Advertisement

ಕೋರ್ಟ್‌ ಆಜ್ಞೆ ಉಲ್ಲಂಘಿಸಿ ಮಳಿಗೆ ಹರಾಜು!

09:50 PM Dec 15, 2019 | Lakshmi GovindaRaj |

ಹುಳಿಯಾರು: ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳ ಇ-ಹರಾಜಿಗೆ ಉತ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಆದೇಶ ಉಲ್ಲಂಘಿಸಿ ಇ-ಹರಾಜು ಪ್ರಕ್ರಿಯೆ ನಡೆದಿದೆ. ಆದರೆ ಅಧಿಕಾರಿಗಳು ಒಬ್ಬರ ಮೇಲೊಬ್ಬರ ಮೇಲೆ ಗೂಬೆ ಕೂರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.

Advertisement

ಪಪಂನ 52 ವಾಣಿಜ್ಯ ಮಳಿಗೆಗಳನ್ನು 3-4ದಶಕಗಳಿಂದ ಕಾನೂನು ಬಾಹಿರವಾಗಿ ಹಾಲಿ ಬಾಡಿಗೆದಾರರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ನವೀಕರಿಸಿ ಕೊಡುತ್ತಿದ್ದು, ಇದರಿಂದ ಪಪಂ ಅಧಿವೃದ್ಧಿಗೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದರು. ಅದರಂತೆ 52 ಮಳಿಗೆಗಳನ್ನೂ ಇ-ಹರಾಜು ಮೂಲಕ ವಿಲೇವಾರಿಗೆ ನಿರ್ಧರಿಸಿ ಪ್ರಕಟಣೆಯನ್ನೂ ಹೊರಡಿಸಿತ್ತು. ಆದರೆ ಹಾಲಿ ಬಾಡಿಗೆದಾರರ ತೆರವು ಮಾಡದೆ ಹರಾಜು ಪ್ರಕ್ರಿಯೆ ನಡೆಸುವುದು ನಿಯಮಬಾಹಿರ ಎಂದು ಹಾಲಿ ಬಾಡಿಗೆದಾರರು ತಡೆಯಾಜ್ಞೆ ತಂದಿದ್ದರು.

6 ವಾರ ತಡೆಯಾಜ್ಞೆ ನೀಡಿತ್ತು: 52 ಮಳಿಗೆಗಳ ಪೈಕಿ ಒಂದು ಮಳಿಗೆಯ ಬಾಡಿಗೆದಾರ ಪುಟ್ಟರಾಜು ಮರಣ ಹೊಂದಿದ್ದರಿಂದ, ಇನ್ನೊಂದು ಮಳಿಗೆಯ ಬಾಡಿಗೆದಾರ ಡಿ.ಆರ್‌.ನರೇಂದ್ರಬಾಬು ಕೋರ್ಟ್‌ ಮೆಟ್ಟಿಲೇರಲು ಇಚ್ಛಿಸದ್ದರಿಂದ 50 ಮಳಿಗೆಗಳ ಇ-ಹರಾಜಿಗೆ ಕೋರ್ಟ್‌ 2019 ಡಿ.2 ಮತ್ತು ಡಿ.9 (ಎರಡು ಪ್ರತ್ಯೇಕ) ರಂದು 6 ವಾರ ತಡೆಯಾಜ್ಞೆ ನೀಡಿತ್ತು. ಅದರಂತೆ ಹುಳಿಯಾರು ಪಪಂ ಮುಖ್ಯಾಧಿಕಾರಿ ಇ-ಹರಾಜು ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ನೋಟಿಸ್‌ ನೀಡಿದ್ದರು.

ಆದರೆ 52 ಮಳಿಗೆಗಳ ಪೈಕಿ 13 ಮಳಿಗೆ ಇ-ಹರಾಜು ಮಾಡಲಾಗಿದ್ದು, ಇದರಲ್ಲಿ 1 ಮಳಿಗೆ 16 ಸಾವಿರಕ್ಕೂ ಹೆಚ್ಚಿನ ಮಾಸಿಕ ಬಾಡಿಗೆಗೆ ವಿಲೆಯಾಗಿದೆ. ಇತ್ತ ಕೋರ್ಟ್‌ ತಡೆಯಾಜ್ಞೆ ಇದ್ದರೂ ಅತ್ತ ಪಪಂ ಅಧಿಕಾರಿ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದರೂ ಇ-ಹರಾಜು ನಡೆದಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ಬಗ್ಗೆ ಆಡಳಿತಾಧಿಕಾರಿಗಳನ್ನು ಪ್ರಶ್ನಿಸಿದರೆ ಯೋಜನಾ ನಿರ್ದೇಶಕರತ್ತ ಕೈ ತೋರಿಸುತ್ತಾರೆ. ಯೋಜನಾ ನಿರ್ದೆಶಕರನ್ನು ಪ್ರಶ್ನಿಸಿದರೆ ಪಪಂ ಅಧಿಕಾರಿಗಳ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾರೆ.

ಸಾರ್ವಜನಿಕರ ಆಕ್ರೋಶ: ಅಧಿಕಾರಿಗಳು ಒಬ್ಬರ ಮೇಲೋಬ್ಬರು ಜವಾವಾªರಿ ವರ್ಗಾಯಿಸಿ ನುಣುಚಿಕೊಳ್ಳುತ್ತಿದ್ದು, ನ್ಯಾಯಾಲಯದ ತಡೆಯಾಜ್ಞೆ ಸ್ಪಷ್ಟವಾಗಿ ಉಲ್ಲಂಘನೆಯಾಗಿದೆ ಎಂಬುದನ್ನು ಸಾಬೀತು ಮಾಡಿದೆ. ಇದರಿಂದ ತಡೆಯಾಜ್ಞೆ ತಂದವರ ನೆಮ್ಮದಿ ಹಾಳಾಗಿದೆ. ಅಲ್ಲದೆ ಪಪಂ ಅಧಿಕಾರಿಯ ತಾತ್ಕಾಲಿಕ ಸ್ಥಗಿತದ ಹೇಳಿಕೆ ನಂಬಿ ಅನೇಕರು ಇ-ಹರಾಜು ಪ್ರಕ್ರಿಯೆಯಿಂದ ವಂಚಿತರಾಗಿದ್ದಾರೆ. ಇದು ಸಹಜವಾಗಿಯೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಡೆಯಾಜ್ಞೆ ತಂದವರು ಮತ್ತೆ ಕೋರ್ಟ್‌ ಮೆಟ್ಟಿಲೇರುತ್ತಿದ್ದು, ಯಾವ ಅಧಿಕಾರಿಗಳ ತಲೆದಂಡವಾಗಲಿದೆ ಎಂಬುದು ಕಾದು ನೋಡಬೇಕು.

Advertisement

ಹರಾಜು ನಡೆದ ಮಳಿಗೆಗಳು: 50 ಮಳಿಗೆಗಳಿಗೆ ಕೋರ್ಟ್‌ ತಡೆಯಾಜ್ಞೆ ನೀಡಿದ್ದರೂ ಕೋರ್ಟ್‌ ಆಜ್ಞೆ ಉಲ್ಲಂಘಿಸಿ 13 ಮಳಿಗೆ ಇ-ಹರಾಜು ಮಾಡಲಾಗಿದೆ. ಇದರಲ್ಲಿ ಎ ಬ್ಲಾಕ್‌ನಲ್ಲಿದ್ದ 22 ಮಳಿಗೆಗಳ ಪೈಕಿ 2, ಬಿ ಬ್ಲಾಕ್‌ನಲ್ಲಿನ 12 ಮಳಿಗೆಗಳ ಪೈಕಿ 3, ಸಿ ಬ್ಲಾಕ್‌ನಲ್ಲಿನ 11 ಮಳಿಗೆಗಳ ಪೈಕಿ 5, ಡಿ.ಬ್ಲಾಕ್‌ನಲ್ಲಿನ 7 ಮಳಿಗೆಗಳ ಪೈಕಿ 2 ಮಳಿಗೆ ಇ-ಹರಾಜು ನಡೆಸಲಾಯಿತು.

13 ಮಳಿಗೆ ಇ-ಹರಾಜು: 52 ಮಳಿಗೆಗಳ ಪೈಕಿ ಮೊದಲ ಹಂತದಲ್ಲಿ 30, ನಂತರದ ಹಂತದಲ್ಲಿ 9 ಒಟ್ಟು 39 ಬಾಡಿಗೆದಾರರು ಇ-ಹರಾಜಿಗೆ ತಡೆಯಾಜ್ಞೆ ತಂದಿದ್ದರು. ಹಾಗಾಗಿ ಉಳಿದ 13 ಮಳಿಗೆ ಇ-ಹರಾಜು ಮಾಡಲಾಗಿದೆ ಎಂಬುದು ಅಧಿಕಾರಿಗಳ ವಲಯದ ವಾದವಾಗಿದೆ. ಆದರೆ ಕೋರ್ಟ್‌ ಮೆಟ್ಟಿಲೇರಿರುವ ಬಾಡಿಗೆದಾರರ ಪೈಕಿ ಕೆಲವರ ಹೆಸರಿಗೆ ಎರಡೆರಡು ಮಳಿಗೆಗಳಿದ್ದು, ಕೋರ್ಟ್‌ ಇವರ ಹೆಸರಿನಲ್ಲಿರುವ ಅಷ್ಟೂ ಮಳಿಗೆಗಳಿಗೆ ತಡೆಯಾಜ್ಞೆ ನೀಡಿದೆ.

ಇ-ಹರಾಜಿಗೆ ತಡೆಯಾಜ್ಞೆ ತಂದಿರುವ ಆದೇಶ ಪ್ರತಿಯನ್ನು ಇ-ಪ್ರಕ್ಯೂರ್‌ವೆುಂಟ್‌ ನಡೆಸುವ ಏಜೆನ್ಸಿಗೆ ನೀಡಿ ಸ್ಥಗಿತಗೊಳಿಸುವಂತೆ ಸೂಚಿಸಿ ಕರ್ತವ್ಯಕ್ಕೆ ರಜೆ ಹಾಕಿ ಕುಟುಂಬ ಸಮೇತ ತಿರುಪತಿಗೆ ತೆರಳಿದ್ದೇನೆ. ಆದರೆ ಕೋರ್ಟ್‌ ಆಜ್ಞೆ ಉಲ್ಲಂಘಿಸಿ ಇ-ಹರಾಜು ನಡೆಸಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸರ್ಕಾರಿ ವಕೀಲರ ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
-ಮಂಜುನಾಥ್‌, ಪಪಂ ಮುಖ್ಯಾಧಿಕಾರಿ, ಹುಳಿಯಾರು

13 ಮಳಿಗೆ ಇ-ಹರಾಜು ಮಾಡಿರುವುದು ನ್ಯಾಯಾಲಯದ ಆಜ್ಞೆ ಉಲ್ಲಂಘಿಸಿರುವುದು ಸ್ಪಷ್ಟವಾಗಿದ್ದು, ತಡೆಯಾಜ್ಞೆ ತಂದವರು ಕೋರ್ಟ್‌ ಮೆಟ್ಟಿಲೇರಿದರೆ ನ್ಯಾಯಾಂಗ ನಿಂದನೆಗೆ ಅಧಿಕಾರಿ ಹೊಣೆಯಾಗಬೇಕಾಗುತ್ತದೆ. ಜೊತೆಗೆ ನ್ಯಾಯಾಂಗ ನೀಡುವ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ತಡೆಯಾಜ್ಞೆ ಉಲ್ಲಂಘಿಸಿ ನಡೆದಿರುವ ಹರಾಜು ವಜಾವಾಗುತ್ತದೆ.
-ಎಚ್‌.ಆರ್‌.ರಮೇಶ್‌ಬಾಬು, ವಕೀಲ, ಹುಳಿಯಾರು

* ಎಚ್‌.ಬಿ.ಕಿರಣ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next