Advertisement

ಸಂಸದೆ ಶೋಭಾ ರಾಜೀನಾಮೆ ನೀಡಲಿ

03:25 PM Jul 11, 2017 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸದ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು
ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಎಚ್‌.ದೇವರಾಜ್‌ ಒತ್ತಾಯಿಸಿದರು.

Advertisement

ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿಯೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರೈತರು ಬೆಳೆದ ಬೆಳೆ ನಾಶವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಧಾನಿಯವರ ಬಳಿ ನಿಯೋಗ ಕರೆದೊಯ್ದು ಸಾಲಮನ್ನಾ ಮಾಡುವಂತೆ
ಒತ್ತಾಯಿಸುವುದನ್ನು ಬಿಟ್ಟು ಬೇರೆ ಜಿಲ್ಲೆಯ ಸಮಸ್ಯೆಯ ಬಗ್ಗೆ ವೀರಾವೇಶದಿಂದ ಮಾತನಾಡುತ್ತಾರೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ
ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿ ನೋಣ ಹುಡುಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಶ್ರೀಕಂಠಪ್ಪ, ಡಿ.ಕೆ.ತಾರದೇವಿ ಸೇರಿದಂತೆ ಅನೇಕ ಪ್ರಜ್ಞಾವಂತ ಸಂಸದರನ್ನು ನೀಡಿರುವ ಜಿಲ್ಲೆ ಇದು. ಅವರು ಯಾವುದೇ
ಪಕ್ಷದವರಿರಲಿ ಜಿಲ್ಲೆಗೆ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಈಗಿನ ಸಂಸದೆ ಶೋಭಾ ಕರಂದ್ಲಾಜೆ ನಾನು ದೊಡ್ಡ ನಾಯಕಿ,
ನನಗೆಲ್ಲ ತಿಳಿದಿದೆ ಎಂಬ ಭ್ರಮೆಯಲ್ಲಿದ್ದಾರೆ. ತಮ್ಮ ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಬದಲು ಮಡಿಕೇರಿ,
ಮೈಸೂರು, ಮಂಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಹೋಗಿ ಅವರ ಚಟುವಟಿಕೆ ಬೇರೆ ಬೇರೆ ರೀತಿ ತಗೆದುಕೊಂಡು ಹೋಗುತ್ತಿದ್ದಾರೆ.
ಶಾಂತಪ್ರಿಯವಾದ ಚಿಕ್ಕಮಗಳೂರು ಜಿಲ್ಲೆಗೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದರು. ಜಿಲ್ಲೆ ಸಮಸ್ಯೆಗಳಿಂದ ತುಂಬಿದೆ.
ಕಾಫಿ, ಅಡಿಕೆ, ಕಾಳುಮೆಣಸು, ತೆಂಗು ಬೆಳೆದ ರೈತರು ಸಮಸ್ಯೆಯಲ್ಲಿದ್ದಾರೆ. ಸಂಸದರು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ
ಒಮ್ಮೆಯೂ ಮಾತನಾಡಿಲ್ಲ. ಜಿಲ್ಲೆಗೆ ಬಂದಾಗಲು ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಜಾತಿಯ ಹೆಸರಿನಲ್ಲಿ ಸಾಮಾಜಿಕ ಸ್ವಾಸ್ಥ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂಸದರ ಅವಶ್ಯಕತೆ ಜಿಲ್ಲೆಗೆ ಇದೆಯೇ ಎಂದು ಪ್ರಶ್ನಿಸಿದ ಅವರು, ಶೋಭಾ ಕರಂದ್ಲಾಜೆಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪಾರ್ಲಿಮೆಂಟ್‌ನಲ್ಲಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದ
ಇವರನ್ನು ಸ್ಪೀಕರ್‌ ಸಂಸದರ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಶಾಸಕ ಸಿ.ಟಿ. ರವಿ ತಮ್ಮ ಕ್ಷೇತ್ರದಲ್ಲಿ ಎಷ್ಟೊಂದು ಸಮಸ್ಯೆಗಳಿದ್ದರೂ ಅವರು ಕೂಡ ಜನರಿಗೆ ಸ್ಪಂದಿಸುತ್ತಿಲ್ಲ. ತಾಲೂಕಿನ
ಒಂದು ಕೆರೆಗೂ ನೀರು ತುಂಬಿಸುವ ಕೆಲಸ ಮಾಡುತ್ತಿಲ್ಲ. ಚಿಕ್ಕಮಗಳೂರು ನಗರವಂತೂ ಕೊಳೆತು ನಾರುತ್ತಿದೆ. ಈಗಾಗಲೇ ಪಕ್ಕದ
ಜಿಲ್ಲೆ ಹಾಸನದಲ್ಲಿ ಡೆಂಘೀ ಹರಡುತ್ತಿದೆ. ಚಿಕ್ಕಮಗಳೂರಿನಲ್ಲಿ ಡೆಂಘೀ ಹರಡಿದರೆ ಅದರ ಹೊಣೆಯನ್ನು ನಗರಸಭೆ, ಶಾಸಕ
ಸಿ.ಟಿ.ರವಿ ಹಾಗೂ ಆರೋಗ್ಯ ಇಲಾಖೆ ಹೊರಬೇಕಾಗುತ್ತದೆ ಎಂದರು. ಲೋಕಸಭಾ ಕ್ಷೇತ್ರದ ಅಧ್ಯಕ್ಷ ಮಂಜಪ್ಪ,
ಜಿಲ್ಲಾ ಕಾರ್ಯಾಧ್ಯಕ್ಷ ಅಶೋಕ್‌, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ವಕ್ತಾರ ಹೊಲದಗದ್ದೆ ಗಿರೀಶ್‌,
ಮುಖಂಡರಾದ ರಮೇಶ್‌, ಗೋಪಾಲಗೌಡ, ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next