Advertisement

ಶಾಕ್‌ ಅಟ್ಯಾಕ್‌; ಎಂದು ಬರುವವೋ ಎಲೆಕ್ಟ್ರಿಕ್‌ ವಾಹನಗಳು?

10:25 AM Aug 13, 2019 | Sriram |

ಜಾಗತಿಕ ಹವಾಮಾನ ಬದಲಾವಣೆ ವಿಚಾರವಾಗಿ ಭಾರತವು ಪ್ಯಾರಿಸ್‌ ಒಪ್ಪಂದಕ್ಕೆ ಸಹಿ ಹಾಕಿದೆ. ಆ ಪ್ರಕಾರ 2030ರ ವೇಳೆಗೆ ವಾಹನಗಳು ಸೂಸುವ ಹೊಗೆ ಮಾಲಿನ್ಯದ ಪ್ರಮಾಣ ತಗ್ಗಬೇಕು. ಹೀಗಾಗಬೇಕೆಂದರೆ, ಡೀಸೆಲ್‌, ಪೆಟ್ರೋಲ್‌ ಬಳಸುವ ವಾಹನಗಳು ಕಡಿಮೆಯಾಗಿ, ಎಲೆಕ್ಟ್ರಿಕ್‌ ವಾಹನಗಳು ರಸ್ತೆಗಿಳಿಯಬೇಕು…

Advertisement

ಹೊಗೆಯಿಂದ ಸಾವು ಸಂಭವಿಸುತ್ತದೆ…- ಇಂಥದ್ದೊಂದುದು ಎಚ್ಚರಿಕೆಯ ಕರೆಗಂಟೆಯನ್ನು ಕೊರಳಿಗೆ ಸುತ್ತಿಕೊಂಡು ಎಲೆಕ್ಟ್ರಿಕ್‌ ವಾಹನಗಳತ್ತ ದೃಷ್ಟಿ ನೆಟ್ಟಿದೆ ಕೇಂದ್ರ ಸರ್ಕಾರ. ಕೆಲವೊಂದು ಕಂಪನಿಗಳು ಮುಚ್ಚುವ ಹಂತಕ್ಕೆ ಬಂದಿವೆ ,ಎಂದು ಹೇಳಲಾಗುತ್ತಿದೆಯಾದರೂ, ದಿನವೊಂದಕ್ಕೆ ರಸ್ತೆಗಿಳಿಯುತ್ತಿರುವ ಗಾಡಿಗಳ ಸಂಖ್ಯೆಯೇನೂ ಕಡಿಮೆಯಾಗುತ್ತಿಲ್ಲ. ವಿಶೇಷವೆಂದರೆ, ಇಂದು ಜಾಗತಿಕ ಹವಾಮಾನ ಬದಲಾವಣೆಯಲ್ಲಿ ಗಣನೀಯ ಪಾತ್ರ ವಹಿಸುತ್ತಿರುವ ಈ ವಾಹನಗಳ ಹೊಗೆ, ಮುಂದೊಂದು ದಿನ ಮನುಷ್ಯರಿಗೇ ಹೊಗೆ ಹಾಕುವುದರಲ್ಲಿ ಯಾವುದೇ ಸಂಶಯವಿಲ್ಲ ಕೂಡ.

ಈ ಎಚ್ಚರಿಕೆಯನ್ನೇ ಮುಂದಿಟ್ಟುಕೊಂಡು ಕಳೆದ 10 ವರ್ಷಗಳಿಂದಲೂ ಎಲೆಕ್ಟ್ರಿಕ್‌ ವಾಹನಗಳ ಪಾಲಿಸಿಯೊಂದನ್ನು ತರಲು ಒದ್ದಾಡುತ್ತಿದೆ ಕೇಂದ್ರ ಸರ್ಕಾರ. 2030ರ ವೇಳೆಗೆ ರಸ್ತೆಯಲ್ಲಿ ಸಂಪೂರ್ಣವಾಗಿ ಎಲೆಕ್ಟ್ರಿಕ್‌ ವಾಹನಗಳೇ ಇರಬೇಕು ಎಂದು 2017ರಲ್ಲಿಯೇ ಹೇಳಿದ್ದ ಕೇಂದ್ರದ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ಆಟೋಮೊಬೈಲ್‌ ಇಂಡಸ್ಟ್ರಿಯ ಒತ್ತಡಕ್ಕೆ ಸೋತು, ಮಾರನೇ ವರ್ಷವೇ ಯೂ ಟರ್ನ್ ಹೊಡೆದಿದ್ದರು. 2030ರ ವೇಳೆಗೆ ಶೇ.30 ರಷ್ಟು ವಾಹನ ರಸ್ತೆಗಿಳಿದರೆ ಸಾಕು ಎಂಬ ಮನಸ್ಥಿತಿಗೆ ಬಂದು ಬಿಟ್ಟಿದ್ದರು. ಈಗ 2025ರ ಒಳಗೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಎಂಜಿನ್‌(150 ಸಿಸಿ ಒಳಗಿನ) ಎಲೆಕ್ಟ್ರಿಕ್‌ಗೆ ಬದಲಾಗಬೇಕು, 2030ರಿಂದ ರಸ್ತೆಗಿಳಿಯುವ ಎಲ್ಲ ಕಾರುಗಳು ಎಲೆಕ್ಟ್ರಿಕ್‌ನದ್ದೇ ಆಗಿರಬೇಕು ಎಂಬ ಗಡುವನ್ನೂ ಹಾಕಿಕೊಳ್ಳಲಾಗಿದೆ. ಅದಕ್ಕಾಗಿ ಫೇಮ್‌ 2 ಅನ್ನು ಘೋಷಿಸಿ 10,000 ಕೋಟಿ ರೂ. ಅನ್ನೂ ತೆಗೆದಿರಿಸಿದೆ.

ಹೆಚ್ಚಾದ ಖರೀದಿ
2010ರಲ್ಲೇ ಇ-ನೀತಿ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿದ್ದರೂ, ಅದು ಏಳುಬೀಳುಗಳ ನಡುವೆಯೇ ಸಾಗಿತು. ಆದರೆ, ಹಾಲಿ ಸರ್ಕಾರ ಹೆಚ್ಚು ಪೋತ್ಸಾಹ ನೀಡುತ್ತಿರುವುದರಿಂದ 2015-16ರಿಂದ ಇ-ವಾಹನಗಳ ಖರೀದಿಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. 2015- 16ರಲ್ಲಿ 22,000 ವಾಹನ ಖರೀದಿಯಾಗಿದ್ದರೆ, 2016-17ರಲ್ಲಿ 25,000, 2017-18ರಲ್ಲಿ 56,000 ಮತ್ತು 2018-19ರಲ್ಲಿ 1,29,600 ವಾಹನಗಳು ಖರೀದಿಯಾಗಿವೆ.

ಎಲೆಕ್ಟ್ರಿಕ್‌ ವಾಹನಗಳ ಉತ್ಪಾದಕರು
ದ್ವಿಚಕ್ರ- ತ್ರಿಚಕ್ರ ವಾಹನ: ಹೀರೋ ಎಲೆಕ್ಟ್ರಿಕ್‌, ಪೈಗಿಯೋ ವೆಹಿಕಲ್ಸ…, ಕೈನೆಟಿಕ್‌ ಗ್ರೀನ್‌ ಎನರ್ಜಿ ಆಂಡ್‌ ಪವರ್‌ ಸೊಲ್ಯೂಶನ್‌
ನಾಲ್ಕು ಚಕ್ರ: ಮಹೀಂದ್ರ ಎಲೆಕ್ಟ್ರಿಕ್‌, ಟಾಟಾ ಮೋಟಾರ್, ಹುಂಡೈ
ಬಸ್‌: ಅಶೋಕ್‌ ಲೈಲೆಂಡ್‌

Advertisement

ಇ- ವಾಹನಗಳಿರುವ ಸವಾಲುಗಳು
ಸದ್ಯ ಲಿಥಿಯಂ ಬ್ಯಾಟರಿಯ ದರ ಹೆಚ್ಚಾಗಿರುವುದೇ ಮೊದಲ ಸಮಸ್ಯೆ. ಇವುಗಳನ್ನು ದೇಶೀಯವಾಗಿಯೇ ಅಭಿವೃದ್ಧಿ ಪಡಿಸುವ ಮೂಲಕ ಕಡಿಮೆ ಬೆಲೆಗೆ ಸಿಗುವಂತೆ ಮಾಡಬೇಕು. ಜತೆಗೆ, ದೇಶದಲ್ಲಿ ಪೆಟ್ರೋಲ್‌ ಬಂಕ್‌ಗಳಿರುವ ಹಾಗೆ ಇ-ವಾಹನಗಳ ಚಾರ್ಜಿಂಗ್‌ ಔಟ್‌ಲೆಟ್‌ಗಳಿಲ್ಲ. ಇಡೀ ದೇಶದಲ್ಲಿ ಲೆಕ್ಕಕ್ಕೆ ತೆಗೆದುಕೊಂಡರೆ 352 ಚಾರ್ಜಿಂಗ್‌ ಸ್ಟೇಷನ್‌ಗಳಿವೆ. ಇವುಗಳನ್ನು ಅತ್ಯಂತ ವೇಗವಾಗಿ ಆರಂಭಿಸಬೇಕು. ಜತೆಗೆ, ಬ್ಯಾಟರಿಗಳನ್ನು ಅದಲು- ಬದಲು ಮಾಡುವ ವ್ಯವಸ್ಥೆಯನ್ನೂ ಮಾಡಬೇಕು. ಒಂದು ರೀತಿಯಲ್ಲಿ ಖಾಲಿ ಸಿಲಿಂಡರ್‌ ತೆಗೆದು, ತುಂಬಿದ ಸಿಲಿಂಡರ್‌ ಕೊಡುತ್ತಾರಲ್ಲ ಹಾಗೆ.

ಹೆಚ್ಚು ಹೆಚ್ಚು ವಿನಾಯಿತಿ
ಎಲೆಕ್ಟ್ರಿಕ್‌ ವಾಹನ ಖರೀದಿ ಮಾಡುವವರಿಗೆ ತೆರಿಗೆಯಲ್ಲಿ ವಿನಾಯತಿ ನೀಡಲಾಗಿದೆ. ಅಷ್ಟೇ ಅಲ್ಲ, ವಾಹನ ಮತ್ತು ಬ್ಯಾಟರಿಗಳ ಮೇಲಿನ ಜಿಎಸ್ಟಿಯನ್ನೂ ಕಡಿಮೆ ಮಾಡಲಾಗಿದೆ. ಹೀಗಾಗಿ ಒಂದು ಆಂದೋಲನದ ರೀತಿಯಲ್ಲೇ ಎಲೆಕ್ಟ್ರಿಕ್‌ ವಾಹನ ಬರಬೇಕು ಅಷ್ಟೇ.

ಎಲೆಕ್ಟ್ರಿಕ್‌ ಏಕೆ ಬೇಕು ಗೊತ್ತೇ?
ಒಂದು ವೇಳೆ ರಸ್ತೆಗೆ ಒಂದು ಎಲೆಕ್ಟ್ರಿಕ್‌ ಬೈಕ್‌ ಇಳಿದರೆ, ಇದು ವರ್ಷಕ್ಕೆ 350 ಕೆಜಿ ಕಾರ್ಬನ್‌ ಉತ್ಪಾದನೆಯನ್ನು ಕುಗ್ಗಿಸುತ್ತದೆ. ಅದೇ ಒಂದು ಎಲೆಕ್ಟ್ರಿಕ್‌ ಕಾರು ರಸ್ತೆಗಿಳಿದರೆ, 28 ಟನ್‌ ನಷ್ಟು ಇಂಗಾಲದ ಆಮ್ಲವನ್ನು ಕಡಿಮೆ ಮಾಡುತ್ತದೆ.

– ಸೋಮಶೇಖರ್‌ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next