Advertisement

ಲಾಸ್ ವೆಗಾಸ್:ಒಂಟಿ ತೋಳದ ಗುಂಡಿನ ದಾಳಿ; 50 ಕ್ಕೂ ಹೆಚ್ಚು ಬಲಿ

12:42 PM Oct 02, 2017 | Team Udayavani |

ಲಾಸ್ ವೆಗಾಸ್: ಇಲ್ಲಿ  ಭಾನುವಾರ ರಾತ್ರಿ ನಡೆಯುತ್ತಿದ್ದ ಸಂಗೀತ ಸಮಾರಂಭವೊಂದರಲ್ಲಿ ಭೀಕರ  ಗುಂಡಿನ ದಾಳಿ ನಡೆದಿದ್ದು 50 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ,200ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಘಟನೆಯಿಂದ ಅಮೆರಿಕ ಬೆಚ್ಚಿ ಬಿದ್ದಿದ್ದು, ಹೈ ಅಲರ್ಟ್‌ ಘೋಷಿಸಲಾಗಿದೆ.

Advertisement

ಮಂಡಾಲೇ ಬೇ ಕ್ಯಾಸಿನೋದಲ್ಲಿ ನಡೆಯುತ್ತಿದ್ದ ಓಪನ್‌ ಸ್ಟೇಜ್‌ ಮ್ಯೂಸಿಕ್‌ ಫೆಸ್ಟಿವಲ್‌ ಗುರಿಯಾಗಿರಿಸಿಕೊಂಡು ಪಕ್ಕದ ಕಟ್ಟಡದೊಳಗೆ ಹೊಂಚು ಹಾಕಿ ಕುಳಿತಿದ್ದ ವ್ಯಕ್ತಿಯೊಬ್ಬ ಮನ ಬಂದಂತೆ ಗುಂಡಿನ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಘಟನೆ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು, ಭದ್ರತಾ ಪಡೆಗಳು ಸಭಾಂಗಣವನ್ನು ಸುತ್ತುವರಿದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ. ಹಲವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನು ಕೆಲವರು ಆಸ್ಪತ್ರೆಗಳಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಂಗೀತ ಸಮಾರಂಭ ನಡೆಯುತ್ತಿದ್ದಾಗ ಪಕ್ಕದ ಕಟ್ಟಡದ 32 ನೇ ಮಹಡಿಯಿಂದ ಗುಂಡಿನ  ಮಳೆ 
ಸುರಿದಿದ್ದು ಜನರು ದಿಕ್ಕಾಪಾಲಾಗಿ ಓಡಿದ್ದು, ಕೆಲವರು ಪ್ರಾಣ ಉಳಿಸಿಕೊಳ್ಳಲು ಇದ್ದಲ್ಲಿಯೆ ಅಂಗಾತ ಮಲಗಿದ್ದಾರೆ. 

ಲಾಸ್ ವೆಗಾಸ್ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ಕೆಲ ವಿಮಾನಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. 

Advertisement

ಹತ್ಯೆಗೀಡಾದವರ ಪೈಕಿ ಇಬ್ಬರು ಪೊಲೀಸ್‌ ಅಧಿಕಾರಿಗಳು ಎಂದು ತಿಳಿದು ಬಂದಿದೆ. 

ದಾಳಿ ನಡೆಸಿದಾತ ಹತ್ಯೆ 

ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ದಾಳಿ ನಡೆಸಿದ ದುಷ್ಕರ್ಮಿಯನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದು, ಆತನ ನಂಟು ಹೊಂದಿದ್ದ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದು ಉಗ್ರರ ಕೃತ್ಯ ಎನ್ನುವ ಕುರಿತು ಇದುವರೆಗೆ ವರದಿಯಾಗಿಲ್ಲ. 

ಹತ್ಯೆಗೀಡಾದ ದುಷ್ಕರ್ಮಿಯ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ, ಆದರೆ ಆತ ಉಗ್ರನೆ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ , ಉಗ್ರನಲ್ಲ ಎಂದಿದ್ದಾರೆ.

ಕೆನಡಾದಲ್ಲೂ ಒಂಟಿ ಉಗ್ರನ ದಾಳಿ 
ಕೆನಡಾದ ಎಡಮೊಂಟನ್‌ ಪ್ರದೇಶದಲ್ಲಿ  ಶನಿವಾರ ರಾತ್ರಿ ಸೋಮಾಲಿಯಾ ಮೂಲದ ನಿರಾಶ್ರಿತ ಉಗ್ರನೊಬ್ಬ ದಾಳಿ ನಡೆಸಿದ್ದು, ಟ್ರಕ್‌ವೊಂದರಲ್ಲಿ ಬಂದು ಪೊಲೀಸರಿಗೆ ಇರಿದಿದ್ದು, ಆ ಬಳಿಕ ಪಾದಾಚಾರಿಗಳ ಮೇಲೆ ವಾಹನ ಹರಿಸಿದ್ದಾನೆ. ಘಟನೆಯಲ್ಲಿ ಪೊಲೀಸ್‌‌ ಸೇರಿ ನಾಲ್ವರು ಗಾಯಗೊಂಡಿದ್ದು , ಪ್ರಾಣ ಹಾನಿ ಸಂಭವಿಸಿಲ್ಲ. ಉಗ್ರನನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next