ಇಸ್ಲಾಮಾಬಾದ್: ಕರ್ನಾಟಕದಲ್ಲಿ ಹುಲಿ ಉಗುರು ಧರಿಸಿರುವ ಪ್ರಕರಣ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನದ ಬ್ಯಾಂಕ್ ಆಫ್ ಖೈಬರ್ ಪ್ರದೇಶದ ಸಮೀಪದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಸರಪಳಿಯಿಂದ ಕಟ್ಟಿದ್ದ ಹುಲಿಯ ಜೊತೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:MSD; ‘ಅಂದೇ ನಿವೃತ್ತಿಯ ಬಗ್ಗೆ ನಿರ್ಧರಿಸಿದ್ದೆ..’: 4 ವರ್ಷದ ಬಳಿಕ ಗುಟ್ಟು ಬಿಚ್ಚಿಟ್ಟ ಧೋನಿ
ಸಾರ್ವಜನಿಕವಾಗಿ ಹುಲಿಯನ್ನು ರಸ್ತೆಯಲ್ಲಿ ಅಡ್ಡಾಡಲು ಕರೆದೊಯ್ದಿರುವ ಬಗ್ಗೆ ನೆಟ್ಟಿಗರು ಜನರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆಯಾಸದಿಂದ ಬಳಲಿರುವ ಹುಲಿ ತನ್ನ ಕೊರಳಿಗೆ ಹಾಕಿರುವ ಚೈನ್ ನಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಟಿಪ್ ಟಾಪ್ ಯಾತ್ರಾ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಒಂದು ದಿನದ ಹಿಂದೆ ಶೇರ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬ್ಯಾಂಕ್ ಆಫ್ ಖೈಬರ್ ಪ್ರದೇಶದ ಜನನಿಭಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಚೈನ್ ನಿಂದ ಬಿಗಿದ ಹುಲಿಯ ಜತೆ ನಡೆದುಕೊಂಡು ಬರುತ್ತಿರುವುದು ವಿಡಿಯೋದಲ್ಲಿದೆ. ರೋಷದಲ್ಲಿರುವ ಹುಲಿ ರಸ್ತೆಯಲ್ಲಿ ತೆರಳುವ ವಾಹನಗಳ ಮೇಲೆ ದಾಳಿ ನಡೆಸಲು ಯತ್ನಿಸುತ್ತಿರುವುದು ವಿಡಿಯೋದಲ್ಲಿದೆ.
ಹುಲಿಗೆ ಕುತ್ತಿಗೆಗೆ ಸರಪಳಿಯಿಂದ ಕಟ್ಟಿದ್ದರೂ ಕೂಡಾ ಜನರು ಓಡಾಡುವ ಪ್ರದೇಶಕ್ಕೆ ತರುವುದು ಅಪಾಯಕಾರಿಯಾಗಿದೆ. ಇದೊಂದು ಅವಿವೇಕದ ಕೆಲಸವಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.