Advertisement

ಶೂಟರ್‌ ರವಿ ಕುಮಾರ್‌ ಸಹಿತ ನಾಲ್ವರಿಗೆ ನಿಷೇಧ

11:09 PM Dec 13, 2019 | Team Udayavani |

ಹೊಸದಿಲ್ಲಿ: ವಿಶ್ವಕಪ್‌ ಪದಕ ವಿಜೇತ ಶೂಟರ್‌ ರವಿ ಕುಮಾರ್‌ ಸಹಿತ ಒಟ್ಟು ನಾಲ್ವರು ಉದ್ದೀಪನ ಪ್ರಕರಣದಲ್ಲಿ ನಾಡಾ (ರಾಷ್ಟ್ರೀಯ ನಿಗ್ರಹ ಉದ್ದೀಪನ ತನಿಖಾ ಸಂಸ್ಥೆ)ಯಿಂದ ಕಠಿನ ಶಿಕ್ಷೆಗೆ ಗುರಿಯಾಗಿದ್ದಾರೆ.

Advertisement

ವಿಶ್ವಕಪ್‌ ಕಂಚಿನ ಪದಕ ವಿಜೇತ ರವಿಕುಮಾರ್‌ ಭಾರತದ ಶ್ರೇಷ್ಠ ರೈಫ‌ಲ್‌ ಶೂಟರ್‌ಗಳಲ್ಲಿ ಒಬ್ಬರು. ರಾಷ್ಟ್ರೀಯ ಕೂಟವೊಂದರಲ್ಲಿ ರವಿ ಕುಮಾರ್‌ ಉದ್ದೀಪನ ಸೇವಿಸಿರುವ ಪ್ರಕರಣ ದಾಖಲಾಗಿತ್ತು. ತನಿಖೆಯಿಂದ ಇವರು ಉದ್ದೀಪನ ಸೇವನೆ ಮಾಡಿರುವುದು ಸಾಬೀತಾಗಿತ್ತು.

ಇದೀಗ ರವಿಕುಮಾರ್‌ ತಾನು ಉದ್ದಿಪನ ಮದ್ದು ಸೇವನೆ ಮಾಡಿಲ್ಲ. ತಲೆ ನೋವಿಗೆ ಮದ್ದು ತೆಗೆದು ಕೊಂಡಿದ್ದೆ. ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ರಾಷ್ಟ್ರೀಯ ಉದ್ದೀಪನ ತನಿಖಾ ಸಂಸ್ಥೆ ಎದುರು ಮನವಿ ಮಾಡಿಕೊಂಡಿದ್ದರು. ಆದರೆ ನಾಡಾ ರವಿ ಕುಮಾರ್‌ ಮನವಿಯನ್ನು ಪುರಸ್ಕರಿಸಲಿಲ್ಲ. ಮದ್ದು ಸೇವನೆ ಮುಂಚಿತವಾಗಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೀರಾ? ಎಂದು ಪ್ರಶ್ನೆ ಹಾಕಿತು. ಆದರೆ ಇದಕ್ಕೆ ರವಿ ಕುಮಾರ್‌ ಇಲ್ಲ ಎಂದರು. ಹಾಗಾಗಿ ಶಿಕ್ಷೆ ಅನುಭವಿಸಲೇಬೇಕು ಎಂದು ನಾಡಾ ಆದೇಶ ನೀಡಿದೆ. ರವಿ ಕುಮಾರ್‌ಗೆ ಡಿ. 5ರಿಂದ ನಿಷೇಧ ಶಿಕ್ಷೆ ಅನ್ವಯಗೊಂಡಿದೆ. ಅವರ ನಿಷೇಧ ಶಿಕ್ಷೆ ಡಿ.4, 2021ಕ್ಕೆ ಅಂತ್ಯವಾಗಲಿದೆ ಎಂದು ನಾಡಾ ತಿಳಿಸಿದೆ.

ಈ ಅವಧಿಯಲ್ಲಿ ಭಾರತೀಯ ವಾಯುಸೇನೆಯ ಉದ್ಯೋಗಿಯಾಗಿರುವ ರವಿ ಕುಮಾರ್‌ ಯಾವುದೇ ಅಂತಾರಾಷ್ಟ್ರೀಯ, ರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಎನ್‌ಆರ್‌ಎಐ (ರಾಷ್ಟ್ರೀಯ ರೈಫ‌ಲ್‌ ಸಂಸ್ಥೆ) ತಿಳಿಸಿದೆ.

ಸೀಮಾ, ಪೂರ್ಣಿಮಾಗೆ ನಿಷೇಧ
2017ರ ಕಾಮನ್‌ವೆಲ್ತ್‌ ಬೆಳ್ಳಿ ಪದಕ ವಿಜೇತೆ ಮಹಿಳಾ ವೇಟ್‌ಲಿಫ್ಟರ್‌ ಸೀಮಾ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ನಾಲ್ಕು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಸೀಮಾ ಗೋಲ್ಡ್‌ ಕೋಸ್ಟ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 75 ಕೆ.ಜಿ. ವಿಭಾಗದಲ್ಲಿ 6ನೇ ಸ್ಥಾನ ಪಡೆದಿದ್ದರು. ಪನ್ನಾಂಗ್‌ ಕಿರಿಯರ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಪೂರ್ಣಿಮಾ ಪಾಂಡೆಯ ಶಿಕ್ಷೆಯನ್ನು 4 ವರ್ಷದಿಂದ 2 ವರ್ಷಕ್ಕೆ ತಗ್ಗಿಸಲಾಗಿದೆ. ಉಳಿದಂತೆ ವೇಟ್‌ಲಿಫ್ಟರ್‌ ಮುಕುಲ್‌ ಶರ್ಮಗೆ ನಾಲ್ಕು ವರ್ಷ ಹಾಗೂ ಬಾಕ್ಸರ್‌ ದೀಪಕ್‌ ಶರ್ಮಗೆ (91 ಕೆ.ಜಿ.) 2 ವರ್ಷ ನಿಷೇಧ ಶಿಕ್ಷೆ ವಿಧಿಸಲಾಗಿದೆ.

Advertisement

ಬಾಕ್ಸರ್‌ ಸುಮಿತ್‌ ಸಂಗವಾನ್‌ ಅಮಾನತು
ಒಲಿಂಪಿಯನ್‌ ಬಾಕ್ಸರ್‌ ಮಾಜಿ ಏಶ್ಯನ್‌ ಬೆಳ್ಳಿ ಪದಕ ವಿಜೇತ ಸುಮಿತ್‌ ಸಂಗವಾನ್‌ ಉದ್ದೀಪನ ಪರೀಕ್ಷೆಯಲ್ಲಿ ಅನುತ್ತೀರ್ಣ ಗೊಂಡಿದ್ದಾರೆ. ಬಿ ಸ್ಯಾಂಪಲ್‌ ಪರೀಕ್ಷೆ ನಡೆಯುತ್ತಿದ್ದು ಸದ್ಯ ಸುಮಿತ್‌ ಅಮಾನತುಗೊಂಡಿದ್ದಾರೆ. ಕರ್ನಾಟಕದ ಬಳ್ಳಾರಿಯಲ್ಲಿ ಒಲಿಂಪಿಕ್ಸ್‌ಗೆ ಅರ್ಹತಾ ಪಂದ್ಯ ನಡೆಯಲಿದ್ದು ಅವಕಾಶ ಕಳೆದು ಕೊಳ್ಳುವ ಭೀತಿ ಸುಮಿತ್‌ಗೆ ಎದುರಾಗಿದೆ. ಡಿ. 25ರಂದು ನಾಡಾ ಪರೀಕ್ಷಾ ಫ‌ಲಿತಾಂಶ ಪ್ರಕಟಗೊಂಡು ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next