ಗುಳೇದಗುಡ್ಡ: ಪಟ್ಟಣದಲ್ಲಿ ರವಿವಾರ ಮಧ್ಯಾಹ್ನ ಮಹಿಳೆಯೊಬ್ಬಳ ಮೇಲೆ ಗುಂಡಿಟ್ಟು ಕೊಲೆಗೈದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಓರ್ವ ಯೋಧ ಹಾಗೂ ಕಾರು ಚಾಲಕನನ್ನು ಯಾದಗಿರಿ ಜಿಲ್ಲೆ ಸುರಪುರದಲ್ಲಿ ಬಂಧಿಸಿದ್ದಾರೆ.
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಮುತ್ತಪ್ಪ ಯಲಗೂರದಪ್ಪ ಖಾನಾಪುರ ಎಂಬುವರು ಪಟ್ಟಣದ ನಗ್ಲಿಪೇಟೆ ಓಣಿಯಲ್ಲಿ ದ್ಯಾಮವ್ವ ಯಲ್ಲಪ್ಪ ಪೂಜಾರಿ ಉರ್ಫ್ ಕಕ್ಕೇರಿ(45) ಎಂಬ ಮಹಿಳೆಯ ಮೇಲೆ ಗುಂಡು ಹಾರಿಸಿ ಕೊಲೆಗೈದು ಪರಾರಿಯಾಗಿದ್ದ. ಪ್ರಕರಣ ನಡೆದ ಏಳು ಗಂಟೆಯೊಳಗೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲ್ಲಬೇಕೆಂಬ ಉದ್ದೇಶದಿಂದ ಬಂದಿದ್ದ: ದ್ಯಾಮವ್ವಳನ್ನು ಕೊಲ್ಲಬೇಕೆಂಬ ಉದ್ದೇಶದಿಂದಲೇ ರಜೆ ಮೇಲೆ ಬಂದಿದ್ದ. ದ್ಯಾಮವ್ವ ಮನೆಯ ಕಟ್ಟಡದ ಗೋಡೆಗೆ ನೀರು ಹೊಡೆಯುತ್ತಿದ್ದ ಸಂದರ್ಭದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಂದೂಕು ಹಿಡಿದುಕೊಂಡು ಬಂದ ಯೋಧ ಮುತ್ತಪ್ಪ ದ್ಯಾಮವ್ವಳ ಕುತ್ತಿಗೆಯ ಭಾಗಕ್ಕೆ ಎರಡು ಗುಂಡು ಹಾರಿಸಿ ಪರಾರಿಯಾಗಿದ್ದ.
ಮಿಂಚಿನ ಕಾರ್ಯಾಚರಣೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಪ್ರಭಾರಿ ಡಿವೈಎಸ್‌ಪಿ ಪ್ರಭು ಕಿರೆದಳ್ಳಿ, ಪ್ರಭಾರಿ ಸಿಪಿಐ ವಿಜಯ ಮುರಗುಂಡಿ ಅವರ ಮಾರ್ಗದರ್ಶನ ಹಾಗೂ ಪಿಎಸ್‌ಐ ಐ.ಎಂ.ದುಂಡಸಿ ನೇತೃತ್ವದಲ್ಲಿ ಎಎಸ್‌ಐ ಎಂ.ಎ.ಘಂಟಿ, ಗುರು ಲಮಾಣಿ, ಆನಂದ ಮನ್ನಿಕಟ್ಟಿ, ಆನಂದ ಬಿಂಜವಾಡಗಿ ನೇತೃತ್ವದ ತಂಡ ಆರೋಪಿತರನ್ನು ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿ, ಕೆಂಪು ಬಣ್ಣದ ಕಾರ್‌ನಲ್ಲಿ ಹೋಗಿದ್ದಾರೆಂಬ ಮಾಹಿತಿ ಪಡೆದ ಪೊಲೀಸರು ಸುರಪುರ ಪಟ್ಟಣದ ಹತ್ತಿರ ವೇಗವಾಗಿ ಹೋಗುತ್ತಿದ್ದ ಕಾರ್ ಗೆ ಎರಡು ಟ್ರ್ಯಾಕರ್ ಗಳನ್ನು ಅಡ್ಡ ಹಾಕಿ ಕಾರು ಆರೋಪಿತರನ್ನು ಬಂಧಿಸಿದ್ದಾರೆ.
ಸಹೋದರ ಸಂಬಂಧಿ: ಹತ್ಯೆಗೀಡಾಗಿರುವ ದ್ಯಾಮವ್ವ ಖಾನಾಪುರ ಉರ್ಫ್ ಪೂಜೇರಿ ಹಾಗೂ ಆರೋಪಿ ಬಾಗಲಕೋಟೆ ತಾಲೂಕಿನ ನೀರಲಕೇರಿ ಗ್ರಾಮದ ಮುತ್ತಪ್ಪ ಯಲಗೂರದಪ್ಪ ಖಾನಾಪುರ ಸಹೋದರ ಸಂಬಂಧಿ ಎನ್ನಲಾಗಿದೆ.
ಆರೋಪಿತರ ವಿಚಾರಣೆ: ಆರೋಪಿತರನ್ನು ರವಿವಾರ ರಾತ್ರಿ ಸುರಪುರ ಹತ್ತಿರ ಬಂಧಿಸಿದ ಪೊಲೀಸರು ಗುಳೇದಗುಡ್ಡಕ್ಕೆ ಕರೆ ತಂದು ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಹಿಳೆಯ ಹತ್ಯೆಯಾದ ಸ್ಥಳಕ್ಕೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದರು. ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.