Advertisement

ಶೋಭಾಗೆ ಕರೆಂಟ್‌ ಶಾಕ್‌?:ಸದನ ಸಮಿತಿ ವರದಿ ಮಂಡನೆ

06:00 AM Nov 22, 2017 | Team Udayavani |

ಬೆಳಗಾವಿ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ವಿದ್ಯುತ್‌ ಖರೀದಿ ಹಗರಣ ಕುರಿತು ಸದನ ಸಮಿತಿ ವರದಿ ವಿಧಾನಸಭೆಯಲ್ಲಿ ಮಂಗಳವಾರ ಮಂಡನೆಯಾಗಿದ್ದು, ಹಿಂದಿನ ಸರಕಾರದಲ್ಲಿ ಶೋಭಾ ಕರಂದ್ಲಾಜೆ ಇಂಧನ ಸಚಿವೆಯಾಗಿದ್ದ ಅವಧಿಯಲ್ಲಿ ಹೆಚ್ಚಿನ ದರಕ್ಕೆ ವಿದ್ಯುತ್‌ ಖರೀದಿಸಲಾಗಿದೆ ಎಂದು ಉಲ್ಲೇಖೀಸಲಾಗಿದೆ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ 1,046 ಕೋಟಿ ರೂ. ನಷ್ಟವುಂಟಾಗಿದ್ದು, ಈ ಕುರಿತಂತೆ ಸೂಕ್ತ ತನಿಖೆ ನಡೆಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

Advertisement

ಈ ಮೂಲಕ ಬಿಜೆಪಿ ಸರಕಾರದ ಅವಧಿಯ ವಿದ್ಯುತ್‌ ಖರೀದಿ ಹಗರಣ ಆರೋಪ ಕೆದಕಿ ತನಿಖೆಯ ತೂಗುಗತ್ತಿ ಜೀವಂತವಾಗಿರಿಸಿರುವ ಸದನ ಸಮಿತಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ರಾಜಕೀಯವಾಗಿ ಹಣಿಯಲು ವೇದಿಕೆ ಸಜ್ಜುಗೊಳಿಸಿದೆ.

ಇದಲ್ಲದೆ, 2007ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರ ಸರಕಾರದ ಅವಧಿಯಲ್ಲಿ ಕಲ್ಲಿದ್ದಲು ಸಾಗಿಸಲು ಹೆಚ್ಚಿನ ದರ ನೀಡಿದ್ದರಿಂದ 63 ಕೋಟಿ ರೂ. ನಷ್ಟವಾಗಿದೆ ಎಂಬ ಆರೋಪದ ಬಗ್ಗೆ ಬಿಜೆಪಿ ಸದಸ್ಯರು ದೂರು ನೀಡಿದ್ದನ್ನೂ ವರದಿಯಲ್ಲಿ ಪ್ರಸ್ತಾವಿಸಲಾಗಿದೆ. ಆದರೆ, ಈ ಬಗ್ಗೆ ಸಮಿತಿ ಯಾವುದೇ ಶಿಫಾರಸು ಮಾಡಿಲ್ಲ. ಆ ಅವಧಿಯಲ್ಲಿ ಜೆಡಿಎಸ್‌ನ ಎಚ್‌.ಡಿ. ರೇವಣ್ಣ ಇಂಧನ ಸಚಿವರಾಗಿದ್ದರೂ ಅವರ ಹೆಸರು ಪ್ರಸ್ತಾವ ಮಾಡಿಲ್ಲ.

ಮಂಗಳವಾರ ಮಂಡನೆಯಾಗಿರುವ ವಿದ್ಯುತ್‌ ಖರೀದಿ ಹಗರಣ ಕುರಿತ ವರದಿ ಸಂಬಂಧ ಸಭಾಧ್ಯಕ್ಷರು ಬುಧವಾರ ಚರ್ಚೆಗೆ ಅವಕಾಶ ನೀಡಿದ್ದು, ಆಡಳಿತ ಮತ್ತು ವಿಪಕ್ಷ ಮಧ್ಯೆ ಜಟಾಪಟಿ ನಡೆಯುವ ಸಾಧ್ಯತೆ ಇದೆ.

ವರದಿಯಲ್ಲೇನಿದೆ?: ರಾಜ್ಯದಲ್ಲಿ 2004ರಿಂದ 2014ರ ವರೆಗೆ ವಿದ್ಯುತ್‌ ಖರೀದಿಯಲ್ಲಿ ಆಗಿರುವ ಹಗರಣದ ಕುರಿತು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅಧ್ಯಕ್ಷತೆಯ ಸದನ ಸಮಿತಿ ವರದಿ ಮಂಡಿಸಿದೆ. ಪ್ರಮುಖವಾಗಿ ಬಿಜೆಪಿ ಸರಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರು ಜೆಎಸ್‌ಡಬ್ಲ್ಯು ಎನರ್ಜಿ ಲಿಮಿಟೆಡ್‌ನಿಂದ 2011ರಿಂದ 25 ವರ್ಷಗಳವರೆಗೆ ವಿದ್ಯುತ್‌ ಖರೀದಿಸಲು ಒಪ್ಪಂದ ಮಾಡಿಕೊಂಡು ಅನಂತರ ಟೆಂಡರ್‌ ರದ್ದುಪಡಿಸಿದ್ದರು. ಆದರೆ, ಮತ್ತೆ ಅದೇ ಕಂಪೆನಿಯಿಂದ ಹೆಚ್ಚಿನ ದರಕ್ಕೆ ವಿದ್ಯುತ್‌ ಖರೀದಿ ಮಾಡಿದ್ದು, ಇದರಿಂದ ಸರಕಾರಕ್ಕೆ 1,046 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

ಕಲ್ಲಿದ್ದಲು ತೊಳೆಯುವುದರಲ್ಲಿ ನಷ್ಟ: 2002ರಿಂದ 2008ರ ಅವಧಿಯಲ್ಲಿ ಆರ್‌ಟಿಪಿಎಸ್‌ ವಿದ್ಯುತ್‌ ಉತ್ಪಾದನೆ ಸುಧಾರಿಸಲು ಸಿಂಗರೇನಿ ಕೊಲೇರಿಸ್‌, ವೆಸ್ಟರ್ನ್ ಕೋಲ್‌ ಫೀಲ್ಡ್‌ ಹಾಗೂ ಮಹಾನದಿ ಕೋಲ್ಸ್‌ನಿಂದ ಕಲ್ಲಿದ್ದಲು ತರಿಸಿದ್ದು, ಅದನ್ನು ತೊಳೆದಿರುವುದರಿಂದ 1,590 ಕೋಟಿ ರೂ. ನಷ್ಟವಾಗಿರುವುದನ್ನು ಸಮಿತಿ ಪತ್ತೆಹಚ್ಚಿದೆ.

2007ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಸರಕಾರದ ಅವಧಿಯಲ್ಲಿ ಕಲ್ಲಿದ್ದಲು ಸಾಗಿಸಲು ಹೆಚ್ಚಿನ ದರ ನೀಡಿದ್ದರಿಂದ 63 ಕೋಟಿ ರೂ. ನಷ್ಟವಾಗಿದೆ. ಕಳೆದ 10 ವರ್ಷಗಳಲ್ಲಿ ಜೆಎಸ್‌ಡಬ್ಲ್ಯು ಎನರ್ಜಿಯಿಂದ ವಿದ್ಯುತ್‌ ಖರೀದಿ ಪ್ರಮಾಣ ಹೆಚ್ಚಳವಾಗಿದ್ದರಿಂದ ಆರ್‌ಟಿಪಿಎಸ್‌, ಬಿಟಿಪಿಎಸ್‌ ವಿದ್ಯುತ್‌ ಉತ್ಪಾದನಾ ಪ್ರಮಾಣ ಕಡಿಮೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಪ್ಪಿತಸ್ಥರು ಯಾರು?
ಹತ್ತು ವರ್ಷಗಳಲ್ಲಿ  ವಿದ್ಯುತ್‌ ಖರೀದಿ, ಕಲ್ಲಿದ್ದಲು ತೊಳೆಯುವುದು, ಸಾಗಣೆ ವಿಷಯದಲ್ಲಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎನ್ನುವುದನ್ನು ಸಮಿತಿ ಪತ್ತೆಹಚ್ಚಿದೆಯಾದರೂ ವರದಿಯಲ್ಲಿ ಯಾರನ್ನೂ ತಪ್ಪಿತಸ್ಥರು ಎಂದು ಅಧಿಕೃತವಾಗಿ ಹೇಳಿಲ್ಲ. ಅಲ್ಲದೆ, ವರದಿಯಲ್ಲಿ ಎಲ್ಲೂ ಯಾರ ಹೆಸರನ್ನೂ ಪ್ರಸ್ತಾವ ಮಾಡಿಲ್ಲ. ಆದರೆ, ನಷ್ಟಕ್ಕೆ ಕಾರಣರಾದವರ ವಿರುದ್ಧ  ಕ್ರಮ ಜರಗಿಸಬೇಕು ಎಂದು ಶಿಫಾರಸು ಮಾಡಿದೆ.

ಪ್ರಮುಖ ಶಿಫಾರಸುಗಳು
– ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಘಟಕಗಳು 25 ವರ್ಷ ಹಳೆಯದಾಗಿದ್ದರಿಂದ ಬದಲಾಯಿಸಬೇಕು.
–  ಜಲ ವಿದ್ಯುತ್‌ ಉತ್ಪಾದನೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
–  ಶಾಖೋತ್ಪನ್ನ ವಿದ್ಯುತ್‌ ಘಟಕಗಳಿಗೆ ಗುಣಮಟ್ಟದ ಕಲ್ಲಿದ್ದಲು ಪೂರೈಸಿ ಉತ್ಪಾದನೆ ಹೆಚ್ಚಿಸಬೇಕು.
–  ಛತ್ತೀಸ್‌ಗಢ ಸರಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಅಲ್ಲಿ ಉಷ್ಣ ವಿದ್ಯುತ್‌ ಸ್ಥಾವರ ಶೀಘ್ರ ಪೂರ್ಣಗೊಳಿಸಬೇಕು.
–  ವಿದ್ಯುತ್‌ ವಿತರಣ ನಷ್ಟ  ಶೇ. 23ರಷ್ಟಿದ್ದು ಅದನ್ನು ಕಡಿಮೆ ಮಾಡಬೇಕು.
– ವಿದ್ಯುತ್‌ ಉತ್ಪಾದನಾ ಘಟಕಗಳ ಕಾಮಗಾರಿ ವಿಳಂಬ ತಪ್ಪಿಸಿ ಸಕಾಲದಲ್ಲಿ ಯೋಜನೆ ಪೂರ್ಣಗೊಳಿಸಬೇಕು.
–  ನವೀಕೃತ ಇಂಧನ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ ನೀಡಬೇಕು.

ಇಂಧನ ಇಲಾಖೆಯಲ್ಲಿನ ವಿದ್ಯುತ್‌ ಖರೀದಿ ಹಗರಣದ ವರದಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದೇನೆ. ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳು ಉತ್ತಮ ಸಹಕಾರ ನೀಡಿದ್ದಾರೆ. ಒಟ್ಟು  14 ಸಭೆಗಳನ್ನು ನಡೆಸಿದ್ದು, ವಾಸ್ತವಾಂಶಗಳನ್ನು ವರದಿ ಮಾಡಿದ್ದೇನೆ. ನಾನು ಯಾವುದೇ ಒತ್ತಡಕ್ಕೆ ಮಣಿಯದೆ ವರದಿ ಸಿದ್ಧಪಡಿಸಿದ್ದೇನೆ.
– ಡಿ.ಕೆ.ಶಿವಕುಮಾರ್‌,ಇಂಧನ ಸಚಿ

Advertisement

Udayavani is now on Telegram. Click here to join our channel and stay updated with the latest news.

Next