ಹೊಸದಿಲ್ಲಿ: ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾಗುತ್ತಲೇ “ಪಕ್ಷಾಂತರ ಪರ್ವ’ ಆರಂಭವಾಗಿದೆ. ಉತ್ತರಪ್ರದೇಶ, ಗೋವಾ, ಪಂಜಾಬ್ ನಲ್ಲಿ ಹಲವು ನಾಯಕರು “ಸಂಗೀತ ಕುರ್ಚಿ’ ಆಟ ಶುರು ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿ ಅತೀ ದೊಡ್ಡ ಆಘಾ ತವೆಂಬಂತೆ, ಯೋಗಿ ಸರಕಾರದಲ್ಲಿ ಕಾರ್ಮಿಕ ಸಚಿವರಾಗಿರುವ ಸ್ವಾಮಿ ಪ್ರಸಾದ್ ಮೌರ್ಯ ಅವರೇ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಅವರ ಬೆನ್ನಲ್ಲೇ ಇನ್ನೂ ನಾಲ್ವರು ಬಿಜೆಪಿ ಶಾಸಕರು ಕೂಡ ರಾಜೀನಾಮೆ ಪತ್ರ ನೀಡಿ, ಅಖೀಲೇಶ್ ಯಾದವ್ ನೇತೃ ತ್ವದ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರೋಶನ್ ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ, ಭಗವತಿ ಸಾಗರ್, ವಿನಯ್ ಶಕ್ಯಾ ಪಕ್ಷಾಂತರ ಮಾಡಿದ ಶಾಸಕರು.
ಈ ಶಾಕ್ ನಡುವೆಯೇ, ಎನ್ ಸಿಪಿ ವರಿಷ್ಠ ಶರದ್ ಪವಾರ್ ಅವರು, ಸದ್ಯದಲ್ಲೇ ಯೋಗಿ ಸರಕಾರದ 13 ಶಾಸಕರು ರಾಜೀನಾಮೆ ನೀಡಿ ಎಸ್ ಪಿಗೆ ಸೇರಲಿದ್ದಾರೆ ಎಂದು ಘೋಷಿಸಿದ್ದಾರೆ. ಜತೆಗೆ ಉ.ಪ್ರದೇಶದಲ್ಲಿ ತಮ್ಮ ಪಕ್ಷವು ಎಸ್‌ಪಿ ಜತೆ ಮೈತ್ರಿ ಮಾಡಿಕೊಳ್ಳಲಿದೆ ಎಂದೂ ಹೇಳಿದ್ದಾರೆ. ಆದರೆ ತಾವು ಎಸ್‌ಪಿಗೆ ಇನ್ನೂ ಸೇರ್ಪಡೆಗೊಂಡಿಲ್ಲ ಎಂದು ಮೌರ್ಯ ತಿಳಿಸಿದ್ದಾರೆ.
ಗೋವಾ, ಪಂಜಾಬ್: ಇದೇ ವೇಳೆ, ಮಂಗಳವಾರ ಗೋವಾ ಸಚಿವ, ಪಕ್ಷೇತರ ಶಾಸಕ ಗೋವಿಂದ್ ಗೌಡೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಸದ್ಯದಲ್ಲೇ ಬಿಜೆಪಿಗೆ ಸೇರ್ಪಡೆ ಯಾಗಲಿದ್ದಾರೆ. ಪಂಜಾಬ್‌ನ ಮಾಜಿ ಶಾಸಕ ಅರವಿಂದ ಖನ್ನಾ ಹಾಗೂ ಇತರ ಹಲವು ರಾಜಕೀಯ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಮಾಯಾವತಿ ಸ್ಪರ್ಧಿಸಲ್ಲ: ಉ.ಪ್ರದೇಶ ಚುನಾವಣೆಯಲ್ಲಿ ಬಿಎಸ್‌ಪಿ ನಾಯಕಿ ಮಾಯಾವತಿ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಮಿಶ್ರಾ ಹೇಳಿದ್ದಾರೆ. ಪಂಜಾಬ್, ಉತ್ತರಾಖಂಡದಲ್ಲೂ ಚುನಾವಣೆ ಇರುವ ಕಾರಣ, ತಾವು ಸ್ಪರ್ಧಿಸದೇ ಪಕ್ಷದ ಅಭ್ಯರ್ಥಿಗಳ ಗೆಲು ವಿಗೆ ಸಹಾಯ ಮಾಡಲು ಮಾಯಾ ನಿರ್ಧರಿಸಿದ್ದಾರೆ ಎಂದಿದ್ದಾರೆ ಮಿಶ್ರಾ.
ಬಿಜೆಪಿ ಮನೆ ಮನೆ ಪ್ರಚಾರ
ಸಾರ್ವಜನಿಕ ರ್ಯಾಲಿಗಳಿಗೆ ನಿರ್ಬಂಧವಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದಲೇ ಬಿಜೆಪಿ ಉತ್ತರ ಪ್ರದೇಶದಾದ್ಯಂತ ಮನೆ ಮನೆ ಪ್ರಚಾರ ಆರಂಭಿಸಿದೆ. ಲಕ್ನೋದಲ್ಲಿ ಪ್ರಚಾರ ಆರಂಭ ವಾಗಿದ್ದು, ಮನೆ ಮಾಲಕರ ಹಣೆಗೆ ತಿಲಕ ಹಚ್ಚಿ, “ಎಲ್ಲ ಆಶ್ವಾಸನೆ ಪೂರ್ಣಗೊಂಡಿದೆ, ಮನೆ ಮನೆಗೂ ವಿಕಾಸ ತಲುಪಿದೆ’ ಎಂದು ಬರೆದಿರುವ ಪೋಸ್ಟರ್ ಗಳನ್ನು ಮನೆಗಳ ಹೊರಗೆ ಅಂಟಿ ಸಲಾಗುತ್ತಿದೆ. ಈ ನಡುವೆ, ಸಿಎಂ ಯೋಗಿ, ಕೇಂದ್ರ ಸಚಿವ ಅಮಿತ್ ಶಾ ದಿಲ್ಲಿಯಲ್ಲಿ
ಸಭೆ ಸೇರಿ ಚುನಾವಣ ಕಾರ್ಯತಂತ್ರ ಕುರಿತು ಚರ್ಚಿಸಿದ್ದಾರೆ.