Advertisement

ಸಂಸದೆ ಶೋಭಾ ಆರೋಪ ಆಧಾರರಹಿತ: ಖಾದರ್‌ 

03:45 AM Jun 26, 2017 | Team Udayavani |

ಮಂಗಳೂರು: ರಾಜ್ಯದಲ್ಲಿ ಪಡಿತರ ಮಾಫಿಯಾ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ರಾಜಕೀಯ ಪ್ರೇರಿತವಾಗಿ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಅವರ ಸರಕಾರದಲ್ಲಿ ನಡೆದ ಹಗರಣಗಳನ್ನು ಮನದಲ್ಲಿಟ್ಟುಕೊಂಡು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖಾ ಸಚಿವ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
 
ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭ ಆಹಾರ ಇಲಾಖೆಯಲ್ಲಿ ನಡೆದ ಹಗರಣಗಳ ಕುರಿತು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಕಾಂಗ್ರೆಸ್‌ ಸರಕಾರ ಬಂದ ಬಳಿಕ ಬೋಗಸ್‌ ಕಾರ್ಡ್‌ಗಳನ್ನು ನಾವು ಮಟ್ಟ ಹಾಕುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯ ಮಾಡಿದ್ದೇವೆ ಎಂದರು.

Advertisement

ಉಚಿತ ಅಕ್ಕಿ ರಾಜ್ಯದಲ್ಲಿ ಮಾತ್ರ
ಬಡ ಕುಟುಂಬಗಳಿಗೆ ಉಚಿತ, 7 ಕೆ.ಜಿ. ಅಕ್ಕಿ ವಿತರಣೆಯಂತಹ ಮುಖ್ಯಮಂತ್ರಿಗಳ ಸಾಧನೆ ಕುರಿತು ಜನತೆಯ ಜತೆಗೆ ವಿಪಕ್ಷಗಳು ಕೂಡ ಪ್ರಶಂಸೆ ವ್ಯಕ್ತಪಡಿಸಿವೆ. ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಾಡಿದ ಆಹಾರ ಕಾಯ್ದೆಯ ಪರಿಣಾಮ ಈಗ ಕೇಂದ್ರ ಸರಕಾರ ಸಬ್ಸಿಡಿ ನೀಡುತ್ತಿದೆ. ಪ್ರಸ್ತುತ ಉಚಿತ ಅಕ್ಕಿ ನೀಡುವ ಸರಕಾರವಿದ್ದರೆ ಅದು ಕರ್ನಾಟಕ ಮಾತ್ರ.

ಇವರ ಆರೋಪವನ್ನು ಅವರ ಪಕ್ಷದ ಶಾಸಕರೇ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಂಸದೆ ಶೋಭಾ ಅವರು ಕಾಗದದ ಹುಲಿಯಾಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಅದರಲ್ಲೂ ವಿಫಲರಾಗುತ್ತಿದ್ದಾರೆ. ಇವರು ಆಧಾರರಹಿತ ಆರೋಪ ಮಾಡುವುದನ್ನು ಬಿಟ್ಟು ಯಾವುದಾದರೂ ಸಲಹೆ-ಸೂಚನೆಗಳಿದ್ದರೆ ನೀಡಲಿ. ಅದನ್ನು ಸ್ವೀಕರಿಸುತ್ತೇವೆ ಎಂದರು.
ರಾಜ್ಯದಲ್ಲಿ ಬರಗಾಲದಂತಹ ಸಂದರ್ಭದಲ್ಲೂ ಉತ್ತಮ ಆಡಳಿತ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕೆ ಮಾಡುವ ನೈತಿಕತೆ ಇವರಿಗಿಲ್ಲ. ಬಿಜೆಪಿಯವರು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಆದರೆ ಮುಂದೆಯೂ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಂತಹ ಘಟನೆ ಸ್ವಾಭಾವಿಕ
ಹಿರಿಯ ನಾಯಕ ಎಚ್‌. ವಿಶ್ವನಾಥ್‌ ಕಾಂಗ್ರೆಸ್‌ ಬಿಡುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜಕೀಯದಲ್ಲಿ ಇಂತಹ ಘಟನೆಗಳು ಸ್ವಾಭಾವಿಕ. ಚುನಾವಣೆ ಸಂದರ್ಭದಲ್ಲಿ ಇದು ಸಾಮಾನ್ಯ. ಕಾಂಗ್ರೆಸ್‌ಗೆ ಇಂತಹ ಘಟನೆಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಇದೆ. ಪ್ರಸ್ತುತ ಖಾಲಿ ಇರುವ ಗೃಹ ಸಚಿವರ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ದ.ಕ. ಜಿಲ್ಲಾ ಕಾಂಗ್ರೆಸ್‌ಗೆ ಅಧ್ಯಕ್ಷರು ಯಾರಾಗಬೇಕು ಎಂಬುದನ್ನು ಪಕ್ಷದ ಮುಖಂಡರು ಒಗ್ಗಟ್ಟಿನಿಂದಲೇ ತೀರ್ಮಾನಿಸಲಿದ್ದೇವೆ ಎಂದರು.

ಸೂಕ್ತ ತನಿಖೆಯಾಗಲಿ
ಕಲಾಯಿ ಅಶ್ರಫ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್‌ ಇಲಾಖೆ ಐವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಸಂಘಟನೆಯೊಂದರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತನಿದ್ದ ಎಂದು ಹೇಳಲಾಗುತ್ತಿದ್ದು, ಈ ಕುರಿತು ತನಿಖೆಯಾಗಬೇಕು ಎಂದು ತಿಳಿಸಿದರು. 

Advertisement

ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿಲ್ಲಾ ಕಾಂಗ್ರೆಸ್‌ ಪರಿಶಿಷ್ಟ ವಿಭಾಗದ ಅಧ್ಯಕ್ಷ ಪದ್ಮನಾಭ ನರಿಂಗಾನ ಮೊದಲಾದವರು ಉಪಸ್ಥಿತರಿದ್ದರು. 

ಅಭಿನಂದನಾರ್ಹ 
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ಸೌಹಾರ್ದ ಇಫ್ತಾರ್‌ ಕೂಟವನ್ನು ಆಯೋಜಿಸಿರುವುದು ಅಭಿನಂದನಾರ್ಹ. ಇಂತಹ ಕಾರ್ಯ ದ.ಕ. ಜಿಲ್ಲೆಯಲ್ಲಿಯೂ ನಡೆದರೆ ಸೌಹಾರ್ದ ಸಾಧ್ಯವಾಗುತ್ತದೆ ಎಂದು ಸಚಿವ ಯು.ಟಿ. ಖಾದರ್‌ ಪೇಜಾವರ ಶ್ರೀಗಳ ನಡೆಯನ್ನು   ಪ್ರಶಂಸಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next