ಲಾರ್ಡ್ಸ್: ಪಾಕಿಸ್ಥಾನದ ಹಿರಿಯ ಆಟಗಾರ ಶೋಯೆಬ್ ಮಲಿಕ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಸುದೀರ್ಫ 20 ವರ್ಷಗಳ ಕಾಲ ಪಾಕ್ ತಂಡದ ಪ್ರಮುಖ ಆಟಗಾರನಾಗಿ ಆಡಿದ್ದ ಮಲಿಕ್ ಇನ್ನು ಮಂದೆ ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಮುಂದುವರಿಯುವ ಇರಾದೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದ ನಂತರ ಮಲಿಕ್ ತನ್ನ ವಿದಾಯ ಘೋಷಣೆ ಮಾಡಿದರು. ಅದರೆ ಈ ಪಂದ್ಯದಲ್ಲಿ ಮಲಿಕ್ ಆಡುವ ಬಳಗದಲ್ಲಿ ಅವಕಾಶ ಪಡೆದಿರಲಿಲ್ಲ.
1999 ಅಕ್ಟೋಬರ್ 14ರಂದು ವೆಸ್ಟ್ ಇಂಡೀಸ್ ವಿರುದ್ದ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ 17ರ ಹರೆಯದ ಮಲಿಕ್ ತನ್ನ 20 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಒಟ್ಟು 287 ಏಕದಿನ ಪಂದ್ಯಗಳಲ್ಲಿ ಪಾಕಿಸ್ಥಾನದ ಜೆರ್ಸಿ ತೊಟ್ಟಿದ್ದಾರೆ. 34.55ರ ಸರಾಸರಿಯಲ್ಲಿ 7534 ರನ್ ಗಳಿಸಿರುವ ಮಲಿಕ್ ಹೆಸರಲ್ಲಿ 9 ಶತಕ ಮತ್ತು 44 ಅರ್ಧಶತಕಗಳಿವೆ. ಉತ್ತಮ ಆಫ್ ಸ್ಪಿನ್ನರ್ ಕೂಡಾ ಆಗಿದ್ದ ಮಲಿಕ್ 158 ವಿಕೆಟ್ ಕೂಡಾ ಪಡೆದಿದ್ದರು.
1982ರಲ್ಲಿ ಜನಿಸಿದ್ದ ಮಲಿಕ್ 1993ರಲ್ಲಿ ಇಮ್ರಾನ್ ಖಾನ್ ಕೋಚಿಂಗ್ ಅಕಾಡೆಮಿಗೆ ಸೇರಿ ಕ್ರಿಕೆಟ್ ನ ಎಬಿಸಿಡಿ ಕಲಿತರು. 1996ರಲ್ಲಿ ಪಾಕಿಸ್ಥಾನದ ಅಂಡರ್ 15 ತಂಡಕ್ಕೆ ಬೌಲರ್ ಆಗಿ ಆಯ್ಕೆಯಾಗಿದ್ದರು. 2007ರ ವಿಶ್ವಕಪ್ ಸೋಲಿನ ನಂತರ ಇಂಝಮಾಮ್ ಉಲ್ ಹಕ್ ನಾಯಕತ್ವ ತ್ಯಜಿಸಿದ ಬಳಿಕ ಮಲಿಕ್ ಪಾಕಿಸ್ಥಾನದ ನಾಯಕತ್ವ ವಹಿಸಿದರು. ಮಲಿಕ್ ಗೆ ಆಗ 25 ವರ್ಷ ವಯಸಾಗಿತ್ತಷ್ಟೇ. ತಂಡದೊಳಗಿನ ವೈಮನಸ್ಸಿನಿಂದ 2009ರಲ್ಲಿ ಮಲಿಕ್ ನಾಯಕತ್ವವನ್ನು ಯೂನಿಸ್ ಖಾನ್ ಗೆ ಬಿಟ್ಟುಕೊಡಬೇಕಾಯಿತು. 36 ಏಕದಿನ ಪಂದ್ಯಗಳಲ್ಲಿ ಪಾಕ್ ತಂಡವನ್ನು ಮುನ್ನಡೆಸಿದ್ದ ಶೋಯೆಬ್ 24 ಪಂದ್ಯಗಳಲ್ಲಿ ಪಾಕ್ ತಂಡಕ್ಕೆ ಜಯ ಕೊಡಿಸಿದ್ದರು.
ಭಾರತೀಯ ಖ್ಯಾತ ಟೆನ್ನಿಸ್ ಪಟು ಸಾನಿಯಾ ಮಿರ್ಜಾ ಅವರನ್ನು 2010ರಲ್ಲಿ ಎಪ್ರಿಲ್ ನಲ್ಲಿ ವಿವಾಹವಾದ ಮಲಿಕ್ ಮದುವೆ ವಿಶ್ವಮಟ್ಟದಲ್ಲಿ ಸುದ್ದಿಯಾಗಿತ್ತು.
2019ರ ವಿಶ್ವಕಪ್ ನಲ್ಲಿ ಕೇವಲ ಮೂರು ಪಂದ್ಯಗಳನ್ನಾಡಿದ ಮಲಿಕ್ ಕಳಪೆ ಫಾರ್ಮ್ ನಿಂದಾಗಿ ಹೊರಗುಳಿಬೇಕಾಯಿತು. ವಿದಾಯದ ನಂತರ ಮಾತನಾಡಿದ ಮಲಿಕ್, “ನಾನು ವಿಶ್ವಕಪ್ ನ ಕೊನೆಯ ಪಂದ್ಯದಲ್ಲಿ ವಿದಾಯ ಘೋಷಿಸುವ ಬಗ್ಗೆ ವರ್ಷಗಳ ಹಿಂದೆಯೇ ಯೋಚಿಸಿದ್ದೆ. ನಾನಿನ್ನು ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ. ಮತ್ತು ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಮುಂದುವರಿಯುತ್ತೇನೆ” ಎಂದರು.