Advertisement

ಬೆಳೆ ರಕ್ಷಣೆಗೆ ಹಾರಿಸುತ್ತಾರೆ ಗುಂಡು

03:45 PM Jun 21, 2018 | Team Udayavani |

ವಾಡಿ: ನೂರಾರು ಕಲ್ಲು ಗಣಿಗಳು ಮತ್ತು ಎತ್ತೆತ್ತಲೂ ಗುಡ್ಡಗಾಡು ಅರಣ್ಯ ಪ್ರದೇಶ ಹೊಂದಿರುವ ನಗರ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ 126 ಬಂದೂಕುಗಳು ಪ್ರತಿನಿತ್ಯ ರಾತ್ರಿಯಾಗುತ್ತಿದ್ದಂತೆ ಸದ್ದು ಮಾಡಲು ಶುರುಮಾಡುತ್ತವೆ. ಹಾಗಂತ ಇದು ಪಾತಕಿಗಳ ಊರಲ್ಲ.. ಬಿತ್ತಿದ ಬೆಳೆ ರಕ್ಷಣೆಗೆ ಈ ಸದ್ದು.

Advertisement

ಚಿತ್ತಾಪುರ ತಾಲೂಕಿನ ಸಿಮೆಂಟ್‌ ನಗರಿ ವಾಡಿ ಪಟ್ಟಣದ ಪೊಲೀಸ್‌ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಕೈಗಳಲ್ಲಿ ಪರವಾನಗಿ ಹೊಂದಿದ ನೂರಾರು ಬಂದೂಕುಗಳು ಸಿಡಿಮದ್ದಿನ ಸದ್ದಿನಾಟದಲ್ಲಿ ತೊಡಗಿವೆ. ಗುಡ್ಡ ಬೆಟ್ಟಗಳಿಂದ ಕೂಡಿದ ಯಾಗಾಪುರ, ಬೆಳಗೇರಾ, ಚೌಕಂಡಿ ತಾಂಡಾ, ಶಿವನಗರ ತಾಂಡಾ, ಹೀರಾಮಣಿ ತಾಂಡಾ, ಲಾಡ್ಲಾಪುರ ಹಾಗೂ ಕುಂಬಾರಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ಬೆಳೆ ನಾಶಪಡಿಸುವ ಕಾಡು ಪ್ರಾಣಿಗಳಿಂದ ಬೇಸತ್ತಿದ್ದಾರೆ. 

ಪರಿಣಾಮ ಕಳೆದ 20 ವರ್ಷಗಳ ಹಿಂದೆ ಪೊಲೀಸ್‌ ಇಲಾಖೆ ನೀಡಿದ ಅಧಿಕೃತ ಪರವಾನಿಗೆಯುಳ್ಳ ಬಂದೂಕುಗಳನ್ನು
ಹೊಂದಿದ್ದಾರೆ. ರೈತರು ಬಳಸುವ ಎಸ್‌ಬಿಎಂಎಲ್‌ ಬಂದೂಕುಗಳ ಸಂಖ್ಯೆ 96, ಡಿಬಿಬಿಎಲ್‌-17,
ಎಸ್‌ಬಿಬಿಎಲ್‌-03, ಡಿಬಿಎಂಎಲ್‌-02. ಆತ್ಮ ರಕ್ಷಣೆಗೆಂದು ಸ್ಥಳೀಯರು ಒಟ್ಟು ಎಂಟು ಅಂದರೆ ಪಿಸ್ತೂಲ್‌-03,
ರಿವಾಲ್ವಾರ್‌-04 ಹಾಗೂ ಒಂದು ರೈಫಲ್‌ಗಳನ್ನು ಹೊಂದಿದ್ದಾರೆ. ಒಟ್ಟಾರೆ 126 ಬಂದೂಕುಗಳಿವೆ.

ಚುನಾವಣೆಗಳು ಘೋಷಣೆಯಾದಾಗ ರೈತರು ಹಾಗೂ ಪ್ರತಿಷ್ಠಿತರು ತಮ್ಮ ಬಂದೂಕುಗಳನ್ನು ಠಾಣೆಗೆ ತಂದು ಜಮೆ ಮಾಡುತ್ತಾರೆ. ಹೀಗೆ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗೂ ಮುಂಚೆ ಪೊಲೀಸರಿಗೆ ಒಪ್ಪಿಸಲಾಗಿದ್ದ ನೂರಾರು ಬಂದೂಕುಗಳನ್ನು ನಾಲ್ಕು ತಿಂಗಳ ನಂತರ ಜೂ.18 ರಂದು ಠಾಣೆಗೆ ಹಾಜರಾಗಿ ವಾಪಸ್‌ ಪಡೆದುಕೊಂಡಿದ್ದಾರೆ.

ಈ ವೇಳೆ ಉದಯವಾಣಿಯೊಂದಿಗೆ ಮಾತನಾಡಿದ ಅನೇಕ ರೈತರು, ಅರಣ್ಯ ಪ್ರದೇಶದಲ್ಲಿ ನಮ್ಮ ಜಮೀನುಗಳಿವೆ.
ರಾತ್ರಿ ವೇಳೆ ಹೊಲಗಳಿಗೆ ನುಗ್ಗುವ ಕಾಡು ಹಂದಿಗಳು ನೆಲದೊಳಗಿನ ಬೀಜಗಳನ್ನು ಸಾಲುಗಟ್ಟಿ ಹೆಕ್ಕಿ ತಿನ್ನುತ್ತವೆ. ಬೆಳೆ ಸಾಲುಗಳನ್ನು ಕತ್ತರಿಸಿ ಹಾಕುತ್ತವೆ. ನಷ್ಟದ ಬದುಕು ನಮ್ಮದಾಗಿದೆ. ಬಂದೂಕುಗಳು ಸದ್ದು ಮಾಡಿದರೆ ಪ್ರಾಣಿಗಳು ದಿಕ್ಕೆಟ್ಟು ಓಡುತ್ತವೆ. ಬಂದೂಕುಗಳು ಯಾವುದೇ ಪ್ರಾಣಿಯ ಪ್ರಾಣ ತೆಗೆಯುವುದಿಲ್ಲ. ಬದಲಿಗೆ ನಮ್ಮ ಅನ್ನ
ರಕ್ಷಿಸುತ್ತಿವೆ ಎನ್ನುತ್ತಾರೆ.

Advertisement

ಜೀವ ರಕ್ಷಣೆಗಾಗಿ ಬಂದೂಕು ಮತ್ತು ಪಿಸ್ತೂಲ್‌ಗ‌ಳನ್ನು ಕಾನೂನು ಬದ್ಧವಾಗಿ ಪರವಾನಗಿ ಸಹಿತ ನೀಡಲಾಗುತ್ತದೆ. ಹೀಗೆ ಠಾಣೆ ವ್ಯಾಪ್ತಿಯಲ್ಲಿ ಕೆಲವರು ಆತ್ಮ ರಕ್ಷಣೆಗಾಗಿ ಪಿಸ್ತೂಲ್‌ಗ‌ಳನ್ನು ಹೊಂದಿದ್ದಾರೆ. ಹೊಲಗಳಲ್ಲಿ ಬೆಳೆ ರಕ್ಷಣೆಗೆ
ಗುಂಡಿನ ಸದ್ದು ಮಾಡಿ ಪ್ರಾಣಿಗಳನ್ನು ಓಡಿಸಲು ನೂರಾರು ರೈತರು ಇಲಾಖೆಯ ಪರವಾನಗಿಯೊಂದಿಗೆ ಬಂದೂಕುಗಳನ್ನು ಹೊಂದಿದ್ದಾರೆ. ಆಯುಧ ಹೊಂದಿದವರು ನಿಗದಿತ ದಿನಾಂಕದಂದು ಅವುಗಳ ನವೀಕರಣ ಮಾಡಿಸಬೇಕಾಗುತ್ತದೆ. ಹೀಗೆ ಪರವಾನಗಿ, ನವೀಕರಣ ಮಾಡಿಸದ 48 ಬಂದೂಕುಗಳನ್ನು ಈಗಾಗಲೇ ಜಿಲ್ಲಾ
ಆಯುಧ ಕೋಣೆಗೆ ಜಮೆ ಮಾಡಿದ್ದೇವೆ.
 ವಿಜಯಕುಮಾರ ಬಾವಗಿ, ಪಿಎಸ್‌ಐ ವಾಡಿ ಠಾಣೆ

Advertisement

Udayavani is now on Telegram. Click here to join our channel and stay updated with the latest news.

Next