ಸ್ವಂತ ಮನೆ ಹೊಂದಬೇಕು ಎಂಬುದು ನನಗಿದ್ದ ಬಹು ವರ್ಷಗಳ ಕನಸು. ಇಷ್ಟು ವರ್ಷಗಳವರೆಗೆ ಹಂಬಲಿಸಿ, ಹಂಬಲಿಸಿ ಹಣ ಕೂಡಿಟ್ಟ ಫಲವಾಗಿ, ಅಂತೂ ಕಡೆಗೆ ಹೊಸ ಮನೆಯ ಕನಸು ನನಸಾಯಿತು. ಆದರೆ, ನೆಂಟರಿಷ್ಟರನ್ನೆಲ್ಲ ಕರೆದು ಗೃಹ ಪ್ರವೇಶ ಮಾಡುವ ಆಸೆ ಮಾತ್ರ ಕೈಗೂಡಲಿಲ್ಲ.
ಯಾಕಂದ್ರೆ, ಕೋವಿಡ್ ಭಯ. ಶುಭ ಸಮಾರಂಭಗಳಿಗೆ 50ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂಬ ಸರ್ಕಾರಿ ನಿಯಮ ಬೇರೆ. ಬರೀ 50ರ ಲೆಕ್ಕದಲ್ಲಿ ಬಂಧು ಗಳನ್ನು ಸೆಲೆಕ್ಟ್ ಮಾಡುವುದು ಹೇಗೆ? ಒಬ್ಬರನ್ನು ಕರೆದರೆ, ಇಬ್ಬರನ್ನು ಬಿಡಬೇಕಾಗುತ್ತದೆ. ಹಾಗೆ ಕರೆದೆವು ಅಂತಾನೇ ಇಟ್ಟು ಕೊಂಡರೂ,
ಗೃಹಪ್ರವೇಶಕ್ಕೆ ಬಂದವರಲ್ಲೇ ಯಾರಾದರೂ ಒಬ್ಬರಿಗೆ ಕೋವಿಡ್ ಸೋಂಕು ಇದ್ದರೆ ಗತಿಯೇನು? ಹಾಗಂತ, ಪೂಜೆ ಮಾಡದೆ ಹೊಸ ಮನೆ ಪ್ರವೇಶಿಸಲೂ ಮನಸ್ಸು ಒಪ್ಪುವುದಿಲ್ಲ. ಕಡೆಗೆ, ಒಂದು ನಿರ್ಧಾರಕ್ಕೆ ಬಂದೆವು. ಆ ಪ್ರಕಾರ- ಸಣ್ಣದಾಗಿ ಹೋಮ ಮಾಡಿ, ಅಕ್ಕ- ತಂಗಿ, ಅಣ್ಣ- ತಮ್ಮಂದಿರನ್ನು ಮಾತ್ರ ಕರೆದು, ಚಿಕ್ಕ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ನಮ್ಮ ಮನೆಯಲ್ಲಿ ನಡೆದ ಮೊದಲ ಕಾರ್ಯಕ್ರಮ ಅದು. ಆ ನಿಮಿತ್ತ ಅಕ್ಕ- ತಂಗಿಯರಿಗೆ ಸೀರೆ ಕೊಡಿಸಬೇಕಿತ್ತು.
ಲಾಕ್‌ಡೌನ್ ಮುಗಿದಿದ್ದೇ ತಡ, ಅಂಗಡಿಗಳೆಲ್ಲ ಮೊದಲಿನಂತೆ ತೆರೆಯಲ್ಪಟ್ಟರೂ, ಎಲ್ಲವೂ ಮೊದಲಿನಂತೆ ಇಲ್ಲ ಅನ್ನೋದು ಶಾಪಿಂಗ್‌ಗೆ ಹೋದಾಗಲೇ ಗೊತ್ತಾಗಿದ್ದು. ತುಂಬಾ ಸೀರೆ ಖರೀದಿಸಬೇಕಿದ್ದುದರಿಂದ, ದೊಡ್ಡ ಮಳಿಗೆಗೇ ಹೋಗಿದ್ದೆವು. ಬಾಗಿಲಿನಲ್ಲೇ ನಮ್ಮನ್ನು ತಡೆದ ಸೆಕ್ಯುರಿಟಿ ಯವ, ಹಣೆಗೆ ಮೆಷಿನ್ ಹಿಡಿದು ಟೆಂಪ ರೇಚರ್ ಚೆಕ್ ಮಾಡಿದ. ನಂತರ, ಕೈಗೆ ಸ್ಯಾನಿ ಟೈಸರ್ ಸುರಿದು ಒಳಗೆ ಬಿಟ್ಟ. ಒಳಗೆ ನೋಡಿದರೆ, ಎಲ್ಲರೂ ಮಾಸ್ಕ್- ಗ್ಲೌಸ್‌ಧಾರಿಗಳೇ. ದೂರ ದೂರದಲ್ಲಿ ನಿಂತಿದ್ದ ಅವರಲ್ಲೊಬ್ಬ ಬಳಿ ಬಂದು, ನಮಗೆ ಬೇಕಾದ ರೀತಿಯ ಒಂದಷ್ಟು ಸೀರೆಗಳನ್ನು ತೆಗೆದು ತೋರಿಸಿದ. ನಾನು ಅಭ್ಯಾಸ ಬಲದಂತೆ ಸೀರೆಯನ್ನು ಮುಟ್ಟಲು ಹೋದೆ. “ಮೇಡಂ, ನಾನೇ ತೋರಿಸುತ್ತೇನೆ. ನೀವು ಮುಟ್ಟಬೇಡಿ’ ಅಂದ. ಅರೆ, ಮುಟ್ಟಿ ನೋಡದೆ ಕ್ವಾಲಿಟಿ ಹೇಗೆ ಗೊತ್ತಾಗುತ್ತೆ? ಅಂತ ಕೇಳಿದರೆ, ನಾವು ಉತ್ತಮ ಗುಣಮಟ್ಟದ್ದನ್ನು ಮಾತ್ರವೇ ಮಾರುವುದು’ ಎಂಬ ಉತ್ತರ ಬಂತು. ಸೀರೆಯ ಅಂಚು ಮುಟ್ಟಿ ನೋಡಿ, ಒಮ್ಮೆ ಸೆರಗನ್ನು ಹೆಗಲ ಮೇಲೆ ಹಾಕಿ ನೋಡದೆ, ಸೀರೆಯ ಅಂದ ಹೇಗೆ ತಿಳಿಯುತ್ತದೆ? ಸುಮ್ಮನೆ ಒಮ್ಮೆ ಮುಟ್ಟಿನೋಡಿ ಖರೀದಿ ಮಾಡಲು ಅದೇನು ಪಂಚೆಯೇ? ಅಥವಾ ಲುಂಗಿಯೇ? ಸೀರೆಗಳನ್ನೂ ದೂರದಿಂದಲೇ ನೋಡಬೇಕು ಎಂಬ ನಿಯಮ ಮಾಡಲಾಗಿದೆ ಎಂದು ಮೊದಲೇ ಗೊತ್ತಿದ್ದರೆ, ಆನ್‌ಲೈನ್ ನಲ್ಲಿಯೇ ಕೊಳ್ಳುತ್ತಿದ್ದೆವು. ಆನ್‌ಲೈನ್‌ನಲ್ಲಿ ಒಂದಲ್ಲ, 4 ಬಾರಿ ಎಕ್ಸ್‌ಚೇಂಜ್ ಮಾಡಲು ಅವಕಾಶವಿದೆ. ಅವರೇ ಬಂದು ತಗೊಂಡು ಹೋಗ್ತಾರೆ, ತಂದುಕೊಡ್ತಾರೆ ಅಂತೆಲ್ಲಾ ಜೊತೆಗಿದ್ದ ಅಕ್ಕ ಗೊಣಗಿದಳು. ಒಂದನ್ನಾದರೆ ಹೇಗೋ ಖರೀದಿಸಬಹುದಿತ್ತು. ಆದರೆ ನಮಗೆ ಹತ್ತಿಪ್ಪತ್ತು ಸೀರೆಗಳು ಅಗತ್ಯವಾಗಿ ಬೇಕಿದ್ದವು. ಗೃಹಪ್ರವೇಶದ ಕಾರ್ಯಕ್ರಮಕ್ಕೆ ಮಾತ್ರವಲ್ಲ; ಗೌರಿ ಹಬ್ಬಕ್ಕೂ ಒಂದಷ್ಟು ಬಟ್ಟೆಗಳನ್ನು ಖರೀದಿಸಬೇಕು ಎಂಬ ಯೋಚನೆಯೂ ನಮಗಿತ್ತು. ಆದರೆ, ಮುಟ್ಟಿ ನೋಡದೆ ಗುಣಮಟ್ಟ ತಿಳಿಯುವುದಾದರೂ ಹೇಗೆ? ಬೇಕಾಬಿಟ್ಟಿಯಾಗಿ ಖರೀದಿಸಲು ಮನಸ್ಸು ಬಾರದೆ, ಅಲ್ಲಿಂದ ವಾಪಸ್ ಬಂದೆವು.
“ಎಲ್ಲರೂ ಮುಟ್ಟಿ ನೋಡಿದ್ದನ್ನು ನೀವು ಮುಟ್ಟುವುದು, ನೀವು ಮುಟ್ಟಿದ ಸೀರೆ ಯನ್ನು ಬೇರೆಯವರು ಮುಟ್ಟುವುದು ಇಂಥ ಸಮಯದಲ್ಲಿ ಎಷ್ಟು ಸುರಕ್ಷಿತ? ನೀವೇ ಹೇಳಿ’ ಅಂದ ಮ್ಯಾನೇಜರ್‌ನ ಮಾತು ಅಕ್ಕನಿಗೆ ಇಷ್ಟವಾಗಲಿಲ್ಲ. ನನಗೂ… ಈ ರೀತಿ ನಿಯಮ ಹೇರುವ ದೊಡ್ಡ ದೊಡ್ಡ ಅಂಗಡಿಗಳ ಸಹವಾಸವೇ ಬೇಡ ಅನ್ನುತ್ತಾ ಒಂದು ಚಿಕ್ಕ ಸೀರೆ ಅಂಗಡಿಗೆ ಹೋದೆವು. ಅಲ್ಲಿ ನಮ್ಮ ತಲೆಬಿಸಿ (ದೇಹದ ಉಷ್ಣಾಂಶ) ಚೆಕ್ ಮಾಡೋಕೆ ಸೆಕ್ಯುರಿಟಿಯವನಿ ರಲಿಲ್ಲ. ನಮ್ಮಂತೆಯೇ ಇನ್ನೂ ಎರಡೂ¾ರು ಗ್ರಾಹಕರಿದ್ದರು. ತಮಗೆ ಬೇಕಾದ ಬಟ್ಟೆಗಳನ್ನು ಆನಂದದಿಂದ ಮುಟ್ಟಿ ನೋಡುತ್ತಿದ್ದರು. ಪಕ್ಕದಲ್ಲಿ ಸ್ಯಾನಿಟೈಸರ್ ಇತ್ತಾದರೂ, ಯಾರೂ ಅದನ್ನು ಬಳಸಿದಂತೆ ಕಾಣಿಸಲಿಲ್ಲ. ಕೆಲವರ ಮಾಸ್ಕ್ ಮೂಗು- ಬಾಯಿಂದ ಗಲ್ಲಕ್ಕೆ ಇಳಿದು ಕೂತಿತ್ತು.
ಮಾಲೀಕನೂ ಕೊರೊನಾ ಬಗ್ಗೆ ಅರಿವಿಲ್ಲದಂತೆ ಮಾಸ್ಕ್ ಧರಿಸದೆ ನಿಂತಿದ್ದ! ಜೊತೆಗೆ, ಗ್ರಾಹಕರ ಜೊತೆಗೆ ಹಳೆಯ ಪರಿಚಯದವನಂತೆ ಮಾತಾಡಲೂ ತೊಡಗಿದ್ದ. ಈಗಾಗಲೇ ಬಹಳಷ್ಟು ಜನ ನೋಡಿ ಬಿಟ್ಟಿದ್ದ ಸೀರೆಯ ರಾಶಿಯಿಂದಲೇ ಕೆಲವು ಸೀರೆಗಳನ್ನು ನಮಗೆ ತೋರಿಸಿದ. ಮುಟ್ಟಬೇಡಿ ಎಂದು ನಮಗೆ ಯಾರೂ ಹೇಳಲಿಲ್ಲ. ಆದರೆ, ಅವನ್ನು ಮುಟ್ಟಲು ನಮಗೇ ಹೆದರಿಕೆಯಾಯ್ತು. ಈ ಅಂಗಡಿಯಲ್ಲಿ ಗ್ರಾಹಕರ ದೇಹದ ತಾಪಮಾನ ನೋಡಿಲ್ಲ, ಇಲ್ಲಿರುವ ಜನ ಮಾಸ್ಕ್ ಕೂಡಾ ಧರಿಸಿಲ್ಲ.
ಎಲ್ಲರೂ ಬೇಕಾಬಿಟ್ಟಿ ವರ್ತಿಸುತ್ತಿದ್ದರು. ಅದನ್ನು ಕಂಡ ಮೇಲೆ, ಅಲ್ಲಿ ಜಾಸ್ತಿ ಹೊತ್ತು ನಿಲ್ಲಲೂ ಧೈರ್ಯವಾಗಲಿಲ್ಲ. ಎರಡು ನಿಮಿಷದಲ್ಲೇ ಅಲ್ಲಿಂದ ಹೊರಬಿದ್ದೆವು. ಸೀರೆ ಕೊಡದೆಯೂ ಗೃಹ ಪ್ರವೇಶ ನಡೆಯುತ್ತದೆ, ಗೌರಿ ಹಬ್ಬ ಮುಗಿದ ನಂತರವೇ ಒಂದಷ್ಟು ಬಟ್ಟೆ ಖರೀದಿಸಿದರಾಯ್ತು ಅಂತ ಸಮಾಧಾನ ಮಾಡಿಕೊಂಡು, ಬೇರಾವ ಅಂಗಡಿಗೂ ಹೋಗದೆ ಅವತ್ತು ಮನೆಗೆ ಬಂದುಬಿಟ್ಟೆ. ಮೊದಲೆಲ್ಲ ಶಾಪಿಂಗ್ ಎಂದರೆ ಎಷ್ಟು ಖುಷಿಯಿರುತ್ತಿತ್ತು. ಆದರೆ ಈಗ?
– ವೀಣಾ ಜಯಶಂಕರ್