Advertisement

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

09:11 AM Mar 08, 2024 | Team Udayavani |

ಮಹಾ ಶಿವರಾತ್ರಿ ಅಥವಾ ಶಿವನ ಮಹಾ ರಾತ್ರಿ ಹಿಂದೂಗಳು ವಾರ್ಷಿಕವಾಗಿ ಆಚರಿಸುವ ಮಹತ್ವದ ಹಬ್ಬ. ಮಹಾ ಶಿವರಾತ್ರಿಗೆ ಸಂಬಂಧಿಸಿದ ದಂತಕಥೆ ಎಂದರೆ ಅದು ಶಿವ ಮತ್ತು ಪಾರ್ವತಿ ದೇವಿಯ ವಿವಾಹದ ಕಥೆ. ಈ ದಿನ ಪಾರ್ವತಿಯು ಶಿವನನ್ನು ಪಡೆದುಕೊಳ್ಳಲು ತೀವ್ರ ತಪಸ್ಸು ಮಾಡುತ್ತಾಳೆ. ಅಂತಿಮವಾಗಿ ಶಿವನು ಅವಳನ್ನು ತನ್ನ ಮಡದಿಯಾಗಿ ಸ್ವೀಕರಿಸುತ್ತಾನೆ. ಆದ್ದರಿಂದ, ಪುರುಷ ಮತ್ತು ಸ್ತ್ರೀ ಶಕ್ತಿಗಳ ದೈವಿಕ ಒಕ್ಕೂಟವನ್ನು ಸಂಕೇತಿಸುವ ಶಿವ ಮತ್ತು ಪಾರ್ವತಿಯ ಒಕ್ಕೂಟವನ್ನು ಆಚರಿಸಲು ಮಹಾ ಶಿವರಾತ್ರಿಯನ್ನು ಒಂದು ಮಹತ್ವದ ದಿನವೆಂದು ಪರಿಗಣಿಸಲಾಗುತ್ತದೆ.

Advertisement

ಹಿಂದೂ ಪುರಾಣಗಳ ಪ್ರಕಾರ, ಮಹಾ ಶಿವರಾತ್ರಿಯು ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶವನ್ನು ಸೂಚಿಸುವ ನೃತ್ಯವಾದ ತಾಂಡವ ನೃತ್ಯವನ್ನು ಶಿವ ಮಾಡಿದ ದಿನ ಎಂದೂ ಹೇಳಲಾಗುತ್ತದೆ. ಶಿವಪುರಾಣದ ಪ್ರಕಾರ, ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಥನ ನಡೆದು ವಿಷ ಉದ್ಭವವಾದಾಗ ಶಿವ ಅದನ್ನು ಕುಡಿದ. ವಿಷ ಗಂಟಲೊಳಗಿನಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಿದ್ದಳು ಎಂದು ನಂಬಲಾಗುತ್ತದೆ.

ಶಿವನ ಈ ಮಹಾರಾತ್ರಿಯಂದು ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಇದರಲ್ಲಿ ಮುಖ್ಯವಾದ ದೇವಸ್ಥಾನ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದ ಉಪ್ಪಿನಂಗಡಿಯ ಸಹಸ್ತ್ರಲಿಂಗೇಶ್ವರ ದೇವಸ್ಥಾನ. ಉಪ್ಪಿನಂಗಡಿ ಅಥವಾ ಉಬಾರ್ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪುಟ್ಟ ಊರು. ಕುಮಾರಧಾರ ಮತ್ತು ನೇತ್ರಾವತಿ ನದಿಯಿಂದ ಸುತ್ತುವರೆದಿರುವ ಈ ಆಲಯವನ್ನು ಸಂಗಮ ಕ್ಷೇತ್ರ ಎಂದೂ ಕರೆಯುತ್ತಾರೆ. ಮಳೆಗಾಲದಲ್ಲಿ ಎರಡು ನದಿಗಳು ಸಂಧಿಸಿದಾಗ ಇದನ್ನು “ಸಂಗಮ” ಎಂದು ಹೇಳಲಾಗುತ್ತದೆ. ಸಂಗಮದ ಸಂದರ್ಭದಲ್ಲಂತೂ  ಸುತ್ತಮುತ್ತಲಿನ ಹಳ್ಳಿಗಳ ಜನ ಕಿಕ್ಕಿರಿದು ಈ ಪುಣ್ಯ ಘಳಿಗೆಯನ್ನು ವೀಕ್ಷಿಸಲು ನದಿ ದಡದಲ್ಲಿ ಸೇರುತ್ತಾರೆ. ಜೋರಾದ ಮಳೆಯ ಸಂದರ್ಭದಲ್ಲಂತೂ ದೇವಾಲಯದ  ಗರ್ಭಗುಡಿಗೂ ನೀರು ಬಂದಿರುತ್ತದೆ. ನದಿಗಳ ನೀರಿನಲ್ಲಿ ಸ್ನಾನ ಮಾಡಲು ಇದು ಮಂಗಳಕರ ಕ್ಷಣವೆಂದು ಪರಿಗಣಿಸಲಾಗುತ್ತದೆ.

ಒಂದು ದಂತಕಥೆಯ ಪ್ರಕಾರ,  ಈಗಿನ ಉಪ್ಪಿನಂಗಡಿ  ಮಹಾಭಾರತದ ಕಾಲದಿಂದಲೂ ಇದೆ ಎಂದು ಹೇಳಲಾಗುತ್ತದೆ. ಒಮ್ಮೆ ಪಾಂಡವರಲ್ಲಿ ಹಿರಿಯನಾದ ಧರ್ಮರಾಯನು ರಾಜಸೂಯ ಯಜ್ಞವನ್ನು ಮಾಡಲು ನಿರ್ಧರಿಸಿದಾಗ, ಅವನು ಭೀಮನನ್ನು ಇಂದಿನ ಉಪ್ಪಿನಂಗಡಿಗೆ ಕಳುಹಿಸಿದನಂತೆ.  ಅಲ್ಲಿ ಪುರುಷ ಮೃಗ ಎಂಬ ದೈತ್ಯ ಪ್ರಾಣಿಯು ಅವನ ಮೇಲೆ ಆಕ್ರಮಣ ಮಾಡಲು ಮುಂದಾಯಿತಂತೆ. ದಾಳಿಯನ್ನು ತಪ್ಪಿಸಲು, ಅವನು ತನ್ನ ಒಂದು ಕೂದಲನ್ನು ನೆಲಕ್ಕೆ ಬೀಳಿಸುತ್ತಾನೆ. ಅದು ತಕ್ಷಣವೇ ಶಿವಲಿಂಗವಾಗಿ ಮಾರ್ಪಾಡಾಗುತ್ತದೆ. ಇದನ್ನು ನೋಡಿದ ಪುರುಷಮೃಗ ಲಿಂಗವನ್ನು ಪೂಜಿಸಲು ಮುಂದಾಗುತ್ತದೆ. ಪುನಃ ಆಕ್ರಮಣಕ್ಕೆ ಮುಂದಾದಾಗ ಭೀಮನು ಮತ್ತೆ ಒಂದು ಕೂದಲನ್ನು ಬೀಳಿಸುತ್ತಾನೆ.  ಅದು ಮತ್ತೊಂದು ಶಿವಲಿಂಗವಾಗಿ ಮಾರ್ಪಾಡಾಗುತ್ತದೆ. ಮತ್ತೆ ಆ ದೈತ್ಯ ಪ್ರಾಣಿ ಹಾಗೆಯೇ ಮಾಡುತ್ತದೆ. ಅಂತಿಮವಾಗಿ, ಭೀಮ ತನ್ನ ಒಂದು ಹಿಡಿ ಕೂದಲನ್ನೇ ನೆಲಕ್ಕೆ ಬೀಳಿಸುತ್ತಾನೆ. ಅದು ತಕ್ಷಣವೇ ಸಾವಿರ ಶಿವಲಿಂಗಗಳಾಗುತ್ತವೆ. ಪುರುಷ ಮೃಗ ಎಲ್ಲಾ ಲಿಂಗಗಳನ್ನು ಪೂಜಿಸಲು ಮುಂದಾದಾಗ ಭೀಮ ಅಲ್ಲಿಂದ ತಪ್ಪಿಸಿಕೊಂಡನು ಎಂದು ಸ್ಕಂದ ಪುರಾಣ ಹೇಳುತ್ತದೆ.

Advertisement

ಪುರಾತನ ಶಕ್ತಿಯಿರುವ ಈ ದೇವಾಲಯದ ಮುಖ್ಯ ಗರ್ಭಗುಡಿಯಲ್ಲಿ ಶಿವ ನೆಲೆಯಾಗಿದ್ದಾನೆ. ನಿತ್ಯವೂ ಶಿವನಿಗೆ ಪೂಜೆ ಸಲ್ಲುತ್ತದೆ. ಶಿವರಾತ್ರಿಯಂತಹ ಮುಖ್ಯ ದಿನಗಳಲ್ಲಂತೂ ಜನಸಾಗರವೇ ಹರಿದು ಬರುತ್ತದೆ. ಭಕ್ತರು ಶಿವನಿಗೆ ಪ್ರಿಯವಾದ ಎಳನೀರು ಹಾಗೂ ದೀಪಕ್ಕೆ ಎಳ್ಳೆಣ್ಣೆಯನ್ನು ತಂದು ಒಪ್ಪಿಸುತ್ತಾರೆ. ಶಿವ ಬೇಡಿದ್ದನ್ನು ದಯಪಾಲಿಸುತ್ತಾನೆ ಹಾಗೂ ಸುತ್ತಲಿನ ಹಳ್ಳಿಯನ್ನು ಕಾಪಾಡುತ್ತಾನೆ ಎಂದು ಜನ ನಂಬುತ್ತಾರೆ.

ಕೆಲ ಶಿವ ಭಕ್ತರಂತೂ ಮಹಾ ಶಿವರಾತ್ರಿಯಂದು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ. ಇಡೀ ದಿನ ಮತ್ತು ರಾತ್ರಿ ಆಹಾರ ಮತ್ತು ನೀರನ್ನು ತ್ಯಜಿಸುತ್ತಾರೆ. ಉಪವಾಸವು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ಆಧ್ಯಾತ್ಮಿಕ ಅಭ್ಯಾಸಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಎಂದು ನಂಬುತ್ತಾರೆ. ಇನ್ನು ಭಕ್ತರು ಸಾಮಾನ್ಯವಾಗಿ ರಾತ್ರಿಯಿಡೀ ಎಚ್ಚರವಿದ್ದು ದೇವಸ್ಥಾನದಲ್ಲಿ ಭಜನೆಗಳನ್ನು ಹಾಡುತ್ತಾರೆ ಮತ್ತು ಭಗವಾನ್ ಶಿವನ ನಾಮವನ್ನು ಜಪಿಸುತ್ತಾರೆ. ಇದನ್ನು “ಜಾಗರಣೆ” ಎಂದು ಕರೆಯಲಾಗುತ್ತದೆ. ಶಿವರಾತ್ರಿಯ ಮುಂಜಾನೆ ಧಾರ್ಮಿಕ ಸ್ನಾನವನ್ನು ತೆಗೆದುಕೊಳ್ಳುವುದು ಸಹ ಮಂಗಳಕರವೆಂದು ನಂಬಲಾಗುತ್ತದೆ.

ಲಾವಣ್ಯ. ಎಸ್

ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next