Advertisement

ಕಾಶ್ಮೀರದಲ್ಲಿ ಐವರು ಬಂಗಾಳ ಕಾರ್ಮಿಕರ ಹತ್ಯೆ: ನಮಗೆ ಆಘಾತವಾಗಿದೆ; ಮಮತಾ ಬ್ಯಾನರ್ಜಿ

09:48 AM Nov 01, 2019 | Team Udayavani |

ಪಶ್ಚಿಮ ಬಂಗಾಳ: ಜಮ್ಮು ಕಾಶ್ಮೀರದ ಕುಲ್ಗಾಂವ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಮುರ್ಷಿದಾಬಾದ್ ನ ಐವರು ಕಾರ್ಮಿಕರ ಕುಟುಂಬಗಳಿಗೆ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಅಗತ್ಯವಿರುವ ಎಲ್ಲಾ ನೆರವನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

Advertisement

ಕಾಶ್ಮೀರದಲ್ಲಿ ಉಗ್ರರು ಪೈಶಾಚಿಕ ಕೃತ್ಯ ಮೆರೆದಿದ್ದು , ನಡೆದ ಕ್ರೂರ ಹತ್ಯೆಗಳ ಬಗ್ಗೆ ನಮಗೆ ಆಘಾತ ಮತ್ತು ದುಃಖವಾಗಿದೆ. ಮುರ್ಷಿದಾಬಾದ್ ನ ಐವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸತ್ತವರ ಕುಟುಂಬಗಳ ದುಃಖವನ್ನು ಪದಗಳಲ್ಲಿ ಹೇಳಲಾಗುವುದಿಲ್ಲ. ಈ ದುರಂತ ಪರಿಸ್ಥಿತಿಯಲ್ಲಿ ಕುಟುಂಬಗಳಿಗೆ ಬೇಕಾದ  ಎಲ್ಲಾ ಸಹಾಯವನ್ನು ನೀಡಲಾಗುವುದು ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಅನಂತನಾಗ್ ಜಿಲ್ಲೆಯಲ್ಲಿ ಟ್ರಕ್ ಚಾಲಕರೊಬ್ಬರನ್ನು ಉಗ್ರರು ಗುಂಡಿಕ್ಕಿ ಸಾಯಿಸಿದ್ದರು ಮತ್ತು ಆಗಸ್ಟ್ 05ರ ಬಳಿಕ ಇದುವರೆಗೆ ಉಗ್ರರು ಕಾಶ್ಮೀರದಲ್ಲಿ ಒಟ್ಟಾರೆ ನಾಲ್ಕು ಜನ ಟ್ರಕ್ ಚಾಲಕರನ್ನು ಕೊಂದಿದ್ದಾರೆ. ನಿನ್ನೆ ಸಂಜೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂವ್ ನಲ್ಲಿ ಐವರು ಕಾಶ್ಮೀರೇತರ ಕಟ್ಟಡ ಕಾರ್ಮಿಕರನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದರು. ಅದರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರ ಪೈಕಿ ಐವರಲ್ಲಿ ಮೂವರನ್ನು ಶೇಖ್ ಕಮರುದ್ದೀನ್, ಶೇಕ್ ಮೊಹಮ್ಮದ್ ರಫೀಕ್, ಶೇಖ್ ಮುರ್ನುಸುಲಿನ್ ಎಂದು ಗುರುತಿಸಲಾಗಿದೆ. ಗಾಯಾಳು ಜಹರೂದ್ದೀನ್ ನನ್ನು ಅನಂತ್ ನಾಗ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಯೊರೋಪಿಯನ್ ಯೂನಿಯನ್ ನಿಯೋಗ ಜಮ್ಮು ಕಾಶ್ಮೀರದ ಪರಿಸ್ಥಿತಿ ಅವಲೋಕಿಸಲು ತೆರಳಿದ್ದ ವೇಳೆಯೇ ಉಗ್ರರು ಅಟ್ಟಹಾಸ ಮೆರೆದು ಐವರು ಕಾಶ್ಮೀರೇತರ ಕಟ್ಟಡ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು . ರಾಜ್ಯದಲ್ಲಿ ನಡೆದ ಪ್ರತ್ಯೇಕ ಉಗ್ರ ದಾಳಿಯಲ್ಲಿ ಈ ತಿಂಗಳು ಒಟ್ಟಾರೆ 11 ಮಂದಿ ಸಾವನ್ನಪ್ಪಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next