Advertisement

ಶ್‌.. . ರಿಯಾಲಿಟಿ ಶೋ..!

10:26 AM Oct 30, 2019 | mahesh |

ಮಕ್ಕಳು ಟಿ.ವಿಯಲ್ಲಿ ಕಾಣಿಸಿಕೊಳ್ಳಬೇಕು, ಹಾಡಿ ಪ್ರಶಸ್ತಿ ಗಳಿಸಬೇಕು ಅನ್ನೋ ಆಸೆ ಹೆತ್ತವರದು. ಹೀಗಾಗಿ, ಓದನ್ನು ಪಕ್ಕಕ್ಕೆ ಇಟ್ಟು, ದೂರದ ಊರು ಬಿಟ್ಟು ಬೆಂಗಳೂರಿಗೆ ಬಂದು, ಇಲ್ಲಿ ಬಾಡಿಗೆ ಮನೆ ಹಿಡಿದು ಮಕ್ಕಳಿಗೆ ರಿಯಾಲಿಟಿ ಶೋನಲ್ಲಿ ಹಾಡಿಸುತ್ತಾರೆ. ಆದರೆ, ಝಗಮಗಿಸುವ ಬೆಳಕು, ಅರಚಾಡುವ ನಿರೂಪಕಿಯರು, ಮಣಗಟ್ಟಲೆ ಭಾರದ ಪೋಷಾಕು ಧರಿಸಿನಿಂತ ಮಗುವಿನಿಂದ ಪ್ರತಿಭೆ ಹೊರಬಲು ಸಾಧ್ಯವೇ? ಹೀಗಂತ ಕೇಳಿದರೆ ಮನಃಶಾಸ್ತ್ರಜ್ಞರು ಸಾಧ್ಯವೇ ಇಲ್ಲ ಅಂತಾರೆ. ಅಯ್ಯೋ, ಸಂಗೀತ ಕಲಿತವರೂ, ಕಲಿಯದವರೂ ಒಂದೇ ತಕ್ಕಡಿ ಈ ರಿಯಾಲಿಟಿ ಶೋ. ಜಡ್ಜ್ಗಳ ಹೊಗಳಿಕೆ ಮಕ್ಕಳ ಕಿವಿಗೆಬಿದ್ದರೆ, ಎಲ್ಲಾ ಗೊತ್ತು ಅನ್ನೋ ಅಹಂ ತಲೆಗೆ ಏರಿ, ಚಿಕ್ಕವಯಸ್ಸಿಗೆ ಹೆಸರು, ಹಣ ಗಳಿಸಿ- ಮುಂದೆ ಸಂಗೀತವೂ ಇಲ್ಲದೇ, ಓದೂ ತಲೆಗೆ ಹತ್ತದೇ ಎಡಬಿಡಂಗಿಗಳಾಗುತ್ತಾರೆ ಅಂತ ಎಚ್ಚರಿಸುತ್ತಾರೆ ಸಂಗೀತಜ್ಞರು. ಹಾಗಾದರೆ, ಟಿಆರ್‌ಪಿಯ ಕೂಸು ಈ ರಿಯಾಲಿಟಿ ಶೋ ನಿಂದ ಮಕ್ಕಳ ಮೇಲೆ ಆಗುತ್ತಿರುವ ಪರಿಣಾಮ ಏನು? ಇಲ್ಲಿದೆ ಮಾಹಿತಿ.

Advertisement

ಮಕ್ಕಳ ಕಡೆ ನೋಡಿ…
ಬಿ.ಕೆ. ಸುಮಿತ್ರ, ಹಿರಿಯಗಾಯಕಿ,
ರಿಯಾಲಿಟಿ ಶೋಗಳು ಮಕ್ಕಳಿಗೆ ಒಳ್ಳೆ ಯ ವೇದಿಕೆ ಒದಗಿಸಿಕೊಡುತ್ತವೆ ಅನ್ನೋದರಲ್ಲಿ ಎರಡು ಮಾತೇ ಇಲ್ಲ. ಪ್ರತಿಭೆಯ ಅನಾವರಣಕ್ಕೆ ಇದಕ್ಕಿಂತ ಒಳ್ಳೆ ಸ್ಥಳ ಸಿಗೋಲ್ಲ. ಒಂದೇ ಏಟಿಗೆ, ಹೆಸರು, ಹಣ, ಆಸ್ತಿ ಎಲ್ಲವೂ ಬಂದು ಬಿಡುತ್ತದೆ. ಹೀಗಾಗಿ, ಈ ಕಡೆ ಹೆತ್ತವರು, ಆ ಕಡೆ ಚಾನೆಲ್‌ಗ‌ಳು, ಇನ್ನೊಂದು ಕಡೆ ವೀಕ್ಷಕರು- ಎಲ್ಲರೂ ಮಕ್ಕಳಿಗೆ ಪ್ರೋತ್ಸಾಹ ಕೊಡಲು ತುದಿ ಗಾಲಲ್ಲಿ ನಿಂತಿರುತ್ತಾರೆ. ಇಂಥ ರಿಯಾಲಿಟಿ ಶೋಗೆ ಇನ್ನೊಂದು ಕರಾಳ ಮುಖವಿದೆ. ಅದನ್ನು ನಾವು ನೋಡೇ ಇಲ್ಲ.

ಇವತ್ತಿನ ರಿಯಾಲಿಟಿ ಶೋಗಳು ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಅಂದರೆ, ಅರ್ಹರಿಗೆ, ಯೋಗ್ಯತೆ ಇರೋರಿಗೆ ನಿರಾಸೆ ಜಾಸ್ತಿ ಯಾಗುತ್ತಿದೆ ಅನಿಸುತ್ತಿದೆ. ಪರಿಣಾಮ, ಮುಂದೆ ಮಕ್ಕಳು ಸಂಗೀತ ಕಲಿಯದೇ ಹೋಗಬಹುದು. ಖನ್ನತೆಗೆ ಒಳಗಾಗಬಹುದು.

ಇದಕ್ಕೆಲ್ಲಾ ಕಾರಣ ಎಸ್‌ಎಂಎಸ್‌ ಜಡ್ಜ್ಮೆಂಟ್‌ಗಳು. ರಿಯಾಲಿಟಿ ಶೋಗಳಲ್ಲಿ ಜಡ್ಜ್ಗಳು ಇರ್ತಾರೆ. ಇಲ್ಲಾ ಅಂತಲ್ಲ. ಆದರೆ, ಅವರ ತೀರ್ಪುಗಳು ಎಸ್‌ಎಂಎಸ್‌ ಮುಂದೆ ಗೌಣವಾಗುತ್ತಿವೆ. ಕೆಲವೊಂದು ಶೋಗಳಲ್ಲಿ ಸಂಗೀತವನ್ನೂ, ಸಾಹಿತ್ಯವನ್ನೂ ತಿಳಿಯದವರೂ, ಜನಪ್ರಿಯತೆ ಮಾನದಂಡದ ಮೇಲೆ ಜಡ್ಜ್ಗಳಾಗಿರುತ್ತಾರೆ.

ಇಂಥ ಪರಿಸ್ಥಿತಿಯಲ್ಲಿ ಸಂಗೀತ ಕಲಿತವನನ್ನೂ, ಏನೂ ಕಲಿಯದವನನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವುದು ಇದೆಯಲ್ಲ; ಇದು ಮಕ್ಕಳ ಮೇಲೆ ದುಷ್ಪರಿಣಾಮ ಬೀರದೇ ಇರದು. ಅವನು ಗ್ರಾಮೀಣ ಪ್ರದೇಶದಿಂದ ಬಂದು, ಸಂಗೀತ ಕಲಿಯದೇ ಚೆನ್ನಾಗಿ ಹಾಡ್ತಾನೆ ಅನ್ನೋದೇನೋ ಸರಿ, ಅದಕ್ಕಂತಲೇ ಅವನ ತಪ್ಪುಗಳನ್ನು ಮಾಫಿ ಮಾಡಿ, ಹಾಡನ್ನು ಬೂಸ್ಟ್‌ ಮಾಡೋದು ಸರೀನಾ? ಹಾಗಾದರೆ, ಇಷ್ಟು ವರ್ಷ ಸಂಗೀತ ಕಲಿತು ಸ್ಪರ್ಧೆಗೆ ಬಂದ ಹುಡುಗನ ಪಾಡೇನು? ಕಲಿಕೆ ಅಂದರೆ ಇಷ್ಟೇನಾ? ಅಂತ ಅವನಿಗೆ ತಾತ್ಸಾರ, ಸಂಗೀತದ ಬಗ್ಗೆ ನಿರ್ಲಕ್ಷ್ಯ ಮನೋಭಾವ ಮೂಡಿ ಬಿಡುತ್ತದೆ. ಹಾಗಂತ, ಗ್ರಾಮೀಣ ಪ್ರತಿಭೆಗೆ ವೇದಿಕೆ ಒದಗಿಸುವುದು ತಪ್ಪಲ್ಲ. ಅದಕ್ಕಾಗಿ ಬೇರೆ ರಿಯಾಲಿಟಿ ಶೋ ಮಾಡಿ. ಎಲ್ಲರನ್ನೂ ಇದಕ್ಕೆ ಸೇರಿಸಿ, ಜಾತಿ, ಪಂಥ, ಎಸ್‌ಎಂಎಸ್‌ ಅಂತೆಲ್ಲಾ ಆಯ್ಕೆ ಮಾಡುತ್ತಾ ಹೋದರೆ, ನಿಜವಾದ ಪ್ರತಿಭೆಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ.

Advertisement

ಒಂದು ಉದಾಹರಣೆ ಕೊಡ್ತೀನಿ.
ಒಂದು ಸಲ, ಒಂದು ಸ್ಪರ್ಧೆಯಲ್ಲಿ ಒಬ್ಬ ಹುಡುಗ ಬಹಳ ಚೆನ್ನಾಗಿ, ಶಾಸ್ತ್ರೀಯವಾಗಿ ಹಾಡಿದ. ಇವನ ನಂತರ ಬಂದ ಹುಡುಗ ಬಹಳ ಕಷ್ಟದ ಹಾಡನ್ನು ಆಯ್ಕೆ ಮಾಡಿಕೊಂಡಿದ್ದ. ಅದನ್ನು ಹಾಡುವಾಗ ಹಲವಾರು ತಪ್ಪುಗಳು ಆದವು. ಜಡ್ಜ್ಗಳು, “ಈ ಹುಡುಗ ಬಹಳ ಕಷ್ಟದ ಹಾಡನ್ನು ತಗೊಂಡು ಪ್ರಯತ್ನ ಮಾಡಿದ್ದಾನೆ. ಇವನಿಗೇ ಬಹುಮಾನ ಕೊಡೋಣ’ ಅಂದರು. ನಾನು, “ಇದು ತಪ್ಪು, ಸ್ಪರ್ಧೆ ಅಂತ ಬಂದ ಮೇಲೆ, ಆ ಮೂರು ನಿಮಿಷದಲ್ಲಿ ಹೇಗೆ ಹಾಡನ್ನು ಕಡಿಮೆ ತಪ್ಪಲ್ಲಿ ಪ್ರಸೆಂಟ್‌ ಮಾಡ್ತಾನೆ ಅನ್ನೋದು ಮುಖ್ಯ. ಕಷ್ಟದ ಹಾಡನ್ನು ಹಾಡಿದ್ದಾನೆ ಅನ್ನೋ ಕಾರಣಕ್ಕೆ ತಪ್ಪುಗಳನ್ನು ಮುಚ್ಚಿಟ್ಟು, ಚೆನ್ನಾಗಿ ಹಾಡಿದವನಿಗೆ ಬಹುಮಾನ ನಿರಾಕರಿಸುವುದು ಸಾಧ್ಯವಿಲ್ಲ ಅಂದೆ.

ಕೊನೆಗೆ, ಕಷ್ಟದ ಹಾಡನ್ನು ಹಾಡಿದ ಹುಡುಗನಿಗೇ ಬಹುಮಾನ ಬಂತು ಅಂತಿಟ್ಟುಕೊಳ್ಳಿ. ಆದರೆ, ಈ ಕಡೆ ಶಾಸ್ತ್ರಬದ್ಧವಾಗಿ ಹಾಡಿದ ಹುಡುಗನಿಗೆ ನಿರಾಸೆಯಾಯಿತು. ಪರಿಣಾಮ- ಸಂಗೀತದ ಮೇಲೆ ವೈರಾಗ್ಯ ಮೂಡಿ. ಆ ಹುಡುಗ ಮುಂದೆ ಹಾಡುವುದನ್ನೇ ನಿಲ್ಲಿಸಿಬಿಟ್ಟ.

ಈಗಿನ ರಿಯಾಲಿಟಿ ಶೋಗಳ ಪರಿಣಾಮ ಕೂಡ ಇಷ್ಟೇ ಘೋರ. ಮಕ್ಕಳಿಗೆ ಅತಿ ಹರೆಯದರಲ್ಲೇ ಹಣ, ಪ್ರಚಾರದ ಮೋಹ ಸಿಕ್ಕಿಬಿಡುತ್ತಿದೆ. ಅವರು ಸಂಗೀತ ಸ್ಪರ್ಧೆಯಲ್ಲಿ ಗೆದ್ದ ನಂತರ ಏನಾಗಬಹುದು? ತಮ್ಮಂತೆಯೇ ಯೋಚಿಸುವವರನ್ನು ಗುಡ್ಡೆ ಹಾಕಿಕೊಂಡು, ಸಂಗೀತ ತಂಡ ಕಟ್ಟುತ್ತಿದ್ದಾರೆ. ಒಂದು ಕಾರ್ಯಕ್ರಮಕ್ಕೆ ಇಷ್ಟು ಸಾವಿರ ಅಂತ ಪಡೆಯುತ್ತಾರೆ. ಅಲ್ಲಿಗೆ , ಸಂಗೀತ ಕಲಿಯುವುದು ನಿಲ್ಲುತ್ತದೆ. ಇವರ ಮನಸ್ಸಿನಲ್ಲಿ ಅಹಂಕಾರ ಬಲಿಯುತ್ತದೆ, ಅದು ಹೆಮ್ಮರವಾಗಿ, ಸಂಗೀತ ಅಂದರೆ ನನಗೆ ತಿಳಿದದ್ದೇ ಅನ್ನೋ ಮನೋಭಾವ ಮೂಡುತ್ತದೆ. ಅಂಥವರು, ಅಕಸ್ಮಾತ್‌ ಸೋತಾಗ ಖನ್ನತೆಗೆ ಒಳಗಾಗುತ್ತಾರೆ. ಅಷ್ಟರಲ್ಲಿ ತಲೆ ಒಳಗಿದ್ದ ಸಂಗೀತ ಖಾಲಿಯಾಗಿರುತ್ತದೆ, ಓದೂ ಇಲ್ಲದೆ, ಸಂಗೀತವೂ ತಿಳಿಯದೇ ಬದುಕು ಅತಂತ್ರವಾಗುತ್ತದೆ.

ಇವಿಷ್ಟೇ ಅಲ್ಲ, ಈ ರೀತಿ ಹಾಡಿ, ಪ್ರಶಸ್ತಿ ಪಡೆದುಕೊಂಡ ಮಕ್ಕಳ, ಹೆತ್ತವರ ಮನೋಸ್ಥಿತಿ ಹೇಗಿರುತ್ತದೆ ಅಂದರೆ..

“ನನ್ನ ಮಗ ನಿಮ್ಮ ಕಾರ್ಯಕ್ರಮದಲ್ಲಿ ಹಾಡಬೇಕಾದರೆ ಒಂದು ಹಾಡಿಗೆ ಎರಡು ಸಾವಿರ ಕೊಡ್ತೀರ?’ ಅಂತ ಕೇಳುವ ಮಟ್ಟಕ್ಕೆ ವ್ಯಾಪಾರೀಕರಣವಾಗಿದೆ. ಅತಿಹರೆಯದರಲ್ಲಿ ಸೋಲು ಯಾವುದು, ಅದನ್ನು ಹೇಗೆ ನಿಭಾಯಿಸಬೇಕು, ಗೆಲುವು ಅಂದರೆ ಹೇಗಿರುತ್ತದೆ, ಅದನ್ನು ಹೇಗೆ ಸಂಭ್ರಮಿಸಬೇಕು ಅಂತ ತಿಳಿಯದ ಮಕ್ಕಳಿಗೆ- ನೀನು ಹೀಗೆ ಬದುಕಬೇಕು ಅಂತ ಒಳ್ಳೆ ದಾರಿ ತೋರಿಸಬೇಕಾದ ಹೆತ್ತವರು, ಗುರುಗಳೇ- ಸಂಗೀತವನ್ನು ಟವೆಲ್‌ ರೀತಿ ಹಾಸಿ ಹಣ ಮಾಡಲು ನಿಂತು ಬಿಟ್ಟರೆ ಗತಿ ಏನು?

ಮನೆ ಕಟ್ಟಲು ಹೇಗೆ ಪಾಯಬೇಕೋ ಹಾಗೇ, ಸಂಗೀತ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲಲು ಬೇಸಿಕ್‌ ಆದ ಸಾಧನೆ ಬೇಕು. ಸ್ಪರ್ಧೆಗೆ ಬರುವುದು ತಪ್ಪಲ್ಲ. ಅದಕ್ಕೆ ಬೇಕಾದ ಸಂಗೀತ ಸಾಧನೆ, ಮಾನಸಿಕ ಸಿದ್ಧತೆ ಎರಡನ್ನೂ ಮಾಡಿಕೊಂಡಿರಬೇಕು.

ಕಡೇ ಪಕ್ಷ, ಅವರು ಹಾಡುವ ಹಾಡಿನ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲಾದರೂ ಸ್ವಲ್ಪ ಅನುಭವ ಬೇಕು. ಹೀಗಾಗಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವವರಿಗೆ ಸ್ವಲ್ಪ ಮಾಗಿದ ವಯಸ್ಸು ಅಂತ ಫಿಕ್ಸ್‌ ಮಾಡಿದರೆ ಒಳಿತು.

ಅದು ಬಿಟ್ಟು, ಪುಟ್ಟ ಮಕ್ಕಳ ಬಾಯಲ್ಲಿ ಯೌವ್ವನದ ಪದಗಳನ್ನು ಉಚ್ಚರಿಸಿ, ಅರ್ಥೈಸಿಕೊಳ್ಳಲಾಗದ ಸಾಹಿತ್ಯದ ಹಿಂದೆ, ಭಾವ ಇರಬೇಕು ಅಂತ ತೀರ್ಪು ಕೊಡುವುದು ಸರಿಯಲ್ಲ. ಈ ರೀತಿ ವಯಸ್ಸಿಗೆ ಮೀರಿದ ಹಾಡುಗಳನ್ನು ಹಾಡುವಾಗ ಅದರ ಮನಸ್ಸಿನ ಮೇಲಾಗುವ ಪರಿಣಾಮದ ಕುರಿತು ಯೋಚಿಸಬೇಕಾಗುತ್ತದೆ.

ಮನಸ್ಸಿಗೆ ಬಂದಂತೆ ಹೊಗಳುವುದೇ ಜಡ್ಜ್ಮೆಂಟ್‌ ಅಲ್ಲ. ಈ ರೀತಿಯ ಹೊಗಳಿಕೆ ಕೇಳಿಸಿಕೊಂಡವರು ನಾಳೆ ತಮ್ಮ ತಪ್ಪುಗಳನ್ನು ತಿದ್ದಿ ಕೊಳ್ಳುವ ಮನಸ್ಥಿತಿಯಲ್ಲಿರುವುದಿಲ್ಲ. ನಾನು ಹಾಡೋದೇ ಶ್ರೇಷ್ಠ ಅನ್ನೋ ಮನೋಭಾವ ಬೆಳೆಸಿಕೊಂಡು ಬಿಡುತ್ತಾರೆ. ಹೀಗಾಗಿ, ತಾಳ ಎಲ್ಲಿ ತಪ್ಪಿದೆ, ಶೃತಿ ಎಲ್ಲಿ ವೀಕ್‌ ಆಗಿದೆ. ಇದನ್ನು ಹಿಡಿಯುವ ರೀತಿ ಹೇಗೆ ಅನ್ನೋ ಸಹಜ ತಪ್ಪುಗಳನ್ನು ಮಕ್ಕಳ ಮನಸ್ಸಿಗೆ ಘಾಸಿ ಆಗದಂತೆ ತಲುಪಿಸಬೇಕು. ಇದ್ಯಾವುದನ್ನೂ ಜನ ಕಳಿಸೋ ಎಸ್‌ಎಂಎಸ್‌ಗಳು ಮಾಡೊಲ್ಲ.

ಪ್ರೇಕ್ಷಕರು ಯಾವತ್ತೂ ಮುಟ್ಟಾಳರಲ್ಲ, ಅವರಿಗೂ ಸಂಗೀತ ಗೊತ್ತಿರುತ್ತದೆ. ಹಾಡುಗಳನ್ನು ಕೇಳಿಕೇಳಿ ಕಿವಿ ಚೆನ್ನಾಗಿ ಪಳಗಿರುತ್ತದೆ. “ಈ ಹುಡ್ಗ ಬಹಳ ಚೆನ್ನಾಗಿ ಹಾಡ್ತಿದ್ದ, ಅವನಿಗೇ ಪ್ರಶಸ್ತಿ ಬರಬೇಕಿತ್ತು. ಯಾಕಿಂಗ್‌ ಮಾಡಿದ್ರೋ’ ಅಂತ ಮಾತನಾಡಿಕೊಳ್ಳುತ್ತಿದ್ದ ಎಷ್ಟೋ ಜನರನ್ನು ನಾನು ನೋಡಿದ್ದೇನೆ.

ಪ್ರೇಕ್ಷಕರಿಗೆ ಮನರಂಜನೆ ಬೇಕು, ಅವರಿಗೆ ಟಿಆರ್‌ಪಿ ಬೇಕು, ಹೆತ್ತವರಿಗೆ ಮಕ್ಕಳು ಟಿವಿಯಲ್ಲಿ ಕಾಣಿಸಿಕೊಳ್ಳಬೇಕು, ಎಲ್ಲಾ ಸರಿ. ನಿಮ್ಮ ಮಕ್ಕಳಿಗೆ ಇವೆಲ್ಲ ಬೇಕಾ ಅಂತ ಯಾವತ್ತಾದರೂ ಕೇಳಿದ್ದೀರ? ಇಲ್ಲ. ಅವರ ಕಡೆಗೂ ಸ್ವಲ್ಪ ಗಮನ ಕೊಡಿ.

ಅಮಾನವೀಯ ಕ್ರೌರ್ಯ
ಪ್ರೊ.ಶ್ರೀಧರಮೂರ್ತಿ, ಮನಃಶಾಸ್ತ್ರಜ್ಞರು

ರಿಯಾಲಿಟಿ ಶೋ ಬಗ್ಗೆ ಮಾತನಾಡುವುದಕ್ಕಿಂತ ಮೊದಲು, ಒಂದು ಘಟನೆ ಹೇಳೆ¤àನೆ.
ಒಬ್ಬ ಹುಡುಗ. ವಯಸ್ಸು 12 ವರ್ಷ ಇರಬಹುದು. ಅವರ ಅಪ್ಪ, ಅಮ್ಮ, ಒಂದೇ ಹಾಡನ್ನು ಹದಿನೈದು ಸಲ ಕೇಳಿಸಿದ್ದರು. ಅದನ್ನು ಕೇಳಿ,ಕೇಳಿ ಆ ಹುಡುಗ ಹಾಡೋದನ್ನು ತಕ್ಕ ಮಟ್ಟಿಗೆ ಕಲಿತಿದ್ದ . ಶಾಲೆ ಕಾರ್ಯಕ್ರಮದಲ್ಲಿ ಹಾಡಲು ಸ್ಟೇಜ್‌ ಮೇಲೆ ಹೋದ. ಅದೇನಾಯಿತೋ ಏನೋ, ಸರಿಯಾಗಿ ಹಾಡುವುದಕ್ಕೆ ಆಗಲಿಲ್ಲ. ಅದಕ್ಕೇ ಸೈಲೆಂಟಾಗಿ ನಿಂತು ಬಿಟ್ಟ. ಸೈಡ್‌ಸ್ಕ್ರೀನ್‌ನಲ್ಲಿ ನಿಂತಿದ್ದ ಅಮ್ಮ ಮಗ ವೇದಿಕೆ ಇಳಿಯೋದನ್ನೇ ಕಾಯುತ್ತಿದ್ದಳು. ತಕ್ಷಣ ಪರದೆ ಹಿಂದೆ ಕರೆದುಕೊಂಡು ಹೋಗಿ, “ಅಷ್ಟೆಲ್ಲಾ ಕೇಳಿಸಿದ್ದೀನಿ, ಚೆನ್ನಾಗಿ ಹಾಡ್ತಿದ್ದೆ. ಇಲ್ಲೇನ್‌ ಬಂತು ನಿನಗೆ’ ಅಂತ ನಾಲ್ಕು ಬಾರಿಸಿದಳು.

ಹಾಡುವುದು ಬೇಕಾಗಿದ್ದು ಅಮ್ಮನಿಗೆ; ಪಾಪ ಅವನಿಗಲ್ಲ. ನನ್ನ ಪ್ರಕಾರ, ಆ ಹುಡುಗ ಇನ್ನ ಜೀವನ ಪರ್ಯಂತ ಜಪ್ಪಯ್ನಾ ಅಂದರೂ ವೇದಿಕೆ ಹತ್ತೋದೇ ಇಲ್ಲ.

ರಿಯಾಲಿಟಿ ಶೋಗಳು ಕೂಡ ಹೀಗೇನೆ. ಆ ಅಮ್ಮನ ಜಾಗದಲ್ಲಿ ಎಲ್ಲ ಹೆತ್ತವರಿದ್ದಾರೆ. ಶಾಲೆಯ ಆ ಜಗುಲಿ ಈಗ ರಿಯಾಲಿಟಿ ಶೋಗಳ ವೇದಿಕೆಯಾಗಿ ಬದಲಾಗಿದೆ ಅಷ್ಟೇ. ಪ್ರತಿ ಮಕ್ಕಳು ಕೂಡ ಇತ್ತ ಹೆತ್ತವರ ಆಸೆ ಪೂರೈಸಲು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಸೃಷ್ಟಿಯಾಗುತ್ತಿರುವ ಕೃತಕ ವಾತಾರವಣ ಮಕ್ಕಳ ಮನಸ್ಸನ್ನು ಘಾಸಿ ಮಾಡುವ ಬರೆಗಳನ್ನು ಎಳೆಯುತ್ತಿದೆ. ಪೇರೆಂಟಿಂಗ್‌ ಅಂದರೆ, ನನ್ನ ಮಗ/ಮಗಳು ರಿಯಾಟಿ ಶೋನಲ್ಲಿ ಹಾಡಬೇಕು, ಪ್ರಶಸ್ತಿ ತರಬೇಕು ಅನ್ನೋ ತಮ್ಮ ಆಸೆಗಳನ್ನು ಶೋಕೇಸ್‌ ಮಾಡೋದು ಅಲ್ಲ.

ರಿಯಾಲಿಟಿ ಶೋ ಪ್ರತಿಭೆ ಪ್ರದರ್ಶನ ಮಾಡೋಕೆ ವೇದಿಕೆ ಅಲ್ವಾ? ಅಂತ ಕೇಳಬಹುದು. ಆದರೆ, ನಿಜವಾದ ಪ್ರತಿಭೆ ಅರಳಬೇಕು ಅಂದರೆ ಅದಕ್ಕೆ ಸಮಯ ಬೇಕು. ಪೂರಕ ವಾತಾವಾರಣ ನಿರ್ಮಾಣವಾಗಬೇಕು. ಕಣ್ಣು ಕುಕ್ಕುವ ಲೈಟುಗಳು, ಅರಚುವ ನಿರೂಪಕಿಯರು, ಸಂಗೀತ ಜ್ಞಾನವಿಲ್ಲದ ಜಡ್ಜ್ಗಳು, ಹೀಗೆ ಕೃತಕವಾಗಿ ತಯಾರಾದ ವೇದಿಕೆಗಳಲ್ಲಿ ಮಕ್ಕ ಳ ಪ್ರತಿಭೆ ಈಚೆ ಹೇಗೆ ತಾನೇ ಬರುತ್ತೆ? ಇದೊಂಥರ ಅಮಾನುಷವಾದ ಒತ್ತಡ.

ಸೋಲು, ಗೆಲುವುಗಳ ಅರ್ಥವೇ ಗೊತ್ತಿಲ್ಲದ ಪುಟ್ಟ ಮಕ್ಕಳ ಮೇಲೆ, “ನೀನು ಹೀಗೆ ಹಾಡಬೇಕು, ಹಾಗೇ ಹಾಡಬೇಕು’ ಅಂತ ಒತ್ತಡ ಹೇರಿ, ಸೋತಾಗ, “ನೋಡು. ಅವನು ಎಷ್ಟು ಚೆನ್ನಾಗಿ ಹಾಡ್ತಾನೆ’ ಅಂತ ಹೇಳುವುದರಿಂದ ಅವರು ಖನ್ನತೆಗೆ ಒಳಗಾಗುತ್ತಾರೆ. ಪುಟ್ಟವಯಸ್ಸಲ್ಲೇ ಮೇಲು, ಕೀಳು ಅನ್ನೋ ಮನೋಭಾವ ಮೂಡಿ, ಮಾನಸಿಕ ಕಾಯಿಲೆಗೆ ಮೂಲವಾಗುತ್ತಿದೆ. ಒಂದು ಸತ್ಯವಾದ ವಿಚಾರ ಏನೆಂದರೆ, ಇಲ್ಲಿ ಸ್ಪರ್ಧೆಗೆ ಮಕ್ಕಳು ಬಿದ್ದಿಲ್ಲ. ತಂದೆ ತಾಯಿ ಬಿದ್ದಿದ್ದಾರೆ.

ಐಡೆಂಟಿಟಿ ಕ್ರೈಸಿಸ್‌
ಇವರಿಗೆಲ್ಲಾ ಹಾಡಿ ಗೆಲ್ಲಬೇಕು ಅನ್ನೋದೇ ಜೀವನದ ಗುರಿ. ಹೀಗಾಗಿ, ಕಲಿಯುವ ಪ್ರಕ್ರಿಯೆಯಲ್ಲಿ ಯಾರಿಗೂ ನಂಬಿಕೆನೇ ಇಲ್ಲ. ಸಂಗೀತ ಕಲಿಯೋದು ಪ್ರದರ್ಶನ ಕೊಡೋಕೆ ಮಾತ್ರವಲ್ಲ. ಅದರಾಚೆಗೂ ಸಂಗೀತ ಇದೆ. ಅದು ಪರ್‌ಫಾರ್ಮಿಂಗ್‌ ಆರ್ಟ್‌ ಆಗಿರೋದರಿಂದಲೇ ಎಲ್ಲ ಸಮಸ್ಯೆ ಶುರುವಾಗಿರುವುದು.

ಗೆದ್ದಾಗ ಜನ ಗುರುತಿಸುತ್ತಾರೆ. ಅದೇ ರೀತಿ ಅವನು/ಅವಳು ಸೋತ ಅಂದಾಗ ನಾಲ್ಕು ಜನ ನೋಡೋ ರೀತಿ ಬೇರೆ. ಆಗ ಮಕ್ಕಳಲ್ಲಿ ಆತ್ಮವಿಶ್ವಾಸ ಕುಗ್ಗುತ್ತದೆ, ಭರವಸೆ ಹೋಗುತ್ತದೆ, ಖನ್ನತೆಗೆ ಒಳಗಾಗುತ್ತಾನೆ. ಅಲ್ಲಿಂದಲೇ ಐಡೆಂಟಿಟಿ ಕ್ರೈಸಿಸ್‌ ಶುರುವಾಗುವುದು. ಇಲ್ಲಿನ ತನಕ ಜಗತ್ತು ತನ್ನ ಗುರುತಿಸುತ್ತಿತ್ತು. ಈಗ ಏಕಿಲ್ಲ? ಮತ್ತೆ ಅದು ಬೇಕು ಅಂತ ಹುಡುಕಾಟ ಮಾಡುವ ಸೂಕ್ಷ್ಮ ಮನಸ್ಸಿನ ಮಕ್ಕಳು ಆತ್ಮಹತ್ಯೆಗೆ ಶರಣಾಗಲೂಬಹುದು.

ಅಷ್ಟು ಸಣ್ಣ ವಯಸ್ಸಿಗೆ ಇವನ್ನೆಲ್ಲ ತಾಳಿಕೊಳ್ಳುವ ಶಕ್ತಿ ಮಗುವಿಗೆ ಇರುವುದಿಲ್ಲ. ಇದನ್ನು ವೀಕ್ಷಕರಾಗಲಿ, ಟಿಆರ್‌ಪಿ ಅಂತ ಒದ್ದಾಡೋರಾಗಲಿ, ತಂದೆ ತಾಯಿಗಳಾಗಲಿ ಸ್ವಲ್ಪವೂ ಯೋಚಿಸುವುದಿಲ್ಲ. ಒಂದು ಸಲ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋದರೆ, ಅವರನ್ನು ಅದರಿಂದ ಹೊರತರುವುದು ಬಹಳ ಕಷ್ಟ. ಅವರ ವ್ಯಕ್ತಿತ್ವ, ವರ್ತನೆಗಳಲ್ಲಿ ಬದಲಾವಣೆಯಾಗುತ್ತಾ ಹೋಗುತ್ತದೆ. ಮಾನಸಿಕವಾಗಿ ಅತಂತ್ರರಾದ ಮಕ್ಕಳನ್ನು ನಿಭಾಯಿಸುವುದು ಹೇಗೆ ಅಂತ ಕೂಡ ಹೆತ್ತವರಿಗೂ ತಿಳಿದಿರುವುದಿಲ್ಲ. ಶಾಲೆಗೆ ಹೋಗುವ ವಿದ್ಯಾರ್ಥಿಗಳು ರಿಯಾಲಿಟಿ ಶೋ ಅನ್ನೋ ಬಾವಿಯಲ್ಲಿ ಬಿದ್ದರೆ ಅವರು ಮುಂದಿನ ವಿದ್ಯಾಭ್ಯಾಸ ಹೇಗಾಗಬೇಡ?

ಮಕ್ಕಳು ಪಾಠದ ಕಡೆ ಗಮನ ಕೊಡಬೇಕು. ಇತ್ತ ಕಡೆ ಹೆತ್ತವರ ಆಸೆ ಈಡೇರಿಸೋಕೆ ಮೈಕ್‌ ಹಿಡಿಯಬೇಕು. ಅಲ್ಲಿ ಓದು ಆಗುವುದಿಲ್ಲ. ಇಲ್ಲಿ ನ ಸೋಲು , ಗೆಲುವುಗಳು ಓದಿನ ಮೇಲೂ ಪರಿಣಾಮ ಬೀರುತ್ತವೆ. ಸಂಗೀತಕ್ಕೂ, ಓದಿಗೂ ತಯಾರಿಬೇಕು. ತಯಾರಾಗುವ ಪ್ರೋಸಸ್‌ಬಗ್ಗೆ ಯಾರಲ್ಲೂ ನಂಬಿಕೆ ಇಲ್ಲ.

ಪರ್‌ಫಾರಮೆನ್ಸ್‌ ಗೆ ಹೋದಾಗ ಜಗತ್ತು ಚಿಕ್ಕದಾಗುತ್ತಾ ಹೋಗುತ್ತೆ. ಕಲಿಕೆಯಲ್ಲಿ ಹಿಂದೆ ಬೀಳುತ್ತಾ ಹೋಗುತ್ತಾರೆ. ಹೀಗಾಗಿ, ಮಕ್ಕಳಿಗೆ ಸಂಗೀತ, ಅದನ್ನು ಕೇಳುವುದೂ ಧ್ಯಾನ ಅನ್ನೋ ಪರಿಕಲ್ಪನೆ ಮೂಡಿಸಬೇಕು. ಸ್ಪರ್ಧೆಗಾಗಿ ಸಂಗೀತ ಕಲಿಯೋದು, ಅಂಕಕ್ಕಾಗಿ ಓದುವುದು ಬದುಕಿನ ಮಟ್ಟಿಗೆ ಒಳ್ಳೆಯದಲ್ಲ. ಎಸ್‌ಎಸ್‌ಎಲ್‌ಸಿ, ಪಿಯುಸಿ ಫ‌ಲಿತಾಂಶದ ದಿನ ಆತ್ಮಹತ್ಯೆಗಳು ಜಾಸ್ತಿ ಆಗ್ತವಲ್ಲಾ ಏಕೆ, ಇದೇ ಕಾರಣಕ್ಕೆ. ಪ್ರಶಸ್ತಿಗಳಾಗಲಿ, ಅಂಕಗಳಾಗಲಿ ನೆಮ್ಮದಿಯ ಬದುಕನ್ನು ಕಟ್ಟಿಕೊಡುವುದಿಲ್ಲ.

ಸಿಂಗರ್‌, ಸಂಗೀತಗಾರ ಬೇರೆ ಬೇರೆ
ಇವತ್ತು ರಿಯಾಲಿಟಿ ಶೋ ಆಯ್ಕೆ ಮಕ್ಕಳದಲ್ಲ. ಮನೆಯವರದ್ದು. ಪೋಷಕರು, ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರುತ್ತಿದ್ದಾರೆ. ಇದು ತಪ್ಪು. ಆದರೂ ಸ್ಪರ್ಧೆಬೇಕು, ಪ್ರಶಸ್ತಿ ಗೆಲ್ಲಬೇಕು ಅನ್ನೋದೇ ಆದರೆ, ಮಾನಸಿಕವಾಗಿ ತಯಾರು ಮಾಡಬೇಕು. ಡೋಂಟ್‌ವರಿ, ಗೀವ್‌ ಯುವರ್‌ ಬೆಸ್ಟ್‌ ಅಂತ ಹೇಳಬೇಕು. ಪ್ರಶಸ್ತಿ ಮುಖ್ಯವಲ್ಲ ಅನ್ನೋದನ್ನು ತಿಳಿಹೇಳಬೇಕು.

ಇವೆಲ್ಲಾ ಬಿಡಿ, ರಿಯಾಲಿಟಿ ಶೋಗಳಿಂದ ಎಷ್ಟು ಜನ ಸಂಗೀತಗಾರರಾಗಿದ್ದಾರೆ ಹೇಳಿ ನೋಡೋಣ? ದೀರ್ಘ‌ಕಾಲದ ನಂತರ ಗೆಧ್ದೋರಿಗೂ, ಸೋತವರಿಗೂ ಏನಾದರೂ ವ್ಯತ್ಯಾಸ ಉಳಿದಿರುತ್ತ? ಇದಕ್ಕೆ ಸಿಗುವ ಉತ್ತರ ಸೊನ್ನೆ.

ನನ್ನ ಮಗ ಸಿಂಗರ್‌ ಆಗಬೇಕು, ನನ್ನ ಮಗ ಸಂಗೀತಗಾರ ಆಗಬೇಕು ಅನ್ನುವ ಈ ಎರಡರ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಉಸ್ತಾದ್‌ ಅಮೀರ್‌ಖಾನ್‌, ರಶೀದ್‌ಖಾನ್‌, ಪಂಡಿತ್‌ ವೆಂಕಟೇಶ್‌ ಕುಮಾರ್‌ ಎಲ್ಲರೂ ಇಂಥ ಸ್ಪರ್ಧೆಯಿಂದ ಸಂಗೀತಗಾರರಾದವರ? ಸಂಗೀತ ಅನ್ನೋದು ಸಮುದ್ರ. ಒಂದು ಕಾರ್ಯಕ್ರಮಕ್ಕಾಗಿ ಹತ್ತು ಹಾಡುಗಳನ್ನು ಪ್ರಾಕ್ಟೀಸ್‌ ಮಾಡೋದು, ಅದಕ್ಕಾಗಿ ಕೇಳ್ಳೋದು ಮಾಡಿದರೆ ಅವನು ಆ ಹತ್ತು ಹಾಡಿಗೆ ಮಾತ್ರ ಸೀಮಿತ ಆಗಿಬಿಡುತ್ತಾನೆ. ಆ ಬೇಲಿಯಿಂದ ಹೊರಬರುವುದೇ ಇಲ್ಲ.

ನಿಜವಾದ ಪ್ರತಿಭೆಗಳೆಲ್ಲಾ ಸ್ವಾಭಾವಿಕವಾಗಿ ಟೈಂ ತಗೊಂಡು ಅರಳ್ಳೋದು, ಒತ್ತಡದಲ್ಲಿ, ಯಾರದೋ ಬಲವಂತಕ್ಕೋ, ಆಸೆಗೋ, ಟಿಆರ್‌ಪಿಗೋ ಹೊರಬರುವುದು ಪ್ರತಿಭೆಯಲ್ಲ. ಬಂದರೂ ಅದೊಂಥರಾ ರಾಸಾಯನಿಕವನ್ನು ಪ್ರಯೋಗಿಸಿ ಹಣ್ಣು ಮಾಡಿದ ಮಾವಿನಂತೆ.
ನನ್ನ ಪ್ರಕಾರ ಇದೊಂಥರಾ ಅಮಾನವೀಯ ಕ್ರೌರ್ಯ.

ಎದು ತುಂಬಿ ಹಾಡುವೆನು ಮಾದರಿ
ರಿಯಾಲಿಟಿ ಶೋ ಎಂದರೆ ಹೇಗಿರಬೇಕು ಅನ್ನೋದಕ್ಕೆ ಇವತ್ತಿಗೂ ಮಾದರಿ ಅಂದರೆ ಅದು, ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ನಡೆಸಿ ಕೊಡುತ್ತಿದ್ದ “ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ. ಅಪಾರ ಜನಮನ್ನಣೆ ಗಳಿಸಿದ ಈ ರಿಯಾಲಿಟಿ ಶೋದಲ್ಲಿ ಸದುದ್ದೇಶಗಳಿತ್ತು. ಇದೂ ಕೂಡ ಸ್ಪರ್ಧೆ ಆದರೂ, ಯಾವ ಸ್ಪರ್ಧಿಗಳಲ್ಲೂ ನಾವು ಸ್ಪರ್ಧಿಗಳು ಅನ್ನೋ ಮನೋಭಾವ ಮೂಡಿಸಿರಲಿಲ್ಲ.

ಎಸ್‌ಪಿಬಿ ಅವರು, ಹಾಡುವುದು ಮುಖ್ಯ, ಪ್ರಶಸ್ತಿ ಅಲ್ಲ ಅನ್ನೋದನ್ನು ಪದೇ ಪದೇ ಹೇಳುತ್ತಿದ್ದರು. ಇದಕ್ಕೆ ಕಾರಣ, ಮಕ್ಕಳ ಮನಸ್ಸಲ್ಲಿ ನಿರಾಸೆ ಮನೆ ಮಾಡದೇ ಇರಲಿ ಎನ್ನುವ ಕಾರಣಕ್ಕೆ. ಈ ಶೋನಲ್ಲಿ ಯಾವುದೇ ಆರ್ಭಟಗಳು ಇರಲಿಲ್ಲ. ಹಾಡು ಯಾರದ್ದು, ಹಾಡಿದ್ದು ಯಾರು, ಸಂಗೀತ ಸಂಯೋಜಕರು ಯಾರು, ಸಿನಿಮಾದ ಹೆಸರೇನು ಹೀಗೆ – ಒಂದು ಹಾಡಿನ ಪೂರ್ವಾಪರವನ್ನು ಮಕ್ಕಳು ತಿಳಿಯಲಿ ಅಂತಲೇ ಅವರೇ ಹೇಳುತ್ತಿದ್ದರು. ಎಷ್ಟೋ ಸಲ, ಹಾಡಿನ ಪರಂಪರೆಯನ್ನು ತಿಳಿಸಲು, ಸ್ವಾರಸ್ಯಕರವಾದ ಘಟನೆಗಳನ್ನು ವಿವರಿಸುತ್ತಿದ್ದರು.

ವಿಶೇಷವಾಗಿ, ಹಾಡಿಗೆ ಸಂಬಂಧಿಸಿದ, ಅನುಭವಿ ಗೀತರಚನಾಕಾರರು, ಸಂಗೀತ ನಿರ್ದೇಶಕರನ್ನೇ ತೀರ್ಪುಗಾರರನ್ನಾಗಿ ಆಯ್ಕೆ ಮಾಡುತ್ತಿದ್ದದ್ದು ಕೂಡ ಮಕ್ಕಳ ಒಳಿತಿಗಾಗಿಯೇ. ಒಂದು ಪಕ್ಷ ಹಾಡುವಾಗ ಉಚ್ಚಾರಣೆಯಲ್ಲಿ ತಪ್ಪಾದರೆ, ಪದ ಬಳಕೆಯ ಬಗ್ಗೆ, ಭಾವಸ್ಪುರಣೆಯ ಬಗ್ಗೆ ತಿಳಿ ಹೇಳುತ್ತಿದ್ದರು. ಇದು ಗಾಯಕನಾಗಲು ಹೊರಡುವವರಿಗೆ ಬಹಳ ಮುಖ್ಯ. ಎಷ್ಟೋ ಸಲ, ಬಾಲು ಅವರು ಮೈಕ್‌ ಅನ್ನು ಹೇಗೆ ಹಿಡಿಯಬೇಕು, ವೇದಿಕೆ ಏರಿದ ನಂತರ ಎದುರಾಗುವ ಸವಾಲುಗಳನ್ನು ನಿಭಾಯಿಸುವ ಬಗೆ ಹೇಗೆ ಎಂದು ಹೇಳಿದ್ದೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ, ಚೆನ್ನಾಗಿ ಹಾಡಿದ ಮಕ್ಕಳ ಗುರುಗಳ ಹೆಸರನ್ನು ಕೇಳಿ, ಅವರನ್ನು ಹೊಗಳಿ, ಉತ್ಸಾಹ ಹೆಚ್ಚಿಸುವ ಪ್ರಸಂಗ ನಡೆದದ್ದೂ ಇದೆ. ಇದೆಲ್ಲ, ಸ್ಪರ್ಧಿಸಲು ಬರುತ್ತಿದ್ದ ಮಕ್ಕಳಿಗೆ ಮಾನಸಿಕ ಸಿದ್ಧತೆಗಳಾಗಿದ್ದವು.

ಈ ಕಾರ್ಯಕ್ರಮದಲ್ಲಿ ಯಾವತ್ತೂ ಕೂಡ, ಹೆತ್ತವರನ್ನು ಕರೆಸಿ, ಅಳಿಸಿ, ಅವರ ಬಡತನವನ್ನು ಮುಂದಿಟ್ಟುಕೊಂಡು ಟಿಆರ್‌ಪಿ ಪಡೆದ ಉದಾಹರಣೆ ಇಲ್ಲವೇ ಇಲ್ಲ. ಇವಿಷ್ಟೇ ಅಲ್ಲ, ಪ್ರತಿ ಕಾರ್ಯಕ್ರಮದಲ್ಲೂ ಒಂದೊಂದು ಶ್ಲೋಕ, ವಚನ ಹಾಡಿ, ಅದರ ಅರ್ಥ ಹೇಳುತ್ತಿದ್ದರು.

ಇವತ್ತಿನ ರಿಯಾಲಿಟಿ ಶೋಗಳು ಹೇಗಿವೆ ಅಂದರೆ, ಆತ ಇನ್ನು ಸ್ಪರ್ಧಿಯಷ್ಟೇ ಆಗಲೇ, ಅವನ ಸಂದರ್ಶನ, ಹೆತ್ತವರ ಹೊಗಳಿಕೆ ಎಲ್ಲವೂ ಪ್ರಸಾರವಾಗುತ್ತದೆ. ಇದು ಎಷ್ಟರ ಮಟ್ಟಿಗೆ ಎಂದರೆ, ಹಾಡುಗಾರನ ಬೆಡ್‌ರೂಂ ನಿಂದ, ಆತ ಪ್ರಾಕ್ಟೀಸ್‌ ಮಾಡುವ ರೀತಿಯನ್ನೂ ಶೂಟ್‌ ಮಾಡಿ ಪ್ರಕಾಂಡ ಪಂಡಿತನಂತೆ ಬಿಂಬಿಸುವ ಸಂಪ್ರದಾಯವಿದೆ. ಶೋ ಮುಗಿದ ನಂತರ ಅವನ ಬದುಕು ಏನಾಗಬಹುದು ಅನ್ನೋ ಪರಿಕಲ್ಪನೆ ಯಾರಿಗೂ ಇಲ್ಲ. ಎಲ್ಲಕ್ಕೂ ಟಿಆರ್‌ಪಿಯೇ ಮಾನದಂಡವಾಗಿದೆ.

ಊರಿಂದ ಓಡಿ ಬರುವ ಹೆತ್ತವರು
ತಮ್ಮ ಮಕ್ಕಳು ಟಿ.ವಿಯಲ್ಲಿ ಕಾಣಿಸಿಕೊಳ್ಳಬೇಕು ಅನ್ನೋ ಕನಸು ಒಂದಷ್ಟು ಹೆತ್ತವರಿಗಾದರೆ, ನನ್ನ ಮಗಳು ಟಿ.ವಿಯಲ್ಲಿ ಬಂದು ಬಿಟ್ಟರೆ ಬದುಕು ಸುಂದರವಾಗುತ್ತದೆ ಅನ್ನೋ ಆಸೆ ಇನ್ನೊಂದಷ್ಟು ಹೆತ್ತವರಿಗೆ. ಹೀಗಾಗಿ, ರಿಯಾಲಿಟಿ ಶೋಗೆ ಆಡಿಷನ್‌ ನಡೆಯುವ ಸಂದರ್ಭದಲ್ಲಿ, ಊಟ, ತಿಂಡಿ ಬಿಟ್ಟು ಮಕ್ಕಳನ್ನು ಕರೆದುಕೊಂಡು ಬಂದು ಕ್ಯೂ ನಿಂತಿರುತ್ತಾರೆ. ಆಯ್ಕೆಯಾಗದೇ ಇದ್ದರೆ ನಿರಾಸೆಯಿಂದ ಮನಗೆ ಹೋಗುತ್ತಾರೆ.

ಆಯ್ಕೆಯಾಗಬೇಕು ಅಂತ ಹಗಲು ರಾತ್ರಿ, ಮಕ್ಕಳ ನಾಲಿಗೆ ಮೇಲೆ ಹಾಡುಗಳನ್ನು “ಅಂಟಿ’ಸಲು ಸಕಲ ರೀತಿಯ ಸರ್ಕಸ್ಸುಗಳನ್ನು ಮಾಡುತ್ತಿರುತ್ತಾರೆ. ಇದು ಯಾವ ಮಟ್ಟಕ್ಕೆ ಎಂದರೆ, ಇದಕ್ಕಾಗಿ ದೂರದ ಬೆಂಗಳೂರಲ್ಲಿ ಮನೆ ಮಾಡಿ, ಶನಿವಾರ ಭಾನುವಾರಗಳಂದು ಇಲ್ಲೇ ಇದ್ದು, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಮತ್ತೆ ಊರಿಗೆ ಹೋಗುವ ಒಂದು ವರ್ಗವಿದೆ. ಇವರಿಗೆ ಎರಡೆರಡು ಮನೆ, ಎರಡೆರಡು ಕಡೆ ಸಂಸಾರ. ಖರ್ಚು.

ಇನ್ನೂ ಸ್ವಲ್ಪ ಆರ್ಥಿಕವಾಗಿ ಸಬಲರಾಗಿರುವವರು ಬೆಂಗಳೂರಲ್ಲೇ ಝಂಡಾ ಊರಿ, ಮಕ್ಕಳಿಗೆ ರಿಯಾಲಿಟಿ ಶೋಗಳಲ್ಲಿ ಹಾಡಿಸುವ ಉದ್ದೇಶದಿಂದ ಸಂಗೀತ ಪಾಠಕ್ಕೆ ಹಾಕಿರುವವರೂ ಇದ್ದಾರೆ. ಊರಲ್ಲಿ ಗಂಡನನ್ನು ಬಿಟ್ಟು, ಇಲ್ಲಿ ಹೆಂಡತಿ ಮಕ್ಕಳು ತಲೆ ತುಂಬ ಕನಸನ್ನು ತುಂಬಿಕೊಂಡು ಬದುಕುತ್ತಿರುತ್ತಾರೆ. ವಯಸ್ಸಾಗಿರುವ ತಂದೆ-ತಾಯಂದಿರು ಇದ್ದರಂತೂ, ಎರಡೂ ಮನೆಯನ್ನು ಬ್ಯಾಲೆನ್ಸ್‌ ಮಾಡುವ ಹೊತ್ತಿಗೆ ಬದುಕು ಸುಸ್ತಾಗಿರುತ್ತದೆ. ಹೀಗೆ, ತಮ್ಮ ಕನಸುಗಳನ್ನು ನನಸು ಮಾಡಲು, ಮಕ್ಕಳ ಬದುಕನ್ನು ಸವೆಸುತ್ತಿದ್ದಾರೆ.

ಒಂದು ಪಕ್ಷ ರಿಯಾಲಿಟಿ ಶೋಗೆ ಆಯ್ಕೆ ಆದರೂ ಅನ್ನಿ, ಆಗ ಊರನ್ನು ಮರೆತು, ಶೋ ಮುಗಿಯವ ತನಕ ಬೆಂಗಳೂರಿನ ಸಂಬಂಧಿಕರ ಮನೆಯಲ್ಲೋ ಅಥವಾ ಸ್ಟುಡಿಯೋಗೆ ಹತ್ತಿರವಾಗಲಿ ಅಂತ ರಾಜಾಜಿನಗರದಲ್ಲೋ, ಬಸವನಗುಡಿಯಲ್ಲೋ ಬಾಡಿಗೆ ಮನೆ ಹಿಡಿಯುತ್ತಾರಂತೆ. ಹೀಗಾಗಿ, ತಿಂಗಳಿಗೆ 8-10 ಸಾವಿರ ಖರ್ಚು. ಮಗ/ಮಗಳು ಫೈನಲ್‌ಗೆ ಹೋದರಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಅವರನ್ನು ಹಿಡಿಯುವವರು ಯಾರೂ ಇರುವುದಿಲ್ಲ.

ಅದರ ಪರಿಣಾಮ, ಯಾವುದೇ ಶುಭಸಮಾರಂಭದ ಆಹ್ವಾನ ಪತ್ರಿಕೆಗಳಲ್ಲಿ ಹೆಸರು ಬರುತ್ತದೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವಿಕೆಯೇ ಡೆಸಿಗ್ನೇಷನ್‌ ಆಗಿಬಿಡುತ್ತದೆ. ಕಾರ್ಯಕ್ರಮಕ್ಕೆ ಇಷ್ಟು ಅಂತ ಮೊತ್ತ ನಿಗದಿ ಮಾಡಿ, ಸಿಕ್ಕ ಸಿಕ್ಕ ಕಾರ್ಯಕ್ರಮಗಳನ್ನು ಕೊಡುತ್ತಾರೆ. ಹೆತ್ತವರು, ಆತನಕ ಮಕ್ಕಳು ಸಂಗೀತ ಕಲಿಕೆಗೆ ಹೂಡಿಕೆ ಮಾಡಿದ್ದ ಹಣವನ್ನು ವಾಪಸ್ಸು ಪಡೆಯಲು, ಒಂದು ಹಾಡಿಗೆ ಇಷ್ಟು ಸಾವಿರ ಅಂತ ನಿಗದಿ ಮಾಡುತ್ತಾರೆ. ನಿಜಕ್ಕೂ, ಸಂಸ್ಕಾರಯುತವಾಗಿ ಸಂಗೀತ ಕಲಿತವರು, ಇವೆಲ್ಲದರ ಜೊತೆ ಅದನ್ನೂ ಮುಂದುವರಿಸುತ್ತಾರೆ. ಇವರ ಸಂಖ್ಯೆ ಶೇ. 1,2ರಷ್ಟು ಇರಬಹುದು. ಉಳಿದವರು, ಕೇವಲ ಅಲ್ಪಜ್ಞಾನದಲ್ಲೇ, 10-20 ಹಾಡುಗಳನ್ನೇ ಹಾಡಿಕೊಂಡಿರುತ್ತಾರೆ. ಇದು ವಾಸ್ತವ ಸ್ಥಿತಿ.

ಮೇಷ್ಟ್ರು ಪಾಡು ಕೇಳ್ಳೋರಾರು?
“ಸಾರ್‌, ನನ್ನ ಮಗನಿಗೆ ಸಂಗೀತ ಹೇಳಿ ಕೊಡ್ತಿರಾ? ರಿಯಾಲಿಟಿ ಶೋನಲ್ಲಿ ಹಾಡಿದರೆ ಸಾಕು’-
ನಿಜವಾದ, ಸಂಸ್ಕಾರಯುತವಾಗಿ ಪಾಠ ಮಾಡುವ ಮೇಷ್ಟ್ರಾದರೆ ಈ ಮಾತು ಕೇಳಿ ಬೆಚ್ಚಿ ಬೀಳುತ್ತಾರೆ. ಏಕೆಂದರೆ, ಇವತ್ತು ಸಂಗೀತ ಅಂದರೆ ಅದು ರಿಯಾಲಿಟಿ ಶೋಗಳಲ್ಲಿ ಹಾಡುವುದು ಮಾತ್ರ ಎನ್ನುವಂತಾಗಿದೆ. ಇಲ್ಲಿ ಪೀಕಲಾಟ ಎಂದರೆ, ಸಂಗೀತ ಪಾಠ ಮಾಡುವ ಗುರುಗಳಿಗೆ, ಇಲ್ಲಾ, ಅದಕ್ಕೆಲ್ಲ ಹೇಳಿಕೊಡಲು ಆಗುವುದಿಲ್ಲ ಅಂದರೆ, ಊಟದ ಪ್ರಶ್ನೆ ಎದುರಾಗುತ್ತದೆ. ಹೇಳಿಕೊಡೋಣ ಅಂದರೆ, ಎಲ್ಲ ಶಾಸ್ತ್ರಗಳನ್ನು ಮರೆತು ಅವನಿಗೆ ಕೇವಲ ನಾಲಿಗೆ ಮೇಲೆ ಹಾಡುಗಳನ್ನು ಕಲಾಯಿ ಮಾಡಬೇಕಾಗುತ್ತದೆ.

ನಿಜವಾಗಿಯೂ ಸಂಗೀತ ಅಂದರೆ ಅದು ಧ್ಯಾನ. ಗಂಗೂಬಾಯ್‌ ಹಾನಗಲ್‌ ಒಂದು ರಾಗವನ್ನು ಐದು ವರ್ಷ ರಿಯಾಜ್‌ ಮಾಡಿದ್ದರು. ಭೀಮಸೇನ್‌ ಜೋಶಿ ಅವರು, ಒಂದೇ ರಾಗವನ್ನು ವರ್ಷಗಟ್ಟಲೇ ಹಾಡಿ ಆಮೇಲೆ ವೇದಿಕೆಗೆ ತಂದದ್ದೂ ಉಂಟು. ಹೀಗೆ ಸ್ವರ, ಲಯದ ಹಿಡಿತ ಸಾಧಿಸುವುದಕ್ಕೆ ದಶಕಗಳ ಕಾಲ ಸಂಗೀತದ ಜೊತೆ ಸಂಸಾರ ಮಾಡಬೇಕಾಗುತ್ತದೆ. ಇದನ್ನು ಈಗ ಹೇಳಲು ಹೋದರೆ, ಅವನೊಬ್ಬ ಹುಚ್ಚ ಅಂದಾರು. ಈಗಿನವರಿಗೆ ಸಂಗೀತ, ದರ್ಶನಿ ತಿಂಡಿಯ ಥರ ಆಗಿದೆ. ಬೇಕು ಅಂದಾಗ ಹಾಡಿ ಚಪ್ಪಾಳೆ ಗಳಿಸಬೇಕು.

ಹೀಗಾಗಿ, ಎಷ್ಟೋ ಸಂಗೀತ ಮೇಷ್ಟ್ರುಗಳು ಇಂದಿನ ರಿಯಾಲಿಟಿ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರಂತೆ. ಸ್ವರಜ್ಞಾನ, ತಾಳ ಜ್ಞಾನ ಬರಲು ಕನಿಷ್ಟ 4-5 ವರ್ಷವಾದರೂ ಗುರುಮುಖೇನ ಸಂಗೀತ ಕಲಿಯಬೇಕು. ಅಷ್ಟು ವ್ಯವಧಾನ ಇಲ್ಲದ ಹೆತ್ತವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಹಾಡುಗಳನ್ನು ಹಾಕಿ, ಪದೇ ಪದೇ ಕೇಳಿಸಿ, ಹಾಡಿಸಿ, ಮೂಲ ಹಾಡಿನಂತೆ ಕೇಳುವಂತೆ ಮಾಡುತ್ತಾರೆ. ಇದಕ್ಕಾಗಿ , ಹಾಡುಗಳನ್ನು ಉರುಹಚ್ಚಿಸುತ್ತಾರೆ.

“ನಾವು ಹೀಗೆ ಮಾಡ್ತೀವಿ. ಆದರೆ, ಸಂಗೀತ ಜ್ಞಾನ ಇಲ್ಲದ ಕಾರಣ, ಸ್ವತಂತ್ರವಾಗಿ ಹಾಡುವುದಕ್ಕೆ ಬರೋಲ್ಲ, ಬದಲಾಗಿ, ಮಕ್ಕಳು ಆ ಹಾಡಿಗಷ್ಟೇ ಸೀಮಿತವಾಗುತ್ತಾರೆ. ಹೊಸ ಹಾಡು ಕೊಟ್ಟರೆ, ಹಾಡುವುದಕ್ಕೆ ಬರೋಲ್ಲ. ಈ ಸತ್ಯ ನಮಗೂ ಗೊತ್ತು. ಏನು ಮಾಡೋಣ ಅಂತಾರೆ ಹೆಸರೇಳಲು ಇಚ್ಚಿಸದ ಸಂಗೀತ ಮೇಷ್ಟ್ರು.

ಆದರೆ, ಸಂಗೀತದ ಮೇಲೆ ಭಕ್ತಿ ಇರುವವರು, ರಿಯಾಲಿಟಿ ಶೋಗಳ ಕಡೆ ಕಣ್ಣೆತ್ತಿ ಕೂಡ ನೋಡೋಲ್ಲ. ಮಕ್ಕಳನ್ನು ಅತ್ತ ಕಡೆ ಸುಳಿಯಲೂ ಕೂಡ ಬಿಡೋಲ್ಲ ಅನ್ನೋದು ಈ ಕಾಲಮಾನದ ಸತ್ಯ.

Advertisement

Udayavani is now on Telegram. Click here to join our channel and stay updated with the latest news.

Next