Advertisement
ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾದ ಹನುಮಂತನ ನೆನೆದರೆ ಯಾವ ಕಷ್ಟ ಕಾರ್ಪಣ್ಯಗಳೂ ಕಾಡದು ಎಂದು ನಂಬಿರುವ ಕೋಟ್ಯಾನುಕೋಟಿ ಭಕ್ತರು ಇಂದೂ ಇದ್ದಾರೆ. ಹೀಗಾಗಿ, ಆಂಜನೇಯ ದೇಶದ ನಾನಾ ಕಡೆ ನಾನಾ ಹೆಸರುಗಳಿಂದ ನೆಲೆ ನಿಂತು ಭಕ್ತರನ್ನು ಪೊರೆಯುತ್ತಿದ್ದಾನೆ. ಅಂಥವುಗಳ ಪೈಕಿ ತುಮಕೂರಿನ ಗೂಳೂರಿನ ಬಳಿಯಿರುವ ಸುಮಾರು ಐನೂರು ವರ್ಷಗಳಷ್ಟು ಹಳೆಯದೆಂದು ಹೇಳಲಾಗುವ ಶೂಲದ ಆಂಜನೇಯ ದೇಗುಲವೂ ಒಂದು. ಗೂಳೂರು, ಗಣೇಶನಿಗೂ ಪ್ರಸಿದ್ದಿ, ಇದರ ಜೊತೆಗೆ ಹತ್ತಿರದಲ್ಲೇ ಇರುವ ಈ ದೇಗುಲವು ಸಹ ಹೆಸರುವಾಸಿಯಾಗಿದೆ. ಸಾವಿರಾರು ಭಕ್ತರು ಇಲ್ಲಿಗೆ ಬಂದು ತಮ್ಮ ಜೀವನದಲ್ಲಿ ಒಳಿತನ್ನು ಕಂಡಿದ್ದಾರೆ.
ಒಮ್ಮೆ ಇದೇ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದ ವ್ಯಾಸರಾಜರು, ತಮ್ಮ ದಿವ್ಯ ದೃಷ್ಟಿಯಿಂದ ಎಲ್ಲವನ್ನೂ ಅರಿತು ಒಂದು ಒಳ್ಳೆಯ ಮುಹೂರ್ತದಲ್ಲಿ ಈ ಆಂಜನೇಯನ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ದುಷ್ಟ ಶಕ್ತಿಗಳಿಂದ ಜನರಿಗೆ ಮುಕ್ತಿ ನೀಡಿದರು ಎನ್ನುವ ಐತಿಹ್ಯವಿದೆ. ಈ ಜಾಗದಲ್ಲಿ ತಪ್ಪು ಮಾಡಿದವರನ್ನು ಶೂಲಕ್ಕೆ ಹಾಕುತ್ತಿದ್ದ ಕಾರಣ, ಇಲ್ಲಿರುವ ದೇವರಿಗೆ ಶೂಲದ ಆಂಜನೇಯ ಎಂಬ ಹೆಸರು ಬಂದಿದೆಯಂತೆ.
Related Articles
ಸುಮಾರು ಆರು ಆಡಿ ಎತ್ತರವಿರುವ ಇಲ್ಲಿನ ಮೂರ್ತಿ ಅಭಯ ಹಸ್ತವಿರುವ ಬಲಗೈಯನ್ನು ಮೇಲಿತ್ತಿದ್ದು, ತಲೆಯ ಬಲಭಾಗದಲ್ಲಿ ಚಕ್ರ, ಎಡಭಾಗದಲ್ಲಿ ಶಂಖವಿದೆ. ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಇದರ ಜೊತೆಗೆ ಸೊಂಟದಲ್ಲಿ ಕತ್ತಿ ಇರುವುದು ಇನ್ನೊಂದು ವಿಶೇಷ. ಕತ್ತಿ ಇಟ್ಟುಕೊಂಡಿರುವ ಹನುಮನ ಮೂರ್ತಿ ಇರುವುದು ಬಹಳ ವಿರಳವೆಂದೇ ಹೇಳಬೇಕು. ಇಷ್ಟೇ ಅಲ್ಲದೇ ಕಾಲಿನ ಬಳಿ ಭೂತರಾಜರು ಇದ್ದು, ಇವರಿಗೆ ಇಲ್ಲಿ ಬಲಿ ಕೊಡುವ ಸಾಂಪ್ರದಾಯವೂ ಇದೆ.
Advertisement
ದುಷ್ಟ ಶಕ್ತಿಗಳಿಗೆ ಭಯ
ಕೆಟ್ಟಗಾಳಿ ಸೋಂಕು, ಭೂತ ಪಿಶಾಚಿಗಳ ಕಾಟ, ಮಾಟ ಮಂತ್ರಗಳ ಪ್ರಯೋಗದಿಂದ ನರಳುವವರು ಈ ದೇಗುಲಕ್ಕೆ ಬಂದು ಸೇವೆ ಮಾಡಿದರೆ ಅವುಗಳಿಂದ ಮುಕ್ತಿ ಸಿಗುತ್ತದೆ ಎಂದು ಪ್ರತೀತಿ ಇದೆ. ಹಾಗಾಗಿ, ಹುಣ್ಣಿಮೆ ಅಮಾವಾಸ್ಯೆಗಳಂದು ವಿಶೇಷ ಪೂಜೆ ಇರುತ್ತದೆ. ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯಲು ಇಲ್ಲಿ ಬಂದು ಪೂಜೆ ಮಾಡುತ್ತಾರೆ. ಅಭಿಷೇಕ ಮಾಡಿದ ನೀರನ್ನು ಹಾಕಿ ಪ್ರೋಕ್ಷಣೆ ಮಾಡಿಕೊಂಡು, ದೇಗುಲವನ್ನು ಮೂರು ಸುತ್ತು ಹಾಕಿದರೆ ದುಷ್ಟ ಶಕ್ತಿಗಳು ಬಿಟ್ಟು ಹೋಗುತ್ತವೆ ಎಂಬ ನಂಬಿಕೆ ಇದೆ. ಜಮೀನು, ಮನೆ ಖರೀದಿ, ವಿದ್ಯಾಭ್ಯಾಸ, ನಾಮಕರಣ, ಮದುವೆ-ಮುಂಜಿ ಕೆಲಸಕ್ಕಾಗಿ ಇಲ್ಲಿ ಬಂದು ಪ್ರಸಾದ ಕೇಳುವವರಿದ್ದಾರೆ. ಪ್ರಸಾದವಾದರೆ ಮಾತ್ರ ಮುಂದುವರೆಯುವ ಪರಿಪಾಠ ಇಲ್ಲಿ ಮೊದಲಿನಿಂದಲೂ ಇದೆ. ಹಾಗಾಗಿ, ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.
ಇಲ್ಲಿ ಬಂದು ಭಕ್ತಿಯಿಂದ ಬೇಡಿದರೆ ಮನಸ್ಸಿನಲ್ಲಿ ಅಂದುಕೊಂಡ ಕೆಲಸ ಆಗೇ ಆಗುತ್ತದೆ ಎನ್ನುವ ನಂಬಿಕೆ ಇದೆ. ತಿರುಪತಿಗೆ ಹೋಗಿ ಬರುವ ಭಕ್ತರು ಈ ದೇವಸ್ಥಾನಕ್ಕೆ ಬಂದು ತೀರ್ಥ ಒಡೆಯುವ ಸಂಪ್ರದಾಯವಿದೆ. ರಾಮನವಮಿ, ಹನುಮಜಯಂತಿ, ಭೀಮನ ಅಮವಾಸ್ಯೆ ಹಾಗೂ ಹುಣ್ಣಿಮೆಯಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಅತ್ಯಂತ ಚಿಕ್ಕದಾದ ಗರ್ಭಗುಡಿ ಇದ್ದು ಒಳಗಿರುವ ಆರಡಿ ಹನುಮನ ಮೂರ್ತಿಯೊಂದಿಗೆ ಇಬ್ಬರು ನಿಲ್ಲಲು ಮಾತ್ರ ಸ್ಥಳಾವಕಾಶವಿದೆ. ಮಾರ್ಗ: ತುಮಕೂರಿನಿಂದ ಕುಣಿಗಲ್‌ಗೆ ಹೋಗುವ ಮಾರ್ಗದಲ್ಲಿ 12 ಕಿ.ಮೀ. ಸಾಗಿದರೆ ಪ್ರಸಿದ್ಧ ಗೂಳೂರಿನ ಬಳಿ ಶೂಲದ ಆಂಜನೇಯನ ದರ್ಶನ ಪಡೆದು ಪುನೀತರಾಗಬಹುದು.
— ಪ್ರಕಾಶ್.ಕೆ.ನಾಡಿಗ್