Advertisement
ಮೇಘಾಲಯ ಜೂ.6ರವರೆಗೆ ಲಾಕ್‌ಡೌನ್ ಮುಂದುವರಿಸಿದೆ. ಕೇಂದ್ರದ ಘೋಷಣೆ ಹೊರ ಬೀಳುವ ಮೊದಲೇ ಶನಿವಾರದಂದು, ಮಧ್ಯಪ್ರದೇಶ ಸರಕಾರ ತನ್ನ ವ್ಯಾಪ್ತಿಯಲ್ಲಿನ ಲಾಕ್‌ಡೌನ್ ಅನ್ನು ಜೂ. 30ರವರೆಗೆ ಮುಂದುವರಿಸುವುದಾಗಿ ಆದೇಶ ಹೊರಡಿಸಿತ್ತು.
ಅಂದಿನಿಂದ, ಕ್ರೀಡಾ ಸಮುಚ್ಛಯಗಳನ್ನು ಆರಂಭಿಸಲು ಅನುಮತಿ ನೀಡಲಾಗಿದ್ದು, ಜೂ. 5ರಿಂದ ಮಾರುಕಟ್ಟೆ – ಅಂಗಡಿಗಳಿಗೆ ಹಾಗೂ ಜೂ. 8ರಿಂದ ಖಾಸಗಿ ಕಂಪನಿಗಳಿಗೆ ಸೇವೆ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಇಲ್ಲೂ ಕೆಲವು ನಿಯಮಗಳನ್ನು ವಿಧಿಸಲಾಗಿದೆ. ಸ್ಥಳೀಯ ರೈಲುಗಳಿಗೆ ಅವಕಾಶ ನೀಡಲಾಗಿಲ್ಲ. ಜೂ. 5ರಿಂದ ಮಹಾರಾಷ್ಟ್ರದಲ್ಲಿ ಮಾಲ್‌ಗಳನ್ನು ಹೊರತುಪಡಿಸಿದಂತೆ, ಮಾರುಕಟ್ಟೆಗಳು, ಅಂಗಡಿಗಳನ್ನು ಪ್ರತಿ ದಿನ ಸಮ-ಬೆಸ ಆಧಾರದಲ್ಲಿ ತೆರೆಯುವಂತೆ ಆದೇಶಿಸಲಾಗಿದೆ. ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವ್ಯಾಪಾರ -ವಹಿವಾಟಿಗೆ ಅವಕಾಶವಿರುತ್ತದೆ. ಇನ್ನು, ಜೂ. 8ರಿಂದ ಮಹಾರಾಷ್ಟ್ರದ ಎಲ್ಲಾ ಖಾಸಗಿ ಕಚೇರಿಗಳು ತಮಗೆ ಅಗತ್ಯವಿರುವ ಶೇ. 10ರಷ್ಟು ಉದ್ಯೋಗಿಗಳನ್ನು ಇಟ್ಟುಕೊಂಡು ಕಚೇರಿಗಳನ್ನು ಪುನರಾರಂಭಿಸಬಹುದು.
Related Articles
Advertisement
ಉತ್ತರ ಪ್ರದೇಶಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶದಲ್ಲಿ, ಜೂ. 8ರಿಂದ ಪ್ರಾರ್ಥನಾ ಸ್ಥಳಗಳು, ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಶಾಪಿಂಗ್ ಮಾಲ್‌ಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿಸಲಾಗುತ್ತದೆ. ಜೂ. 1ರಿಂದಲೇ ರಾಜ್ಯಾದ್ಯಂತ ಬಸ್ ಸಂಚಾರ ಆರಂಭಿಸಲಾಗುತ್ತದೆ. ತೆಲಂಗಾಣ
ಕಂಟೈನ್‌ಮೆಂಟ್ ವಲಯಗಳಲ್ಲಿ ಜೂ. 30ರವರೆಗೆ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸುವ ಕೇಂದ್ರದ ನಿರ್ಧಾರಕ್ಕೆ ತಾವು ಬದ್ಧರಿರುವುದಾಗಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತಿಳಿಸಿದ್ದಾರೆ. ಜೂ. 7ರ ನಂತರ ಕಂಟೈನ್‌ಮೆಂಟ್ ಹೊರತಾದ ವಲಯಗಳಲ್ಲಿ ಈಗ ಜಾರಿಯಲ್ಲಿರುವ ನಿಬಂಧನೆಗಳನ್ನು ಮತ್ತಷ್ಟು ಸಡಿಲಗೊಳಿಸಲಾಗುತ್ತದೆ. ರಾಜ್ಯಾದ್ಯಂತ ಅಂಗಡಿಗಳನ್ನು ರಾತ್ರಿ 8ಕ್ಕೆ ಮುಚ್ಚಬೇಕು ಎಂದು ಸೂಚಿಸಲಾಗಿದ್ದು, ಅಂತರ ರಾಜ್ಯ ರಸ್ತೆ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಅವರು ಹೇಳಿದ್ದಾರೆ. ತಮಿಳುನಾಡು
ಲಾಕ್‌ಡೌನ್ ಅನ್ನು ಜೂ. 30ರವರೆಗೆ ಮುಂದುವರಿಸಲಾಗಿದ್ದರೂ, ಸಾರಿಗೆ ಸಂಚಾರ, ಕಚೇರಿಗಳ ಪುನರಾರಂಭ ಸೇರಿದಂತೆ ಕೆಲವು ವಲಯಗಳಿಗೆ ವಿಧಿಸಲಾಗಿರುವ ನಿಬಂಧನೆಗಳಲ್ಲಿ ಹೆಚ್ಚಿನ ಸಡಿಲಿಕೆ ಮಾಡುವುದಾಗಿ ಸರಕಾರ ತಿಳಿಸಿದೆ. ಪ್ರಾರ್ಥನಾ ಸ್ಥಳಗಳು, ಧಾರ್ಮಿಕ ಸಮಾವೇಶಗಳು, ಅಂತರ ರಾಜ್ಯ ಬಸ್ ಸೇವೆಗಳು, ಮೆಟ್ರೋ ಹಾಗೂ ರೈಲು ಸೇವೆಗಳ ಮೇಲಿನ ನಿರ್ಬಂಧ ಮುಂದುವರಿಯಲಿವೆ. ನೀಲಗಿರಿ ಬೆಟ್ಟಗಳು, ಕೊಡೈಕೆನಾಲ್ ಹಾಗೂ ಯೆರ್ಚೂಡ್ ನಗರಗಳಿಗೆ ಪ್ರವಾಸಿಗರ ನಿರ್ಬಂಧ ಮುಂದುವರಿಯಲಿದೆ. ಹೋಟೆಲ್‌ಗಳು, ರೆಸಾರ್ಟ್‌ಗಳು ಬಂದ್ ಆಗಿರಲಿವೆ. ಗುಜರಾತ್
ಗುಜರಾತ್‌ನಲ್ಲಿ ರಾಜ್ಯ ಸಾರಿಗೆಯನ್ನು ರಾಜ್ಯವ್ಯಾಪಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲಿಯೂ ಸಮ-ಬೆಸ ಆಧಾರದಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಎಲ್ಲರಿಗೂ ಫೇಸ್ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯಗೊಳಿಸಲಾಗುತ್ತದೆ. ಮೇಘಾಲಯ
ಇಲ್ಲಿ ಲಾಕ್‌ಡೌನ್‌ನ ಈಗಿನ ನಿಯಮಗಳನ್ನು ಜೂ. 6ರವರೆಗೆ ಮುಂದೂಡಿದ್ದರೂ, ಈವರೆಗೆ ನೀಡಲಾಗಿರುವ ಸಡಿಲಿಕೆಗಳಿಗಿಂತ ಹೆಚ್ಚಿನ ಸಡಿಲಿಕೆಗಳನ್ನು ನೀಡಲಾಗಿದೆ. ಅತಿ ಹೆಚ್ಚು ಅಂಗಡಿಗಳು, ಶೋರೂಂಗಳು ಇರುವ ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಜೂ. 3ರಿಂದ 6ರವರೆಗೆ ವ್ಯಾಪಾರ – ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಇದೇ ಜಿಲ್ಲೆಯಲ್ಲಿ ರಾಜ್ಯದ ರಾಜಧಾನಿ ಶಿಲ್ಲಾಂಗ್ ಕೂಡ ಇದೆ.