ಮಂಗಳೂರು: ನಗರಕ್ಕೆ ರಂಗು ತುಂಬಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಶೋಭಾಯಾತ್ರೆ ಸಹಸ್ರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ಆರಂಭಗೊಂಡು ಬುಧವಾರ ಮುಂಜಾನೆಯವರೆಗೆ ವೈಭವದಿಂದ ನೆರವೇರಿತು.
ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಶೋಭಾಯಾತ್ರೆಯನ್ನು ಸಹಸ್ರಾರು ಜನರು ಕಣ್ತುಂಬಿಕೊಂಡರು.
ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ಮಾತೆ, ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿಗ್ರಹ ಸಹಿತ ವರ್ಣರಂಜಿತ ದಸರಾ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು. ಕ್ಷೇತ್ರದಿಂದ ಹೊರಟ ದಸರಾ ಮೆರವಣಿಗೆ ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ನಾರಾಯಣ ಗುರು ಸರ್ಕಲ್, ಲಾಲ್‌ಬಾಗ್, ಬಳ್ಳಾಲ್‌ಬಾಗ್, ಪಿವಿಎಸ್ ವೃತ್ತ, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್, ಅಳಕೆಯ ಮೂಲಕ ಮತ್ತೆ ಶ್ರೀ ಕ್ಷೇತ್ರ ತಲುಪಿತು. ನಗರದ 9 ಕಿ.ಮೀ. ವ್ಯಾಪ್ತಿಯಲ್ಲಿ ಮೆರವಣಿಗೆ ಸಾಗಿಬಂತು.
ಸೇವಾಕರ್ತರಿಗೆ ಸಮ್ಮಾನ
ಸಂಜೆ ವಿಸರ್ಜನ ಪೂಜೆ ನೆರವೇರಿದ ಬಳಿಕ ಶ್ರೀ ಶಾರದೆಯ ಸನ್ನಿಧಿಯಲ್ಲಿ ಸೇವಾಕರ್ತರನ್ನು ಸಮ್ಮಾನಿಸಲಾಯಿತು.
ಶಾಸಕ ಡಿ.ವೇದವ್ಯಾಸ ಕಾಮತ್, ಮಾಜಿ ಸಚಿವ ಬಿ.ರಮಾನಾಥ ರೈ, ಪ್ರಮುಖರಾದ ಸೂರ್ಯಕುಮಾರ್ ಸುವರ್ಣ, ಎಂ.ಶಶಿಧರ ಹೆಗ್ಡೆ, ಅಶ್ವಿತ್ ಸುವರ್ಣ, ಚಿತ್ತರಂಜನ್ ಬೋಳಾರ್, ಜಿತೇಂದ್ರ ಕೊಟ್ಟಾರಿ, ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಪ್ರಮುಖರಾದ ಮಾಧವ ಸುವರ್ಣ, ಊರ್ಮಿಳಾ ರಮೇಶ್ ಕುಮಾರ್, ಹರಿಕೃಷ್ಣ ಬಂಟ್ವಾಳ, ಡಾ| ಬಿ.ಜಿ. ಸುವರ್ಣ ಸಹಿತ ಹಲವು ಗಣ್ಯರು ಭಾಗವಹಿಸಿದ್ದರು.
ಸಾಂಸ್ಕೃತಿಕ ಸಂಭ್ರಮ
ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ಕಲಾತಂಡಗಳು ಭಾಗವಹಿಸಿದ್ದವು. ವಿವಿಧ ಸಂಘ ಸಂಸ್ಥೆಗಳು ಪ್ರವರ್ತಿಸಿದ ಧಾರ್ಮಿಕ-ಸಾಂಸ್ಕೃತಿಕ ಸ್ತಬ್ಧಚಿತ್ರ, ಹುಲಿ ವೇಷ, ನೃತ್ಯ ರೂಪಕಗಳು, ದೇಶದ ಪರಂಪರೆ ಬಿಂಬಿಸುವ ಟ್ಯಾಬ್ಲೋಗಳು, ಬಣ್ಣದ ಕೊಡೆಗಳು, ಕೇರಳದ ಚೆಂಡೆ ವಾದ್ಯ ಮತ್ತು ನಾನಾ ಕಲಾ ಪ್ರಕಾರಗಳು ಶೋಭಾಯಾತ್ರೆಗೆ ಹೊಸ ರಂಗು ನೀಡಿದವು. ದಸರಾ ಮೆರವಣಿಗೆ ಸಾಗಿ ಬಂದ ರಸ್ತೆಯುದ್ದಕ್ಕೂ ಜನ ಜಾತ್ರೆ ಮೇಳೈಸಿತ್ತು. ಮೆರವಣಿಗೆ ಸಾಗುವ ಅಲ್ಲಲ್ಲಿ ಸಂಗೀತ ರಸಮಂಜರಿ ಮತ್ತಿತರ ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು. ರಸ್ತೆ ಬದಿಯಲ್ಲಿ ವ್ಯಾಪಾರ- ವಹಿವಾಟು ಜೋರಾಗಿತ್ತು. ಶೋಭಾಯಾತ್ರೆ ಕಣ್ತುಂಬಿಕೊಳ್ಳಲು ದೇಶ-ವಿದೇಶದ ಜನರು ಭಾಗವಹಿಸಿದ್ದರು.