸೂತಿ ಮುಂತಾದ ಬಗೆಯ ಶಾರ್ಟ್ಸ್ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.  

ಹಬ್ಬ ಹರಿದಿನಕ್ಕಲ್ಲ
ಈ ಶಾರ್ಟ್‌ಗಳನ್ನು ಅಂಗಡಿಯಿಂದ ಮಾತ್ರವಲ್ಲ, ಆನ್‌ಲೈನ್‌ ಮೂಲಕವೂ ಆರ್ಡರ್‌ ಮಾಡಿ ತರಿಸಿಕೊಳ್ಳಬಹುದು. ಇವುಗಳನ್ನು ಡ್ರೆಸ್‌ ಕೋಡ್‌ ಇರುವ ಕಾಲೇಜು, ಆಫೀಸು ಮತ್ತು ಹಬ್ಬ-ಹರಿದಿನದಂದು ತೊಡುವುದು ಸೂಕ್ತವಲ್ಲ. ಕ್ಯಾಶುವಲ್‌ ಔಟಿಂಗ್‌, ಹಾಲಿಡೇ, ಪಾರ್ಟಿ, ಬೀಚ್‌, ಶಾಪಿಂಗ್‌, ಜಿಮ್‌, ಯೋಗ ತರಗತಿ ಅಥವಾ ಆಟವಾಡಲು ಹೋಗುವಾಗ ಧರಿಸಬಹುದು. ಆದರೆ ನೆನಪಿರಲಿ, ಓಡಾಡುವಾಗ, ಕಸರತ್ತು ಮಾಡುವಾಗ ಆದಷ್ಟೂ ಸಡಿಲವಾದ, ಆರಾಮದಾಯಕ ಶಾರ್ಟ್ಸ್ಗಳನ್ನು ಧರಿಸಿರಿ. 

ಸೈಕ್ಲಿಂಗ್‌ ಶಾರ್ಟ್ಸ್
ಒಂದು ವೇಳೆ ಕೊಂಡುಕೊಂಡ ಶಾರ್ಟ್ಸ್ನ ಬಟ್ಟೆ ತೆಳ್ಳಗಿದ್ದರೆ, ಅಥವಾ ಸ್ವಲ್ಪ ಪಾರದರ್ಶಕವಾಗಿದ್ದರೆ, ಬಟ್ಟೆಯ ಕೆಳಗಡೆ ಸೈಕ್ಲಿಂಗ್‌ ಶಾರ್ಟ್ಸ್ ತೊಡಬೇಕಾಗುತ್ತದೆ. ತಿಳಿ ಬಣ್ಣದ ಬಟ್ಟೆಗೆ ಬಿಳಿ ಅಥವಾ ಮೈಬಣ್ಣದ ಸೈಕ್ಲಿಂಗ್‌ ಶಾರ್ಟ್ಸ್ ಉತ್ತಮ. ಗಾಢವಾದ ಬಣ್ಣದ ಶಾರ್ಟ್ಸ್ ಬಟ್ಟೆಯೂ ಕೆಲವೊಮ್ಮೆ ಪಾರದರ್ಶಕವಾರುತ್ತವೆ. ಆಗ ಅವುಗಳ ಜೊತೆ ಕಪ್ಪು, ನೀಲಿ ಅಥವಾ ಹಸಿರು, ಕಂದು, ಮುಂತಾದ ಬಣ್ಣದ ಸೈಕ್ಲಿಂಗ್‌ ಶಾರ್ಟ್ಸ್ ತೊಡಬಹುದು. 

ಹರಿದರೆ ಚೆನ್ನ
ಹರಿದ ಜೀನ್ಸ್‌ ಪ್ಯಾಂಟ್‌ನಂಥದೇ ಬಗೆ ಈ ನೀ ಲೆಂತ್‌ ಶಾರ್ಟ್ಸ್ನಲ್ಲೂ ಸಿಗುತ್ತವೆ. ಮನೆಗಳಲ್ಲಿ ಹಳೆಯ, ಗಿಡ್ಡವೆಂದು ತೊಡದ ಜೀನ್ಸ್‌ ಪ್ಯಾಂಟ್‌ ಏನಾದರೂ ಇದ್ದರೆ ಅವುಗಳನ್ನು ಕತ್ತರಿಸಿ ನೀ ಲೆಂತ್‌ ಶಾರ್ಟ್ಸ್ ಆಗಿ ಮಾರ್ಪಡಿಸಬಹುದು. ಅಂಥ ಪ್ಯಾಂಟನ್ನು ಮೊಣಕಾಲಿನ ಉದ್ದಕ್ಕೆ ಮಡಚಿ,  ಹೊಲಿಸಿದರೆ ಆಯಿತು! ನಿಮ್ಮ ಹೊಸ ನೀ ಲೆಂಥ್‌ ಶಾರ್ಟ್ಸ್ ರೆಡಿ. ಇದಕ್ಕೆ ಬಿಗಿ, ಸಡಿಲ, ಸ್ಲಿಂ ಫಿಟ್‌, ಪ್ಯಾರಲಲ್‌, ಬೆಲ್‌ ಬಾಟಂ, ಬೂಟ್‌ ಕಟ್‌ ಎಂಬ ಯಾವ ತಾರತಮ್ಯವೂ ಇಲ್ಲ. ಎಲ್ಲಾ ಅಥವಾ ಯಾವುದೇ ತರಹದ ಪ್ಯಾಂಟ್‌ ಅನ್ನು ಆಲ್ಟರ್‌ ಮಾಡಿಸಬಹುದು. 

Advertisement

ಪ್ಯಾಂಟ್‌ನಷ್ಟೇ ಜೇಬುಗಳಿವೆ
ಇವುಗಳಲ್ಲಿ ಗುಂಡಿ (ಬಟನ್‌), ಜಿಪ್‌, ಇಲಾಸ್ಟಿಕ್‌, ಲಾಡಿ, ವೆಲೊ ಮುಂತಾದ ಆಯ್ಕೆಗಳು ಲಭ್ಯ ಇವೆ. ಫಾರ್ಮಲ್‌ ಪ್ಯಾಂಟ್‌ನಂತೆ ಮುಂದೆರಡು, ಹಿಂದೆರಡು ಜೇಬುಗಳು ಇರುವ ಶಾರ್ಟ್ಸ್ ಸಿಗುತ್ತವೆ. ಕಾರ್ಗೊ ಪ್ಯಾಂಟ್‌ನಂಥ ಜೇಬುಗಳೇ ತುಂಬಿದ ಶಾರ್ಟ್ಸ್ ಕೂಡ ಸಿಗುತ್ತವೆ. 

ಅದಿತಿ ಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next