Advertisement

ರೌಡಿ ಭರತನ ಕಾಲಿಗೆ ಗುಂಡೇಟು

01:06 AM Aug 14, 2019 | Lakshmi GovindaRaj |

ಬೆಂಗಳೂರು: ಬಂಧಿಸಲು ತೆರಳಿದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪದಲ್ಲಿ ರೌಡಿಶೀಟರ್‌ ಭರತ್‌ ಅಲಿಯಾಸ್‌ ಬಾಬಿ (25)ಗೆ ಬಂದೂಕಿನ ಮೂಲಕ ಉತ್ತರ ಹೇಳಿರುವ ನಂದಿನಿ ಲೇಔಟ್‌ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Advertisement

ಪೊಲೀಸರಿಂದ ಬಲಗಾಲಿಗೆ ಗುಂಡೇಟು ತಿಂದಿರುವ ಭರತ್‌ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತನಿಂದ ಹಲ್ಲೆಗೊಳಗಾದ ಸಬ್‌ ಇನ್ಸ್‌ಪೆಕ್ಟರ್‌ ಲಕ್ಷ್ಮಣ್‌ ಹಾಗೂ ಪೊಲೀಸ್‌ ಪೇದೆ ಉಮೇಶ್‌ಗೆ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಮಹಾಲಕ್ಷ್ಮೀ ಲೇಔಟ್‌ ಠಾಣೆಯ ರೌಡಿಶೀಟರ್‌ ಆಗಿರುವ ಭರತ್‌, ಸುಲಿಗೆ, ಕೊಲೆಯತ್ನ, ರಾಬರಿ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳ ರೂಢಿಗತ ಆರೋಪಿಯಾಗಿದ್ದಾನೆ. ಕಳೆದ ನಾಲ್ಕು ದಿನಗಳ ಹಿಂದೆ ಮತ್ತೂಬ್ಬ ರೌಡಿಶೀಟರ್‌ ಕಾಡು ಅಲಿಯಾಸ್‌ ವೆಂಕಟೇಶ್‌ಗೆ ಚಾಕುವಿನಿಂದ ಇರಿದು ಕೊಲೆಯತ್ನ ನಡೆಸಿದ್ದು, ತಲೆಮರೆಸಿಕೊಂಡಿದ್ದ.

ಬೈಕ್‌ ಸಮೇತ ಎಸ್ಕೇಪ್‌ ಆಗಿದ್ದ ಭರತ: ಸೋಮವಾರ ತಡರಾತ್ರಿ 12.30ರ ಸುಮಾರಿಗೆ ಖಾಸಗಿ ಕಂಪನಿ ಉದ್ಯೋಗಿ ಮಂಜುನಾಥ್‌ ಲಗ್ಗೆರೆ ಬ್ರಿಡ್ಜ್ ಸಮೀಪ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಭರತ್‌ ಹಾಗೂ ಆತನ ಇಬ್ಬರು ಸಹಚರರು ಅಡ್ಡಗಟ್ಟಿದ್ದರು. ಚಾಕುವಿನಿಂದ ಇರಿಯುವುದಾಗಿ ಬೆದರಿಸಿ ಮಂಜುನಾಥ್‌ ಬಳಿಯ ಫೋನ್‌ ಹಾಗೂ ಬೈಕ್‌ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತ ಮಾಹಿತಿ ಲಭ್ಯವಾದ ಕೂಡಲೇ ನಂದಿನಿ ಲೇಔಟ್‌ ಠಾಣೆ ಇನ್ಸ್‌ಪೆಕ್ಟರ್‌ ಲೋಹಿತ್‌ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಮಂಗಳವಾರ ಮುಂಜಾನೆ ಆರು ಗಂಟೆ ಸುಮಾರಿಗೆ ಭರತ್‌ ಜಾಲಹಳ್ಳಿಯ ಪ್ರಸ್ಟೀಜ್‌ ಅಪಾರ್ಟ್‌ಮೆಂಟ್‌ ಬಳಿ ಇದ್ದಾನೆ ಎಂಬ ಮಾಹಿತಿ ಆಧರಿಸಿ ಪಿಎಸ್‌ಐ ಲಕ್ಷ್ಮಣ್‌ ನೇತೃತ್ವದ ತಂಡ ಬಂಧಿಸಲು ತೆರಳಿತ್ತು.

Advertisement

ಈ ವೇಳೆ ಪೇದೆ ಉಮೇಶ್‌ ಬಂಧಿಸಲು ಮುಂದಾಗುತ್ತಿದ್ದಂತೆ ತಿರುಗಿಬಿದ್ದ ಭರತ್‌ ತನ್ನ ಬಳಿಯಿದ್ದ ಡ್ರ್ಯಾಗರ್‌ನಿಂದ ಇರಿಯಲು ಮುಂದಾಗಿದ್ದಾನೆ. ಪರಿಣಾಮ ಪಿಎಸ್‌ಐ ಲಕ್ಷ್ಮಣ್‌ ತಮ್ಮ ಸರ್ವೀಸ್‌ ರಿವಾಲ್ವರ್‌ನಿಂದ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ, ಭರತ್‌ ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾನೆ. ಅಂತಿಮವಾಗಿ ಆತ್ಮರಕ್ಷಣೆ ಸಲುವಾಗಿ ಭರತ್‌ ಬಲಗಾಲಿಗೆ ಗುಂಡು ಹೊಡೆದಿದ್ದಾರೆ. ಕುಸಿದು ಬಿದ್ದ ಭರತ್‌ನನ್ನು ಕೂಡಲೇ ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಭರತನ ತಂತ್ರ: ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಭರತ್‌ ಈ ಹಿಂದೆ ಹಲವು ಬಾರಿ ಜೈಲು ಸೇರಿದ್ದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ. ಪ್ರಸಿದ್ಧಿಗೆ ಬರುವ ಸಲುವಾಗಿಯೇ ಎದುರಾಳಿ ಗುಂಪಿನ ವಿರುದ್ಧ ಹಲ್ಲೆಗೆ ಮುಂದಾಗುತ್ತಿದ್ದ. ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯುವತಿಯೊಬ್ಬಳನ್ನು ನಿಲ್ಲಿಸುತ್ತಿದ್ದ.

ಆಕೆಯ ಮೋಡಿಗೆ ಒಳಗಾಗ ಯಾರಾದರೂ ಆಕೆಯ ಜತೆ ವಾಹನ ಸವಾರರು ಬರುತ್ತಿದ್ದಂತೆ ಪೂರ್ವ ನಿಗದಿಯಂತೆ ನಿರ್ಜನ ಪ್ರದೇಶಕ್ಕೆ ಕರೆತಂದು ಹಣ, ಚಿನ್ನಾಭರಣ ದೋಚುತ್ತಿದ್ದ. ಕಳೆದ ಮೂರು ತಿಂಗಳ ಹಿಂದೆ ಇಂತಹ ಪ್ರಕರಣದಲ್ಲಿ ನೆಲಮಂಗಲ ಪೊಲೀಸರಿಂದ ಬಂಧನವಾಗಿದ್ದ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next