ಉಡುಪಿ/ನವದೆಹಲಿ: ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು ಮುಂದುವರಿದಿದೆ. ಏತನ್ಮಧ್ಯೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಹಾಗೂ ಬಿಜೆಪಿಯಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬ ಬಗ್ಗೆ ಕುತೂಹಲ ಹೆಚ್ಚಾಗತೊಡಗಿದೆ.
ಹಾಲಿ ಸಂಸದರಿಗೆ ಟಿಕೆಟ್ ಬಹುತೇಕ ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿಳಿಸಿದ್ದರು. ಆದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮತ್ತೊಂದೆಡೆ ಸ್ಥಳೀಯ ಮುಖಂಡರಾದ ಜಯಪ್ರಕಾಶ್ ಹೆಗ್ಡೆಯವರಿಗೆ ಟಿಕೆಟ್ ಕೊಡಬೇಕು ಎಂಬ ಕೂಗು ಬಲವಾಗಿ ಕೇಳಿಬಂದಿತ್ತು.
ಏತನ್ಮಧ್ಯೆ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಹಾಲಿ ಸಂಸದರಲ್ಲಿ ಶೋಭಾ ಕರಂದ್ಲಾಜೆ ಹಾಗೂ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನೀಡಬಾರದು ಎಂಬ ಬಗ್ಗೆ ಹಲವು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಬಿಜೆಪಿ ಹೈಕಮಾಂಡ್ ಕೂಡಾ ಆತಂರಿಕ ವರದಿಯ ಆಧಾರದ ಮೇಲೆ ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡುವ ಬಗ್ಗೆ ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಯಶ್ ಪಾಲ್ ಸುವರ್ಣ ಮತ್ತು ಜಯಪ್ರಕಾಶ್ ಹೆಗ್ಡೆ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ನಿಟ್ಟಿನಲ್ಲಿ ಮೀನುಗಾರ ಸಮುದಾಯದ ಯಶ್ ಪಾಲ್ ಅವರನ್ನು ಇಳಿಸುವ ಸಾಧ್ಯತೆ ಇದೆ ಎಂಬ ಊಹಾಪೋಹ ಹರಿದಾಡುತ್ತಿದೆ. ಆದರೆ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಹೊರತುಪಡಿಸಿ ಬೇರೆ ಕ್ಷೇತ್ರ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರಿದಿದ್ದು, ಬುಧವಾರ ರಾತ್ರಿ ಅಥವಾ ಗುರುವಾರದೊಳಗೆ ಅಂತಿಮ ಪಟ್ಟಿ ಹೊರಬೀಳುವ ಮೂಲಕ ಊಹಾಪೋಹಗಳಿಗೆ ತೆರೆಬೀಳಲಿದೆ.