ಮುಂಡಗೋಡ: ಸಹಜ ಸಾವು ಎಂದು ತಿಳಿದು ಅಂತ್ಯಕ್ರಿಯೆ ಮಾಡಿ ಹದಿನೈದು ದಿನಗಳ ನಂತರ ಪತ್ನಿಯೇ ಪತಿಯ ಮರ್ಮಾಂಗ ಹಿಸುಕಿ ಸಾಯಿಸಿದ್ದಾಳೆ ಎಂಬುವುದು ಬೆಳಕಿಗೆ ಬಂದಿದೆ.
ಪಟ್ಟಣದ ಲಂಬಾಣಿ ತಾಂಡಾದ ಟೋಪಣ್ಣ ಲಮಾಣಿ(44) ಎಂಬಾತ ಹತ್ಯೆಗೀಡಾಗಿದ್ದು, ಪತ್ನಿ ಶಾಂತವ್ವ ಲಮಾಣಿ ಆರೋಪಿ.
ಕುಡಿತದ ಚಟ ಹೊಂದಿದ್ದ ಟೋಪಣ್ಣ ಪ್ರತಿ ದಿನವೂ ಮದ್ಯ ಸೇವನೆ ಮಾಡುತ್ತಿದ್ದ. ಎಂದಿನಂತೆ ಮದ್ಯ ಸೇವನೆ ಮಾಡಿ ಮನೆಗೆ ಬಂದಿದ್ದ. ಗಂಡ ಮನೆಯಲ್ಲಿ ನಿಯಂತ್ರಣ ತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪತ್ನಿ ಶಾಂತವ್ವ ಬಿಂಬಿಸಿದ್ದಳು. ಇದನ್ನೆ ಸತ್ಯವೆಂದು ನಂಬಿ ಕುಟಂಬದವರು ಹಿರಿಯರು ಟೋಪಣ್ಣನ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು.
ಆದರೆ ಶಾಂತವ್ವ ದಿನಗಳು ಕಳೆದಂತೆ ಮೊಬೈಲ್ ನಲ್ಲಿ ಹೆಚ್ಚು ಇರುತ್ತಿದ್ದಳು. ಯಾರೊಂದಿಗೋ ಮಾತನಾಡುತ್ತಾ, ಗಂಡನ ಮರ್ಮಾಂಗವನ್ನು ಹಿಸುಕಿ ಕೊಲೆ ಮಾಡಿದ್ದೇನೆ ಎಂದು ಹೇಳುವುದನ್ನು ಕೇಳಿಸಿಕೊಂಡ ಅಕ್ಕ ಪಕ್ಕದ ಮನೆಯವರು ಸಮಾಜದ ಹಿರಿಯರಿಗೆ ವಿಷಯ ತಿಳಿಸಿದ್ದಾರೆ. ನಂತರ ಹಿರಿಯರು ಸಭೆ ಸೇರಿ ಶಾಂತವ್ವ ಮೊಬೈಲ್ ಪೋನ್ ತಪಾಸಣೆ ಮಾಡಿ ವಿಚಾರಿಸಿದಾಗ ಗಂಡನ ಮರ್ಮಾಂಗವನ್ನು ಹಿಸುಕಿ ಸಾಯಿಸಿದ್ದೇನೆ ಎಂದು ಒಪ್ಪಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಸೋಮವಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶಾಂತವ್ವಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.