Advertisement
ಕೌತುಕ ಮಾರ್ಗ: ಏಕಾಗ್ರತೆಗೆ ಚಟುವಟಿಕೆ ಆಧಾರಿತ ಶಿಕ್ಷಣ ಮುಖ್ಯ ;
Related Articles
Advertisement
ಆನ್‌ಲೈನ್ ಕ್ಲಾಸ್ ವೇಳೆ ಮಕ್ಕಳು ಮನೆಯಲ್ಲಿ ಯಾವ್ಯಾವುದೋ ಭಂಗಿಗಳಲ್ಲಿ ಕುಳಿತು ಪಾಠ ಕೇಳಿದ್ದಾರೆ. ಇದರಿಂದ ಚಂಚಲತೆ, ಆಲಸ್ಯ ಮೈಗೂಡಿರುತ್ತದೆ. ಆನ್‌ಲೈನ್ ಕ್ಲಾಸ್ ನಡುವೆಯೇ ಗೆಳೆಯ- ಗೆಳತಿಯರೊಂದಿಗೆ ಚಾಟಿಂಗ್ ನಡೆಸುವುದು, ಹರಟೆ ಹೊಡೆಯುವುದು ಅಭ್ಯಾಸವಾಗಿಬಿಟ್ಟಿದೆ. ಇಂಥ ಮುಕ್ತ ವಾತಾವರಣದಲ್ಲಿ ಕಳೆದ ಮಕ್ಕಳ ಮನಸ್ಸು, ದಿಢೀರನೆ ತರಗತಿಗೆ ಒಗ್ಗಿಕೊಳ್ಳಲು ಕೆಲವು ಸಮಯ ತೆಗೆದುಕೊಳ್ಳುವುದು ಸಹಜ. ಅಂದರೆ ಪ್ರತೀ ಶಿಕ್ಷಕರಿಗೂ ಇದು ಮಣ್ಣನ್ನು ಹದ ಮಾಡಿ, ಅನಂತರ ಆಕಾರ ಕೊಡಬೇಕಾದಂಥ ಸಂದರ್ಭ. ಹೀಗಾಗಿ ಆಟ, ಖುಷಿ ಕೊಡುವಂಥ ವ್ಯಾಯಾಮ ಚಟುವಟಿಕೆಗಳ ಮೂಲಕ ಮಕ್ಕಳ ಮನಸ್ಸನ್ನು ಅರಳಿಸುವ ಸೂತ್ರ ಅನುಸರಿಸಬೇಕು.
ಹೆಚ್ಚು ಹೆಚ್ಚು ಉಪದೇಶ, ಶಿಸ್ತುಕ್ರಮ ಉಪಯೋಗಕ್ಕೆ ಬರುವುದಿಲ್ಲ. ಮಕ್ಕಳ ಮನಸ್ಸಿನಲ್ಲಿ ಶಿಸ್ತು ಇದ್ದರೂ ಆಲಸ್ಯಕ್ಕೆ ಅಂಟಿಕೊಂಡ ಶರೀರ ಅದನ್ನು ರೂಢಿಸಿಕೊಳ್ಳುವುದು ತುಸು ನಿಧಾನವಾಗುತ್ತಿದೆ. ಕ್ಲಾಸ್‌ಗಳು ತೆರೆದಿವೆಯೆಂದು ತತ್‌ಕ್ಷಣ ಪಾಠ ಶುರುಮಾಡುವ ಅವಸರ ಬೇಡವೇ ಬೇಡ. ಪ್ರಾಯೋಗಿಕ ವಿಧಾನ, ರೋಲ್ ಪ್ಲೇಗಳ ಮೂಲಕ ಅವರನ್ನು ಮೊದಲು ಆ್ಯಕ್ಟಿವ್ ಆಗಿಸಿಕೊಳ್ಳುವುದು ಮುಖ್ಯ. ತರಗತಿಯಲ್ಲಿ ಚಿತ್ರಕಲೆ, ಹಾಡು ಮುಂತಾದ ಚಟುವಟಿಕೆಗಳನ್ನು ಮಾಡಿಸಿ, ಅವರಲ್ಲಿ ಏಕಾಗ್ರತೆಯನ್ನು ಸ್ಥಾಪಿಸುವ ಕೆಲಸ ಮಾಡಬೇಕು. ಅವಕಾಶವಿದ್ದರೆ, ವಾರಾಂತ್ಯದಲ್ಲಿ ಚಾರಣಕ್ಕೋ ಸಮೀಪದ ಮ್ಯೂಸಿಯಂಗೋ ಕರೆದೊಯ್ದು, ಮಕ್ಕಳಿಗೆ ಪ್ರಾಯೋಗಿಕ ತಿಳಿವಳಿಕೆ ಮೂಡಿಸಬಹುದು. ಪಾಠದತ್ತ ಗಮನಹರಿಸುತ್ತಿಲ್ಲವೆಂದು ಶಿಕ್ಷೆ ಕೊಟ್ಟರೆ ಏನೂ ಉಪಯೋಗವಿಲ್ಲ ಎಂಬ ಸತ್ಯ ಅರಿತುಕೊಳ್ಳಬೇಕು. ಮಕ್ಕಳನ್ನು ಹುರಿದುಂಬಿಸುವ ಚಟುವಟಿಕೆಗಳನ್ನು ಹೆಚ್ಚೆಚ್ಚು ಹಮ್ಮಿಕೊಳ್ಳುವ ಆವಶ್ಯಕತೆಯಿದೆ. ( ಡಾ| ಶುಭಾ ಮಧುಸೂದನ್ ಮನೋವಿಜ್ಞಾನಿ)
ಪ್ರೀತಿ ಮಾರ್ಗ: ಬಲವಂತವಾಗಿ ಮೊಬೈಲ್ ಕಸಿಯುವುದು ಬೇಡ ;
ಯಾವುದೇ ವ್ಯಸನ ಉದ್ದೀಪನಗೊಳ್ಳುವುದು ಒಂದು ವಸ್ತುವಿನ ಅತೀ ಲಭ್ಯತೆಯಿಂದ. Availability ಕಡಿಮೆಯಾದಂತೆ, ಅಡಿಕ್ಷನ್ ಕೂಡ ಕಡಿಮೆಯಾಗುತ್ತದೆ. ಕೊರೊನಾ ಕಾಲಘಟ್ಟದಲ್ಲಿ ಮಕ್ಕಳಿಗೆ ಅನಿವಾರ್ಯವಾಗಿ ಮೊಬೈಲ್, ಟಿವಿಗಳ ಸಂಪರ್ಕ ಅಧಿಕಗೊಂಡಿದ್ದವು. ಆದರೆ ಈಗ ಶಾಲೆಗಳು ತೆರೆದಿವೆ. ಮಕ್ಕಳು ದಿನದಲ್ಲಿ ಕನಿಷ್ಠವೆಂದರೂ 10 ಗಂಟೆಗಳನ್ನು ಶಾಲೆಗಾಗಿ ಮೀಸಲಿಡಲೇಬೇಕಾಗಿದೆ. ಶಾಲೆಯತ್ತ ಗಮನ ಕೊಟ್ಟಷ್ಟು ಕೆಲವರು ಮೊಬೈಲ್ ಬಳಕೆ ನಿಲ್ಲಿಸಬಹುದು. ಆದರೆ ಮತ್ತೆ ಕೆಲವರಿಗೆ ಮೊಬೈಲ್ ಗೀಳಿನಿಂದ ಹೊರಬರಲು ಸಾಧ್ಯವಾಗದಿರಬಹುದು. ಇಂಥ ವೇಳೆ ಹೆತ್ತವರು, ಮಕ್ಕಳ ಕೈಯಿಂದ ಬಲವಂತವಾಗಿ ಮೊಬೈಲ್ ಕಸಿದು, ಆಕ್ರೋಶ ಹೊರಹಾಕಬಾರದು. ಸಂಯಮ ಪಾಲನೆ ಅತೀ ಮುಖ್ಯ. “ನಂಗೆ ಅರ್ಥ ಆಗುತ್ತೆ. ನಿಂಗೆ ಮೊಬೈಲ್ ಬೇಕು ಅಂತ. ಇಷ್ಟ್ ನಿಮಿಷ ಯೂಸ್ ಮಾಡಿ ಕೊಟಿºಡು’ ಅಂತ ದಿನದಿಂದ ದಿನಕ್ಕೆ ಮೊಬೈಲ್ ಬಳಕೆ ತಗ್ಗಿಸುವ ಸೂತ್ರ ಅನುಸರಿಸಬೇಕು. ಹೀಗೆ ಮಾಡಿದಲ್ಲಿ, 15-20 ದಿನಗಳಲ್ಲಿ ಗೀಳಿನಿಂದ ಹೊರತರಬಹುದು. ಇದಲ್ಲದೆ ಹೆತ್ತವರು ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಮೀಸಲಿಡುವುದು ಮುಖ್ಯ. ಮೊಬೈಲ್‌ನಿಂದ ಅವರಿಗೆ ಸಿಗುತ್ತಿದ್ದ ಖುಷಿಯನ್ನು, ಇಂಡೋರ್ ಗೇಮ್ಸ್‌ನಂಥ ಚಟುವಟಿಕೆಯತ್ತ ವರ್ಗಾಯಿಸಬೇಕು. ( ಡಾ| ಪ್ರೀತಿ ಪೈ ಮನೋವೈದ್ಯೆ)
ಗೋ ಸ್ಲೋ ಮಾರ್ಗ: ಮಕ್ಕಳ ಮಟ್ಟಕ್ಕೆ ಶಿಕ್ಷಕರು ಇಳಿದರೇನೇ ಪರಿಹಾರ;
ಶಾಲೆ ಶುರುಮಾಡಿದ್ದೇವೆ ಎಂದಮಾತ್ರಕ್ಕೆ ಒಮ್ಮೆಲೆ ಸಿಲೆಬಸ್ ಮುಗಿಸಬೇಕು ಎಂಬ ಧಾವಂತ ಬೇಡ. ಎರಡು ವರುಷದ ಸುದೀರ್ಘ ಅವಧಿ ಅನಂತರ ಶಾಲೆಗೆ ಬಂದಿದ್ದಾರೆ ಎಂದರೆ, ಅವರ ಪಾಲಿಗೆ ಮೊದಲ ಬಾರಿಗೆ ಶಾಲೆಗೆ ಬಂದಂಥ ಭಾವವಿರುತ್ತದೆ. ಅದರಲ್ಲೂ ಆನ್‌ಲೈನ್ ಕ್ಲಾಸ್‌ನಲ್ಲಿ ದ್ವಿಮುಖ ಸಂವಹನವೇ ಸಾಧ್ಯವಾಗುತ್ತಿರಲಿಲ್ಲ. ಅಲ್ಲಿನ ವರ್ತನೆಯನ್ನೇ ಈಗ ತರಗತಿಯಲ್ಲೂ ಮುಂದುವರಿಸುತ್ತಿದ್ದಾರಷ್ಟೇ. ಹೀಗಾಗಿ ಶಿಕ್ಷಕರು “ಗೋ ಸ್ಲೋ’ ಸೂತ್ರ ಅನುಸರಿಸಿ, ಮಕ್ಕಳನ್ನು ಓಲೈಸಿಕೊಳ್ಳಬೇಕಿದೆ. ಕೆಲವೊಂದು ಶಾಲೆಗಳಲ್ಲಿ ಈಗಾಗಲೇ “ಆಟದಿಂದ ಪಾಠ’ ನೀತಿ ಅಳವಡಿಸಿದ್ದಾರೆ. ಇದು ವಕೌìಟ್ ಆಗುತ್ತದೆ. ಅವರಿಗೆ ಇಷ್ಟವಾದುದ್ದನ್ನು ನೀಡಿ, ಅವರ ಮನಸ್ಸು ಗೆಲ್ಲುವುದು ಇದರಿಂದ ಸಾಧ್ಯ. ಮಕ್ಕಳು ಗುಡ್ ಮಾರ್ನಿಂಗ್ ಹೇಳಲಿ, ಗೌರವ ಕೊಡಲಿ ಎಂದು ನಿರೀಕ್ಷಿಸುವುದಕ್ಕಿಂತ, ಕೆಲವು ದಿನಗಳ ಮಟ್ಟಿಗೆ ಶಿಕ್ಷಕರೇ ಮೊದಲು “ಗುಡ್ ಮಾರ್ನಿಂಗ್’ ಹೇಳುವುದನ್ನು ರೂಢಿಸಿಕೊಳ್ಳಬೇಕು. ಶಿಕ್ಷಕರು ಪ್ರೀತಿ ತೋರುತ್ತಾ ಹೋದಂತೆ, ಮಕ್ಕಳೇ ಸ್ವಪ್ರೇರಣೆಯಿಂದ ಗೌರವ ಕೊಡಲು ಆರಂಭಿಸುತ್ತಾರೆ. ನಮ್ಮ ಅಪೇಕ್ಷೆ ಕಡಿಮೆಮಾಡಿ, ಮಕ್ಕಳ ಮಟ್ಟಕ್ಕೆ ನಾವು ಇಳಿಯುವುದು ಅನಿವಾರ್ಯ. ( ಡಾ| ಶುಭ್ರತಾ ಕೆ.ಎಸ್ ಮನೋವೈದ್ಯೆ)
ಸಂಯಮ ಮಾರ್ಗ: ಹೊಡೆದರೆ, ಬಡಿದರೆ ಶಿಸ್ತು ಮೂಡದು! :
ದೈಹಿಕ ಶಿಸ್ತನ್ನು ಹೊಡೆಯುವುದು ಬಡಿಯುವುದರಿಂದ ಭಾಗಶಃ ತರಬಹುದೇನೋ. ಆದರೆ ಮಾನಸಿಕ ಶಿಸ್ತನ್ನು ನಯವಾಗಿ, ನಾಜೂಕಾಗಿ, ಮಕ್ಕಳ ಮನಸ್ಸಿಗೆ ನೋವು ಆಗದ ರೀತಿಯಲ್ಲಿ ಮೂಡಿಸುವು ಅವಶ್ಯ. ಶಿಕ್ಷಣಕ್ಕೆ ಅತೀ ಮುಖ್ಯವಾಗಿ ಬೇಕಿರುವುದೇ ಮಾನಸಿಕ ಶಿಸ್ತು. ಕೊರೊನಾ ಕಾಲಘಟ್ಟದಲ್ಲಿ ಮಕ್ಕಳು ಮನೆಯ ಸ್ವತ್ಛಂದ ವಾತಾವರಣಕ್ಕೆ ಒಗ್ಗಿಹೋಗಿದ್ದವು. ಎರಡು ವರ್ಷದ ಬಳಿಕ ಈಗ ದಿಢೀರ್ ಕುಳಿತು ಪಾಠ ಕೇಳುವ ಮನಃಸ್ಥಿತಿ ಅವರೊಳಗೆ ಮೂಡುವುದು ಕಷ್ಟ. ಒಂದೇ ದಿನ, ಒಂದೇ ವಾರದಲ್ಲಿ ಶಿಸ್ತು ತರುತ್ತೇವೆ ಎನ್ನುವ ಛಲ ಬೇಡವೇ ಬೇಡ.
ಮನಃಶಾಸ್ತ್ರದಲ್ಲಿ ಈ ಸಮಸ್ಯೆಯನ್ನು “ರಿಗ್ರೇಶನ್ ಟು ದಿ ಮೀನ್’ ಅಂತಾರೆ. ಸ್ವಲ್ಪ ದಿನ ಈ ಉದ್ವಿಗ್ನತೆ ಇರುತ್ತೆ. ಅನಂತರ ಎಲ್ಲವೂ ನಾರ್ಮಲ್ ಆಗುತ್ತೆ. ಮಕ್ಕಳನ್ನು ದೂಷಿಸುವುದರಿಂದ, ಮಕ್ಕಳನ್ನು ಥಳಿಸುವುದರಿಂದ ಏನೂ ಉಪಯೋಗ ಆಗದು. ಈಗ ಬದಲಾಗಬೇಕಿರುವುದು ಮಕ್ಕಳಲ್ಲ, ಶಿಕ್ಷಕರು. ತರಗತಿಗೆ ತಡವಾಗಿ ಬಂದಾಗ, ಪಾಠದ ನಡುವೆ ಮಾತನಾಡಿದಾಗ ಶಿಕ್ಷಿಸುವುದರಿಂದ ಶಾಲೆಯ ಬಗ್ಗೆ ತಾತ್ಸಾರ ಭಾವ ಹುಟ್ಟಬಹುದು. ಮಕ್ಕಳು ರೆಬೆಲ್‌ಗಳಾಗಬಹುದು. ಹಾಗಾಗಿ “ಇಮ್ಮಿಡಿಯೆಟ್ ಕರೆಕ್ಷನ್’ ಎಂಬ ಆಲೋಚನೆಯನ್ನು ಶಿಕ್ಷಕರು ಬಿಡಬೇಕು. (ಡಾ| ಪ್ರದೀಪ್ ಬಾನಂದೂರು ಪ್ರಾಧ್ಯಾಪಕರು, ನಿಮ್ಹಾನ್ಸ್)
ಆಪ್ತ ಮಾರ್ಗ: ವಿಶೇಷ ಚಟುವಟಿಕೆಗಳು ಅನಿವಾರ್ಯ
ಕಳೆದ ಒಂದೂವರೆ ವರ್ಷದಿಂದ ಮಕ್ಕಳು ಮನೆಯಲ್ಲಿರುವುದರಿಂದ ಗಣಿತ ಮತ್ತು ಭಾಷಾ ಕೌಶಲವನ್ನು ಮರೆತಿದ್ದಾರೆ. ಅಂದರೆ ಅವರಲ್ಲಿ ಕಲಿಕಾ ಸಾಮರ್ಥ್ಯ ಕಡಿಮೆಯಾಗಿದೆ. ಆದ್ದರಿಂದ ಮಕ್ಕಳನ್ನು ಆಟೋಟಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು, ಬೇರೆ ಮಕ್ಕಳ ಜತೆ ಬೆರೆಯಲು ಗುಂಪು ಆಟಗಳನ್ನು ಆಡಿಸುವುದು, ಕೊರೊನಾ ಸಮಯದಲ್ಲಿ ತಮಗಾದ ಅನುಭವ ಹಂಚಿಕೊಳ್ಳಲು ವೇದಿಕೆ ಕಲ್ಪಿಸುವುದು ಅತೀ ಮುಖ್ಯ. ತಂದೆ-ತಾಯಿ, ಸಂಬಂಧಿಕರನ್ನು ಕಳೆದುಕೊಂಡು ಮಕ್ಕಳು ಖನ್ನತೆಗೆ ಒಳಗಾಗಿದ್ದರೆ ಅದರಿಂದ ಹೊರತರಲು ಕೌನ್ಸೆಲಿಂಗ್ ನಡೆಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಶಿಕ್ಷಕರು ಆಪ್ತ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಿದರೆ ಮಕ್ಕಳು ಬೇಗನೆ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಲಿದೆ. ಆದರೆ ಹೆಚ್ಚಿನ ಶಾಲೆಗಳಲ್ಲಿ ಕೂಡಲೇ ಪಾಠ ಮುಗಿಸಲು ಹೊರಟಿವೆ. 3 ವರ್ಷದ ಶಿಕ್ಷಣವನ್ನು ಒಮ್ಮೆಲೇ ಕಲಿಸಬೇಕಿದೆ. ಕಲಿಕೆಗೆ ಹೆಚ್ಚಿನ ಒತ್ತಡವೇರಿದರೆ, ಮಕ್ಕಳು ಶಾಲೆ ಬಿಡುವ ಅಪಾಯ ಎದುರಾಗಬಹುದು. ಆದ್ದರಿಂದ ಶಿಕ್ಷಕರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿದರೆ ಒಳಿತು. ಪೂರ್ಣ ಪ್ರಮಾಣದ ಪಠ್ಯಕ್ಕೆ ಪರೀಕ್ಷೆ ನಡೆಸಿದರೆ, ಮಕ್ಕಳು ಅನುತ್ತೀರ್ಣರಾಗುತ್ತೇಂಬ ಭಯ ಮಕ್ಕಳಲ್ಲಿ ಆವರಿಸಲಿದೆ. ಹೀಗಾಗಿ ಈ ಬಾರಿಯೂ ಪರೀಕ್ಷಾ ವಿಚಾರದಲ್ಲಿ ಸರಕಾರ ಎಚ್ಚರಿಕೆ ವಹಿಸಬೇಕು. (ನಿರಂಜನಾರಾಧ್ಯ ಶಿಕ್ಷಣ ತಜ್ಞ)
ಶಾಲೆಗಳು ಆರಂಭವಾಗಿವೆ. ಮಕ್ಕಳ ಪಾಲ್ಗೊಳ್ಳುವಿಕೆ ಹೇಗಿದೆ? :
ನಮ್ಮ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.50ಕ್ಕೂ ಹೆಚ್ಚು ಶಿಕ್ಷಕರು ಶಾಲೆಯಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಉತ್ತಮವಾಗಿದೆ ಎಂದೇ ಹೇಳಿದ್ದಾರೆ. ಅಂದರೆ ಮಕ್ಕಳು ಯಾವಾಗ ಶಾಲೆ ಆರಂಭವಾಗುತ್ತದೆ ಎಂದು ಕಾಯುತ್ತಿದ್ದರು ಎಂಬುದು ಇದರಿಂದ ಗೊತ್ತಾಗುತ್ತದೆ. ಇನ್ನು ಶೇ.40.5ರಷ್ಟು ಶಿಕ್ಷಕರು ಸಮಾಧಾನಕರವಾಗಿದೆ ಎಂದಿದ್ದಾರೆ. ಅಂದರೆ ಒಂದಷ್ಟು ಸುಧಾರಿಸಬೇಕು ಎಂಬುದು ಇವರ ಅಭಿಪ್ರಾಯ. ಹೀಗಾಗಿ ಶಾಲೆ ಆರಂಭವಾಗಿರುವುದರಿಂದ ಮಕ್ಕಳ ಮೇಲೆ ಅಡ್ಡಪರಿಣಾಮವೇನೂ ಬೀರಿಲ್ಲ ಎಂಬುದು ಇದರಿಂದ ಅರ್ಥವಾಗುತ್ತದೆ. ಏಕೆಂದರೆ ನಮ್ಮ ಸಮೀಕ್ಷೆಯ ಶೇ.90ರಷ್ಟು ಮಂದಿ ಉತ್ತಮ ಮತ್ತು ಸಮಾಧಾನಕರ ಎಂದು ಹೇಳಿರುವುದೇ ಇದಕ್ಕೆ ಸಾಕ್ಷಿ.
ಇನ್ನೂ ಗೊತ್ತಾಗುತ್ತಿಲ್ಲ – ಶೇ.3.1
ಸಮಾಧಾನಕರ – ಶೇ.40.5
ಉತ್ತಮ – ಶೇ.50.5
ಕಳಪೆ – ಶೇ.4.4
ಇತರೆ – ಶೇ.1.5
ಮಕ್ಕಳ ಓದು, ಗ್ರಹಿಕೆ ಹಾಗೂ ಏಕಾಗ್ರತೆಯಲ್ಲಿ ಕುಸಿತ ಕಂಡು ಬಂದಿದೆ ಎಂಬ ವಾದಗಳಿವೆ. ನಿಮ್ಮ ಅನುಭವದ ಪ್ರಕಾರ ಇದು ನಿಜವೇ? :
ಮಕ್ಕಳ ಓದು, ಗ್ರಹಿಕೆ ಮತ್ತು ಏಕಾಗ್ರತೆಯಲ್ಲಿ ಗಂಭೀರವಾದ ಕುಸಿತ ಬಂದಿದೆ ಎಂಬುದು ನಮ್ಮ ಸಮೀಕ್ಷೆಯಲ್ಲಿ ಮನದಟ್ಟಾಗಿದೆ. ವಿಚಿತ್ರವೆಂದರೆ, ಇದು ನಿಜಕ್ಕೂ ಒಂದು ರೀತಿಯಲ್ಲಿ ಕಳವಳಕಾರಿ ಸಂಗತಿಯೇ ಆಗಿದೆ. ಬಹುತೇಕ ಶಿಕ್ಷಕರು ತಮ್ಮ ಅಭಿಪ್ರಾಯ ಹೇಳುವಾಗಲೂ ಇದೇ ಅಂಶವನ್ನು ಮುಖ್ಯವಾಗಿ ಪ್ರಸ್ತಾವಿಸಿದ್ದಾರೆ. ಅಂದರೆ ಶೇ.58.1ರಷ್ಟು ಶಿಕ್ಷಕರು ಮಕ್ಕಳಲ್ಲಿ ಏಕಾಗ್ರತೆ, ಗ್ರಹಿಕೆಯ ಸಮಸ್ಯೆ ಕಾಣುತ್ತಿದ್ದೇವೆ ಎಂದಿದ್ದಾರೆ. ಆದರೆ ಇನ್ನೂ
ಕೆಲವು ಶಿಕ್ಷಕರು ಕೆಲವೇ ಕೆಲವು ವಿದ್ಯಾರ್ಥಿಗಳಲ್ಲಿ ಮಾತ್ರ ಕಾಣಿಸಿಕೊಂಡಿದೆ ಎಂದೂ ಹೇಳಿದ್ದಾರೆ. ಅಂದರೆ ಶೇಕಡಾ 37.1ರಷ್ಟು ಶಿಕ್ಷಕರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದವರು ಮಕ್ಕಳಲ್ಲಿ ಅಂಥ ವ್ಯತ್ಯಾಸವೇನೂ ಕಂಡುಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಅಂಥ ವ್ಯತ್ಯಾಸ ಕಂಡು ಬಂದಿಲ್ಲ – ಶೇ.4.8
ಗ್ರಹಿಕೆ ಹಾಗೂ ಏಕಾಗ್ರತೆ ಕುಸಿದಿರುವುದು ನಿಜ – ಶೇ.58.1
ಕೆಲವು ನಿರ್ದಿಷ್ಟ ವಿದ್ಯಾರ್ಥಿಗಳಲ್ಲಿ ಮಾತ್ರ ಈ ಸಮಸ್ಯೆ ಕಾಣಿಸಿಕೊಂಡಿದೆ – ಶೇ.37.1
ಆನ್‌ಲೈನ್ ತರಗತಿ ಸಮಯದಲ್ಲಿ ಮಕ್ಕಳಲ್ಲಿ ಕಾಣಿಸಿಕೊಂಡ ಮೊಬೈಲ್ ಗೀಳಿನ ಪರಿಣಾಮ ವ್ಯಕ್ತವಾಗುತ್ತಿದೆಯೇ? :
ಆನ್‌ಲೈನ್ ತರಗತಿ ವೇಳೆ ಹಚ್ಚಿಕೊಂಡ ಮೊಬೈಲ್ ಗೀಳು ಇನ್ನೂ ಕಾಡುತ್ತಿರುವುದು ಸತ್ಯ ಎನ್ನುತ್ತಾರೆ ಬಹಳಷ್ಟು ಶಿಕ್ಷಕರು. ಶೇ.47.8 ಶಿಕ್ಷಕರು ಮೊಬೈಲ್ ಗೀಳಿನಿಂದಾಗಿ ಮಕ್ಕಳ ಮನೋಪ್ರವೃತ್ತಿ ಬದಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಶೇ.31.7 ಮಂದಿ ಶಾಲೆ ಆರಂಭವಾದ ಮೇಲೆ ಮಕ್ಕಳಲ್ಲಿ ಮೊಬೈಲ್ ಗೀಳು ತಗ್ಗಿ ಹೊಸ ವಾತಾವರಣಕ್ಕೆ ಒಗ್ಗಿಕೊಂಡಿದ್ದಾರೆ ಎಂಬುದು ಸಮಾಧಾನಕರ ಸಂಗತಿ. ಶೇ.10 ಮಂದಿ, ಪಾಲಕರಿಬ್ಬರೂ ಉದ್ಯೋಗದಲ್ಲಿರುವ ಮಕ್ಕಳಲ್ಲಿ ಇದು ಹೆಚ್ಚಾಗಿ ಕಾಣಿಸುತ್ತಿದೆ ಎಂದಿದ್ದಾರೆ. ಶೇ.10.5 ಶಿಕ್ಷಕರು ಮಾತ್ರ, ಈ ಬಗ್ಗೆ ಉತ್ತರಿಸಲು ಇನ್ನೂ ಸಮಯವಕಾಶ ಬೇಕು ಎಂದಿದ್ದಾರೆ.
ಮಕ್ಕಳ ಮನೋಪ್ರವೃತ್ತಿ ಬದಲಾಗಿದೆ -ಶೇ.47.8
ಪಾಲಕರಿಬ್ಬರೂ ಉದ್ಯೋಗದಲ್ಲಿರುವ ಮಕ್ಕಳಲ್ಲಿ ಇದು ಹೆಚ್ಚಾಗಿ ಕಾಣಿಸುತ್ತಿದೆ – ಶೇ.10.0
ಉತ್ತರಿಸಲು ಸಮಯ ಬೇಕು – ಶೇ.10.5
ಇಲ್ಲ. ಶಾಲೆ ಶುರುವಾದ ಮೇಲೆ ಮಕ್ಕಳು ಹೊಸ ವಾತಾವರಣಕ್ಕೆ ಒಗ್ಗಿಕೊಂಡಿದ್ದಾರೆ – ಶೇ.31.7
ತರಗತಿಯಲ್ಲಿ ಈಗ ಮಕ್ಕಳನ್ನು ನಿಭಾಯಿಸುವುದು ಸವಾಲು ಎನ್ನಿಸುತ್ತಿದೆಯೇ? :
ಒಂದೂವರೆ ವರ್ಷದ ಅನಂತರ ಮಕ್ಕಳು ಶಾಲೆಗೆ ಬಂದಿದ್ದು, ಮಕ್ಕಳನ್ನು ಸಂಭಾಳಿಸುವುದು ಕಷ್ಟವಾಗುತ್ತಿದೆ ಎಂಬುದು ಬಹುತೇಕ ಶಿಕ್ಷಕರ ಅಭಿಪ್ರಾಯ. ಅಂದರೆ ಕೊರೊನಾ ಪೂರ್ವಕಾಲಕ್ಕಿಂತಲೂ ಈಗ ಮಕ್ಕಳನ್ನು ನಿಭಾಯಿಸುವುದು ಕಷ್ಟವಾಗಿದೆ ಎಂದು ಶೇ.50.3ರಷ್ಟು ಶಿಕ್ಷಕರು ಹೇಳಿದ್ದಾರೆ. ಹಾಗೆಯೇ ಶಾಲೆ ಆರಂಭವಾಗಿ ಇನ್ನು ಕೆಲವೇ ದಿನಗಳಾಗಿವೆ. ಆದರೂ ಮಕ್ಕಳು ಶಾಲೆಯ ವಾತಾವರಣಕ್ಕೆ ಒಗ್ಗಿಕೊಂಡಿದ್ದಾರೆ ಎಂಬುದು ಶೇ.28.5ರಷ್ಟು ಶಿಕ್ಷಕರ ಅಭಿಪ್ರಾಯ. ಇನ್ನೂ ವಿಶೇಷವೆಂದರೆ, ಮೊದಲಿನಂತೆಯೇ ಮಕ್ಕಳಿದ್ದಾರೆ. ಅವರನ್ನು ಒಗ್ಗಿಸುವುದು, ಬಿಡುವುದು ಅಂತೇನಿಲ್ಲ ಎಂದು ಶೇ.21.2ರಷ್ಟು ಮಂದಿ ಹೇಳಿದ್ದಾರೆ.
ಹಾಗೇನಿಲ್ಲ – ಶೇ.21.2
ಕೆಲವೇ ದಿನಗಳಲ್ಲಿ ಮಕ್ಕಳು ಒಗ್ಗಿಕೊಂಡಿದ್ದಾರೆ – ಶೇ.28.5
ಮೊದಲಿಗಿಂತಲೂ ಸವಾಲಿನ ಕೆಲಸ – ಶೇ. 50.3
ಸಾಮಾಜೀಕರಣ ಇಲ್ಲದಿರುವುದರ ಪರಿಣಾಮ ಮಕ್ಕಳ ಮೇಲೆ ಏನಾಗಿದೆ? :
ಕೊರೊನಾ ಲಾಕ್‌ಡೌನ್, ಆನ್‌ಲೈನ್ ಕ್ಲಾಸ್‌ನಿಂದಾಗಿ ಮಕ್ಕಳು ಅನ್ಯಮನಸ್ಕರಾಗುವುದು ಅಥವಾ ಕ್ರಿಯಾಶೀಲತೆ ಕಳೆದುಕೊಂಡಿರಬಹುದು ಎಂಬ ಆತಂಕವಿತ್ತು. ಆದರೆ ಸಮೀಕ್ಷೆ ಇದಕ್ಕೆ ವ್ಯತಿರಿಕ್ತ ಉತ್ತರ ನೀಡಿದೆ. ಅಂದರೆ ಮಕ್ಕಳು ಮನೆಯಲ್ಲಿ ಒಂಟಿಯಾಗಿ ಅಥವಾ ಸ್ನೇಹಿತರ ಸಂಪರ್ಕ ಇಲ್ಲದೇ ಹೋದರೂ ಮೊದಲಿಗಿಂತಲೂ ಹೆಚ್ಚು ಕ್ರಿಯಾಶೀಲರಿದ್ದಾರೆ ಎಂದು ಶೇ.45.7 ಶಿಕ್ಷಕರು ಹೇಳಿದ್ದಾರೆ. ಆದರೆ ಶೇ.36.2 ಶಿಕ್ಷಕರು ಮಕ್ಕಳಲ್ಲಿ ಒಂಟಿತನವಿದೆ ಎಂದಿದ್ದಾರೆ. ಹಾಗೆಯೇ ಇನ್ನೂ ಕೆಲವು ಮಕ್ಕಳು ಮೊದಲಿನಿಂತ ಮಾತನಾಡದೇ ಮೌನಿಯಾಗಿದ್ದಾರೆ ಎಂದೂ ಶಿಕ್ಷಕರು ಅಭಿಪ್ರಾಯಪಡುತ್ತಾರೆ. ಹೀಗೆ ಹೇಳಿದವರು ಶೇ.18.1 ಮಂದಿ.
ಮಕ್ಕಳಲ್ಲಿ ಒಂಟಿತನ ಇದೆ – ಶೇ.36.2
ಮಕ್ಕಳು ಮೌನಿ ಆಗಿದ್ದಾರೆ – ಶೇ.18.1
ಹಾಗೇನಿಲ್ಲ, ಮೊದಲಿಗಿಂತಲೂ ಕ್ರಿಯಾಶೀಲರಾಗಿದ್ದಾರೆ – ಶೇ.45.7
ಒಂದೂವರೆ ವರ್ಷದಲ್ಲಿ ಮಕ್ಕಳಲ್ಲಿ ಆ ವಯಸ್ಸಿಗೆ ಇರಬೇಕಾದಷ್ಟು ಕಲಿಕಾ ಮಟ್ಟ ಕಾಣಿಸುತ್ತಿದೆಯೇ? :
ಕೊರೊನಾ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಕಲಿಕಾ ಮಟ್ಟ ಕುಸಿದಿದೆ ಎಂಬುದನ್ನು ಶಿಕ್ಷಕರು ಒಪ್ಪಿಕೊಳ್ಳುತ್ತಾರೆ.ಈ ಒಂದೂವರೆ ವರ್ಷ ಅವರ ಕಲಿಕಾ ಸಾಮರ್ಥ್ಯವನ್ನೇ ಕಿತ್ತುಕೊಂಡಿದೆ. ಇದಕ್ಕೆ ಬದಲಾಗಿ ಪಠ್ಯಕ್ಕಿಂತ ಪಠ್ಯೇತರ ಕಲಿಕಾ ಮಟ್ಟದಲ್ಲಿ ಹೆಚ್ಚಳವಾಗಿದೆ ಎಂದು ಶೇ.15.4 ಶಿಕ್ಷಕರು ಹೇಳುತ್ತಾರೆ. ಇದು ಆನ್‌ಲೈನ್ ಕ್ಲಾಸ್ ಕಾರಣದಿಂದಾಗಿ ಮಕ್ಕಳ ಕೈನಲ್ಲಿದ್ದ ಮೊಬೈಲ್, ಲ್ಯಾಪ್‌ಟಾಪ್‌ಗಳ ಕಾರಣದಿಂದ ಆಗಿರಬಹುದು. ಇನ್ನು ಕಲಿಕೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂಬುದು ಶೇ.4.6 ಶಿಕ್ಷಕರ ಅಭಿಪ್ರಾಯ.
ವಯೋಮಾನಕ್ಕೆ ತಕ್ಕ ಕಲಿಕೆ ಕುಸಿದಿದೆ – ಶೇ.80.0
ಪಠ್ಯಕ್ಕಿಂತ ಪಠ್ಯೇತರ ಕಲಿಕಾ ಮಟ್ಟ ಹೆಚ್ಚಿದೆ – ಶೇ.15.4
ಕಲಿಕೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ – ಶೇ.4.6