ಉಡುಪಿ/ಮಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಖರ್ಚುವೆಚ್ಚಗಳ ವಿವರ ಅಂತಿಮವಾಗಿದ್ದು, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 66.46 ಲ.ರೂ. ಖರ್ಚು ಮಾಡಿ ಮುಂಚೂಣಿಯಲ್ಲಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು 60,73,396 ರೂ. ವೆಚ್ಚ ಮಾಡಿದ್ದಾರೆ. ಅವರ ನಿಕಟ ಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು 49,21,856 ರೂ. ವೆಚ್ಚ ಮಾಡಿದ್ದಾರೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಮೋದ್ ಖರ್ಚು ಮಾಡಿರುವುದು 62.68 ಲ.ರೂ. ಚುನಾವಣಾ ಆಯೋಗ ಪ್ರತಿ ಅಭ್ಯರ್ಥಿಗೆ ನಿಗದಿಪಡಿಸಿರುವ ಚುನಾವಣಾ ವೆಚ್ಚ ಮಿತಿ 70 ಲಕ್ಷ ರೂ. ಆಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಖರ್ಚು ವೆಚ್ಚಗಳನ್ನು ಸಲ್ಲಿಸಲು ಜೂ.22ರ ವರೆಗೆ ಅವಕಾಶವಿತ್ತು.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಒಟ್ಟು 13 ಅಭ್ಯರ್ಥಿಗಳು ಚುನಾವಣಾ ವೆಚ್ಚದ ವಿವರಗಳನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ. ಚುನಾವಣಾ ಆಯೋಗದ ಮಾಹಿತಿಯಂತೆ ಎಸ್‌ಡಿಪಿಐ ಅಭ್ಯರ್ಥಿ ಮಹಮ್ಮದ್ ಇಲ್ಯಾಸ್ ಅವರ ಚುನಾವಣಾ ವೆಚ್ಚ 12,14,239 ರೂ., ಬಿಎಸ್‌ಪಿ ಅಭ್ಯರ್ಥಿ ಎಸ್. ಸತೀಶ್ ಸಾಲಿಯಾನ್ 1,40,135 ರೂ. ವೆಚ್ಚ ಮಾಡಿದ್ದಾರೆ. 74,392 ರೂ, ವೆಚ್ಚ ಮಾಡಿರುವ ಅಲೆಕ್ಸಾಂಡರ್ ಅವರು ಪಕ್ಷೇತರ ಅಭ್ಯರ್ಥಿಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 44,677 ರೂ. ವೆಚ್ಚ ಮಾಡಿರುವ ಮ್ಯಾಕ್ಸಿಂ ಪಿಂಟೋ ಅವರು ಅನಂತರದ ಸ್ಥಾನದಲ್ಲಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷದ ವಿಜಯ್ ಶ್ರೀನಿವಾಸ್ 38,670 ರೂ., ಪಕ್ಷೇತರ ಅಭ್ಯರ್ಥಿಗಳಾದ ಮಹಮ್ಮದ್ ಖಾಲಿದ್ 32,500 ರೂ., ಹಿಂದೂಸ್ತಾನ್ ಜನತಾ ಪಾರ್ಟಿಯ ಸುಪ್ರೀತ್ ಕುಮಾರ್ 28,111 ರೂ., ಪಕ್ಷೇತರ ಅಭ್ಯರ್ಥಿಗಳಾದ ವೆಂಕಟೇಶ ಬೆಂಡೆ 26,500 ರೂ., ಅಬ್ದುಲ್ ಹಮೀದ್ 25,000 ರೂ., ಎಚ್. ಸುರೇಶ್ ಪೂಜಾರಿ 25,000 ರೂ. ವೆಚ್ಚ ಮಾಡಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ 66.46 ಲ.ರೂ. ಖರ್ಚು ಮಾಡಿದ್ದಾರೆ. ಇದರಲ್ಲಿ 40 ಲ.ರೂ. ಪಾರ್ಟಿ ಫಂಡ್ ಎಂದು ವಿವರ ನೀಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪ್ರಮೋದ್ 62.68 ಲ.ರೂ., ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ 8.34 ಲ.ರೂ., ಬಿಎಸ್‌ಪಿ ಅಭ್ಯರ್ಥಿ ಪಿ. ಪರಮೇಶ್ವರ 7.05 ಲ.ರೂ. ವೆಚ್ಚ ಮಾಡಿದ್ದಾರೆ.