Advertisement

ಉಡುಪಿ ಜಿಲ್ಲೆಯ ಶಾಸಕರ ಕೈ ಕಟ್ಟಿ ಹಾಕಲು ಷಡ್ಯಂತ್ರ

11:54 AM Jun 04, 2019 | Team Udayavani |

ಉಡುಪಿ: ಮರಳು ಸಮಸ್ಯೆ ಸೇರಿದಂತೆ ಉಡುಪಿ ಜಿಲ್ಲೆಗೆ ಪದೇ ಪದೇ ಅನ್ಯಾಯವಾಗುತ್ತಿದೆ. ಜಿಲ್ಲೆಯ ಶಾಸಕರ ಕೈ ಕಟ್ಟಿ ಹಾಕಲು ಜಿಲ್ಲಾಡಳಿತದ ಹಿಂದೆ ಯಾವುದೋ ಶಕ್ತಿಯ ಷಡ್ಯಂತ್ರ ಕೆಲಸ ಮಾಡುತ್ತಿದೆ ಎಂಬ ಅನುಮಾನವಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡುವಾಗಲೇ ಅವರನ್ನು ಪದೇ ಪದೇ ಬದಲಾಯಿಸಲಾಗುತ್ತಿದೆ. ಜಿಲ್ಲಾಡಳಿತ ತನ್ನ ಮೂಗಿನ ನೇರಕ್ಕೆ ಕೆಲಸ ಮಾಡಬೇಕು ಎಂಬುದು ಇಂಥ ಶಕ್ತಿಯ ಉದ್ದೇಶವಾಗಿದೆ ಎಂದರು.

ಶಾಸಕರೇ ಟಾರ್ಗೆಟ್‌
ಜಿಲ್ಲೆಯ ಎಲ್ಲ ಐವರು ಶಾಸಕರು
ಬಿಜೆಪಿಯವರೆಂಬ ಕಾರಣಕ್ಕೆ ಅವರನ್ನು ಗುರಿ ಮಾಡಲಾಗುತ್ತಿದೆಯೇ ಎಂಬ ಸಂದೇಹ ಉಂಟಾಗಿದೆ. ಜಿಲ್ಲೆಯ ಮರಳು ಸಮಸ್ಯೆ ಹಾಗೆಯೇ ಮುಂದುವರಿದಿದೆ. ನಾವು ಸಾಕಷ್ಟು ಪ್ರಯತ್ನಿಸಿದರೂ ಜಿಲ್ಲಾಡಳಿತ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಬಜೆಯಲ್ಲಿ ನೀರು ಹರಿವಿನ ತಡೆ ತೆರವಿಗೂ ಕೆಲಸ ಮಾಡಿಲ್ಲ. ಈಗ ಒಂದು ಟ್ಯಾಂಕರ್‌ ನೀರು ನೀಡಲು ಕೂಡ ಹಿಂದೆ ಮುಂದೆ ನೋಡುತ್ತಿದೆ ಎಂದು ಹೇಳಿದರು.

ಗ್ರಾಮವಾಸ್ತವ್ಯ ತಿರುಗಿ ನೋಡಲಿ
ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ “ಗ್ರಾಮವಾಸ್ತವ್ಯ’ ಆರಂಭಿಸುತ್ತಿರುವ ಕುರಿತು ಪ್ರಶ್ನಿಸಿದಾಗ “ಹಿಂದೆ ಅವರು ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ ಈಗ ಹೇಗಿದೆ ಎಂಬುದನ್ನು ತಿರುಗಿ ನೋಡಲಿ. ಅವರು ಮೊದಲು ಹೊಟೇಲ್‌ ಕೊಠಡಿ ವಾಸ್ತವ್ಯ ಬಿಟ್ಟು ವಿಧಾನಸೌಧದ ತಮ್ಮ ಕಚೇರಿಯಲ್ಲಿದ್ದು ಕೆಲಸ ಮಾಡಲಿ ಎಂದು ಶೋಭಾ ಹೇಳಿದರು.

ಸಿದ್ದರಾಮಯ್ಯ ಆಟ
ಬಿಜೆಪಿ ಆಪರೇಷನ್‌ ಕಮಲ ಮಾಡುತ್ತಿಲ್ಲ. ಸಿದ್ದರಾಮಯ್ಯ ತಾವೇ ಮುಖ್ಯಮಂತ್ರಿಯಾಗ ಬೇಕೆಂದು ಶಾಸಕರನ್ನು ಎತ್ತಿಕಟ್ಟಿ ಗೊಂದಲ ಸೃಷ್ಟಿಸಿ ಆಟ ಆಡುತ್ತಿದ್ದಾರೆ. ಒಂದು ವೇಳೆ ಸರಕಾರಕ್ಕೆ ನೈತಿಕತೆ ಇದ್ದಿದ್ದರೆ ಲೋಕಸಭಾ ಚುನಾವಣೆ ಫ‌ಲಿತಾಂಶ ಪ್ರಕಟವಾದ ಕೂಡಲೇ ರಾಜೀನಾಮೆ ನೀಡಬೇಕಿತ್ತು. ಒಟ್ಟಾರೆ ಸ್ವಾರ್ಥ
ರಾಜಕೀಯದಿಂದ ಜನತೆ ತೊಂದರೆಗೀಡಾಗಿದ್ದಾರೆ ಎಂದರು.

Advertisement

ಸರಕಾರ ಕನ್ನಡಕ್ಕೆ ಆದ್ಯತೆ ನೀಡಲಿ
ತ್ರಿಭಾಷಾ ಶಿಕ್ಷಣದ ಕುರಿತು ಪ್ರಶ್ನಿಸಿದಾಗ “ರಾಜ್ಯ ಸರಕಾರ ಮೊದಲು ಕನ್ನಡ ಭಾಷೆಯ ಅಭಿವೃದ್ಧಿಗೆ ಬೇಕಾದ ಬೆಂಬಲ ನೀಡಲಿ. ಕನ್ನಡ ಮಾತನಾಡುವುದನ್ನು ಕಡ್ಡಾಯ ಮಾಡಲಿ. ಕನ್ನಡ ಶಾಲೆಗಳಿಗೆ ಉತ್ತಮ ಶಿಕ್ಷಕರು ಸೇರಿದಂತೆ ಅಗತ್ಯ ಸೌಕರ್ಯ ನೀಡಿ ಗುಣಮಟ್ಟದ ಶಿಕ್ಷಣಕ್ಕೆ ಒದಗಿಸಲಿ. ಅನ್ಯ ಭಾಷೆಗಳನ್ನೂ ಕಲಿಯಬೇಕು. ತ್ರಿಭಾಷಾ ಶಿಕ್ಷಣದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕನ್ನಡದ ಕೆಲಸಗಳಿಗೆ ಮೀಸಲಿಟ್ಟ ಹಣವನ್ನು ಅಮೆರಿಕಕ್ಕೆ ಪ್ರವಾಸ ಹೋಗಲು ವೆಚ್ಚ ಮಾಡಿದ್ದರು’ ಎಂದು ತಿಳಿಸಿದರು.

ಸುಮಲತಾ ಬೆಂಬಲ ಅಪೇಕ್ಷೆ
ಸುಮಲತಾ ಬೆಂಬಲ ಪಡೆಯಲು ಕಾಂಗ್ರೆಸ್‌ ಯತ್ನಿಸುತ್ತಿದೆ ಎಂಬ ಪತ್ರಕರ್ತರ ಮಾತಿಗೆ ಪ್ರತಿಕ್ರಿಯಿ ಸಿದ ಶೋಭಾ “ಚುನಾವಣೆಯಲ್ಲಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿದೆ. ಹಾಗಾಗಿ ಈಗ ಅವರ ಬೆಂಬಲ ಬಿಜೆಪಿಗೆ ಇರುತ್ತದೆ ಎಂಬುದು ನಮ್ಮ ಅಪೇಕ್ಷೆ’ ಎಂದರು.

ಶಾಸಕ ಕೆ. ರಘುಪತಿ ಭಟ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪಕ್ಷದ ಮುಖಂಡರಾದ ಕುತ್ಯಾರು ನವೀನ್‌ ಶೆಟ್ಟಿ, ಕುಯಿಲಾಡಿ ಸುರೇಶ್‌ ನಾಯಕ್‌, ಸಂಧ್ಯಾ ರಮೇಶ್‌, ಪ್ರಭಾಕರ ಪೂಜಾರಿ, ಪ್ರವೀಣ್‌ ಶೆಟ್ಟಿ ಕಪ್ಪೆಟ್ಟು, ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next