ಬೆಂಗಳೂರು: “ಹಳ್ಳಿಹಕ್ಕಿ’ ಖ್ಯಾತಿಯ ಎಚ್.ವಿಶ್ವನಾಥ್ ರಾಜಕೀಯ ಜೀವನದ ಕೊನೆಗಾಲದಲ್ಲಿ ಸೋಲಿನ ರುಚಿ ನೋಡುವಂತಾಗಿದೆ. ಮೂಲತಃ ಕಾಂಗ್ರೆಸ್‌ನವರಾಗಿ ದೇವರಾಜ ಅರಸು ಕಾಲದಿಂದ ರಾಜಕೀಯ ಮಾಡಿಕೊಂಡು ಬಂದಿದ್ದ ಎಚ್.ವಿಶ್ವ ನಾಥ್, ಸಿದ್ದರಾಮಯ್ಯ ಅವರ ವಿರೋಧ ಕಟ್ಟಿಕೊಂಡು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿ ಶಾಸಕರಾಗಿ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿದ್ದರು.
ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೊಂದಿದ್ದ ಹುಣಸೂರಿನಲ್ಲಿ ಕಳೆದ ಬಾರಿ ಜಿ.ಟಿ.ದೇವೇಗೌಡರ ಸಹಕಾರದಿಂದ ಗೆಲುವು ಸಾಧಿಸಿದ್ದ ಅವರಿಗೆ ಈ ಬಾರಿ ಜಿ.ಟಿ.ದೇವೇಗೌಡರ ಸಹಕಾರವೂ ಆಗಿದೆ, ಸಿದ್ದರಾಮಯ್ಯ ಅವರ ಕಾರ್ಯತಂತ್ರದಿಂದಾಗಿ ಸೋಲು ಅನುಭವಿಸಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಮೇಲೆ ವಾಗ್ಧಾಳಿ ನಡೆಸುತ್ತಿದ್ದ ವಿಶ್ವನಾಥ್ ವಿರುದ್ಧ ಸೇಡು ತೀರಿಸಿಕೊಂಡು ತಮ್ಮ ಆಪ್ತ ಎಚ್.ಪಿ.ಮಂಜುನಾಥ್‌ನನ್ನು ಶಾಸಕನನ್ನಾಗಿ ಗೆಲ್ಲಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಕಾಂಗ್ರೆಸ್, ಜೆಡಿಎಸ್‌ನ ಶಾಸಕರು ರಾಜೀನಾಮೆ ನೀಡಲು ಪ್ರಮುಖ ರೂವಾರಿಯಾಗಿದ್ದ ಎಚ್.ವಿಶ್ವನಾಥ್ ಅವರಿಗೆ ಉಪ ಚುನಾವಣೆಗೆ ಸ್ಪರ್ಧೆ ಮಾಡುವುದು ಬೇಡ, ಪರಿಷತ್ ಸದಸ್ಯರಾಗಿ ಸಚಿವರಾಗಿ ಎಂದು ಬಿಜೆಪಿ ಆಫರ್ ನೀಡಿತ್ತು. ಆದರೆ, ಹಿಂಬಾಗಿಲ ಮೂಲಕ ನಾನು ಬರುವುದು ಬೇಡ. ಚುನಾವಣೆ ಎದುರಿಸಿ ಗೆದ್ದು ಬರುತ್ತೇನೆಂದು ಹೇಳಿ ಟಿಕೆಟ್ ಪಡೆದಿದ್ದರು. ಮತದಾನದ ದಿನ ಹತ್ತಿರವಾ ಗುತ್ತಿದ್ದಂತೆ ಎಚ್.ಡಿ.ದೇವೇ ಗೌಡ ಹಾಗೂ ಸಿದ್ದರಾಮಯ್ಯ ಅವರ ಬಗ್ಗೆ ಮೃದುವಾದರು. ಆದರೂ ಗೆಲುವು ದಕ್ಕಿಸಿಕೊಳ್ಳಲು ಆಗಲಿಲ್ಲ.
ವಿಶ್ವನಾಥ್‌ಗೆ ಅಜ್ಞಾತವಾಸ: ರಾಜ್ಯದ ಹಿರಿಯ ರಾಜಕಾರಣಿಗಳ ಪೈಕಿ ಒಬ್ಬರಾದ ವಿಶ್ವನಾಥ್ ರಾಜಕೀಯವಾಗಿ ಬಹಳ ಎತ್ತರಕ್ಕೆ ಬೆಳೆಯುವ ಎಲ್ಲ ಅವಕಾಶ ಇದ್ದವು. ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಮಟ್ಟದಲ್ಲೂ ಪ್ರಭಾವಿಯಾಗಿದ್ದರು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷಾಂತರ ಮಾಡಿ ಅಜ್ಞಾತವಾಸ ಅನುಭವಿಸುವಂತಾಗಿದೆ. ಬಿಜೆಪಿಯು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರಾಗಿಸಿದರೆ ಮತ್ತೂಂದು ಇನ್ನಿಂಗ್ಸ್ ಆರಂಭ ಮಾಡಬಹುದು. ಇಲ್ಲದಿದ್ದರೆ ಅವರ ರಾಜಕೀಯ ಪಯಣ ಕಷ್ಟವಾಗಲಿದೆ.