Advertisement

ಬಾಕಿ ಕಾಮಗಾರಿಗಳು, ಹೊಸ ಯೋಜನೆಗಳಿಗೆ ಆದ್ಯತೆ: ಸಂಸದೆ ಶೋಭಾ ಕರಂದ್ಲಾಜೆ

10:26 AM Jun 03, 2019 | keerthan |

ಉಡುಪಿ: ಮರಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಆ.1ರಿಂದ ಮರಳುಗಾರಿಕೆ ಪುನರಾರಂಭಗೊಳ್ಳಲಿದೆ. ಮುಳುಗಿರುವ ಸುವರ್ಣ ತ್ರಿಭುಜ ಬೋಟ್‌ ಮೇಲೆತ್ತಲು ನೌಕಾ ಪಡೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಪುನರಾಯ್ಕೆಯಾದ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

Advertisement

* ಹಿಂದಿನ ವರ್ಷಗಳ ಬಾಕಿ ಉಳಿದ ಯೋಜನೆಗಳನ್ನು ಪೂರ್ತಿಗೊಳಿಸಲು ಇಟ್ಟುಕೊಂಡ ಗುರಿಗಳೇನು?
ಈಗಾಗಲೇ ಕಾಮಗಾರಿ ಆರಂಭಿಸಿರುವ ಕೊಂಕಣ ರೈಲ್ವೇ ರಾಮಕೃಷ್ಣ ಹೆಗಡೆ ಕೌಶಲ ಅಭಿವೃದ್ಧಿ ಕೇಂದ್ರ, ಕೇಂದ್ರೀಯ ವಿದ್ಯಾಲಯ, ಉಪ್ಪೂರಿನ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಜೆಮ್ಸ್‌ ಆ್ಯಂಡ್‌ ಜುವೆಲರಿ ಕೇಂದ್ರ, ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ ರಾಜ್ಯ ಹೆದ್ದಾರಿಗಳು ಇತ್ಯಾದಿ ಯೋಜನೆಗಳನ್ನು ಪೂರ್ತಿಗೊಳಿಸಲು, ಕೊಂಕಣ ರೈಲ್ವೇ ವಿದ್ಯುದೀಕರಣ ಮತ್ತು ದ್ವಿಪಥ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುತ್ತೇನೆ.

* ಈ ವರ್ಷದ ಆದ್ಯತೆಗಳೇನು?
ಕೇಂದ್ರ ಸರಕಾರದ ಸೌಲಭ್ಯಗಳನ್ನು ತಿಳಿದು ಅಂತಹ ಯೋಜನೆಗಳನ್ನು ಇಲ್ಲಿಗೆ ತರಲು ಪ್ರಯತ್ನಿಸುತ್ತೇನೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ಕೊಡುತ್ತೇನೆ. ಪಡುಬಿದ್ರಿ ಬೀಚ್‌ಗೆ ಬ್ಲೂ ಫ್ಲ್ಯಾಗ್‌ ಯೋಜನೆಯಡಿ 8 ಕೋ.ರೂ. ಬಂದಿದೆ. ಇನ್ನಷ್ಟು ಅನುದಾನ ತರಿಸಲು ಯತ್ನಿಸುತ್ತೇನೆ. ಎರ್ಮಾಳು, ಹೆಜಮಾಡಿ, ಕೋಡಿಕನ್ಯಾನ ಬಂದರು ಅಭಿವೃದ್ಧಿಗೆ ಗಮನಹರಿಸುವೆ. ಮೀನುಗಾರಿಕಾ ಇಲಾಖೆ ಆರಂಭವಾದ ಕಾರಣ ಆಳಸಮುದ್ರ ಮೀನುಗಾರಿಕೆ, ಡೀಸೆಲ್‌ ಸಬ್ಸಿಡಿ, ಮುಖ್ಯವಾಗಿ ಮೀನುಗಾರರ ಸುರಕ್ಷೆ, ಸಿಆರ್‌ಝಡ್‌ ವಿಚಾರದಲ್ಲಿ ಮೀನುಗಾರಿಕಾ ಸಚಿವರಲ್ಲಿ ಮಾತನಾಡುತ್ತೇನೆ.

*ಕಡಿಯಾಳಿ-ಮಣಿಪಾಲ ರಾ.ಹೆ. ಕಾಮಗಾರಿ ಅವೈಜ್ಞಾನಿಕ ಎಂಬ ಮಾತಿದೆಯಲ್ಲ?
ರಸ್ತೆ ಕಾಮಗಾರಿ ತಜ್ಞ ಎಂಜಿನಿಯರ್‌ ರೂಪಿಸಿದಂತೆ ನಡೆಯುತ್ತವೆ. ಚರಂಡಿ, ಸರ್ವಿಸ್‌ ರಸ್ತೆಗಳಿಲ್ಲದೆ ಇರುವುದೇ ಮೊದಲಾದ ಅವೈಜ್ಞಾನಿಕತೆ ಇದ್ದರೆ ಸರಿಪಡಿಸಲಾಗುವುದು.

* ತೆಂಗು, ಅಡಿಕೆ, ಕಾಫಿ, ಕಾಳುಮೆಣಸು ಬೆಳೆಗಾರರ ಸಮಸ್ಯೆಗಳ ಬಗ್ಗೆ?
ತೆಂಗಿಗೆ ಬೆಂಬಲ ಬೆಲೆ ರಾಜ್ಯ ಸರಕಾರ ಕೊಡಬೇಕು. ಅಡಿಕೆ ಆಮದನ್ನು ನಿಷೇಧಿಸುವ ವಿಚಾರ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಆಮದನ್ನು ಕಡಿಮೆ ಮಾಡಲು ಆಮದು ಸುಂಕವನ್ನು ಜಾಸ್ತಿ ಮಾಡಿದ್ದೇವೆ. ಅದರ ಕನಿಷ್ಠ ಬೆಲೆ ಕೆ.ಜಿ.ಗೆ 250 ರೂ. ಇರಬೇಕು ಎಂದು ಕಾನೂನು ರೂಪಿಸಲಾಗಿದೆ. ಕಾಫಿ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ಅವಲಂಬಿತ. ಕಾಫಿ ಬೆಳೆಗೆ ಕಾಡುತ್ತಿರುವ ರೋಗ ಹತೋಟಿ, ಸಬ್ಸಿಡಿಯಂತಹ ವಿಷಯಗಳಿಗೆ ಪ್ರಯತ್ನಿಸುತ್ತೇನೆ. ಕಾಳು ಮೆಣಸು ಆಮದು ಆಗುತ್ತಿದೆ ಎಂಬುದು ಬೆಳೆಗಾರರ ಆರೋಪ. ಈ ವಿಷಯದ ಕುರಿತು ಕೇರಳದ ವ್ಯಾಪಾರಿಗಳು ಅಲ್ಲಿನ ಉಚ್ಚ ನ್ಯಾಯಾಲಯಕ್ಕೆ ಹೋಗಿದ್ದಾರೆ. ಆಮದು ತಡೆ ಪ್ರಯತ್ನದ ಅಂಗವಾಗಿ ಆಮದು ಸುಂಕವನ್ನು ಹೆಚ್ಚಿಸಬಹುದು.

Advertisement

* ಕಾಳುಮೆಣಸು ಪಾರ್ಕ್‌ ಕುರಿತು…
ಚಿಕ್ಕಮಗಳೂರಿನಲ್ಲಿ ಸ್ಪೈಸ್‌ ಪಾರ್ಕ್‌ ಮಾಡಬೇಕೆಂದಾದಾಗ ಪೆಪ್ಪರ್‌ ಪಾರ್ಕ್‌ ಮಾಡಬೇಕೆಂದು ಜನರ ಬೇಡಿಕೆ ಬಂತು. ಇದನ್ನು ಆರಂಭಿಸಲು ರಾಜ್ಯ ಸರಕಾರ ಜಾಗ ನೀಡಬೇಕಾಗಿದೆ. ನೀಡಿದರೆ ಆರಂಭಿಸಲಾಗುವುದು.

* ಸುವರ್ಣ ತ್ರಿಭುಜ ಬೋಟ್‌ ಮೇಲೆತ್ತಲು ಮತ್ತು ಮೀನುಗಾರರಿಗೆ ಸಿಗಬೇಕಾದ ವಿಮೆಯಂತಹ ಪರಿಹಾರದ ಕುರಿತು ಏನು ಪ್ರಯತ್ನ ಮಾಡುತ್ತೀರಿ?
ಬೋಟು ಮೇಲೆತ್ತಲು ಯಾವ ತಂತ್ರಜ್ಞಾನ ವಿದೆ ಎಂಬುದನ್ನು ತಿಳಿದುಕೊಳ್ಳಬೇಕಷ್ಟೆ. ಮೇಲೆತ್ತಲಾಗದಿದ್ದರೆ ಬೋಟಿನ ವಿಮೆ ಸಿಗುವುದು ಕಷ್ಟ. ಈ ಬಗ್ಗೆ ನೌಕಾ ಪಡೆಯವರಲ್ಲಿ ಮಾತನಾಡುತ್ತೇನೆ. ಮೃತಪಟ್ಟವರಿಗೆ ಸಿಗಬೇಕಾದ ವಿಮೆಯಂತಹ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ. ಎಲ್ಲದರ ಕುರಿತು ಹೊಸ ರಕ್ಷಣಾ ಸಚಿವರು ಮತ್ತು ಈಗ ವಿತ್ತ ಸಚಿವರಾಗಿರುವ ಹಿಂದಿನ ರಕ್ಷಣಾ ಸಚಿವರನ್ನೂ ಭೇಟಿ ಮಾಡಿ ಪ್ರಯತ್ನಿಸುತ್ತೇನೆ.

* ಆ. 1ರಂದು ಮರಳುಗಾರಿಕೆ ಆರಂಭವಾಗಬಹುದೆ?
ಆ. 1ರಂದು ಮರಳುಗಾರಿಕೆ ಆರಂಭಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ 7 ಸದಸ್ಯರ ಸಮಿತಿ ರಚನೆಯಾಗಿದ್ದು ಜಿಲ್ಲಾ ಸಮಿತಿಗೆ ಪರಮಾಧಿಕಾರ ಕೊಟ್ಟಿದ್ದಾರೆ. ಇದರ ಬಗ್ಗೆ ಫಾಲೋ ಅಪ್‌ ಮಾಡುತ್ತೇನೆ.

* ಸ್ವತ್ಛ ಭಾರತ ಆಂದೋಲನ ಜಾಗೃತಿ ಮೂಡಿಸಿದೆ. ಆದರೆ ಇದರ ಮೂಲ ಸಮಸ್ಯೆಯಾದ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಸರಕಾರವೇನಾದರೂ ನಿರ್ಣಯ ತಳೆಯುವುದಿದೆಯೆ?
ಬಹುತೇಕ ಸಮಸ್ಯೆ ಇರುವುದೇ ಪ್ಲಾಸ್ಟಿಕ್‌ ಸಾಮಗ್ರಿಗಳ ಬಳಕೆಯಲ್ಲಿ. ಇದರ ಬಗ್ಗೆ ನೀತಿ ನಿರ್ಧಾರ ತಳೆಯಬೇಕಾಗಿದೆ. ಇದರ ಬಗ್ಗೆ ನಾನೂ ಪ್ರಸ್ತಾವಿಸುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next