ಹೊಸದಿಲ್ಲಿ : ರಾಜ್ಯದಲ್ಲಿ ಹತ್ಯೆಗೀಡಾದ ಸಂಘಪರಿವಾರದ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರ ಹೆಸರಿನ ಪಟ್ಟಿ ಸಮೇತ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, ಈ ಪತ್ರದಲ್ಲಿ ಯಡವಟ್ಟು ನಡೆದಿದ್ದು ಜೀವಂತವಿರುವ ವ್ಯಕ್ತಿಯನ್ನೂ ಮೃತಪಟ್ಟಿರುವುದಾಗಿ ಉಲ್ಲೇಖೀಸಲಾಗಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ನಡೆದ ಸಂಘಪರಿವಾರದ 23 ಕಾರ್ಯಕರ್ತರ ಹತ್ಯೆಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು . ಶರತ್ ಮಡಿವಾಳ ಹತ್ಯೆ ಪ್ರಕರಣವನ್ನು ಎನ್‌ಐಗೆ ನೀಡಬೇಕು ಎಂದು ಪತ್ರ ಬರೆಯಲಾಗಿತ್ತು.
2015 ರಸೆಪ್ಟಂಬರ್ 20 ರಂದು ಮೂಡಬಿದಿರೆಯ ಹಂಡೇಲುವಿನಲ್ಲಿ ಅಶೋಕ್ ಪೂಜಾರಿ ಎಂಬ ಸಂಘಪರಿವಾರದ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಆಸ್ಪತ್ರೆಗೆ ದಾಖಲಾಗಿದ್ದು ಅಶೋಕ್ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಅಶೋಕ್ ಪೂಜಾರಿ ಅವರ ಹೆಸರನ್ನೆ ಪತ್ರದ ಮೊದಲ ಸಾಲಿನಲ್ಲಿ ಉಲ್ಲೇಖೀಸಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ ಪಟ್ಟಿಯಲ್ಲಿ ಗೊಂದಲವಾಗಿದೆ. ಹಲ್ಲೆಗೊಳಗಾದ ಹೆಸರುಗಳನ್ನು ಸೇರಿಸಿ ಇನ್ನೊಂದು ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಶೋಭಾ ಕರಂದ್ಲಾಜೆ ಪತ್ರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ , ಸೇರಿದಂತೆ ಹಲವು ಸಚಿವರು ಕಿಡಿಕಾರಿದ್ದಾರೆ. ಸಾಮಾಜಿಕ ತಾಣಗಳಲ್ಲಿಯೂ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಉಡುಪಿಯ ಕೆಂಜೂರಿನಲ್ಲಿ ಹತ್ಯೆಗೀಡಾದ ಪ್ರವೀಣ್ ಪೂಜಾರಿ ಹೆಸರು ಪಟ್ಟಿಯಲ್ಲೇಕೆ ಇಲ್ಲ, ಆರ್‌ಟಿಐ ಕಾರ್ಯಕರ್ತ ಬಾಳಿಗಾ ಕೊಲೆ ಪ್ರಕರಣದ ವಿಚಾರ ಯಾಕಿಲ್ಲ ಎಂಬ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.