ಬೈಲಹೊಂಗಲ: ದೇಶಾದ್ಯಂತ ಭಾರತ ಸರ್ಕಾರದ ಅನುದಾನದಡಿ ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಸೇವೆ ಸಲ್ಲಿಸುತ್ತಿದ್ದು, ಈ ಭಾಗದಲ್ಲಿ ಡಾ. ಪ್ರಭಾಕರ ಕೋರೆಯವರ ಪ್ರಯತ್ನದಿಂದ ಕೆಎಲ್‌ಇ ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರವು ರೈತರ ಸಹಾಯಕ್ಕೆ ಬಂದಿದೆ. ಕೃಷಿ ವಿಜ್ಞಾನ ಕೇಂದ್ರವು ಕೆವಿಕೆ ವಿಜ್ಞಾನಿಗಳ ಪಯತ್ನದಿಂದ ಹವಾಮಾನ, ಮಣ್ಣಿನ ಗುಣಧರ್ಮ ಹಾಗೂ ಜೀವ ವೈವಿಧ್ಯತೆಗಳ ಅನುಗುಣವಾಗಿ ಹೊಂದಿಕೊಳ್ಳುವ ಬೆಳೆ ಯೋಜನೆ ಕುರಿತು ರೈತರಿಗೆ ಮಾಹಿತಿ ನೀಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ರವಿವಾರ ತಾಲೂಕಿನ ಮತ್ತಿಕೊಪ್ಪದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ‘ರೈತರ ವಸತಿ ನಿಲಯ’ ಹಾಗೂ ‘ಸಿಬ್ಬಂದಿ ವಸತಿ ಗೃಹಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ನಿಕಟ ಸಂಪರ್ಕದೊಂದಿಗೆ ತರಬೇತಿಗಳನ್ನು ಆಯೋಜಿಸಲು ಅನುಕೂಲವಾಗುವಂತೆ ರೈತರ ವಸತಿ ನಿಲಯ ಹಾಗೂ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ 1.8 ಕೋಟಿ ರೂಪಾಯಿಗಳ ಅನುದಾನವನ್ನು ಮತ್ತು ಸೋಯಾಬಿನ್ ಬೀಜೋತ್ಪಾದನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು 1.6 ಕೋಟಿ ಮೊತ್ತದ ಯೋಜನೆಯನ್ನು ಕೃಷಿ ವಿಜ್ಞಾನ ಕೇಂದ್ರಕ್ಕೆ ಕೇಂದ್ರ ಸರ್ಕಾರದಿಂದ ಅನುದಾನವನ್ನು ನೀಡಲಾಗಿದೆ. ಪ್ರಧಾನಿಯವರ ಸಂಕಲ್ಪದಂತೆ, ದೇಶವು ಎಣ್ಣೆ ಕಾಳು ಬೆಳೆ ಉತ್ಪಾದನೆಯನ್ನು ಹಾಗೂ ರಸಗೊಬ್ಬರಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕಾಗಿದೆ. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ 2013-14 ರಲ್ಲಿ ಕೃಷಿ ಕ್ಷೇತ್ರಕ್ಕೆ 23 ಸಾವಿರ ಕೋಟಿ ರೂಪಾಯಿಗಳನ್ನು ಮಾತ್ರ ಒದಗಿಸಲಾಗಿತ್ತು. ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರ ಒಂದು ಲಕ್ಷ ಮೂವತ್ತೆರಡು ಸಾವಿರ ಕೋಟಿ ರೂಪಾಯಿಯನ್ನು ಒದಗಿಸಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಇದನ್ನು ರೈತರ ಕಲ್ಯಾಣಕ್ಕಾಗಿ ಕೇಂದ್ರದ ಹಲವಾರು ಕೃಷಿಪರ ಯೋಜನೆಗಳ ಮೂಲಕ ಬಳಸಲಾಗುತ್ತಿದೆ. ಕೇಂದ್ರ ಸರ್ಕಾರವು ಅನುಷ್ಠಾನಗೊಳಿಸಿದ ವಿವಿಧ ಯೋಜನೆಗಳ ಫಲವಾಗಿ ಆಹಾರ ಧಾನ್ಯಗಳನ್ನು ರಫ್ತು ಮಾಡುವಲ್ಲಿ ಭಾರತ ದೇಶವು ವಿಶ್ವದಲ್ಲಿ 9 ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದರು.
ಸರ್ಕಾರವು ಹನಿ ನೀರಾವರಿ ಯೋಜನೆ, ಫಸಲ ಭೀಮಾ ಯೋಜನೆ, ಕೃಷಿ ಮೂಲ ಸೌಲಭ್ಯ ಅನುದಾನ ಹಾಗೂ ರೈತ ಉತ್ಪಾದಕ ಕಂಪನಿ ರಚನೆಗಳ ಮೂಲಕ ಆನೇಕ ರೈತಪರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಪ್ರತಿ ಜಿಲ್ಲೆಯ ಹವಾಮಾನ ಆಧಾರಿತ ಕೃಷಿಯನ್ನು ಅನುಷ್ಠಾನಗೊಳಿಸಲು ಜಿಲ್ಲಾ ಕೃಷಿ ಯೋಜನೆಯನ್ನು ರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ರಾಜ್ಯ ಸರ್ಕಾರಗಳಿಗೆ ತಿಳಿಸಲಾಗಿದೆ. ದೇಶವು ಅಗತ್ಯವಿರುವ ಶೇ.75 ಭಾಗದಷ್ಟು , ಸುಮಾರು 80,000 ಕೋಟಿ ಮೊತ್ತದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಆತ್ಮ ನಿರ್ಭರ ಯೋಜನೆ ಮೂಲಕ ಎಣ್ಣೆ ಕಾಳು ಉತ್ಪಾದನೆಯನ್ನು ಅಧಿಕಗೊಳಿಸಿ ಸ್ವಾವಲಂಬನೆಯನ್ನು ಸಾಧಿಸುವತ್ತ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ದೇಶದಲ್ಲಿ ಎಣ್ಣೆ ಕಾಳು ಉತ್ಪಾದನೆಗೆ ಪ್ರಧಾನ ಮಂತ್ರಿಗಳು ಒತ್ತು ಕೊಡುತ್ತಿದ್ದು, ಈ ದಿಸೆಯಲ್ಲಿ ಕೃಷಿ ವಿಜ್ಞಾನ ಕೇಂದ್ರವು ಸೋಯಾಬಿನ ಬೆಳೆಯ ಅಧಿಕ ಇಳುವರಿ ನೀಡುವ ತಳಿಗಳ ಗುಣಮಟ್ಟದ ಬೀಜೋತ್ಪಾದನೆ ಉತ್ಪಾದನೆ ಮಾಡಿ, ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯಗಳಿಗೂ ಕೂಡ ಕಳುಹಿಸಲಾಗುತ್ತಿದೆ ಎಂದರು.
ಈ ಭಾಗದಲ್ಲಿ ತರಕಾರಿ ಬೆಳೆಗಳನ್ನು ಹೇರಳವಾಗಿ ಬೆಳೆಯುತ್ತಿದ್ದು, ಸಂಸ್ಕರಣಾ ಘಟಕಗಳ ಕೊರತೆಯಿಂದಾಗಿ ಶೇ.50 ರಷ್ಟು ತರಕಾರಿ ಪದಾರ್ಥಗಳು ನಾಶವಾಗುತ್ತಿವೆ. ಈ ಭಾಗದಲ್ಲಿ ದೊಡ್ಡ ಪ್ರಮಾಣದ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಬೇಕಾಗಿದೆ. ಈ ದಿಸೆಯಲ್ಲಿ ಕೃಷಿ ವಿಜ್ಞಾನ ಕೇಂದ್ರವು ಆಹಾರ ಧಾನ್ಯಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತು ತರಬೇತಿಗಳ ಮೂಲಕ ರೈತರಿಗೆ ತಂತ್ರಜ್ಞಾನವನ್ನು ತಿಳಿಸುತ್ತಿದೆ ಎಂದರು.
ರೈತರು ಹಾಗೂ ರೈತ ಮಹಿಳೆಯರಿಗೆ ಇನ್ನೂ ಆನೇಕ ವಿಷಯಗಳ ಸಂಪೂರ್ಣ ಮಾಹಿತಿ ನೀಡಲು ರೈತರಿಗೆ ವಸತಿ ಕೇಂದಕ್ಕೆ ಬರುವ ಸೌಕರ್ಯ ಕಲ್ಪಿಸಲು ರೈತರ ವಸತಿ ನಿಲಯ ಹಾಗೂ ಸಿಬ್ಬಂದಿ ಗೃಹಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮೌಲ್ಯವರ್ಧಿತ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಕೆಎಲ್‌ಇ ಸಂಸ್ಥೆಯು ಬೆಳಗಾವಿ ನಗರದಲ್ಲಿ ಮಾರಾಟ ಮಳಿಗೆಯನ್ನು ಸ್ಥಾಪಿಸಲಾಗುತ್ತಿದೆ. ಈ ಭಾಗವು ಕೃಷಿಯಲ್ಲಿ ಹಿಂದುಳಿದಿದ್ದು, ಕೃಷಿ ವಿಜ್ಞಾನ ಕೇಂದ್ರವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಸೇವೆ ಸಲ್ಲಿಸಲು ಕೇಂದ್ರ ಸರ್ಕಾರವು ಯೋಜನೆಗಳನ್ನು ನೀಡಬೇಕೆಂದು ಹೇಳಿದರು.
ಶಾಸಕ ಮಹಾಂತೇಶ ದೊಡಗೌಡರ, ಆಟಾರಿ ಬೆಂಗಳೂರಿನ ನಿರ್ದೇಶಕ ಡಾ. ವಿ. ವೆಂಕಟಸುಬ್ರಮುನಿಯನ್ ಮಾತನಾಡಿದರು.
ದೇಶನೂರ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶಂಕ್ರಮ್ಮ ಚಡಿಚಾಳ, ಕೇಂದ್ರದ ವಿಜ್ಞಾನಿಗಳು, ನಾಗರಿಕರು, ಉಪಸ್ಥಿತರಿದ್ದರು. ಕೇಂದ್ರದ ಕಾರ್ಯಾಧ್ಯಕ್ಷ ಬಿ. ಆರ್. ಪಾಟೀಲ ಸ್ವಾಗತಿಸಿದರು. ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಶ್ರೀದೇವಿ ಅಂಗಡಿ ವಂದಿಸಿದರು.