ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಶುಕ್ರವಾರ ಬೆಳಗ್ಗೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಉಂಟಾದ ಎನ್‌ಕೌಂಟರ್ ನಲ್ಲಿ ಕನಿಷ್ಠ ಒಬ್ಬ ಭಯೋತ್ಪಾದಕ ಹತನಾಗಿರುವುದಾಗಿ ಸೇನಾ ಮೂಲಗಳು ತಿಳಿಸಿವೆ.
ಶೋಪಿಯಾನ್ ಜಿಲ್ಲೆಯ ರತ್ನಿಪೋರಾ ಪ್ರದೇಶದಲ್ಲಿ ಈಗಲೂ ಎನ್‌ಕೌಂಟರ್ ಸಾಗಿದ್ದು ತೀವ್ರ ಗುಂಡಿನ ಕಾಳಗ ಮುಂದುವರಿದಿರುವುದಾಗಿ ಮೂಲಗಳು ತಿಳಿಸಿವೆ.
ಜಮ್ಮು ಕಾಶ್ಮೀರ ಪೊಲೀಸರ ಪ್ರಕಾರ ಕನಿಷ್ಠ ಇಬ್ಬರು ಅಥವಾ ಮೂವರು ಉಗ್ರರು ಇಲ್ಲಿನ ಮನೆಯೊಂದರಲ್ಲಿ ಅಡಗಿಕೊಂಡಿದ್ದಾರೆ. ಅವರನ್ನು ಹೊರಗಟ್ಟುವ ಕಾರ್ಯಾಚರಣೆ ಮುಂದುವರಿದಿದೆ.
34ನೇ ರಾಷ್ಟ್ರೀಯ ರೈಫಲ್ಸ್, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಹಾಗೂ ಜಮ್ಮು ಕಾಶ್ಮೀರ ವಿಶೇಷ ಕಾರ್ಯಾಚರಣೆ ಸಮೂಹ (ಎಸ್‌ಓಜಿ) ಜತೆಗೂಡಿ ಜಂಟಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು ಇಡಿಯ ಪ್ರದೇಶವನ್ನು ಸುತ್ತುವರಿದಿವೆ.
ಈ ಪ್ರದೇಶದಲ್ಲಿನ ಮನೆಯೊಂದರಲ್ಲಿ ಉಗ್ರರು ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ದೊರಕಿದುದನ್ನು ಅನುಸರಿಸಿ ಇಂದು ಬೆಳಗ್ಗೆ ಎನ್‌ಕೌಂಟರ್ ನಡೆಸಲಾಯಿತೆಂದು ಭದ್ರತಾ ಮೂಲಗಳು ತಿಳಿಸಿವೆ.