ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ಪರ ಸಂಸದೆ ಶೋಭಾ ಕರಂದ್ಲಾಜೆ ಅವರು ಹಂಚಿನಾಳ, ದೇವನೂರು, ತರ್ಲಘಟ್ಟ ಸೇರಿದಂತೆ ವಿವಿಧೆಡೆ ಮತಯಾಚಿಸಿದರು.
ಹಿಂದಿನ ಕಾಂಗ್ರೆಸ್ ಸರಕಾರ ಸಮಾಜದಲ್ಲಿ ಜಾತಿ ವಿಷ ಬೀಜ ಬಿತ್ತಿತು. ಇದೀಗ ಸಮ್ಮಿಶ್ರ ಸರಕಾರ ಸಹ ಅಭಿವೃದ್ಧಿ ಮರೆತು ಆಂತರಿಕ ಕಚ್ಚಾಟದಲ್ಲಿ ತೊಡಗಿದೆ. ಮತ್ತೂಮ್ಮೆ ಯಡಿಯೂರಪ್ಪ ಮುಖ್ಯಮಂತಿಯಾಗಬೇಕು. ಅವರ ಕೈ ಬಲಪಡಿಸಲು ಚಿಕ್ಕನಗೌಡ್ರನ್ನು ಗೆಲ್ಲಿಸಬೇಕು ಎಂದು ಹೇಳಿದರು. ಮೀನಾಕ್ಷಿ ಒಂಟಮೊರೆ, ರತ್ನಾ ಆವಜಿ ಇನ್ನಿತರರಿದ್ದರು.
Advertisement
ದೇವನೂರ ಗ್ರಾಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅನ್ನಭಾಗ್ಯ ಯೋಜನೆ ನೀಡಿದ್ದು, ಅಕ್ಕಿಯ ಬಹುತೇಕ ಮೊತ್ತವನ್ನು ಕೇಂದ್ರ ಸರಕಾರ ಭರಿಸಿದ್ದರೆ, ರಾಜ್ಯ ಸರಕಾರ ಒಂದು ಕೆಜಿಗೆ ಕೇವಲ 3 ರೂ. ಮಾತ್ರ ಭರಿಸಿ ತಾನೇ ಉಚಿತ ಅಕ್ಕಿ ನೀಡಿದ್ದಾಗಿ ಬೊಬ್ಬೆ ಹೊಡೆಯುತ್ತಿದೆ ಎಂದರು.
ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ
ಹುಬ್ಬಳ್ಳಿ: ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ. ಕಾಂಗ್ರೆಸ್‌ನವರಿಗೆ ಮತ ಕೇಳುವ ಯಾವುದೇ ನೈತಿಕತೆ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಬೀಳುತ್ತದೆ ಎಂದು ನಾವು ಹೇಳಿಲ್ಲ. ನಿಮ್ಮ ಶಾಸಕರೇ ಹೇಳುತ್ತಿದ್ದಾರೆ. ಉಮೇಶ ಜಾಧವ ಅವರು ಶ್ರೀಮಂತ ಕುಟುಂಬದಿಂದ ಬಂದವರು. ದುಡ್ಡಿನ ಆಮಿಷಕ್ಕೆ ಒಳಗಾಗುವ ದರಿದ್ರ ಅವರಿಗೆ ಬಂದಿಲ್ಲ. ಮೈತ್ರಿ ಸರ್ಕಾರದ ಒಳಜಗಳದಿಂದಾಗಿ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದಾರೆ. ಕುಂದಗೋಳ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ ಅವರು ಇಲ್ಲಿಗೆ ಬಂದು ನಮ್ಮ ಪಕ್ಷದ ಕಾರ್ಯಕರ್ತರನ್ನು ಖರೀದಿ ಮಾಡಲು ನಿಂತಿದ್ದಾರೆ. ಅವರ ದುಡ್ಡಿಗೆ ಇಲ್ಲಿ ಯಾರೂ ಖರೀದಿಗೆ ಸಿದ್ಧರಿಲ್ಲ. ಕುಂದಗೋಳ ಕ್ಷೇತ್ರದ ಜನರು ಸ್ವಾಭಿಮಾನಿಗಳಾಗಿದ್ದಾರೆ ಎಂದರು.