ಜಮ್ಮು ಕಾಶ್ಮೀರ : ಶೋಪಿಯಾನ್ ಜಿಲ್ಲೆಯಲ್ಲಿಂದು ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಉಗ್ರರ ಶೋಧ ಕಾರ್ಯಾಚರಣೆಗೆ ಅಡ್ಡಿ ಪಡಿಸಿ ಕಲ್ಲೆಸೆತದಲ್ಲಿ ತೊಡಗಿದ ಸ್ಥಳೀಯರೊಂದಿಗೆ ಭದ್ರತಾ ಪಡೆಗಳ ಕಾಳಗ ನಡೆಯುತ್ತಿದ್ದಾಗ ಅಡ್ಡ ಬಂದ 24ರ ಹರೆಯದ ಮಹಿಳೆಯೊಬ್ಬರು ಅಸು ನೀಗಿರುವುದಾಗಿ ವರದಿಯಾಗಿದೆ.
ದಕ್ಷಿಣ ಕಾಶ್ಮೀರದ ಭಾತ್‌ಮಾರನ್ ಗ್ರಾಮದಲ್ಲಿ ಭದ್ರತಾ ಪಡೆಗಳು ಮತ್ತು ಸ್ಥಳೀಯರ ನಡುವೆ ಕಾಳಗ ನಡೆಯುತ್ತಿದ್ದ ವೇಳೆ ಅಡ್ಡ ಬಂದು ಹತಳಾದ ಮಹಿಳೆಯನ್ನು ಮಜೂರ್ ಅಹ್ಮದ್ ಎಂಬವರ ಪತ್ನಿ ಬ್ಯೂಟಿ ಜಾನ್ ಎಂದು ಗುರುತಿಸಲಾಗಿದೆ.
ಗುಂಡೇಟಿಗೆ ಗುರಿಯಾಗಿ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಒಡನೆಯೇ ಆಸ್ಪತ್ರೆಗೆ ಸಾಗಿಸಲಾಯಿತು.ಆದರೆ ಮಾರ್ಗ ಮಧ್ಯದಲ್ಲೇ ಆಕೆ ಕೊನೆಯುಸಿರೆಳೆದಳು.
ಈ ಎನ್‌ಕೌಂಟರ್ ತಾಣದಲ್ಲಿ ಮೂರನೇ ಉಗ್ರನೋರ್ವ ಇನ್ನೂ ಅಡಗಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿರುವ ಡಿಐಜಿ ಎಸ್ ಪಿ ಪಾಣಿ ಅವರು ಮಹಿಳೆ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಭದ್ರತಾ ಪಡೆಗಳಂದ ಹತನಾದ ಉಗ್ರರಲ್ಲಿ ಒಬ್ಬನು ವಿದೇಶೀ ಉಗ್ರನಾಗಿದ್ದಾನೆ; ಇನ್ನೊಬ್ಬ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಸ್ಥಳೀಯ ವ್ಯಕ್ತಿಯಾಗಿದ್ದಾನೆ ಎಂದು ಪಾಣಿ ತಿಳಿಸಿದರು.