ಕರಾಚಿ: ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ – ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ನಡುವಿನ ದಾಂಪತ್ಯ ಜೀವನದ ಬೇರ್ಪಡುವಿಕೆಯ ವದಂತಿಗಳ ನಡುವೆಯೇ ಶೋಯೆಬ್ ಮಲಿಕ್ ಎರಡನೇ ಮದುವೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶೋಯೆಬ್ ಮಲಿಕ್ ಜನಪ್ರಿಯ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾ ಗಿದ್ದಾರೆ. ಶನಿವಾರ, ಜನವರಿ 20 ರಂದು ನಡೆದ ತಮ್ಮ ವಿವಾಹ ಸಮಾರಂಭದ ಫೋಟೋಗಳನ್ನು ಶೋಯೆಬ್ ಮಲಿಕ್ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಕೆಲ ಸಮಯದಿಂದ ಶೋಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ ನಡುವಿನ ದಾಂಪತ್ಯ ಜೀವನದಲ್ಲಿ ಯಾವುದು ಸರಿಯಿಲ್ಲ ಎನ್ನುವುದರ ಬಗ್ಗೆ ಅನೇಕ ವಿಚಾರಗಳು ಹರಿದಾಡುತ್ತಿತ್ತು. ಆದರೆ ಕಳೆದ ವರ್ಷ ಇಬ್ಬರು ಜೊತೆಯಾಗಿ ಮಗನ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿಕೊಂಡಿದ್ದರು. ಇತ್ತೀಚೆಗೆ ಸಾನಿಯಾ ಮಿರ್ಜಾ ವಿಚ್ಚೇದನದ ಬಗ್ಗೆ ಒಂದು ಗೊಂದಲಕಾರಿ ಪೋಸ್ಟ್ ಹಂಚಿಕೊಂಡಿದ್ದರು.
ಇಬ್ಬರು ಅಧಿಕೃತವಾಗಿ ವಿಚ್ಚೇದನ ಪಡೆದ ಬಗ್ಗೆ ಬಹಿರಂಗವಾಗಿ ಹೇಳಿಲ್ಲ. ಈ ನಡುವೆಯೇ ಶೋಯೆಬ್ ಮಲಿಕ್ ಪಾಕಿಸ್ತಾನದ ಜನಪ್ರಿಯ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ. ಆ ಮೂಲಕ ಸಾನಿಯಾ ಮಿರ್ಜಾ ಅವರೊಂದಿಗಿನ ಸಂಬಂಧವನ್ನು ಅಂತ್ಯವಾಗಿಸಿ, ಹೊಸ ಜೀವನವನ್ನು ಆರಂಭಿಸಿದ್ದಾರೆ.
ಸನಾ ಜಾವೇದ್ – ಶೋಯೆಬ್ ಮಲಿಕ್ ಕಳೆದ ಕೆಲ ಸಮಯದಿಂದ ಡೇಟಿಂಗ್ ನಲ್ಲಿದ್ದರು ಎನ್ನಲಾಗಿದೆ. ಸನಾ ಅವರ ಹುಟ್ಟುಹಬ್ಬಕ್ಕೆ ಶೋಯೆಬ್ ಅವರು ಶುಭಾಶಯವನ್ನು ಕೋರಿದ್ದರು.
ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ 2010 ರಲ್ಲಿ ಭಾರತದ ಹೈದರಾಬಾದ್‌ನಲ್ಲಿ ಸಾಂಪ್ರದಾಯಿಕ ಮುಸ್ಲಿಂ ಸಮಾರಂಭದಲ್ಲಿ ವಿವಾಹವಾಗಿದ್ದರು. ನಂತರ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ವಲಿಮಾ (ರಿಸೆಪ್ಷನ್) ಸಮಾರಂಭ ನೆರವೇರಿತ್ತು. ದಂಪತಿ 2018 ರಲ್ಲಿ ಇಜಾನ್ ಎಂಬ ಗಂಡು ಮಗುವಿಗೆ ತಂದೆ – ತಾಯಿ ಆಗಿದ್ದರು.
ಈ ಹಿಂದೆ ಸನಾ ಜಾವೇದ್ ಉಮೈರ್ ಜಸ್ವಾಲ್ ಎಂಬವವರನ್ನು ವಿವಾಹವಾಗಿದ್ದರು.