ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಮುಂದುವರಿದಿದ್ದು, ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ. ಸಿಟಿ ಆಫ್ ಹಾಲ್ಫ್ ಮೂನ್ ಬೇಯಲ್ಲಿ ನಡೆದ ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಇದು ಮೂರು ದಿನದ ಅಂತರದಲ್ಲಿ ನಡೆದ ಎರಡನೇ ದಾಳಿಯಾಗಿದೆ.
ಯುಎಸ್ ಮಾಧ್ಯಮ ವರದಿಯ ಪ್ರಕಾರ ಶೂಟಿಂಗ್ ನಲ್ಲಿ ಚೈನಿಸ್ ಕೆಲಸಗಾರರನ್ನು ಹತ್ಯೆ ಮಾಡಲಾಗಿದೆ. ಶಂಕಿತ ಆರೋಪಿಯನ್ನು 67 ವರ್ಷದ ಜಾವೊ ಚುನಿಲ್ ಎಂದು ಗುರಿತಿಸಲಾಗಿದೆ. ಆತ ತನ್ನ ಸಹ ಕೆಲಸಗಾರರನ್ನು ಗುಂಡಿಕ್ಕಿ ಹತ್ಯೆ ಮಾಡಿ ಸ್ಥಳದಲ್ಲಿ ಪರಾರಿಯಾಗಿದ್ದಾನೆ.
“ಶಂಕಿತ ಆರೋಪಿ ಬಂಧನದಲ್ಲಿದ್ದಾನೆ. ಈ ಸಮಯದಲ್ಲಿ ಸಮುದಾಯಕ್ಕೆ ಯಾವುದೇ ಬೆದರಿಕೆ ಇಲ್ಲ” ಎಂದು ಸ್ಯಾನ್ ಮಾಟಿಯೊ ಕೌಂಟಿ ಶೆರಿಫ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಹಾಫ್ ಮೂನ್ ಬೇ ಸಬ್ ಸ್ಟೇಷನ್ ನ ವಾಹನ ನಿಲುಗಡೆ ಸ್ಥಳದಲ್ಲಿ ಆತನ ವಾಹನದಲ್ಲಿ ಪತ್ತೆಯಾದ ನಂತರ ಬಂದೂಕುಧಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆತನ ಕಾರಿನಲ್ಲಿ ಶಸ್ತ್ರಾಸ್ತ್ರ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.
ಎರಡು ದಿನದ ಹಿಂದೆ ಕ್ಯಾಲಿಫೋರ್ನಿಯಾದ ಮಾಂಟೆಸರಿ ಪಾರ್ಕ್ ನಲ್ಲಿ ಚೈನೀಸ್ ಹೊಸ ವರ್ಷದ ಆಚರಣೆ ವೇಳೆ 72 ವರ್ಷದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಅದರಲ್ಲಿ ಹತ್ತು ಮಂದಿ ಮೃತರಾಗಿದ್ದರು.