ಮಂಡ್ಯ: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕೃಷಿಗೆ ಹೆಚ್ಚಿನ ಮೊತ್ತದ ಬಜೆಟ್ ಮಂಡಿಸಿದ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಎ.ಸಿ.ಮಾದೇಗೌಡ ಸಮುದಾಯ ಭವನದಲ್ಲಿ ಸೋಮವಾರ ಜರಗಿದ ಜನಾಶೀರ್ವಾದ ಯಾತ್ರೆ ಸಮಾರಂಭ ದಲ್ಲಿ ಮಾತನಾಡಿದ ಅವರು, 2013-14ರಲ್ಲಿ ಯುಪಿಎ ಸರಕಾರ ಮಂಡಿಸಿದ ಕೃಷಿ ಬಜೆಟ್ ಕೇವಲ 21 ಸಾವಿರ ಕೋಟಿ ರೂ. ಇತ್ತು. ಆದರೆ, ಮೋದಿ ಅವರು 2020-21ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಕೇವಲ ಕೃಷಿ ಅಭಿವೃದ್ಧಿಗಾಗಿ 1.23 ಲಕ್ಷ ಕೋಟಿ ರೂ.ಮೀಸಲಿಟ್ಟಿದ್ದಾರೆ ಎಂದರು.
ನಾಟಿ ಮಾಡಿದ ಶೋಭಾ :
ಶೋಭಾ ಕರಂದ್ಲಾಜೆ ಮಂಡ್ಯ ತಾಲೂಕಿನ ಹೊನಗಾನಹಳ್ಳಿ ಗ್ರಾಮದಲ್ಲಿ ರೈತ ಮಹಿಳೆಯರೊಂದಿಗೆ ಭತ್ತದ ನಾಟಿ, ಗಾಣಕ್ಕೆ ಕಬ್ಬು ಹಾಕುವ ಮೂಲಕ ಗಮನ ಸೆಳೆದರು.
ಸೌಲಭ್ಯ ತಲುಪಿಸುವ ಗುರಿ :
ಶಿರಸಿ: ಕೊನೇ ವ್ಯಕ್ತಿಯ ತನಕ ಸೌಲಭ್ಯ ತಲುಪಿಸುವುದೇ ಕೇಂದ್ರ ಸರಕಾರದ ಗುರಿ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ ಹೇಳಿದರು. ನಗರದಲ್ಲಿ ಜನಾಶೀರ್ವಾದ ಯಾತ್ರೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿಎಂ ಕಿಸಾನ್, ಗರಿಬ್ ಕಲ್ಯಾಣ ಯೋಜನೆ ಸಹಿತ ಏಳು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಳ್ಳಿಯ ಕೊನೇ ವ್ಯಕ್ತಿಗೂ ಯೋಜನೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಒಳ್ಳೆಯ ಆಡಳಿತ ಹಾಗೂ ಪ್ರಾಮಾಣಿಕ ಕಾರ್ಯವನ್ನು ಮೋದಿ ಸರಕಾರ ಮಾಡುತ್ತಿದೆ ಎಂದು ಹೇಳಿದರು.