ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿದ್ಯುತ್ ಬಿಲ್ ಬಾಕಿ ತುಂಬದೇ ಇರುವುದರಿಂದ ಹೆಸ್ಕಾಂ ನವರು ಮಂಗಳವಾರ ಫ್ಯೂಸ್ ಕಿತ್ತೂಯ್ದಿದ್ದರಿಂದ ಪಾಲಿಕೆ ಸಿಬ್ಬಂದಿ ಮಧ್ಯಾಹ್ನದವರೆಗೂ ಕತ್ತಲೆಯಲ್ಲಿಯೇ ಕಾಲ ಕಳೆಯುವಂತಾಯಿತು. ಬಾಕಿ ಪಾವತಿಗಾಗಿ ಗುತ್ತಿಗೆದಾರರ ಪ್ರತಿಭಟನೆ ಆಯಿತು, ಬೀದಿ ದೀಪ ನಿರ್ವಹಣೆ ಮಾಡುವವರ ಪ್ರತಿಭಟನೆ ಆಯಿತು. ಇದೀಗ ಹೆಸ್ಕಾಂ ಸರದಿ.
ಬೆಂಗಳೂರು ಮಹಾನಗರ ಬಿಟ್ಟರೆ ಅತೀ ದೊಡ್ಡ ಮಹಾನಗರ ಪಾಲಿಕೆ ಎಂದೇ ಹೆಗ್ಗಳಿಗೆ ಪಡೆದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಲವಾರು ಸಮಸ್ಯೆಗಳಿಂದ ನರಳುತ್ತಿದ್ದು, ಇದೀಗ ‘ವಿದ್ಯುತ್ ಶಾಕ್’ನಿಂದ ಬಳಲುವಂತಾಗಿದೆ. ಹೌದು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ವಿದ್ಯುತ್ ಇಲ್ಲದೇ ಕಾಲ ಕಳೆಯುವಂತಾಯಿತು. ಕಳೆದ ಕೆಲವು ತಿಂಗಳಿಂದ ಮಹಾನಗರ ಪಾಲಿಕೆಯ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದೇ ಇದಕ್ಕೆಲ್ಲಾ ಮುಖ್ಯ ಕಾರಣ. ಕೆಲವು ದಿನಗಳಿಂದ ಹೆಸ್ಕಾಂ ಕಚೇರಿ ಹಾಗೂ ಮಹಾನಗರ ಪಾಲಿಕೆ ಕಚೇರಿಗೆ ಪತ್ರ ವ್ಯವಹಾರಗಳು ನಡೆಯುತ್ತಿದ್ದವು. ಆದರೆ ಇದಕ್ಕೆ ಪಾಲಿಕೆ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದರಿಂದ ಮಂಗಳವಾರ ಬೆಳಿಗ್ಗೆ ಹೆಸ್ಕಾಂ ಸಿಬ್ಬಂದಿ ಪಾಲಿಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಇದರಿಂದ ಇಡೀ ಮಹಾನಗರ ಪಾಲಿಕೆ ಬೆಳಿಗ್ಗೆಯಿಂದ ಯಾವುದೇ ಕೆಲಸವಿಲ್ಲದೇ ಸುಮ್ಮನೆ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಬಾಕಿ ಉಳಿದ ವಿದ್ಯುತ್ ಬಿಲ್: ಹು-ಧಾ ಮಹಾನಗರ ಪಾಲಿಕೆಯಿಂದ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸಬೇಕು. ಆದರೆ ಹೆಸ್ಕಾಂಗೆ ಎಸ್‌ಎಫ್‌ಸಿ ಅನುದಾನದಿಂದ ಪ್ರತಿ ತಿಂಗಳೂ ವಿದ್ಯುತ್ ಬಿಲ್ ಪಾವತಿಸಲಾಗುತ್ತದೆ. ಆದರೆ ಕಳೆದ ಕೆಲವು ತಿಂಗಳಿಂದ ಎಸ್‌ಎಫ್‌ಸಿ ಅನುದಾನದಲ್ಲಿ ವಿಳಂಬವಾಗಿದೆ. ಇದರಿಂದ ಹೆಸ್ಕಾಂಗೆ ಪಾವತಿಸಬೇಕಾದ ವಿದ್ಯುತ್ ಬಿಲ್ ನಲ್ಲೂ ತೊಂದರೆ ಆಗಿದೆ. ಇದರಿಂದ ಪತ್ರ ವ್ಯವಹಾರ ನಡೆಸಿದ ಹೆಸ್ಕಾಂ ಮಂಗಳವಾರ ಮಹಾನಗರ ಪಾಲಿಕೆಗೆ ಶಾಕ್ ಟ್ರೀಟ್‌ಮೆಂಟ್ ಕೊಟ್ಟಿದೆ.
ಜಾರಿಕೊಂಡ ಅಧಿಕಾರಿಗಳು: 13 ತಿಂಗಳಿಂದ ಹು-ಧಾ ಮಹಾನಗರ ಪಾಲಿಕೆಯ 13 ಲಕ್ಷ ರೂ.ಗಳ ವಿದ್ಯುತ್ ಬಿಲ್ ಬಾಕಿ ಇದ್ದು, ಹೆಸ್ಕಾಂ ಹಲವು ಬಾರಿ ಈ ಕುರಿತು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ಈ ಕುರಿತು ಅಧಿಕಾರಿಗಳನ್ನು ಕೇಳಿದಾಗ, ಕೆಲವರು ಹಾರಿಕೆ ಉತ್ತರ ನೀಡಿದರೇ, ಹೆಸ್ಕಾಂ ಅಧಿಕಾರಿಗಳು ಪಾಲಿಕೆ ಸುತ್ತಮುತ್ತ ವಿದ್ಯುತ್ ರಿಪೇರಿ ಕೆಲಸ ಮಾಡಲಾಗುತ್ತಿದೆ ಎಂದು ದಾರಿ ತಪ್ಪಿಸುವ ಕೆಲಸ ಮಾಡಿದರು. ಬಿಲ್ ಬಾಕಿ ಇರುವ ಕುರಿತು ಕೇಳಿದಾಗ ಹಾಗೇನೂ ಇಲ್ಲ ಎಂದು ಜಾರಿಕೊಂಡರು.
ಬಾಕಿ ಇರುವುದೆಷ್ಟು: ಕಳೆದ ಎರಡ್ಮೂರು ತಿಂಗಳಿಂದ ಹೆಸ್ಕಾಂಗೆ ಕಟ್ಟಬೇಕಾದ ಬಿಲ್ ಬಾಕಿ ಉಳಿಸಿಕೊಂಡಿರುವ ಪಾಲಿಕೆ ವಿದ್ಯುತ್ ಸ್ಥಗಿತಗೊಳಿಸಿದ ನಂತರ ಎಚ್ಚೆತ್ತುಕೊಂಡಿದೆ. ಹೆಸ್ಕಾಂ ಬಾಕಿ ಬಿಲ್ ಮೊತ್ತ ತುಂಬಲು ಮುಂದಾಗಿರುವ ಪಾಲಿಕೆ ಕೂಡಲೇ 4 ಲಕ್ಷ ರೂ.ಗಳನ್ನು ಭರಣಾ ಮಾಡಿದ್ದರಿಂದ ಪಾಲಿಕೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಇನ್ನುಳಿದ 9 ಲಕ್ಷ ರೂ. ಗಳನ್ನು ಕೂಡಲೇ ಪಾವತಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೆಸ್ಕಾಂ ಸಿಬ್ಬಂದಿ ಪುನಃ ವಿದ್ಯುತ್ ಫ್ಯೂಸ್ ಹಾಕುವ ಮೂಲಕ ಪಾಲಿಕೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.
ಕೆಲಸಕ್ಕೆ ಬಂದವರು ಹಾಗೇ ಕುಳಿತರು: ಕಚೇರಿಗೆ ಆಗಮಿಸಿದ ಸಿಬ್ಬಂದಿ ವಿದ್ಯುತ್ ಇಲ್ಲದೇ ಕೆಲಸ ಆರಂಭಿಸಿದರು. ಕರೆಂಟ್ ಹೋಗಿರಬಹುದು, ಇದೀಗ ಬರಬಹುದು, ಇನ್ನೊಂದು ಗಂಟೆಗೆ ಬರಬಹುದು ಎನ್ನುತ್ತ ಕಾಲ ಕಳೆಯುತ್ತಿದ್ದರು. ತದ ನಂತರ ಹೆಸ್ಕಾಂನಿಂದ ಫ್ಯೂಸ್ ಕಿತ್ತುಕೊಂಡು ಹೋಗಿದ್ದಾರೆಂದು ತಿಳಿಯುತ್ತಿದ್ದಂತೆ ಇನ್ನೇನು ಮಾಡುವುದೆಂದು ಹಾಗೆ ಕುಳಿತರು. ಇನ್ನು ಕೆಲವರು ಜನರು ಸೆಕೆ ತಾಳಲಾರದೇ ಕಚೇರಿ ಹೊರಗಡೆ ಬಂದು ಕುಳಿತರು. ಇನ್ನೂ ಕೆಲವರು ಬೆಳಕಿದ್ದಲ್ಲಿ ಬಂದು ವಿವಿಧ ಕಡತಗಳ ತಪಾಸಣೆ ನಡೆಸುತ್ತಿದ್ದರು.
ಕೆಲವರು ಶಪಿಸಿದರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ವೋಟರ್ ಐಡಿ ಕಾರ್ಡ್ ಮಾಡಿಸಿಕೊಳ್ಳುವುದು ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಆಗಮಿಸಿದ್ದ ನೂರಾರು ಜನರು ಸುಮಾರು ಹೊತ್ತು ಕಾಯುತ್ತ ಸರದಿಯಲ್ಲಿ ನಿಂತಿರುವುದು ಕಂಡು ಬಂತು. ಇನ್ನು ಕೆಲವರು ಮರಳಿ ಹೋದರು.
ಬಸವರಾಜ ಹೂಗಾರ