ಲಕ್ನೋ: ಇದುವರೆಗೆ ಅಮೆರಿಕದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಹಪಾಠಿಯನ್ನು ಗುಂಡು ಹಾರಿಸಿ ಹತ್ಯೆ ಮಾಡುತ್ತಿದ್ದ ಘಟನೆ ದೇಶದಲ್ಲೂ ನಡೆದಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಶಾಲೆಯೊಂದರಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ಸಹ ವಿದ್ಯಾರ್ಥಿಯನ್ನು ಮೂರು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಇಬ್ಬರೂ 14 ವರ್ಷ ವಯಸ್ಸಿನವರಾಗಿದ್ದು, ತರಗತಿಯಲ್ಲಿ ಬೆಂಚ್‌ನಲ್ಲಿ ಕುಳಿತುಕೊಳ್ಳುವ ವಿಚಾರಕ್ಕಾಗಿ ಬುಧವಾರ ಇಬ್ಬರೂ ಜಗಳ ಮಾಡಿಕೊಂಡಿದ್ದರು. ಈ ಬೆಳವಣಿಗೆಯಿಂದ ಬಹಳಷ್ಟು ಕ್ರುದ್ಧನಾಗಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬ ಮನೆಯಿಂದ ತನ್ನ ಚಿಕ್ಕಪ್ಪ ಹೊಂದಿದ್ದ ಪರವಾನಗಿ ಸಹಿತ ಗನ್ ಸಹಿತ ಗುರುವಾರ ಶಾಲೆಗೆ ಆಗಮಿಸಿದ್ದ. ತರಗತಿಗೆ ಬಂದು ಕೂಡಲೇ ಗನ್‌ನಿಂದ ಮೂರು ಬಾರಿ ಗುಂಡು ಹಾರಿಸಿದ್ದಾನೆ. ಇದರಿಂದಾಗಿ ಆತ ಅಸುನೀಗಿದ್ದಾನೆ. ಹೊಟ್ಟೆ, ಎದೆ ಮತ್ತು ತಲೆಗೆ ಗುಂಡುಗಳು ತಾಗಿವೆ.
ಇದನ್ನೂ ಓದಿ:ಜ.15ರಿಂದ ಪ್ರಥಮ ಪಿಯುಸಿ, 9 ನೇ ತರಗತಿ ಆರಂಭಿಸುವ ಸಾಧ್ಯತೆ: ಸುರೇಶ್ ಕುಮಾರ್
ತರಗತಿಯಲ್ಲಿ ಸಹಪಾಠಿಯನ್ನು ಗುಂಡು ಹಾರಿಸಿದ ಬಳಿಕ ಆತ ಪರಾರಿಯಾಗಲು ಯತ್ನಿಸಿದ್ದಾನೆ. ಶಾಲೆಯ ಮೈದಾನಕ್ಕೆ ಬಂದು ಗಾಳಿಯಲ್ಲಿ ಗುಂಡು ಹಾರಿಸಿ ತನ್ನನ್ನು ಹಿಡಿಯಲು ಬಂದವರನ್ನು ಬೆದರಿಸಲು ಮುಂದಾಗಿದ್ದಾನೆ. ಇದರ ಹೊರತಾಗಿಯೂ ಕೆಲವು ಅಧ್ಯಾಪಕರು ಮುನ್ನುಗ್ಗಿ ಆತನನ್ನು ಹಿಡಿದು, ಗನ್ ವಶಪಡಿಸಿಕೊಂಡಿದ್ದಾರೆ. ನಂತರ ಮುಖ್ಯೋಪಾಧ್ಯಾಯರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದರು. ಅವರು ಸ್ಥಳಕ್ಕೆ ಆಗಮಿಸಿ, ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ನೀಡಿದ ಮಾಹಿತಿ ಪ್ರಕಾರ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಸ್ವದೇಶೀ ನಿರ್ಮಿತ ಮತ್ತೂಂದು ರಿವಾಲ್ವರ್ ಕೂಡ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.