Advertisement

ಆಂಗ್ಲ ಭಾಷಾ ವ್ಯಾಮೋಹದಿಂದ ಮಾತೃಭಾಷೆಗೆ ಧಕ್ಕೆ: ಶೋಭಾ ಕರಂದ್ಲಾಜೆ

10:06 AM Feb 25, 2020 | sudhir |

ಕಾರ್ಕಳ: ಕೇಂದ್ರ ಸರಕಾರ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪೂರಕ ವಾತಾವರಣ ಕಲ್ಪಿಸುತ್ತಿದೆ. ಮನೆಗಳಲ್ಲೂ ಆಂಗ್ಲ ಭಾಷೆಯ ಸಂವಹನ ವ್ಯಾಮೋಹದಿಂದಾಗಿ ಮಾತೃ ಭಾಷೆಗೆ ಧಕ್ಕೆಯಾಗುತ್ತಿದೆ. ಇದರಿಂದ ಭಾಷೆಯೊಂದಿಗೆ ನಮ್ಮತನ, ಸಂಸ್ಕಾರ, ಸಂಸ್ಕೃತಿಯೂ ಮರೆಯಾಗುವ ಅಪಾಯವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.
ಅವರು ಕಾರ್ಕಳ ಎಸ್‌ವಿಟಿ ವಿದ್ಯಾಸಂಸ್ಥೆಯ ವಠಾರದಲ್ಲಿ ರವಿವಾರ ನಡೆದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಜತ ಮಹೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

Advertisement

ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಅನೇಕ ಕಾರ್ಯಕ್ರಮಗಳು ಆಗುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಗಳಾಗಬೇಕು. ಅದಕ್ಕಾಗಿ ಸರಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಕೊಂಕಣಿ ತರಗತಿ
ಕೊಂಕಣಿ ಸಾಹಿತಿ ರವೀಂದ್ರ ಕೇಳೇಕರ್‌ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಕೊಂಕಣಿ ಭಾಷಿಕರು ಹೆಚ್ಚಾಗಿರುವ ಪ್ರದೇಶ‌ಗಳ ಶಾಲೆಗಳಲ್ಲಿ ಕೊಂಕಣಿ ತರಗತಿ ನಡೆಸುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುತ್ತೇವೆ ಎಂದು ಶೋಭಾ ಭರವಸೆ ನೀಡಿದರು.

ಕನ್ನಡಕ್ಕೆ ಕೊಡುಗೆ
ವಲಸೆ ಬಂದ ಕೊಂಕಣಿಗರಿಗೆ ಕನ್ನಡ ನೆಲದ ಅರಸರು ಆಶ್ರಯ ನೀಡಿದರು. ಇಂದು ಕೊಂಕಣಿ ಮನೆ ಮಾತಾಗಿದ್ದರೂ ಕೊಂಕಣಿಗರು ಕನ್ನಡವನ್ನು ಬಳಸಿ, ಬೆಳೆಸಿದ್ದಾರೆ. ಪಂಜೆ ಮಂಗೇಶ ರಾವ್‌, ಮಂಜೇಶ್ವರ ಗೋವಿಂದ ಪೈ, ಯಶವಂತ ಚಿತ್ತಾಲ, ಗೌರೀಶ ಕಾಯ್ಕಿಣಿ, ಜಯಂತ ಕಾಯ್ಕಿಣಿ ಕನ್ನಡಕ್ಕೆ ನೀಡಿದ ಕೊಡುಗೆ ಮಹತ್ತರವಾದುದು ಎಂದು ಹಿರಿಯ ಸಾಹಿತಿ ನಾ ಡಿ’ಸೋಜಾ ಹೇಳಿದರು.

ಲಿಪಿಯ ಕಾರಣಕ್ಕಾಗಿ ಗೋವಾ ಸರಕಾರ ಕರ್ನಾಟಕದ ಕೊಂಕಣಿಗರಿಗೆ ಮಲತಾಯಿ ಧೋರಣೆ ತೋರುತ್ತಿದೆ. ಗೋವಾ ಸರಕಾರದ ಕೊಂಕಣಿ ಸಾಹಿತ್ಯ ಪುಸ್ತಕಗಳಿಗೆ ಬಹುಮಾನ ನೀಡುವ ಸಂದರ್ಭ ಕನ್ನಡ ಲಿಪಿಯಲ್ಲಿರುವ ಪುಸ್ತಕಗಳನ್ನು ಪರಿಗಣಿಸಲಾಗುತ್ತಿಲ್ಲ. ಮನೆಯಲ್ಲಿ ಮಾತನಾಡುವ ಭಾಷೆ ಒಂದಾದರೂ ಇಂತಹ ತಾರತಮ್ಯ ಸರಿಯಲ್ಲ ಎಂದವರು ವಿಷಾದಿಸಿದರು.

Advertisement

ಮಂಗಳೂರು ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ಕುಮಾರ ಬಾಬು ಬೆಕ್ಕೇರಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರು ವೇದಿಕೆಯಲ್ಲಿದ್ದರು.
ಬೆಳ್ಳಿಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ಶೆಣೈ ಸ್ವಾಗತಿಸಿದರು. ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಕೆ. ಜಗದೀಶ್‌ ಪೈ ಪ್ರಸ್ತಾವನೆಗೈದರು. ಶಿಕ್ಷಕ ರಾಜೇಂದ್ರ ಭಟ್‌ ನಿರೂಪಿಸಿ, ವಂದಿಸಿದರು.

ಸಮ್ಮಾನ
2019ನೇ ಸಾಲಿನ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಗೋಕುಲದಾಸ್‌ ಪ್ರಭು (ಸಾಹಿತ್ಯ), ಮೋಹನದಾಸ್‌ ಶೆಣೈ (ಕಲಾ), ವಿಷ್ಣು ಶಾಬು ರಾಣೆ (ಜಾನಪದ) ಅವರನ್ನು 50 ಸಾವಿರ ರೂ. ನಗದಿನೊಂದಿಗೆ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

2019ರ ಪುಸ್ತಕ ಪುರಸ್ಕಾರ ವಿಜೇತರಾದ ವೆಂಕಟೇಶ ನಾಯಕ್‌ (ಕವನ) ಮತ್ತು ಕ್ಲೆರೆನ್ಸ್‌ ಡೊನಾಲ್ಡ್‌ ಪಿಂಟೊ (ಸಣ್ಣ ಕಥೆ) ಅವರನ್ನು 25 ಸಾವಿರ ನಗದಿನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಶೋಧನೆ ಅಗತ್ಯ: ಡಾ| ಸಂಧ್ಯಾ ಪೈ
ಅಧ್ಯಕ್ಷತೆ ವಹಿಸಿದ್ದ ಬೆಳ್ಳಿ ಹಬ್ಬ ಸಮಿತಿ ಗೌರವಾಧ್ಯಕ್ಷೆ, ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಮಾತನಾಡಿ, ಸಾರಸ್ವತ ಜನಾಂಗ ಆರ್ಯವರ್ತದಿಂದ ಹೊರಟು ಅನೇಕ ಪ್ರದೇಶಗಳಲ್ಲಿ ನೆಲೆನಿಂತರು. ಅವರಲ್ಲಿ ಹಲವರು ಕೃಷಿ ಕಾರ್ಯದಲ್ಲಿ ತೊಡಗಿಕೊಂಡರೆ ಮತ್ತೆ ಕೆಲವರು ವೇದಾಧ್ಯಯನ ಹಾಗೂ ದೇವತಾರಾಧನಾ ಕಾರ್ಯ ನಡೆಸಿಕೊಂಡು ಬಂದರು. ಕೊಂಕಣಿ ಭಾಷೆಗೆ ವಿಸ್ತಾರವಾದ ಇತಿಹಾಸವಿದ್ದು, ಈ ಇತಿಹಾಸದ ಕುರಿತು ಸಂಶೋಧನೆ ನಡೆಸುವ ಅಗತ್ಯವಿದೆ ಎಂದರು.

ಕೊಂಕಣಿ ಭವನಕ್ಕೆ 5 ಕೋಟಿ ರೂ. ಅನುದಾನ
ಮುಜರಾಯಿ ಸಚಿವ ಶ್ರೀನಿವಾಸ ಪೂಜಾರಿ ಮಾತನಾಡಿ, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿದ ಒಟ್ಟು 22 ಭಾಷೆಗಳಲ್ಲಿ ಕೊಂಕಣಿಯೂ ಒಂದು. ಭಾಷೆ ಬದುಕು ಬೆಸೆಯುವುದು. ಭಾಷೆಯ ಬೆಳವಣಿಗೆಗೆ ಸರಕಾರ ಅಗತ್ಯ ಸಹಕಾರ ನೀಡುವುದು. ಮಂಗಳೂರಿನಲ್ಲಿ ನಿರ್ಮಾಣವಾಗಲಿರುವ ಕೊಂಕಣಿ ಭವನಕ್ಕೆ ರಾಜ್ಯ ಸರಕಾರ 5 ಕೋಟಿ ರೂ. ಅನುದಾನ ನಿಗದಿಗೊಳಿಸಿದೆ. ಈ ಮೊತ್ತವನ್ನು
8 ಕೋಟಿ ರೂ.ಗೆ ಏರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next