Advertisement

ಶೂಟಿಂಗ್‌ ರಾಣಿ ಮನು ಭಾಕರ್‌

06:35 AM Apr 01, 2018 | Team Udayavani |

“ಪದಕ ಗೆಲ್ಲುವೆನೆಂಬ ವಿಶ್ವಾಸ ನನಗೆ ಖಂಡಿತ ಇರಲಿಲ್ಲ. ಆದರೆ, ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲು ಪಣತೊಟ್ಟಿದ್ದೆ. ಆ ಪರಿಶ್ರಮದ ಫ‌ಲವೆಂಬಂತೆ ಚಿನ್ನದ ಪದಕ ಒಲಿದಿರುವುದು ಸಂತಸ ತಂದಿದೆ…’

Advertisement

ಇತ್ತೀಚೆಗೆ ಮೆಕ್ಸಿಕೋದಲ್ಲಿ ನಡೆದ ಶೂಟಿಂಗ್‌ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮನು ಭಾಕರ್‌ ಅವರ ಮನದಾಳದ ಮಾತಿದು. ಹರಿಯಾಣದ ಮನುಗೆ ಈಗ ಕೇವಲ 16 ವರ್ಷ. ಈಕೆ ಶೂಟಿಂಗ್‌ ವಿಶ್ವಕಪ್‌ನಲ್ಲಿ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಶೂಟರ್‌ ಮತ್ತು ವಿಶ್ವದ 3ನೇ ಕಿರಿಯ ಶೂಟರ್‌ ಎಂಬ ದಾಖಲೆ ನಿರ್ಮಿಸಿದ್ದಾರೆ.

ನಾನಾ ಕ್ರೀಡೆಯಲ್ಲಿ ಮನು
ಮನು ಅವರ ತಂದೆ ಇಂಜಿನಿಯರ್‌. ಮಗಳನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ರೂಪಿಸಬೇಕು ಎಂದು ಅವರು ಪಣ ತೊಟ್ಟಿದ್ದರು. ಮಗಳಿಗೆ ಇಷ್ಟವಾದ ಎಲ್ಲ ಕ್ರೀಡೆಯಲ್ಲೂ ತೊಡಗಲು ಪ್ರೇರೇಪಿಸಿದರು. ಪರಿಣಾಮ ಬಾಕ್ಸಿಂಗ್‌, ಕರಾಟೆ, ಟೆನಿಸ್‌, ಸ್ಕೇಟಿಂಗ್‌… ಹೀಗೆ ನಾನಾ ಕ್ರೀಡೆಯಲ್ಲಿ ಮನು ತೊಡಗಿದರು. ಸ್ಕೇಟಿಂಗ್‌, ಬಾಕ್ಸಿಂಗ್‌, ಕರಾಟೆಯಲ್ಲಿ ಮನು ರಾಷ್ಟ್ರೀಯ ಪದಕ ಗೆದ್ದಿದ್ದಾರೆ.

ಬಂಗಾರದ ಬೇಟೆ ಆರಂಭ
9ನೇ ತರಗತಿಯಲ್ಲಿದ್ದಾಗ ಶೂಟರ್‌ ಆಗಬೇಕೆಂದು ಮನು ಕನಸು ಕಂಡರು. ತನ್ನ ಬಯಕೆಯನ್ನು ತಂದೆಯಲ್ಲಿ ಹೇಳಿಕೊಂಡರು. ಶೂಟಿಂಗ್‌ ಅಕಾಡೆಮಿಗೆ ಸೇರಿ ಸತತ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಇತರ ಕ್ರೀಡೆಗಳತ್ತ ದೃಷ್ಟಿ ಹರಿಸುವುದನ್ನು ಕಡಿಮೆ ಮಾಡಿದ್ದರು. ಬಹುಪಾಲು ಸಮಯವನ್ನು ಶೂಟಿಂಗ್‌ ಅಕಾಡೆಮಿಯಲ್ಲಿಯೇ ಕಳೆಯುತ್ತಿದ್ದರು. ಶೂಟಿಂಗ್‌ ಮೇಲಿರುವ ಆಕೆಯ ಪ್ರೀತಿಗೆ, ಶ್ರದ್ಧೆಯಿಂದ ನಡೆಸಿದ ಅಭ್ಯಾಸಕ್ಕೆ 2017ರಲ್ಲಿಯೇ ಫ‌ಲಸಿಕ್ಕಿತು. ಅಂದರೆ ಅಭ್ಯಾಸ ಅರಂಭಿಸಿದ ಒಂದೇ ವರ್ಷದಲ್ಲಿ ರಾಷ್ಟ್ರೀಯ ಪದಕ ಲಭಿಸಿತು. 2017ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಗೇಮ್ಸ್‌ನಲ್ಲಿ ಮನು ಚಿನ್ನದ ಪದಕ ಗೆದ್ದರು. ಹೀನಾ ಸಿಧು ಹೆಸರಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡರು.

ಹೀಗೆ, ಅಲ್ಪ ಅವಧಿಯಲ್ಲಿ ಗುರಿ ಸಾಧಿಸುತ್ತ ಸಾಗಿದ ಮನುಗೆ ಮೊದಲ ಅಂತಾರಾಷ್ಟ್ರೀಯ ಪದಕ ಬಂದಿರುವುದು 2017ರಲ್ಲಿ ನಡೆದ ಏಶ್ಯನ್‌ ಜೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ. ಅಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

Advertisement

11ನೇ ತರಗತಿ ವಿದ್ಯಾರ್ಥಿಯಾಗಿರುವ ಮನು ಭಾಕರ್‌, ಮೆಕ್ಸಿಕೋದಲ್ಲಿ ನಡೆದ ವಿಶ್ವಕಪ್‌ ಶೂಟಿಂಗ್‌ ಟೂರ್ನಿಯ 10 ಮೀ. ಏರ್‌ ಪಿಸ್ತೂಲ್‌ನಲ್ಲಿ ನಿಖರ ಗುರಿ ಇಡುವ ಮೂಲಕ ಚಿನ್ನ ಗೆದ್ದರು. ತಂಡ ವಿಭಾಗದಲ್ಲಿಯೂ ಚಿನ್ನದ ಬೇಟೆಯಾಡಿ ಇತಿಹಾಸ ನಿರ್ಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next